ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎನ್ನುವುದು ದಾಸರ ವಾಣಿ. ಹಸಿದ ಹೊಟ್ಟೆಗೆ ರಸ್ತೆ ಬದಿಯ ಆಹಾರವಾದರೇನು, ಮನೆಯ ಆಹಾರವಾದರೇನು? ಹಸಿವು ನೀಗಿದರಾಯಿತು. ನಗರಗಳಲ್ಲಿ ಹೋಟೆಲ್‌ಗಳ ಸಂಖ್ಯೆಯೂ ಕಡಿಮೆಯಲ್ಲ. ಅಂತೆಯೇ ರಸ್ತೆ ಬದಿಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಕಡಿಮೆಯೇನಲ್ಲ.

ನಗರದ ರಸ್ತೆಬದಿಯಲ್ಲಿ ಅದು ಎಂ ಜಿ, ಬ್ರಿಗೇಡ್‌ನಂತಹ ‘ಪಾಶ್’ ರಸ್ತೆಗಳೇ ಆಗಿರಲಿ, ಚಿಕ್ಕಪೇಟೆ, ಬಳೆಪೇಟೆಯಂಥ ಸಾಮಾನ್ಯ ರಸ್ತೆಗಳೇ ಇರಲಿ, ಕೋರಮಂಗಲ, ಜಯನಗರದಂಥ ಪ್ರದೇಶದ ರಸ್ತೆಗಳೇ ಇರಲಿ ಎಲ್ಲೆಡೆ ಸ್ಟ್ರೀಟ್ ಫುಡ್ ಅಂಗಡಿಗಳು, ಅವುಗಳ ಮುಂದೆ ಜನಜಂಗುಳಿ ಸಾಮಾನ್ಯ.
ಪಾನಿ ಪೂರಿ, ಸೇವ್ ಪೂರಿಗಳಂತಹ ಚಾಟ್ಸ್‌ಗಳು, ಮಂಡಕ್ಕಿಗೆ ಸಣ್ಣಗೆ ಹೆಚ್ಚಿದ ನೀರುಳ್ಳಿ, ಮೆಣಸಿನಪುಡಿ ಸೇರಿಸಿ ತಯಾರಿಸಿದ ಬಾಯಿ ಮತ್ತು ಕಣ್ಣಲ್ಲಿ ನೀರೂರಿಸುವ ಚುರ್‌ಮುರಿ, ರಸ್ತೆ ಬದಿಯಲ್ಲೇ ಒಲೆಯ ಮೇಲೆ ಬಿಸಿ ಬಿಸಿಯಾಗಿ ತಯಾರಿಸಿದ ದೋಸೆ, ಇಡ್ಲಿ, ಕಬಾಬ್, ಗೋಬಿ ಮಂಚೂರಿ ಇಷ್ಟಪಡದವರು ಯಾರು ಹೇಳಿ?
ಸಾಮಾನ್ಯವಾಗಿ ಸಂಜೆಯ ಹೊತ್ತಿನಲ್ಲಿ ಇವರಿಗೆ ಗ್ರಾಹಕರು ಹೆಚ್ಚು. ವ್ಯಾಪಾರ ಗರಿಗೆದರುವುದು ಆಗಲೇ. ಅದು ಸರಿರಾತ್ರಿವರೆಗೂ ಮುಂದುವರಿಯುತ್ತದೆ.

