ಚಂಡಿ ಹೋಮದ ಹೊಗೆ : ಸಿಎಂ ಬಲವಂತದ ನಗೆ
ಮೈಸೂರು: ರಾಜ್ಯ ಬಿಜೆಪಿಯಲ್ಲಿನ 14 ದಿನದ ಕಲಹಕ್ಕೆ ಅಲ್ಪ ವಿರಾಮ ಸಿಕ್ಕಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಗದಲ್ಲಿ ನಗುವಿಲ್ಲ. 14 ವರ್ಷದ ವನವಾಸ ಅನುಭವಿಸಿದಂತಹ ನೋವು. ಮಾಧ್ಯಮದ ಮುಂದೆ ಬಲವಂತದ ನಗೆಯನ್ನು ತಂದುಕೊಂಡು ಮಾತನಾಡಲು ಪ್ರಯತ್ನ ಪಟ್ಟರೂ ಧ್ವನಿಯಲ್ಲಿ ನಲಿವಿನ ಸುಳಿವಿರಲಿಲ್ಲ.
ಮಂಗಳವಾರ ಬೆಳಿಗ್ಗೆ ಬೆಂಗಳೂರಿನಿಂದ ಕಾರಿನಲ್ಲಿ ಚಾಮುಂಡಿಬೆಟ್ಟಕ್ಕೆ ಬಂದ ಯಡಿಯೂರಪ್ಪ ಅಲ್ಲಿ ಚಂಡಿ ಹೋಮ ನೆರವೇರಿಸಿದರು. ಸುಮಾರು ಒಂದು ಗಂಟೆಯ ಕಾಲ ಚಾಮುಂಡೇಶ್ವರಿ ಪೂಜೆ, ಹೋಮ ಮುಂತಾದ ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅವರು ಪೂರ್ಣಾಹುತಿಯ ನಂತರ ಮಾಧ್ಯಮದ ಮುಂದೆ ಬಂದು ನಿಂತಾಗಲೂ ಬಲವಂತದ ನಗೆಯನ್ನು ತಂದುಕೊಂಡಿದ್ದರು. ಚಂಡಿ ಹೋಮದ ಹೊಗೆಯಲ್ಲಿ ಮಿಂದು ಬಂದಿದ್ದ ಅವರ ಮುಖದಲ್ಲಿ ಗೆಲುವು ಇರಲಿಲ್ಲ.
ಯಾವುದೇ ಗಡಿಬಿಡಿ ಇಲ್ಲದೆ ಮಾಧ್ಯಮದವರೊಂದಿಗೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳಿದ ಅವರು ಚಾಮುಂಡೇಶ್ವರಿ ದೇವಿಯ ಮುಂಭಾಗದಲ್ಲಿ ನಿಂತು ಸುಳ್ಳು ಹೇಳಬಾರದು. ಸತ್ಯವನ್ನೇ ಹೇಳುತ್ತೇನೆ. ರಾಜ್ಯದಲ್ಲಿ ನಡೆದ ವಿದ್ಯಮಾನಗಳಿಂದ ಬೇಸರವಾಗಿದೆ ಎಂದು ನೊಂದುಕೊಂಡರು.
ಮಾಧ್ಯಮದವರ ಯಾವುದೇ ಪ್ರಶ್ನೆಗಳಿಗೆ ಸಿಟ್ಟಾಗದೆ ಪ್ರಸನ್ನವದನರಾಗಿಯೇ ಉತ್ತರ ನೀಡಿದರಾದರೂ ಅಂತರಂಗದ ನೋವು ಅವರ ಮಾತಿನಲ್ಲಿ ಕಾಣಿಸುತ್ತಿತ್ತು. ಒಮ್ಮೊಮ್ಮೆ ಸಿಟ್ಟು ಬರುತ್ತಿತ್ತಾದರೂ ಅದನ್ನು ತಡೆದುಕೊಂಡು ಮಾತನಾಡುತ್ತಿದ್ದರು.
‘ಹಣ ಬಲ, ತೋಳ್ಬಲಕ್ಕೆ ಈ ಯಡಿಯೂರಪ್ಪ ಮಣಿಯುವುದಿಲ್ಲ’ ಎಂದು ಒಮ್ಮೆ ಅಬ್ಬರಿಸಿದರೂ ನಂತರವೇ ‘ಒಮ್ಮೊಮ್ಮೆ ಹೈಕಮಾಂಡ್‌ಗೆ ತಲೆ ಬಾಗುವುದು ಅನಿವಾರ್ಯವಾಗುತ್ತದೆ. ಹೈಕಮಾಂಡ್ ಹೇಳಿದಂತೆ ನಡೆಯುತ್ತೇನೆ. ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗು ಎಂದು ಅವರು ಹೇಳಿದ್ದಾರೆ. ಅಲ್ಲದೆ ನಾಯಕನಾದವನು ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳಿದ್ದಾರೆ. ಅದನ್ನು ಗೌರವಿಸುತ್ತೇನೆ’ ಎಂದು ಸಾವರಿಸಿಕೊಂಡರು.
ಹೋಮಕ್ಕೂ ವಿಪರೀತ ಅರ್ಥ ಬೇಡ. ದೇಶಕ್ಕೆ ಒಳ್ಳೆಯದಾಗಲಿ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಅನುಕೂಲವಾ ಗಲಿ ಎಂಬ ದೃಷ್ಟಿಯಿಂದ ಹೋಮ ನಡೆಸಿದ್ದಾಗಿ ಅವರು ತಿಳಿಸಿದರು.
ಯಡಿಯೂರಪ್ಪ ಅವರೊಂದಿಗೆ ಯಾವಾಗಲೂ ಇರುತ್ತಿದ್ದ ಶೋಭಾ ಕರಂದ್ಲಾಜೆ ಅವರು ಇರಲಿಲ್ಲ. ಜೊತೆಗೆ ಮೈಸೂರು ನಗರದ ಶಾಸಕರಾದ ಎಸ್.ಎ.ರಾಮದಾಸ್, ಎಚ್.ಎಸ್.ಶಂಕರಲಿಂಗೇಗೌಡ ಕೂಡ ಇರಲಿಲ್ಲ. ವಿಧಾನ ಪರಿಷತ್ ಸದಸ್ಯರಾದ ತೋಂಟದಾರ್ಯ, ಸಿದ್ದರಾಜು, ಮಾಜಿ ಲೋಕಸಭಾ ಸದಸ್ಯ ಸಿ.ಎಚ್.ವಿಜಯಶಂಕರ್, ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಮಂಜುನಾಥ್, ಕಾಡಾ ಅಧ್ಯಕ್ಷ ಸಿ.ರಮೇಶ್, ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್ ಮುಂತಾದವರು ಮಾತ್ರ ಹಾಜರಿದ್ದರು.
