ಶಿರಸಿ: ಉತ್ತರ ಕನ್ನಡ ಜಿಲ್ಲೆಯ ರಸ್ತೆ ಅಭಿವೃದ್ಧಿಗೆ ನಬಾರ್ಡ್ ಯೋಜನೆಯಡಿ ರೂ. 4.44 ಕೋಟಿ ಅನುದಾನವನ್ನು ಸರ್ಕಾರ ಮಂಜೂರಿಗೊಳಿಸಿದೆ.
ಶಿರಸಿ ತಾಲ್ಲೂಕಿನ ದೋಣಗಾರ-ಕರೂರು ರಸ್ತೆಯಿಂದ ಭಾವಿಕೈವರೆಗಿನ 2ಕಿ.ಮೀ. ಮಾರ್ಗಕ್ಕೆ ರೂ. 44ಲಕ್ಷ, ಸಿದ್ದಾಪುರ ತಾಲ್ಲೂಕಿನ ದೇವಿಸರ-ಕೊಪ್ಪ ರಸ್ತೆ ಅಭಿವೃದ್ಧಿಗೆ ರೂ. 30ಲಕ್ಷ, ಮುಂಡಗೊಡ ತಾಲ್ಲೂಕಿನ ಕಲಗನಕೊಪ್ಪ-ಮಲವಳ್ಳಿ ರಸ್ತೆಗೆ ರೂ.34 ಲಕ್ಷ, ಯಲ್ಲಾಪುರ ತಾಲ್ಲೂಕಿನ ಕೋಟೆಮನೆ-ಭರಣಿ ರಸ್ತೆಗೆ ರೂ. 40ಲಕ್ಷ, ಹಳಿಯಾಳ ತಾಲ್ಲೂಕಿನ ತಟ್ಟಣಗಿ-ಮಾವಿನಕೊಪ್ಪ ರಸ್ತೆಗೆ ರೂ. 34ಲಕ್ಷ, ಪ್ರಧಾನಹಟ್ಟಿ-ಮಾವಿನಕೊಪ್ಪ ರಸ್ತೆಗೆ ರೂ. 40ಲಕ್ಷ, ಕುಮಟಾ ತಾಲ್ಲೂಕಿನ ಎಸ್.ಎಚ್.48-ಕೈರಮಕ್ಕಿ ರಸ್ತೆಗೆ ರೂ. 34ಲಕ್ಷ, ಎಸ್.ಎಚ್.48-ತಲಗೋಡ ರಸ್ತೆಗೆ ರೂ. 40ಲಕ್ಷ, ಹೊನ್ನಾವರ ತಾಲ್ಲೂಕಿನ ಎಚ್.ಎಂ.ಎನ್-ಬಾಳೆಮಟ ರಸ್ತೆಗೆ ರೂ. 34ಲಕ್ಷ, ಕಾರವಾರ ತಾಲ್ಲೂಕಿನ ಸವರೂಪಯ್ಯಾ ರಸ್ತೆಯ ಮೂರು ಕಿಮೀ ಅಭಿವೃದ್ಧಿಗೆ ರೂ. 74ಲಕ್ಷ ಮಂಜೂರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
‘ಸಾಕ್ಷರತೆಯಿಂದ ಸಾಮಾಜಿಕ ಜಾಗೃತಿ’
ಅಂಕೋಲಾ: ಸಾಕ್ಷರತೆಯು ಶೈಕ್ಷಣಿಕ ತಿಳಿವಳಿಕೆ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತದೆ. ಶಿಕ್ಷಣದ ಮಹತ್ವ ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಸಾಕ್ಷರತಾ ಚಟುವಟಿಕೆಗಳು ಇನ್ನಷ್ಟು ತೀವ್ರಗೊಳ್ಳಬೇಕಾಗಿದೆ ಎಂದು ಜಿ.ಪಂ. ಸದಸ್ಯೆ ಶಾಂತಿ ಆಗೇರ ಅಭಿಪ್ರಾಯಪಟ್ಟರು.
ಮಂಗಳವಾರ ತಾ.ಪಂ. ಸಭಾಭವನದಲ್ಲಿ ಜರುಗಿದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.
ಧ್ವಜಾರೋಹಣ ನೆರವೇರಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್. ಬಾಲಕೃಷ್ಣ ಅನಕ್ಷರತೆಯು ಒಂದು ಶಾಪವಾಗಿದ್ದು ಆದಷ್ಟು ಬೇಗನೆ ಅದರಿಂದ ದೇಶವು ವಿಮೋಚನೆಗೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಉಷಾ ಉದಯ ನಾಯ್ಕ ತಾಲ್ಲೂಕಿನಲ್ಲಿ ಜರುಗಿದ ಸಾಕ್ಷರತಾ ಚಟುವಟಿಕೆಗಳನ್ನು ಮತ್ತು ಪ್ರೇರಕ, ಉಪಪ್ರೇರಕರ ಪರಿಶ್ರಮವನ್ನು ಶ್ಲಾಘಿಸಿದರು.
ವಿಶಾಲಾಕ್ಷಿ ಸಂಗಡಿಗರು ಮತ್ತು ಜಿ.ಆರ್. ನಾಯಕ ವಂದಿಗೆ ಸಾಕ್ಷರ ಗೀತೆಗಳನ್ನು ಹಾಡಿದರು. ಸಾಕ್ಷರತಾ ಸಮಿತಿ ಸಂಯೋಜಕ ಜಗದೀಶ ನಾಯಕ ಸ್ವಾಗತಿಸಿದರು. ಸ್ವಯಂ ಸೇವಕ ಭಾಸ್ಕರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು,
ಅಪಘಾತ: ಸಾವು
ರಾಣೆಬೆನ್ನೂರು: ನಗರದ ಹೊರವಲಯದಲ್ಲಿರುವ ಶ್ರೀ ತರಳಬಾಳು ಎಂಜಿನಿಯರಿಂಗ್ ಕಾಲೇಜ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ಮೃತನನ್ನು ಮುಂಡಗೋಡ ತಾಲ್ಲೂಕಿನ ಪಾಳ ಗ್ರಾಮದ ರೆಹಮಾನ್‌ಸಾಬ್ ಮಹ್ಮದ್‌ಲಿ ಸಾಬ್ ಮಿಠಾಯಿಗಾರ (35) ಎಂದು ಗುರುತಿಸಲಾಗಿದೆ.
ಗ್ರಾಮೀಣ ಠಾಣೆಯ ಪಿಎಸ್‌ಐ ಮರುಳಸಿದ್ದಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.