ಮೈಸೂರು: ಜೀವನದಲ್ಲಿ ಒಮ್ಮೆಯೂ ದಸರಾ ಉತ್ಸವವನ್ನು ನೋಡದೇ ಇರುವ ಗ್ರಾಮೀಣ ಮಂದಿಗೆ ನಾಡಹಬ್ಬ ದಸರಾ ಉತ್ಸವವನ್ನು ತೋರಿಸುವ ‘ದಸರಾ ದರ್ಶನ’ ಸೆ.20ರಿಂದ 25ರವರೆಗೆ ನಡೆಯಲಿದೆ.
ಕಳೆದ ಬಾರಿ ಕೇವಲ ಮೈಸೂರು ಜಿಲ್ಲೆಗೆ ಸೀಮಿತವಾಗಿದ್ದ ದಸರಾ ದರ್ಶನವನ್ನು ಈ ಬಾರಿ ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಆಯಾ ತಾಲ್ಲೂಕುಗಳಲ್ಲಿ 50 ರೂಪಾಯಿ ನೀಡಿ ತಹಶೀಲ್ದಾರರಿಂದ ಪಾಸು ಪಡೆದುಕೊಂಡು ಬಂದವರಿಗೆ ದಸರಾ ಉತ್ಸವವನ್ನು ತೋರಿಸಲಾಗುವುದು ಎಂದು ದಸರಾ ದರ್ಶನ ಉಪ ಸಮಿತಿಯ ಮಲ್ಲಿಕಾರ್ಜುನ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರನ್ನು ಹೋಬಳಿ ಕೇಂದ್ರಗಳಿಂದ ಮೈಸೂರಿಗೆ ಕರೆತಂದು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತೋರಿಸಲಾಗುವುದು. ಮಧ್ಯಾಹ್ನ ಮತ್ತು ರಾತ್ರಿ ಅವರಿಗೆ ಊಟ ನೀಡಲಾಗುವುದು ಎಂದರು.
ದಸರಾ ದರ್ಶನದಲ್ಲಿ ಪಾಲ್ಗೊಂಡವರಿಗೆ ಊಟದ ವ್ಯವಸ್ಥೆಯನ್ನು ಇಸ್ಕಾನ್ ಮಾಡಿದ್ದು ಎರಡು ಊಟಕ್ಕೆ 42.50 ರೂಪಾಯಿ ಪಡೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.
ದಸರಾ ದರ್ಶನಕ್ಕೆ ಶಾಲಾ ಮಕ್ಕಳು, ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಸೆ.20ರಿಂದ 22ರವರೆಗೆ ಹಾಸನ, ಮಂಡ್ಯ ಜಿಲ್ಲೆಯ 15 ತಾಲ್ಲೂಕುಗಳಿಂದ, 23ರಿಂದ 25ರವರೆಗೆ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ 14 ತಾಲ್ಲೂಕುಗಳಿಂದ ಜನರನ್ನು ಕರೆದುಕೊಂಡು ಬರಲಾಗುವುದು.
ಸೆ. 20ರಿಂದ 22ರವರೆಗೆ ಹಾಸನ ಜಿಲ್ಲೆಯ 8 ತಾಲ್ಲೂಕುಗಳಿಂದ ಪ್ರತಿ ದಿನ 30 ಬಸ್‌ಗಳಲ್ಲಿ ದಿನಕ್ಕೆ 1650 ಜನರಂತೆ ಮೂರು ದಿನ ಕರೆತರಲಾಗುವುದು. ಅದೇ ರೀತಿ ಮಂಡ್ಯ ಜಿಲ್ಲೆಯ 7 ತಾಲ್ಲೂಕಿನ ಜನರನ್ನು ಪ್ರತಿ ದಿನ 27 ಬಸ್‌ಗಳಲ್ಲಿ ದಿನಕ್ಕೆ 1485 ಜನರಂತೆ 3 ದಿನಗಳ ಕಾಲ ಕರೆದುಕೊಂಡು ಬರಲಾಗುವುದು.
ಮೈಸೂರು ಜಿಲ್ಲೆಯ 7 ತಾಲ್ಲೂಕಿನ ಜನರನ್ನು 33 ಬಸ್‌ಗಳಲ್ಲಿ ಪ್ರತಿ ದಿನ 1815 ಜನರಂತೆ 3 ದಿನ ಕರೆದುಕೊಂಡು ಬರಲಾಗುವುದು. ಚಾಮರಾಜನಗರ ಜಿಲ್ಲೆಯ 4 ತಾಲ್ಲೂಕಿನ ಜನರನ್ನು 15 ಬಸ್‌ಗಳಲ್ಲಿ ದಿನಕ್ಕೆ 825 ಜನರಂತೆ ಕರೆದುಕೊಂಡು ಬರಲಾಗುವುದು. ಕೊಡಗು ಜಿಲ್ಲೆಯ 3 ತಾಲ್ಲೂಕುಗಳ ಜನರನ್ನು 15 ಬಸ್‌ಗಳಲ್ಲಿ ದಿನಕ್ಕೆ 825 ಜನರಂತೆ ಕರೆತಂದು ದಸರಾ ಕಾರ್ಯಕ್ರಮಗಳನ್ನು ತೋರಿಸಲಾಗುವುದು ಎಂದರು.
ಕೆರೆ ಮುಚ್ಚಲು ಯತ್ನ: ಸ್ಥಳೀಯರ ಆಕ್ರೋಶ
ಮೈಸೂರು: ಸಿದ್ಧಾರ್ಥ ಬಡಾವಣೆಯಲ್ಲಿರುವ ಛತ್ರಿಕಟ್ಟೆ ಕೆರೆಯನ್ನು ಅನ್ನದಾನೇಶ್ವರ ಮಠದವರು ಮುಚ್ಚಿಸಲು ಹೋದಾಗ ಸ್ಥಳೀಯರು ಆಕ್ರೋಶಗೊಂಡು ಅಲ್ಲಿ ಕೆಲ ಕಾಲ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ.
ರಾತ್ರಿ ಜೆಸಿಬಿ ಯಂತ್ರವನ್ನು ಬಳಸಿ ಕೆರೆಯನ್ನು ಮುಚ್ಚಲು ಯತ್ನಿಸಿದಾಗ ಅಲ್ಲಿನ ಸ್ಥಳೀಯರು ಇದಕ್ಕೆ ಅಡ್ಡಿಪಡಿಸಿದ್ದರಿಂದ ಈ ಪ್ರದೇಶದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿತ್ತು.
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಹಾಯಕ ಆಯುಕ್ತ ಮಹೇಶ್ ಜೆಸಿಬಿ ಯಂತ್ರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಜರ್‌ಬಾದ್ ಪೊಲೀಸರ್ ಮಧ್ಯಸ್ತಿಕೆ ವಹಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.