ಆಶೀರ್ವಾದ ಯಾತ್ರೆ: ಚಾಮುಂಡಿಬೆಟ್ಟದಿಂದ ನೇರವಾಗಿ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ತೆರಳಿದ ಮುಖ್ಯ ಮಂತ್ರಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಅಲ್ಲಿಂದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಸುತ್ತೂರು ಮಠದಲ್ಲಿಯೇ ಮಧ್ಯಾಹ್ನ ಊಟ ಮಾಡಿದ ಅವರು ನಂತರ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶದಲ್ಲಿರುವ ಕಾರಾಪುರದ ಜಂಗಲ್ ರೆಸಾರ್ಟ್‌ಗೆ ತೆರಳಿದರು. ಅಲ್ಲಿ ವಿಶ್ರಾಂತಿ ಪಡೆಯುವ ಅವರು ಬುಧವಾರ ಬೆಳಿಗ್ಗೆ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಹಿಂತಿರುಗುವರು.
ಸರಗೂರು: 58 ನಾಮಪತ್ರ ಸಲ್ಲಿಕೆ
ಸರಗೂರು: ಸರಗೂರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ್ದರಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 58 ಜನ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳ ಪಟ್ಟಿ ಇಂತಿದೆ.
1ನೇ ವಾರ್ಡ್(ಪರಿಶಿಷ್ಟರಿಗೆ ಮೀಸಲು): ಎಸ್.ಎಲ್.ರಾಜಣ್ಣ (ಕಾಂಗ್ರೆಸ್), ಎಸ್.ಎಮ್. ನಾಗಯ್ಯ (ಬಿಜೆಪಿ), ಕೆ.ಸೋಮೇಶ್ (ಜೆಡಿಎಸ್), ರಮೇಶ್ (ಪಕ್ಷೇತರ), ಕೃಷ್ಣ (ಕ್ಷೇತರ)
2ನೇ ವಾರ್ಡ್ (ಪರಿಶಿಷ್ಟ ಜಾತಿ-ಮಹಿಳೆ): ಬೆಳಗಮ್ಮ (ಕಾಂಗ್ರೆಸ್), ಸುನೀತಾ (ಬಿಜೆಪಿ), ಸುಕನ್ಯ (ಜೆಡಿಎಸ್), ಭಾಗ್ಯಮ್ಮ (ಪಕ್ಷೇತರ), ಕಮಲಮ್ಮ (ಪಕ್ಷೇತರ) ಹಾಗೂ ಆರ್.ಭಗವತಿ (ಪಕ್ಷೇತರ)
3ನೇ ವಾರ್ಡ್( ಸಾಮಾನ್ಯ ಕ್ಷೇತ್ರ): ಲಕ್ಷ್ಮಮ್ಮ (ಕಾಂಗ್ರೆಸ್), ಎಸ್.ಎಚ್.ಜಯರಾಮ್ (ಬಿಜೆಪಿ). ಎಸ್.ಡಿ. ಪುಟ್ಟಹನುಮಯ್ಯ (ಜೆಡಿಎಸ್, ಕೂಸಣ್ಣ (ಪಕ್ಷೇತರ), ಪುಟ್ಟಸ್ವಾಮಿ (ಪಕ್ಷೇತರ), ಮುಜೀಬ್ ಅಹಮದ್ (ಪಕ್ಷೇತರ), ಎಸ್.ಬಿ.ಬೀಮಯ್ಯ (ಪಕ್ಷೇತರ)
4ನೇ ವಾರ್ಡ್ (ಹಿಂದುಳಿದ ವರ್ಗ-ಎ): ಇಸ್ಮಾಯಿಲ್ ಖಾನ್ (ಕಾಂಗ್ರೆಸ್) ಮಂಗಳಮ್ಮ (ಬಿಜೆಪಿ), ಕಲೀಲ್ (ಜೆಡಿಎಸ್) ರವೀಂದ್ರ ಪ್ರಸಾದ್ (ಪಕ್ಷೇತರ) ನೂರ್‌ಹಮದ್ (ಪಕ್ಷೇತರ), ಮುಜೀಬ್ ಅಹಮದ್ (ಪಕ್ಷೇತರ), ಗಾಯತ್ರಿ ದೇವಿ (ಪಕ್ಷೇತರ) ಎಸ್.ಎನ್.ಶ್ರೀನಿವಾಸ್ (ಪಕ್ಷೇತರ)
5ನೇ ವಾರ್ಡ್ (ಹಿಂದುಳಿದ ವರ್ಗ-ಎ ಮಹಿಳೆ): ವಿ. ಭಾಗ್ಯ (ಕಾಂಗ್ರೆಸ್), ಎಮ್.ವಿ. ಉಷಾ (ಬಿಜೆಪಿ), ವಿ. ಗಾಯಿತ್ರಿ ದೇವಿ (ಜೆಡಿ ಎಸ್), ಹಸೀನ ಬೇಗಂ (ಪಕ್ಷೇತರ)
6ನೇ ವಾರ್ಡ್ (ಹಿಂದುಳಿದ ವರ್ಗ ‘ಬಿ’ ಮಹಿಳೆ): ಎಸ್.ಎಸ್.ಸೀಮ (ಕಾಂಗ್ರೆಸ್), ರೂಪ (ಬಿಜೆಪಿ).
7ನೇ ವಾರ್ಡ್ (ಸಾಮಾನ್ಯ-ಮಹಿಳೆ): ಬಿ.ಎಸ್. ಸುಗುಣ (ಕಾಂಗ್ರೆಸ್), ಕಲಾವತಿ (ಬಿಜೆಪಿ), ಎಸ್.ಬಿ.ಪ್ರೆಮಕುಮಾರಿ (ಜೆಡಿಎಸ್).
