ಆರಕ್ಕೆ ಏರಲಿಲ್ಲ; ಮೂರಕ್ಕೆ ಇಳಿಯಲಿಲ್ಲ. ಇದು ಕರ್ನಾಟಕ ರಾಜ್ಯದವರ ವಾಲಿಬಾಲ್ ರಂಗದಲ್ಲಿನ ಸಾಧನೆ. ರಾಷ್ಟ್ರೀಯ ಕ್ರೀಡಾರಂಗದಲ್ಲಿ ರಾಜ್ಯದ ವಾಲಿಬಾಲ್ ತಂಡಗಳ ಸಾಧನೆ ಬೆರಗುಗೊಳಿಸುವಂತಹದಲ್ಲ. ತಲುಪಬೇಕಾದ ಮಟ್ಟ ತಲುಪಿಲ್ಲ ಎನ್ನುವ ಆತಂಕ ಇನ್ನೂ ಕಾಡುತ್ತಲೇ ಇದೆ. ಆದರೂ ಆ ಬಗ್ಗೆ ಯಾರೂ ಗಮನ ಹರಿಸಿದಂತೆ ಕಾಣುತ್ತಿಲ್ಲ.
ಕರ್ನಾಟಕದಲ್ಲಿ ವಾಲಿಬಾಲ್ ಚಟುವಟಿಕೆ ಬಹುತೇಕ ನಗರದಲ್ಲಿ ಮಾತ್ರ ಬೀಡುಬಿಟ್ಟಿದೆ. ವರ್ಷಕ್ಕೆ ಅಲ್ಲೊಂದು ಇಲ್ಲೊಂದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಟೂರ್ನಿಗಳು ನಡೆಯುತ್ತವೆ. ರಾಜ್ಯದಲ್ಲಿ ಕ್ರೀಡಾಮಟ್ಟ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ. ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ರಾಜ್ಯ ತಂಡಗಳ ಸಾಧನೆ ತೃಪ್ತಿದಾಯಕವಾಗಿಲ್ಲ, ಇದಕ್ಕೆ ಕಾರಣ ಹುಡುಕಬೇಕಾಗಿಲ್ಲ.
ಆಳವಾಗಿ ಅವಲೋಕಿಸಿದಾಗ ರಾಜ್ಯ ವಾಲಿಬಾಲ್ ಸಂಸ್ಥೆಯು ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸುತ್ತಿಲ್ಲ ಎಂಬ ಅಂಶ ತಿಳಿದು ಬರುತ್ತದೆ. ರಾಜ್ಯದಲ್ಲಿ ವಾಲಿಬಾಲ್ ಅಭಿವೃದ್ಧಿ ಸಂಸ್ಥೆಗೆ ಸಂಬಂಧಿಸಿದ ವಿಷಯ. ತಮ್ಮ ಜವಾಬ್ದಾರಿ ಅರಿತು ಪ್ರತಿಭೆ ವಿಕಾಸಗೊಳ್ಳುವಲ್ಲಿ ತಮ್ಮ ಅನುಭವ ಧಾರೆ ಎರೆಯಬೇಕು. ತರಬೇತುದಾರರಿಗೂ ಸೌಲಭ್ಯ ಕಲ್ಪಿಸಿ ಕೊಡಬೇಕು. ಸೇವಾ ಭದ್ರತೆ ಹಾಗೂ ಅವರ ಅನುಭವ, ಅರ್ಹತೆ ಮೇರೆಗೆ ಇವರಿಗೆ ಸಂಬಳ ನೀಡಬೇಕು. ಈ ಸೂಚನೆಗಳು ಕಾರ್ಯಗತವಾಗುವವರೆಗೂ ತರಬೇತಿ ಯೋಜನೆಗಳು ಮುಂದುವರೆದರೆ ಮಾತ್ರ ಕರ್ನಾಟಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕನಿಷ್ಠ ಎರಡು ಅಥವಾ ಮೂರನೇ ಸ್ಥಾನದಲ್ಲಿರಬಹುದು.
