ಚೆನ್ನೈ: ಸೊಗಸಾದ ಆಟವಾಡಿದ ಜೋಶ್ನಾ ಚಿನ್ನಪ್ಪ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಐಎಸ್‌ಪಿಎ ಚಾಲೆಂಜರ್-2 ಸ್ಕ್ವಾಷ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದರು.
ಇಂಡಿಯನ್ ಸ್ಕ್ವಾಷ್ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೋಶ್ನಾ 11-8, 11-7, 11-8 ರಲ್ಲಿ ಭಾರತದವರೇ ಆದ ದೀಪಿಕಾ ಪಲ್ಲಿಕಲ್ ಅವರನ್ನು ಮಣಿಸಿದರು.
ಅವರು ಫೈನಲ್‌ನಲ್ಲಿ ಹಾಲೆಂಡ್‌ನ ಓರ್ಲಾ ನೂಮ್ ವಿರುದ್ಧ ಪೈಪೋಟಿ ನಡೆಸುವರು. ದಿನದ ಮತ್ತೊಂದು ಸೆಮಿಫೈನಲ್‌ನಲ್ಲಿ ನೂಮ್ 11-6, 11-9, 11-7 ರಲ್ಲಿ ಮಲೇಷ್ಯಾದ ಶರೊನ್ ವೀ ವಿರುದ್ಧ ಜಯ ಸಾಧಿಸಿದರು.
ಎರಡು ವರ್ಷಗಳ ಬಿಡುವಿನ ಬಳಿಕ ಹುಟ್ಟೂರ ಅಭಿಮಾನಿಗಳ ಮುಂದೆ ಆಡುತ್ತಿರುವ ಜೋಶ್ನಾ ಸೆಮಿಫೈನಲ್‌ಲ್ಲಿ ಸೊಗಸಾದ ಪ್ರದರ್ಶನ ನೀಡಿದರು. ದೀಪಿಕಾ ಒಡ್ಡಿದ ಸವಾಲನ್ನು ಕೊನೆಗೊಳಿಸಲು ಅವರಿಗೆ 25 ನಿಮಿಷಗಳು ಸಾಕಾದವು. ತಮ್ಮ ನಾಲ್ಕನೇ ಡಬ್ಲ್ಯುಐಎಸ್‌ಪಿಎ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅವರು ವೈವಿಧ್ಯಮಯ ಹೊಡೆತಗಳ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.