8ನೇ ವಾರ್ಡ್ (ಹಿಂದುಳಿದ ವರ್ಗ ‘ಎ’): ಎಸ್.ಪಿ. ವಾಸುರಾವ್ (ಕಾಂಗ್ರೆಸ್), ಎಸ್.ಎನ್. ನಾಗರಾಜ್ (ಬಿಜೆಪಿ), ಎಸ್.ಬಿ ಧರಣೇಶ್ (ಜೆಡಿಎಸ್), ರಾಮಚಂದ್ರ (ಪಕ್ಷೇತರ), ಪ್ರಕಾಶ್ (ಪಕ್ಷೇತರ), ದಾಸೇಗೌಡ (ಪಕ್ಷೇತರ)
9ನೇವಾರ್ಡ್ (ಪರಿಶಿಷ್ಟ ಪಂಗಡ-ಮಹಿಳೆ): ಮಂಗಳಮ್ಮ (ಕಾಂಗ್ರೆಸ್), ಜಿ.ಕೆ. ಶ್ವೇತಾ (ಬಿಜೆಪಿ), ಸಿ.ಲಕ್ಷ್ಮೀ (ಜೆಡಿಎಸ್) ಎಸ್.ಲಕ್ಷ್ಮೀ (ಪಕ್ಷೇತರ), ಪದ್ಮ (ಪಕ್ಷೇತರ)
10ನೇ ವಾರ್ಡ್ (ಸಾಮಾನ್ಯ ಕ್ಷೇತ್ರ): ಎಸ್.ವಿ. ರವಿಕುಮಾರ್ (ಕಾಂಗ್ರೆಸ್), ನಾಗರಾಜರಾಮ (ಬಿಜೆಪಿ), ಜಿ.ಗೋಪಾಲಕೃಷ್ಣ (ಜೆಡಿಎಸ್.
11ನೇ ವಾರ್ಡ್ (ಸಾಮಾನ್ಯ ಕ್ಷೇತ್ರ): ಯೋಗೀಶ್‌ಕುಮಾರ್ (ಕಾಂಗ್ರೆಸ್), ಸುನಂದಮ್ಮ (ಬಿಜೆಪಿ), ಬಿ.ಎಮ್.ನಂಜುಂಡಸ್ವಾಮಿ (ಜೆಡಿಎಸ್), ಶಿವಣ್ಣ (ಪಕ್ಷೇತರ), ನಾಗರಾಜು (ಪಕ್ಷೇತರ), ಬಸವರಾಜಪ್ಪ (ಪಕ್ಷೇತರ).
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾ ವಾಣಾಧಿಕಾರಿ ತಹಶೀಲ್ದಾರ್ ನವೀನ್ ಜೋಸೆಫ್, ಸಹಾಯಕ ಚುನಾವಣಾಧಿಕಾರಿ ಬಸವೇಗೌಡ, ಚುನಾವಣಾ ಶಿರಸ್ತೇದಾರ್ ವೆಂಕಟರಾಮ್, ಸೋಮ ಶೇಖರ್, ನಾಗರಾಜ್, ವಾಸುದೇವ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಪಕ್ಷೇತರರಾದವರು: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಭ್ಯರ್ಥಿ ಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಒಂದನೇ ವಾರ್ಡಿನಿಂದ ಬಿಜೆಪಿ ಪಕ್ಷದಿಂದ ಟಿಕೇಟ್‌ಗಾಗಿ ರಮೇಶ್ ಮತ್ತು ಎಸ್.ಎಮ್. ನಾಗಯ್ಯ ಇಬ್ಬರಲ್ಲಿ ಪೈಪೋಟಿ ನಡುವೆ ಎಸ್.ಎಮ್. ನಾಗಯ್ಯ ರವರಿಗೆ ಪಕ್ಷ ಟಿಕೆಟ್ ನೀಡಿದೆ. ಒಂದನೇ ವಾರ್ಡಿನಿಂದ ರಮೇಶ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸುವ ಸಂದ ರ್ಭದಲ್ಲಿ ಶಾಸಕ ಸಿ. ಚಿಕ್ಕಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಕೆ ನಂದಿನಿ ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಸುಂದರ ದಾಸ್, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಸ್. ಪ್ರಭುಸ್ವಾಮಿ, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್.ಕೆ.ಹರಿದಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣೇಗೌಡ, ಕಾಂಗ್ರೆಸ್ ಮುಖಂಡರುಗಳಾದ ಎಸ್.ಬಿ. ಸತೀಶ್ ಕುಮಾರ್, ಎಸ್.ಎನ್. ಪದ್ಮಪ್ರಸಾದ್, ಎಸ್.ವಿ, ಯೋಗಿಶ್, ಸೋಮೇಶ್, ರವಿಕುಮಾರ್ ಹಾಜರಿದ್ದರು.
ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಜಿ.ಪಂ.ಸದಸ್ಯ ಕೆ.ಚಿಕ್ಕವೀರ ನಾಯಕ, ತಾ.ಪಂ.ಸದಸ್ಯರುಗಳಾದ ಗಿರೀಶ್, ಹನು, ತಾಲ್ಲೂಕು ಘಟಕದ ಅಧ್ಯಕ್ಷ ವೀರಭದ್ರಪ್ಪ, ಸರಗೂರು ಘಟಕದ ಅಧ್ಯಕ್ಷ ಸತ್ಯಪ್ರಕಾಶ್, ಮಾಜಿ ಅಧ್ಯಕ್ಷ ಎಸ್.ನಾರಾ ಯಣ್, ಎನ್.ಎಸ್.ಪ್ರತಾಪ್, ಯೋಗೀಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ನೀರು ಶುದ್ಧೀಕರಣ ಘಟಕ ಪರಿಶೀಲನೆ
ಹುಣಸೂರು: ಪಟ್ಟಣದಲ್ಲಿ ಕಳೆದ ಮೂರು ದಿನದಿಂದ ಕಲುಷಿತ ನೀರು ಸೇವಿಸಿ ಸಾರ್ವಜನಿಕರು ಆಸ್ಪತ್ರೆ ಸೇರುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಮತ್ತು ಪುರಸಭಾಧ್ಯಕ್ಷ ಚಂದ್ರಶೇಖರ್ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹಲವು ಬಡಾವಣೆಗಳ ನಿವಾಸಿಗಳು ವಾಂತಿ ಭೇದಿಯಿಂದ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಏರುತ್ತಿರುವುದರಿಂದ ಜಿಲ್ಲಾ ಕಾಲರ ಹೋರಾಟ ಸಮಿತಿಯ ಡಾ.ಸೋಮಶೇಖರ್ ಮತ್ತು ತಂಡ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ನೀರಿನ ದೋಷದಿಂದ ವಾಂತಿ ಭೇದಿ ಉಲ್ಬಣಿಸಿದೆ ಎಂದು ಅವರು ತಿಳಿಸಿದ್ದಾರೆ.