ಇಲ್ಲಿ ರಾಜ್ಯ ಸಂಸ್ಥೆ ಕೆಲಸ ಮಾಡುತ್ತಿಲ್ಲ ಎಂಬ ಅಂಶ ಮುಖ್ಯವಲ್ಲ. ಹಲವು ವರ್ಷಗಳಿಂದ ಕಾರ್ಯದರ್ಶಿ ಸ್ಥಾನವನ್ನು ಅಲಂಕರಿಸಿರುವ ಕೆ.ನಂದಕುಮಾರ್ ಅವರು ರಾಜ್ಯದಲ್ಲಿ ವಾಲಿಬಾಲ್ ಅಭಿವೃದ್ಧಿಗೆ ಹಗಲು-ರಾತ್ರಿ ದುಡಿಯುತ್ತಿದ್ದಾರೆ. ಪ್ರಾಯೋಜಕತ್ವದ ನೆರವಿನೊಂದಿಗೆ ಕೆಲವೊಮ್ಮೆ ತಾವೇ ಸ್ವತಃ ಹಣ ಹಾಕಿ ಟೂರ್ನಿಗಳನ್ನು ಮತ್ತು ಲೀಗ್ ಪಂದ್ಯಗಳನ್ನು ನಡೆಸುತ್ತಿದ್ದಾರೆ. ಇದು ಸಂತೋಷದ ವಿಷಯವೇ.
ಆದರೆ ಇದನ್ನು ಎಷ್ಟು ವರ್ಷ ನಡೆಸಲು ಸಾಧ್ಯ. ರಾಜ್ಯದಲ್ಲಿ ವ್ಯಾಪಕ ಪ್ರತಿಭೆ ಇದೆ. ಅದನ್ನು ತೀವ್ರ ಹಾಗೂ ಯೋಜಿತ ತರಬೇತಿಯಿಂದ ಉಪಯೋಗಿಸಿಕೊಳ್ಳಬಹುದು ಹಾಗೂ ಉಪಯೋಗಿಸಿ ಕೊಳ್ಳಬೇಕು. ಆಗ ಮಾತ್ರ ಏನು ಬೇಕಾದರೂ ನಿರೀಕ್ಷಿಸಬಹುದು. ವಾಲಿಬಾಲ್ ಅಭಿವೃದ್ಧಿಗೆ ಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಎಲ್ಲೋ ಎಡವಿದಂತೆ ಕಾಣುತ್ತದೆ. ಯುವಕರಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಎಲ್ಲಾ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಹಾಗೂ ಮುಂದೆ ಬರುವ ಖಾಸಗಿ ಕ್ಲಬ್‌ಗಳಲ್ಲಿ ತರಬೇತಿ ಯೋಜನೆ ಜಾರಿಗೆ ಬರುವಂತೆ ಪ್ರಯತ್ನಗಳು ನಡೆಯಬೇಕು.
ರಾಜ್ಯದ ವಾಲಿಬಾಲ್ ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಹಲವರು ಸಲ್ಲಿಸಿದ ಸೇವೆ ಅಪಾರ. ಕರ್ನಾಟಕದಲ್ಲಿ 1945ರಲ್ಲಿ ವಾಲಿಬಾಲ್ ಕ್ರೀಡೆ ಆರಂಭವಾಯಿತು. 1952ರಲ್ಲಿ ಆರ್.ಸುಬ್ಬಣ್ಣ ಮೈಸೂರು ರಾಜ್ಯ ವಾಲಿಬಾಲ್ ಸಂಸ್ಥೆ ಆರಂಭಿಸಿದರು. ಕರ್ನಾಟಕ ಏಕೀಕರಣದ ನಂತರ 1972ರಿಂದ 74ರವರೆಗೆ ರಂಗಸ್ವಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು ಕಾರ್ಯದರ್ಶಿ ಕೊಟ್ರಯ್ಯ. ಆನಂತರದ ದಿನಗಳಲ್ಲಿ ಬದಲಾವಣೆ ಗಾಳಿ ಬೀಸಿತು. 1979ರಿಂದ 1982ರ ವರೆಗೆ ಬಿ. ಎಸ್.ರಾಘವನ್ ಅಧ್ಯಕ್ಷರಾಗಿ ಬಂದನಂತರ ರಾಜ್ಯದಲ್ಲಿ ಭಾರತ ಮತ್ತು ರಷ್ಯಾ ನಡುವೆ ವಾಲಿಬಾಲ್ ಟೆಸ್ಟ್ ಪಂದ್ಯಗಳು ನಡೆದವು. ಅನುಭವಿ ಆಡಳಿತಗಾರ ಸ್ಟ್ಯಾನ್ಲಿ ಈ ಅವಧಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.