ಈ ಬೀದಿಬದಿ ತಿಂಡಿ ವ್ಯಾಪಾರಿಗಳಿಗೆ ನಿರ್ದಿಷ್ಟ ಜಾಗ ಬೇಕೆಂದೇನಿಲ್ಲ. ಜಾಗ ಸಿಕ್ಕಿದಲ್ಲಿ ತಳ್ಳು ಗಾಡಿಗಳ ಮೇಲೋ ಅಥವಾ ಒಂದು ಸ್ಟೂಲ್ ಮೇಲೋ ಬೇಕಾದ ಆಹಾರ ಪದಾರ್ಥಗಳನ್ನಿರಿಸಿ ವ್ಯಾಪಾರ ಮಾಡುತ್ತಾರೆ. ಅಲ್ಲೇ ತಯಾರಿಸುತ್ತಾರೆ. ಇನ್ನು ಕೆಲವರು ಮನೆಗಳಲ್ಲಿ ಸಿದ್ಧಮಾಡಿಕೊಂಡು ಬಂದು ಮಧ್ಯಾಹ್ನದ ವೇಳೆ ತಮ್ಮ ವಾಹನವನ್ನೇ ರಸ್ತೆಬದಿಯಲ್ಲಿ ನಿಲ್ಲಿಸಿ ಅದನ್ನೇ ಚಿಕ್ಕ ಹೋಟೆಲ್ ಆಗಿ ಪರಿವರ್ತಿಸುತ್ತಾರೆ. ಇಂಥವರಿಗೂ ಗ್ರಾಹಕರು ಕಡಿಮೆಯೇನಿಲ್ಲ.
ರಸ್ತೆ ಬದಿಯಲ್ಲಿ ದೊರೆಯುವ ಚಾಟ್ಸ್‌ಗಳನ್ನು, ಚುರ್‌ಮುರಿ ತಿನ್ನಲು ಯಾರೂ ಹಿಂದೇಟು ಹಾಕರು. ಹೋಟೆಲ್‌ಗಳು ಸಾಕಷ್ಟಿದ್ದರೂ ಕೂಡ ರಸ್ತೆ ಬದಿಯಲ್ಲಿ ನಿಂತು ಈ ಚಾಟ್ಸ್‌ಗಳನ್ನು ತಿನ್ನುವುದರಲ್ಲೇ ಮಜಾ ಇದೆ. ಯುವಕ ಯುವತಿಯರು, ಕಾಲೇಜು ವಿದ್ಯಾರ್ಥಿಗಳು, ಸಣ್ಣಪುಟ್ಟ ಸಂಬಳದ ಉದ್ಯೋಗಿಗಳು ಮಾತ್ರವಲ್ಲದೆ ಕಾರಿನಲ್ಲಿ ಬರುವವರಿಗೂ ರಸ್ತೆ ಬದಿ ನಿಂತು ತಿಂದರೇನೇ ಖುಷಿ. ಅಂಥ ಗ್ರಾಹಕರೇ ಹೆಚ್ಚು.
ತಮ್ಮದೇ ಎಂಬ ನಿರ್ದಿಷ್ಟ ಜಾಗವಿಲ್ಲದೆ, ಸಿಕ್ಕಿದೆಡೆ ನಿಂತು ವ್ಯಾಪಾರ ನಡೆಸುವ ಈ ವ್ಯಾಪಾರಿಗಳಿಗೆ ಪೊಲೀಸರ ಕಾಟ ಮಾತ್ರ ತಪ್ಪಿದ್ದಲ್ಲ. ಸಂಪಾದನೆ ಎಷ್ಟೇ ಆಗಿರಲಿ ಅದರಲ್ಲೊಂದು ಪಾಲಂತೂ ಪೊಲೀಸರ ಜೇಬಿಗೆ ಹೋಗಲೇಬೇಕು.
ಇಷ್ಟೆಲ್ಲಾ ನೀಡಿದರೂ ಇವರ ಬಗ್ಗೆ ಕನಿಕರವಂತೂ ಇಲ್ಲ. ಈ ವ್ಯಾಪಾರಿಗಳ ಸಮಸ್ಯೆಗಳನ್ನು, ದುಃಖವನ್ನು ಕೇಳುವವರೇ ಇಲ್ಲ. ತಮಗೆಂದೇ ಕಾನೂನು ರೂಪಿಸುವುದನ್ನು ಇವರೆಂದೂ ಕನಸಲ್ಲೂ ಕಂಡಿರಲಿಕ್ಕಿಲ್ಲ.