ಪಂಪ್ ಹೌಸ್ ಬಳಿ ಕಲುಷಿತ ನೀರು ಸೇರುತ್ತಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿದ ಶಾಸಕರು, ಮುಖ್ಯ ಭಾಗದಲ್ಲೇ ಕಲುಷಿತ ನೀರು ಕುಡಿಯುವ ನೀರಿಗೆ ಸೇರುತ್ತಿರುವುದರಿಂದ ಈ ಸಮಸ್ಯೆ ಉದ್ಬವಿಸಿದೆ ಎಂದು ಹೇಳುತ್ತಿದ್ದಂತೆ ಪುರಸಭಾಧ್ಯಕ್ಷ ಚಂದ್ರಶೇಖರ್ ಆಕ್ಷೇಪಿಸಿ, ಕಲುಷಿತ ನೀರು ಪಂಪ್ ಹೌಸ್ ಬಳಿ ಸೇರಿದ್ದಲ್ಲಿ ಪಟ್ಟಣದ 27 ವಾರ್ಡ್ ನಿವಾಸಿಗಳು ವಾಂತಿ ಭೇದಿ ರೋಗದಿಂದ ಆಸ್ಪತ್ರೆ ಸೇರಬೇಕಿತ್ತು, ಯಾವುದೋ ಒಂದು ವಾರ್ಡ್‌ನಲ್ಲಿ ನೀರು ಸೇರಿ ಈ ರೀತಿ ಸಂಭವಿಸಿರುವುದು ಸತ್ಯ ಎಂದರು.
ತರಾಟೆ: ಪುರಸಭೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಬಲಿಯಾಗಬೇಕಾಗಿದೆ ಎಂದ ಶಾಸಕರು, ಪಂಪ್ ಹೌಸ್‌ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಜಾಗರೂಕತೆಯಿಂದ ವರ್ತಿಸಿದ್ದರೆ ಸಮಸ್ಯೆ ಬರುತ್ತಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಔಷಧಿ ಕೊರತೆ: ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಕಾಡುತ್ತಿದ್ದು, ತಾತ್ಕಾಲಿಕವಾಗಿ ಸ್ಥಳಿಯ ಖಾಸಗಿ ಔಷಧಿ ಅಂಗಡಿಯವರಲ್ಲಿ ಸರ್ಕಾರಿ ಮುದ್ರಿತ ದರದಲ್ಲಿ ರೋಗಿಗಳಿಗೆ ಔಷಧಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶಿವಣ್ಣ ಹೇಳಿದರು.
ಸ್ಪಷ್ಟನೆ: ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮಹದೇವ್ ಸ್ವಾಮಿ ವಾಂತಿ ಭೇದಿಯಿಂದ ಸಾವನ್ನಪ್ಪಿಲ್ಲ ಎಂದು ಡಾ.ಶಿವಣ್ಣ ತಿಳಿಸಿದ್ದಾರೆ. ಮಹದೇವಸ್ವಾಮಿ ಹೊಂದಿದ್ದ ಕೆಟ್ಟ ಚಟದಿಂದ ರೋಗಕ್ಕೆ ಬಲಿಯಾಗಿ ಕಡೆ ಹಂತದಲ್ಲಿ ಆಸ್ಪತ್ರೆ ಸೇರಿಸಲಾಗುತ್ತು. ವಾಂತಿ ಭೇದಿ ವಾರ್ಡ್‌ನಲ್ಲಿ ದಾಖಲಿಸಿದ್ದ ಕಾರಣ ಕಲುಷಿತ ನೀರು ಸೇವಿಸಿ ಸಾವನ್ನಪಿದ್ದಾನೆ ಎಂದು ವರದಿ ಯಾಗಿದೆ ಎಂದು ಸ್ಪಷ್ಟನೆ ನೀಡಿದರು.
ಪಂಪ್ ಹೌಸ್ ಭೇಟಿ ಸಮಯದಲ್ಲಿ ಪುರಸಭಾ ಸದಸ್ಯ ಮತ್ತು ಮಾಜಿ ಅಧ್ಯಕ್ಷ ರವಿಶಂಕರ್, ರಮೇಶ್, ಧರ್ಮಾ, ಚಿಕ್ಕನಾಯ್ಕ, ಪುರಸಭಾ ಆಡಳಿತಾಧಿಕಾರಿ ಹರೀಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ, ಡಾ. ಶಿವಣ್ಣ ಮತ್ತು ಕಾಂಗ್ರೆಸ್ ಮುಖಂಡರು ಹಾಜರಿದ್ದರು.
ತಲಕಾಡು; ಏಕಮುಖ ಸಂಚಾರ
ಮೈಸೂರು: ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆಯಲಿರುವ ಪಂಚ ಲಿಂಗದರ್ಶನದಲ್ಲಿ ಭಾಗವಹಿಸುವ ಭಕ್ತಾದಿಗಳು ಹಾಗೂ ಸಾರ್ವ ಜನಿಕರು ನ.13 ರಿಂದ 27ರವರೆಗೆ ಈ ಕೆಳಕಂಡ ಮಾರ್ಗಗಳಲ್ಲಿ ಏಕಮುಖ ಸಂಚಾರವನ್ನು ಹಾಗೂ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂ ಧಿಸಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಮಣಿವಣ್ಣನ್ ಅವರು ಆದೇಶ ಹೊರಡಿಸಿದ್ದಾರೆ.