ಮತ್ತೊಮ್ಮೆ ರಾಜ್ಯ ಸಂಸ್ಥೆಯ ಆಡಳಿತದಲ್ಲಿ ಭಾರಿ ಬದಲಾವಣೆ ಕಂಡುಬಂತು. 1985ರಿಂದ 91ರವರೆಗೆ ಲೋಕೇಶ್ ಗೌಡ ಕಾರ್ಯದರ್ಶಿಯಾಗಿ ಬಂದ ನಂತರ ವಾಲಿಬಾಲ್ ಚಟುವಟಿಕೆ ಬಿರುಸುಗೊಂಡಿತು. ಬೆಟ್ಟೇಗೌಡರ ಜೊತೆಯಲ್ಲಿ ನಂದಕುಮಾರ್ (ಪ್ರಸ್ತುತ ಕಾರ್ಯದರ್ಶಿ) ಸಚಿವ ಬಿ.ಎನ್.ಬಚ್ಚೇಗೌಡ, ವಿ.ಎಂ.ರಂಗಸ್ವಾಮಿ, ಎಸ್.ನಂಜೇಗೌಡ ಇವರೆಲ್ಲಾ ವಾಲಿಬಾಲ್‌ಗೆ ಶ್ರಮಿಸಿದರು. ಜೊತೆಗೆ ವಾಲಿಬಾಲ್‌ನ ಮಹಾಗುರು ಎನಿಸಿಕೊಂಡಿರುವ ಮಾರ್ಗಲಿಂಗಂ ಶಿಸ್ತು ಮತ್ತು ಸಮಯ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದವರು. ಜೊತೆಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯಲ್ಲಿ ವಾಲಿಬಾಲ್ ರೆಫರಿಗಳನ್ನು ಹುಟ್ಟು ಹಾಕಿದ್ದ ಮಾರ್ಗಲಿಂಗಂ ಎಲ್ಲರ ಮನೆಮಾತಾಗಿದ್ದಾರೆ.
ಶ್ರೀರಂಗಪುರ, ಮೋಹನ್‌ಕುಮಾರ್, ಅಮಿತ್ರಾಯ್ ಚೌಧುರಿ, ನಾಗರಾಜ ಹೆಗಡೆ, ಮಹಿಳಾ ವಿಭಾಗದಲ್ಲಿ ಸುಪ್ರಿಯಾ, ತೇಜಸ್ವಿನಿ ಜತ್ತಿ ಹಾಗೂ ಅಂತರರಾಷ್ಟ್ರೀಯ ರಂಗದಲ್ಲಿ ಶಂಕರನಾರಾಯಣಪ್ಪ, ಬಾಲಾಜಿ, ಪನ್ನಿರ್ ಸೆಲ್ವಂ, ಬಾಲಾಜಿ ಪ್ರಭು, ನಾಗರಾಜ ಹೆಗಡೆ, ಸೋಮನಾಥಗಿರಿ ಗೌಡ ಇವರೆಲ್ಲಾ ರಾಜ್ಯಕ್ಕೆ ಹೆಸರು ತಂದುಕೊಟ್ಟವರು. ಸಬ್ ಜೂನಿಯರ್, ಜೂನಿಯರ್ ವಿಭಾಗದಲ್ಲಿ ಕರ್ನಾಟಕ ಪ್ರಶಸ್ತಿ ಗೆದ್ದಿದೆ. 1980, 83 ಸಬ್ ಜೂನಿಯರ್ 1986, 88, 2005 ರಲ್ಲಿ ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ.
ಅದೇನೆ ಇರಲಿ, ಗ್ರಾಮಾಂತರ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಪ್ರತಿಭೆಗಳಿದ್ದಾರೆ. ಇಂಥವರನ್ನು ಪತ್ತೆ ಹಚ್ಚಿ ಬೆಂಗಳೂರಿನಲ್ಲಿ ತರಬೇತಿ ನೀಡುವ ಪ್ರಯತ್ನ ಆಗಬೇಕು. ಬರೀ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಹತ್ತು ದಿನಗಳಲ್ಲಿ ಆಟಗಾರರನ್ನು ಆಯ್ಕೆ ಮಾಡಿ ಕರ್ನಾಟಕ ತಂಡಗಳನ್ನು ಕಳುಹಿಸಿದರೆ ಸಾಲದು. ಇಲ್ಲಿ ಸಾಂಘಿಕ ಪ್ರಯತ್ನ ಮಾಡಬೇಕು. ಅದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಹಾಗಾದಲ್ಲಿ ವಾಲಿಬಾಲ್‌ನಲ್ಲಿ ರಾಜ್ಯ ಮತ್ತೆ ಮಿನುಗಬಹುದು.