ಇಂಥವರ ರಕ್ಷಣೆಗಾಗಿಯೇ ಇದೀಗ ಪ್ರಧಾನಿ ಮನಮೋಹನ್ ಸಿಂಗ್ ಮುಂದಾಗಿದ್ದಾರೆ. ‘ಈ ವ್ಯಾಪಾರಿಗಳ ಬಗ್ಗೆ ಕರುಣೆಯಿಂದಿರಿ’ ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಅವರು ನಿರ್ದೇಶನ ಕಳುಹಿಸಿದ್ದು ಈ ವ್ಯಾಪಾರಿಗಳ ಸ್ಥಿತಿ ಇನ್ನು ಮುಂದಾದರೂ ಸುಧಾರಿಸುವುದೇ ನೋಡಬೇಕು.
ಈ ವ್ಯಾಪಾರಿಗಳಿಗೆ ದುಡಿಮೆಯೇ ಮುಖ್ಯ. ಇವುಗಳ ನಡುವೆ ಸರ್ಕಾರದ ನೀತಿಗಳು, ಕಾನೂನು ಇವುಗಳ ಬಗ್ಗೆ ತಿಳಿದುಕೊಳ್ಳುವಷ್ಟು ಸಮಯವೂ ಇಲ್ಲ. ಪ್ರಧಾನಮಂತ್ರಿಯವರ ಈ ಆದೇಶದ ಬಗ್ಗೆ ಹೆಚ್ಚಿನ ವ್ಯಾಪಾರಗಾರರಿಗೆ ಕಿಂಚಿತ್ತೂ ಮಾಹಿತಿ ಇಲ್ಲ. ಗೊತ್ತಿದ್ದ ಕೆಲವರು ಮಾತ್ರ ಇನ್ನು ಪೊಲೀಸರ ಕಾಟ ತಪ್ಪಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಏನೇ ಆಗಲಿ, ರಸ್ತೆ ಬದಿಯ ಈ ವ್ಯಾಪಾರಿಗಳು ಮಹಾನಗರದ ಅವಿಭಾಜ್ಯ ಅಂಗ. ಹೋಟೆಲ್‌ಗೆ ಹೋಲಿಸಿದಲ್ಲಿ ಇಲ್ಲಿ ದರವೂ ಕಡಿಮೆ ಎನ್ನುವುದು ಎಲ್ಲರ ಅಭಿಪ್ರಾಯ. ಇಲ್ಲಿನ ಶುಚಿತ್ವದ ಬಗ್ಗೆ
ಯಾರೂ ತಲೆಕೆಡಿಸಿಕೊಂಡಂತಿಲ್ಲ. ಹಾಗೆಂದು ಈ ವ್ಯಾಪಾರಿಗಳು ಶುಚಿತ್ವ ಕಾಪಾಡುತ್ತಿಲ್ಲ ಎಂದೂ ಹೇಳುವಂತಿಲ್ಲ. ರುಚಿಯೂ ಹೋಟೆಲ್‌ನದಕ್ಕೆ ಕಡಿಮೆಯೇನಲ್ಲ.
ಒಮ್ಮೆ ಟೇಸ್ಟ್ ಒಗ್ಗಿತೆಂದರೆ ಅದೇ ಬೀದಿ ಅಂಗಡಿಯನ್ನೇ ಹುಡುಕಿಕೊಂಡು ಹೋಗುವವರೂ ಸಾಕಷ್ಟಿದ್ದಾರೆ. ರಸ್ತೆ ಬದಿಯಲ್ಲಿ ನಿಂತು ಸ್ನೇಹಿತರೊಂದಿಗೆ ಪಟ್ಟಾಂಗ ಹೊಡೆಯುತ್ತಾ ಚಾಟ್ ತಿನ್ನುವುದರಲ್ಲೇ ಮಜಾ ಇದೆ. ಹಾಗಿರುವಾಗ ಅದನ್ನು ಮಿಸ್ ಮಾಡಲು ಯಾರು ತಯಾರಿದ್ದಾರೆ ಹೇಳಿ?