ಏಕಮುಖ ಸಂಚಾರದ ಮಾರ್ಗಗಳು
ಮೈಸೂರು - ತಿ. ನರಸೀಪುರ ರಸ್ತೆ ಮಾರ್ಗವಾಗಿ ಬರುವ ವಾಹನಗಳು ವಡೆಯಾಂದಳ್ಳಿಯಲ್ಲಿರುವ ಕೆ.ಎಸ್. ಆರ್.ಟಿ.ಸಿ. ಬಸ್ ನಿಲ್ದಾಣದಿಂದ ತಲಕಾಡು-ಪೋಲೀಸ್ ಠಾಣೆ- ಅರ್ಕೇಶ್ವರ ದೇವಸ್ಥಾನ-ವಿಜಾಪುರ-ಟಿ.ಮೇಗಡಹಳ್ಳಿ- ಕಾಳಬಸವನಹುಂಡಿ ಗ್ರಾಮ ಮಾರ್ಗ ವಾಗಿ ಮುಡುಕುತೊರೆ ಮಲ್ಲಿ ಕಾರ್ಜುನ ದೇವಸ್ಥಾನದವರೆಗೆ ಏಕಮುಖವಾಗಿ ಸಂಚರಿಸುವುದು.
ಬೆಳಕವಾಡಿ ಮಾರ್ಗವಾಗಿ ಬರುವ ವಾಹನಗಳು ಅರ್ಕೇಶ್ವರ ದೇವ ಸ್ಥಾನದ ಕಡೆಯಿಂದ ಬಲಕ್ಕೆ ತಿರುಗಿ ವಿಜಾಪುರ ಗ್ರಾಮದ ಮುಖಾಂತರ ಮುಡುಕುತೊರೆಗೆ ಹೋಗುವಂತೆ ಏಕಮುಖವಾಗಿ ಸಂಚರಿಸುವುದು.
ಎಲ್ಲಾ ವಾಹನಗಳ ಸಂಚಾರ ನಿರ್ಬಂಧ ಮಾರ್ಗಗಳು: ತಲಕಾಡು ಪೋಲೀಸ್ ಠಾಣಾ ವೃತ್ತದಿಂದ ಹಳೇಬೀದಿ, ವೈದ್ಯನಾಥೇಶ್ವರ ದೇವಸ್ಥಾನದ ಸುತ್ತಮುತ್ತ ಮತ್ತು ತಲಕಾಡು ಕಾವೇರಿ ಸ್ನಾನಘಟ್ಟದವರೆಗೆ ಹಾಗೂ ತಲಕಾಡು ಪೋಲೀಸ್ ಠಾಣಾ ವೃತ್ತ ದಿಂದ ಕೆ.ಇ.ಬಿ. ವೃತ್ತದವರೆಗೆ ಎಲ್ಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಚಾಮರಾಜನಗರ - ಮೈಸೂರು ಬ್ರಾಡ್‌ಗೇಜ್ ಸೇವೆಗೆ ವರ್ಷ
ಬೋಗಿ ಹೆಚ್ಚಲಿಲ್ಲ : ಬವಣೆ ತಪ್ಪಲಿಲ್ಲ
ನಂಜನಗೂಡು: ಚಾಮರಾಜನಗರ- ನಂಜನಗೂಡು-ಮೈಸೂರು ನಡುವಣ ಪರಿವರ್ತಿತ ಬ್ರಾಡ್‌ಗೇಜ್ ಮಾರ್ಗದಲ್ಲಿ ರೈಲು ಸಂಚಾರ ಸೇವೆ ಆರಂಭಗೊಂಡು ಇಂದಿಗೆ ಒಂದು ವರ್ಷ ತುಂಬಿದೆ. ಕಳೆದ ವರ್ಷ ನವೆಂಬರ್ 11 ರಂದು ಉದ್ಘಾಟನಾ ರೈಲು ಸಂಚಾರಕ್ಕೆ ಅಂದಿನ ಕೇಂದ್ರ ರೈಲ್ವೆ ಖಾತೆ ರಾಜ್ಯ ಮಂತ್ರಿ ಆರ್.ವೇಲು ಚಾಮರಾಜನಗರದಲ್ಲಿ ಹಸಿರು ನಿಶಾನೆ ತೋರಿದ್ದರು. ಆದರೆ ಈ ಮಾರ್ಗದಲ್ಲಿ ಬ್ರಾಡ್‌ಗೇಜ್ ರೈಲು ಸಂಚಾರ ಆರಂಭವಾಗಿ ವರ್ಷ ಕಳೆದಿದ್ದರೂ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬೋಗಿಗಳ ಸಂಖ್ಯೆ ಹೆಚ್ಚಿಸದಿರುವುದು ಪ್ರಯಾಣಿಕರ ಪಾಲಿಗೆ ನರಕಯಾತನೆ ಆಗಿದೆ.
ರೈಲು ಸಂಖ್ಯೆ 201 ಚಾಮರಾಜನಗರದಿಂದ ಬೆಳಿಗ್ಗೆ 7.10ಕ್ಕೆ ನಂಜನಗೂಡು ಮಾರ್ಗವಾಗಿ ಮೈಸೂರಿಗೆ ಬೆಳಿಗ್ಗೆ 9 ಗಂಟೆಗೆ ತಲುಪುತ್ತದೆ. ಈ ರೈಲಿಗೆ ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಸುಮಾರು 2 ಸಾವಿರ ಮಂದಿ ಪ್ರಯಾಣಿಸುತ್ತಾರೆ. ಆದರೆ ರೈಲು ಆರಂಭವಾದಗಿ ನಿಂದಲೂ ಕೇವಲ ಹತ್ತು ಬೋಗಿಗಳನ್ನು (ಒಟ್ಟು ಆಸನಗಳ ಸಾಮರ್ಥ್ಯ: 900) ಮಾತ್ರ ಓಡಿಸಲಾಗುತ್ತಿದೆ. ಈ ರೈಲಿಗೆ ಚಾಮರಾಜನಗರದ ಕಡೆಯಿಂದಲೇ ಬಹುತೇಕ ಆಸನಗಳು ಭರ್ತಿಯಾಗಿರುತ್ತವೆ. ನಂಜನಗೂಡಿನಿಂದ ಮೈಸೂರುಗೆ ತೆರಳಲು ದಿನದಲ್ಲಿ ಇದೇ ಮೊದಲ ರೈಲು ಕೂಡ ಆಗಿದೆ.
