 |
|
ಚಾಮರಾಜನಗರದಲ್ಲಿ ಇರುವ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳ ಜನನ ಮಂಟಪದ ಅವಸ್ಥೆ.
|
ಚಾಮರಾಜನಗರ: ಮೈಸೂರು ಜಿಲ್ಲೆಯಿಂದ ವಿಭಜನೆಗೊಂಡ ದಶಕಗಳ ನಂತರ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ದಸರೆಯನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಉತ್ಸಾಹದ ಭರದಲ್ಲಿ ದಸರೆಗೆ ಕಾರಣಕರ್ತರಾದ ರಾಜಪರಂಪರೆಯನ್ನು ಸ್ಮರಿಸುವ ಗೋಜಿಗೆ ಯಾರು ಹೋಗದೆ ಪರಸ್ಪರ ಕೆಸರು ಎರಚಿಕೊಳ್ಳುವತ್ತ ಗಮನಹರಿಸಿದ್ದಾರೆ.
ಗ್ರಾಮೀಣ ದಸರೆಗೆ ಸರ್ಕಾರ ತರಾತುರಿಯಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಪ್ರತಿಯೊಂದು ತಾಲ್ಲೂಕು ಕೇಂದ್ರದಲ್ಲೂ ಒಂದು ದಿನ ಸ್ತಬ್ದ ಚಿತ್ರಗಳು, ಜನಪದ ಕಲಾ ತಂಡಗಳ ಮರೆವಣಿಗೆ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಕೈತೊಳೆದು ಕೊಳ್ಳಲಾಗುತ್ತಿದೆ.
ಬೇರೆ ತಾಲ್ಲೂಕುಗಳಲ್ಲಿ ನಡೆದ ಸಮಾರಂಭದಲ್ಲಿ ರಾಜ ಪರಂಪರೆಯನ್ನು ನೆನಪು ಮಾಡಿಕೊಳ್ಳದೆ ಹೋದರೂ ಬುಧವಾರ ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಾದರೂ ಸ್ಮರಣೆ ಮಾಡಿಕೊಳ್ಳಬಹುದಾಗಿತ್ತು. ಕಾರ್ಯಕ್ರಮವನ್ನು ಏರ್ಪಡಿಸಿದ್ದ ವೇದಿಕೆಯಿಂದ ಮಾರು ದೂರದಲ್ಲಿ ಜನನ ಮಂಟಪವಿತ್ತು. ಆದರೂ ಅತ್ತ ಯಾರು ತಿರುಗಿಯೂ ನೋಡಿಲ್ಲ.
ಗ್ರಾಮೀಣ ದಸರಾ ಎಂದು ಆ ಜಾಗವನ್ನು ಸ್ವಚ್ಛಗೊಳಿಸಿಲ್ಲ. ಜನನ ಮಂಟಪದ ಒಳಗೆ ನೋಡಲು ಹೋದರೆ ವಾಕರಿಕೆ ಬರುವಷ್ಟು ಅಧ್ವಾನವಾಗಿದೆ.
ಚಾಮರಾಜನಗರಕ್ಕೂ ಮೈಸೂರು ರಾಜರಿಗೂ ಅವಿನಾಭಾವ ಸಂಬಂಧವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಂದೆ ಚಾಮರಾಜೇಂದ್ರ ಒಡೆಯರ್ 1774 ಮಾರ್ಚ್ 1ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ತಂದೆಯವರ ಜನ್ಮಸ್ಥಳದ ನೆನಪಿಗಾಗಿ ‘ಅರಿಕುಠಾರ’ ಎಂದು ಇದ್ದ ಊರನ್ನು ಚಾಮರಾಜನಗರ ಎಂದು ನಾಮಕರಣ ಮಾಡಿ, ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಿದರು ಮುಮ್ಮಡಿ ಕೃಷ್ಣರಾಜ ಒಡೆಯರ್.
ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳ ಜನನ ಮಂಟಪ ಈಗಲೂ ಖಾಸಗಿ ಬಸ್‌ಗಳ ಹಳೆಯ ನಿಲ್ದಾಣದ ಹತ್ತಿರ ಇದೆ. ಆದರೆ ಯಾರೂ ಗಮನಿಸದೆ ಶಿಥಿಲಾವಸ್ಥೆಯಲ್ಲಿ ಇದೆ. ಚಾಮರಾಜನಗರ ಮೈಸೂರಿಗೆ ಸೇರಿದ್ದ ಸಮಯದಲ್ಲಿ ಪುರಾತತ್ವ ಇಲಾಖೆಯವರು ಇಲ್ಲಿ ಒಂದು ಬೋರ್ಡ್ ನೆಟ್ಟಿದ್ದರು. ಆದರೆ ಈಗ ಅದೂ ಇಲ್ಲ. ನಗರ ನೋಡಲು ಬರುವ ಹೊಸಬರಿಗೆ ಇದು ಯಾವ ಕಟ್ಟಡ ಎಂದು ತಿಳಿಯುವುದಕ್ಕೆ ಮಾಹಿತಿಯೂ ಇಲ್ಲ.
ನವರಾತ್ರಿ ಉತ್ಸವದ ಸಮಯದಲ್ಲಿ ಚಾಮರಾಜೇಶ್ವರ ದೇವಸ್ಥಾನದಲ್ಲಿ ಒಂಭತ್ತು ದಿನ ನಡೆಯುತ್ತಿದ್ದ ಪೂಜೆ, ಉತ್ಸವಗಳು ಜನನ ಮಂಟಪಕ್ಕೂ ಬಂದು ಅಲ್ಲಿಯೂ ಪೂಜೆ ಸಲ್ಲಿಸಿ ಮತ್ತೆ ದೇವಸ್ಥಾನಕ್ಕೆ ಹೋಗುತ್ತಿದ್ದವು, ರಥೋತ್ಸವದ ಸಮಯದಲ್ಲಿಯೂ ಸಹ ಜನನ ಮಂಟಪದ ಹತ್ತಿರಕ್ಕೆ ರಥ ಬಂದಾಗ ಅದನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ಅರ್ಚಕರು ಜನನ ಮಂಟಪಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದರು. ಈಗ ಈ ಸಂಪ್ರದಾಯಗಳು ಮರತೇ ಹೋಗಿದೆ ಎಂದು ಜಿಲ್ಲಾ ಜನಾಂದೋಲನ ಹೋರಾಟ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಅವರು ಹಳೆಯ ಘಟನಾವಳಿಯನ್ನು ಸ್ಮರಿಸುತ್ತಾರೆ.
ಗ್ರಾಮೀಣ ದಸರೆಗೆ ಲಕ್ಷ-ಲಕ್ಷ ಬಿಡುಗಡೆ ಮಾಡಿದೆ. ಈ ಹಣದಲ್ಲಿಯೇ ಜನನ ಮಂಟಪವನ್ನು ಸ್ವಚ್ಛಗೊಳಿಸಿ, ಒಳಗೆ ಇರುವ ಪಾರಂಪರಿಕ ಚಿತ್ರಗಳನ್ನು ಪುನರುಜ್ಜೀವನಗೊಳಿಸಿ, ಮಂಟಪದ ಹತ್ತಿರ ಗ್ರಾಮೀಣ ದಸರೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು.
ಆದರೆ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಇದರತ್ತ ಗಮನವನ್ನು ನೀಡದೆ ಪ್ರತಿಷ್ಠೆ ಮತ್ತು ಬಹಿಷ್ಕಾರದ ಜೊತೆ ಸಂಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಇರಲಿಲ್ಲ.