ಹಾಗಾಗಿ ನಂಜನಗೂಡು ರೈಲು ನಿಲ್ದಾಣದಲ್ಲಿ ಈ ರೈಲಿಗೆ ಹತ್ತಲು ಸಾವಿರ ಸಂಖ್ಯೆಗೆ ಕಡಿಮೆ ಇಲ್ಲದಂತೆ ಪ್ರಯಾಣಿಕರು ಕಾದಿರುತ್ತಾರೆ. ಚಾಮರಾಜನಗರದಲ್ಲೇ ಭರ್ತಿಯಾಗಿರುವ ರೈಲಿಗೆ ಇಲ್ಲಿ ಹತ್ತುವ ಪ್ರಯಾಣಿಕರು 25 ಕಿ.ಮೀ. ದೂರದ ಮೈಸೂರು ತನಕ ನಿಂತುಕೊಂಡೇ ಪ್ರಯಾಣಿಸುವ ಸಂಕಷ್ಟ ಎದುರಿಸಬೇಕು. ಮಾರ್ಗ ಮಧ್ಯೆ ಸಿಗುವ ಸುಜಾತಪುರಂ, ತಾಂಡವಪುರ ಮತ್ತು ಕಡಕೊಳ ನಿಲ್ದಾಣದಲ್ಲಿ ಇನ್ನಷ್ಟು ಪ್ರಯಾಣಿಕರು ಹತ್ತುತ್ತಾರೆ. ಹೀಗಾಗಿ ಈ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ನರಕಯಾತನೇ ಅನುಭವಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮೈಸೂರು-ನಂಜನಗೂಡು-ಚಾಮರಾಜನಗರ ನಡುವೆ ಸಂಚರಿಸುವ ರೈಲಿನಲ್ಲಿದೆ. ಒಂದು ವರ್ಷದಿಂದ ರೈಲು ಬೋಗಿಗಳ ಕೊರತೆ ಕಾಡುತ್ತಿದ್ದರೂ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು, ಈ ಭಾಗದ ಸಂಸದರಾದ ಆರ್.ಧ್ರುವನಾರಾಯಣ್, ಅಡಗೂರು ಎಚ್.ವಿಶ್ವನಾಥ್ ಅವರು ಈಗಲಾದರು ಮೈಸೂರು-ನಂಜನಗೂಡು-ಚಾಮರಾಜನಗರ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಬೋಗಿಗಳ ಸಂಖ್ಯೆಯನ್ನು ಈಗಿರುವ 10 ರಿಂದ 15ಕ್ಕೆ ಹೆಚ್ಚಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
2 ರೂ.ಗೆ ಕೆಜಿ ಅಕ್ಕಿ: ಆಗ್ರಹ
ಎಚ್.ಡಿ.ಕೋಟೆ: ‘ಬಹುತೇಕ ಬೇಡಿಕೆಗಳನ್ನು ಸಿಐಟಿಯು ಮುಖಂಡ ರೊಂದಿಗೆ ಮಾತನಾಡಿ ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿ, ಸೌಜನ್ಯಕ್ಕಾದರೂ ಮಾತುಕತೆಗೆ ಆಹ್ವಾನಿಸದ ರಾಜ್ಯ ಸರ್ಕಾರಕ್ಕೆ ಮತ್ತೆ ಹೋರಾಟದ ಬಿಸಿ ಮುಟ್ಟಿಸುವುದಾಗಿ’ ಸಿಐಟಿಯು ಜಿಲ್ಲಾ ಸಮಿತಿ ಮುಖಂಡ ಜಯರಾಮು ಎಚ್ಚರಿಕೆ ನೀಡಿದರು.
ಮಂಗಳವಾರ ಪಟ್ಟಣದ ಅಂಬೇಡ್ಕರ್ ಭವನದ ಅವರಣದಲ್ಲಿ ಸಿಐಟಿಯು ಪ್ರಥಮ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಬೇಡಿಕೆ ಈಡೇರಿ ಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಹಿಂದೆ ಪ್ರತಿಭಟನೆ ಹಮ್ಮಿ ಕೊಂಡಿದ್ದ ಸಿಐಟಿಯು ಪ್ರತಿಭಟ ನಾಕಾರರನ್ನು ಕರೆಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶೀಘ್ರವೇ ಮುಖಂ ಡರನ್ನು ಕರೆದು ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದರು. ನಂತರ ಸೌಜನ್ಯಕ್ಕಾದರೂ ಮಾತುಕತೆಗೆ ಕರೆಯದೇ ಕಿವಿ ಕಣ್ಣು ಇಲ್ಲದವರಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಬಡವರಿಗೆ 2.ರೂಗೆ ಅಕ್ಕಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಇದು ವರೆಗೂ ಅಕ್ಕಿ ನೀಡಿಲ್ಲ. ಕಡಿಮೆ ಪ್ರಮಾಣದಲ್ಲಿ ಭತ್ತ ಬೆಳೆ ಯುವ ತಮಿಳುನಾಡು ಕೇರಳ ರಾಜ್ಯ ಗಳು ಬೇರೆಡೆಯಿಂದ ಅಕ್ಕಿ ಖರೀದಿಸಿ 2 ರೂ.ಗೆ ವಿತರಿಸುತ್ತಿರುವಾಗ ಹೆಚ್ಚು ಭತ್ತ ಬೆಳೆಯುವ ಕರ್ನಾಟಕದಲ್ಲಿ 2 ರೂ.ಗೆ ಅಕ್ಕಿ ನೀಡದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾ ಸಮಿತಿ ಮುಖಂಡ ಬಾಲಾಜಿ, ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಉಪಾಧ್ಯಕ್ಷ ಕೆ. ಬಸವರಾಜು ಮುಂತಾದವರು ಮಾತ ನಾಡಿದರು. ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ವಿ.ಬಸವರಾಜು, ಸಿಐ ಟಿಯು ತಾಲ್ಲೂಕು ಅಧ್ಯಕ್ಷ ಬಿ.ಎಂ. ಶಿವಣ್ಣ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಚ್.ಎ.ಅಕ್ಬರ್ ಪಾಷ, ಹಸೀನಾಭಾನು, ಚನ್ನಪ್ಪಾಜಿ, ಪ್ರಕಾಶ್ ಮುಂತಾದವರಿದ್ದರು.
ಲೆಕ್ಕ ನೀಡಲು ಆಗ್ರಹ
ಎಚ್.ಡಿ.ಕೋಟೆ: ತಾಲ್ಲೂಕು ಅಂಗ ನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಹಣಕಾಸು ಲೆಕ್ಕನೀಡದ ಸಂಘದ ಹಿಂದಿನ ಕಾರ್ಯದರ್ಶಿ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಂಗಳವಾರ ತಾಲ್ಲೂಕು ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದಲ್ಲಿ ಮೂರು ವರ್ಷಗಳ ಹಿಂದೆ ಕಾರ್ಯದರ್ಶಿಯಾಗಿದ್ದ ಹಸೀನಾ ಭಾನು ಎಂಬುವರು ಈಗ ಸಿಐಟಿಯು ಸಂಘಟನೆಗೆ ಸೇರಿ ಸಂಘಕ್ಕೆ ಗೈರು ಹಾಜರಾಗುತ್ತಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಸಂಘದ ಸದಸ್ಯರ ಸಮಸ್ಯೆಗಳಿಗಾಗಿ ವಿವಿಧ ಮೂಲಗಳಿಂದ ಸಂಘದ ಹೆಸರಿನಲ್ಲಿ 14,500 ರೂಪಾಯಿಗಳನ್ನು ಸಂಘದ ಹೆಸರಿನಲ್ಲಿ ಆಗಿನ ಅಧ್ಯಕ್ಷೆ ಸತ್ಯಲಕ್ಷ್ಮಿ ಮತ್ತು ಕಾರ್ಯದರ್ಶಿ ಹಸೀನಾಭಾನು ಇವರ ಜಂಟಿ ಖಾತೆಯಲ್ಲಿ ಸ್ಟೇಟ್ ಬ್ಯಾಂಕ್‌ನಲ್ಲಿ ಇಡಲಾಗಿದೆ.
ಮೂರು ವರ್ಷಗಳಿಂದ ಸಂಘಕ್ಕೆ ಕಾರ್ಯದರ್ಶಿ ಗೈರು ಹಾಜರಾ ಗುತ್ತಿದ್ದು, ಸಂಘದ ಚಟುವಟಿಕೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಕಳೆದ ತಿಂಗಳು 22ಕ್ಕೆ ಸಂಘದ ನೂತನ ಅಧ್ಯಕ್ಷರಾಗಿ ಮಂಗಳ ಗೌರಿ ಹಾಗೂ ಕಾರ್ಯದರ್ಶಿಯಾಗಿ ಕೆ.ಚಂದ್ರಮ್ಮ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.
ಸಂಘದ ಚಟುವಟಿಕೆಗಳನ್ನು ಮುಂದು ವರೆಸಿಕೊಂಡು ಹೋಗುವ ಸಲುವಾಗಿ ಬ್ಯಾಂಕ್ ಖಾತೆಯಲ್ಲಿರುವ ನಗದು ಹಣವನ್ನು ನೂತನ ಅಧ್ಯಕ್ಷರ ಹಾಗೂ ಕಾರ್ಯದರ್ಶಿ ಹೆಸರಿಗೆ ವರ್ಗಾವಣೆ ಮಾಡಲು ಹಿಂದಿನ ಕಾರ್ಯದರ್ಶಿ ಹಸೀನಾಭಾನು ಸಹಿಮಾಡುತ್ತಿಲ್ಲ. ಕೇಳಿದಾಗಲೆಲ್ಲಾ ಸಬೂಬು ಹೇಳುತ್ತಿದ್ದಾರೆ. ಹಾಗಾಗಿ ಸಂಘದ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟ ನಾಕಾರರು ಆರೋಪಿಸಿದರು.
ಸಂಘದ ಅಧ್ಯಕ್ಷೆ ಮಂಗಳಗೌರಿ, ಕಾರ್ಯದರ್ಶಿ ಕೆ.ಚಂದ್ರಮ್ಮ, ಖಜಾಂಚಿ ಶಕುಂತಲಾ, ಶಿವನಂಜಮ್ಮ, ಶಾರದ, ಪಾಪತ್ತಿ, ನೂರಲಕುಪ್ಪೆ ಭಾಗ್ಯಮ್ಮ, ದೇವಕಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.
ಸಾಹಿತ್ಯ ಅಭಿರುಚಿ: ಯುವಕರಿಗೆ ಕರೆ
ತಿ.ನರಸೀಪುರ: ‘ಕನ್ನಡ ಭಾಷೆ ಶಾಶ್ವತ ವಾಗಿ ಉಳಿಯಲು ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಿದೆ’ ಎಂದು ವಿದ್ಯೋದಯ ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ಮೂಗೂರು ಕುಮಾರಸ್ವಾಮಿ ಇಲ್ಲಿ ಅಭಿಪ್ರಾಯಪಟ್ಟರು.
ವಿದ್ಯೋದಯ ಕಾಲೇಜಿನಲ್ಲಿ ಈಚೆಗೆ ನಡೆದ ಕನ್ನಡ ಸಾಹಿತ್ಯ ಬಳಗ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಹನಿಗವನ, ಚುಟುಕು, ಲೇಖನ ,ಕಥೆ, ಕಾದಂಬರಿಗಳನ್ನು ಬರೆಯುವ ಹವ್ಯಾಸ ರೂಡಿಸಿಕೊಂಡಲ್ಲಿ ಸಾಹಿತ್ಯ ತಾನಾಗಿಯೇ ಬೆಳೆಯುತ್ತದೆ. ಮಾತೃಭಾಷೆಯನ್ನು ಬೆಳೆಸುವಲ್ಲಿ ಸಾಹಿತ್ಯ ಬಹಳ ಮುಖ್ಯ ಜತೆಗೆ ಅಭಿಮಾನವೂ ಕೂಡ ಅಷ್ಟೆ ಅಗತ್ಯ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮ ವಿದ್ಯೋದಯ ಸಂಘದ ಆಡಳಿತ ಸಹಾಯಕ ಶಿವನಂಜಪ್ಪ ಮಾತನಾಡಿ, ‘ಇಂಗ್ಲೀಷ್ ವ್ಯಾಮೋಹಕ್ಕೆ ಸಿಕ್ಕಿ ಕನ್ನಡಿಗರಿಂದಲೇ ದೂರವಾಗುತ್ತಿರುವ ನಮ್ಮ ಕನ್ನಡ ಉಳಿಸಲು ಕನ್ನಡಿಗರು ಹೆಚ್ಚು ಆಸಕ್ತಿ ತೋರಬೇಕು’ ಎಂದರು.
ಉಪನ್ಯಾಸಕರಾದ ಎನ್.ಕಲ್ಪನಾ, ಸೋಮಣ್ಣ, ಎಂ.ಬಿ. ರವಿ, ಆರ್.ಎಸ್.ಬಸವರಾಜು, ಮಾನಸ, ಸವಿತಾ, ಮಾದೇಶ್, ವೇದ ಶೃತಿ, ರಮ್ಯ, ದೇವಿಕಾ ಹಾಜರಿದ್ದರು.
ಚಿತ್ರಕಲಾ ಪ್ರಾತ್ಯಕ್ಷಿತೆ ಇಂದು: ಇಲ್ಲಿನ ಪಿಆರ್‌ಎಂ ವಿಜಯ ತರಬೇತಿ ಸಂಸ್ಥೆ, ವರ್ಣ ಸಿಂಚನ ಕಲಾವಿದರ ಆಶ್ರಯದಲ್ಲಿ ತಲಕಾಡು ಪಂಚಲಿಂಗ ದರ್ಶನದ ಅಂಗವಾಗಿ ಚಿತ್ರಕಲಾ ಪ್ರಾತ್ಯಕ್ಷಿತೆ ಹಾಗೂ ವಿಚಾರ ಸಂಕಿರಣ ಗೋಪಾಲಪುರ ರಸ್ತೆಯಲ್ಲಿರುವ ಪಿಆರ್‌ಎಂ ಟಿಟಿಐ ಕಾಲೇಜು ಆವರ ಣದಲ್ಲಿ ಬುಧವಾರ ಬೆಳಗ್ಗೆ 10-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜಪ್ಪ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ. ಬಿಎಚ್ ಎಸ್ ಜಂಟಿ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞ ಡಾ.ಕೆ.ಎಸ್. ಸಮೀರ ಸಿಂಹ ಇತರರು ಭಾಗವಹಿಸಲಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಗುದ್ದಲಿಪೂಜೆ: ವರುಣಾ ಕ್ಷೇತ್ರ ವ್ಯಾಪ್ತಿಯ ತಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ವಿ-ಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ಗುದ್ದಲಿಪೂಜೆ ನೆರವೇರಿಸಲಿದ್ದಾರೆ.
ಕಡಕೊಳದಲ್ಲಿ ಅದ್ದೂರಿ ರಾಜ್ಯೋತ್ಸವ
ಮೈಸೂರು: ತಾಲ್ಲೂಕಿನ ಕಡಕೊಳ ಗ್ರಾಮದಲ್ಲಿ ಕನ್ನಡ ಗೆಳೆಯರ ಬಳಗದ ವತಿಯಿಂದ 23ನೇ ರಾಜ್ಯೋತ್ಸವ ಕಾರ್ಯಕ್ರಮ ಮತ್ತು ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಸಿ.ಎನ್.ನಂಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ರಾಜ್ಯದ ನೆಲ- ಜಲ ಮತ್ತು ಭಾಷೆ ಇತರೆ ವಿಚಾರಗಳಲ್ಲಿ ಅನೇಕ ಸಮಸ್ಯೆ ಗಳು ಎದುರಾಗುತ್ತಿವೆ. ಜ್ವಲಂತ ಸಮಸ್ಯೆಗಳನ್ನು ಎದುರಿಸಿ ರಾಜ್ಯವನ್ನು ಕಾಪಾಡಲು ಯಾವ ಸರ್ಕಾರದಿಂದಲೂ ಸಾಧ್ಯವಾಗದಿದ್ದರೂ ಸಮಸ್ಯೆ ಬಗೆಹರಿಸುವ ಶಕ್ತಿ ಇರುವುದು ಯುವ ಪಡೆಯಾದಂತಹ ಕನ್ನಡಪರ ಸಂಘಟನೆಗಳಿಗೆ ಮಾತ್ರ’ ಎಂದು ಹೇಳಿದರು.
‘ಯುವಕರು ಪೂರ್ವಗ್ರಹಪೀಡಿತರಾಗದೇ ಭಾಷೆ, ನೆಲ, ಜಲ ಮತ್ತು ಸಂಸ್ಕೃತಿಯ ವಿಚಾರ ಬಂದಾಗ ಸಮರ್ಪಣಾ ಮನೋಭಾವದಿಂದ ಹೋರಾಟಕ್ಕಿಳಿದಾಗ ಮಾತ್ರ ಕನ್ನಡ ಭಾಷೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ. ಯುವ ಸಂಘಟನೆಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಾಹಿತಿಗಳು, ರಾಜಕಾರಣಿಗಳು, ಬುದ್ಧಿಜೀವಿಗಳು ಮಾಡಬೇಕಾಗಿದೆ’ ಎಂದು ತಿಳಿಸಿದರು.
ಗ್ರಾಮದ ಮುಖಂಡ ಕೆ.ಆದಿರಾಜಯ್ಯ ಮಾತನಾ ಡಿದರು. ಕಡಕೊಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರವಿ, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರ ಶೇಖರಯ್ಯ, ಅಯ್ಯಪ್ಪಸ್ವಾಮಿ ದೇವಸ್ಥಾನ ಸಂಸ್ಥಾಪಕರಾದ ಪಿ.ಕಾಂತರಾಜು, ಸಂಘದ ಅಧ್ಯಕ್ಷ ನಟರಾಜು, ಕಾರ್ಯದರ್ಶಿ ಕಡಕೊಳ ಕುಮಾರಸ್ವಾಮಿ, ಉಪಾಧ್ಯಕ್ಷ ಮಹದೇವು, ನಂಜಪ್ಪ, ಶ್ರೀಕಂಠು, ರಾಕೇಶ್, ರವಿಚಂದ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ರಮೇಶ್, ಜವರ ನಾಯಕ, ಯೂನಿಯನ್ ಬ್ಯಾಂಕ್ ಮಾಜಿ ಅಧ್ಯಕ್ಷ ಸ್ವಾಮಿ ನಾಯಕ, ವೇದಾಂತ್, ಶ್ರೀರಾಂಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ್, ರವಿ, ಕೆ.ಎಸ್.ರವಿ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ರಂಗಸ್ವಾಮಿ, ಸಂಘದ ಗೌರವ ಅಧ್ಯಕ್ಷ ಮರಿಶಂಭುನಾಯಕ್ ಬಡ ಮಕ್ಕಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಿಸಿದರು.