ನಿನ್ನೆ ಮುಗಿದ ನವರಾತ್ರಿ, ವಿಜಯ ದಶಮಿ ಹತ್ತು ದಿನಗಳ ಸಾಂಸ್ಕೃತಿಕ ಉತ್ಸವ. ದುರ್ಗೆಯನ್ನು ನವ ರೂಪಗಳಲ್ಲಿ ಆರಾಧಿಸುವ ವಿಶೇಷ ನಾಡಹಬ್ಬ. ಈ ಹಬ್ಬದಲ್ಲಿ ಬೊಂಬೆ ಪ್ರದರ್ಶನ ವಿಶೇಷ ಆಕರ್ಷಣೆ.
ಬೊಂಬೆ ಪ್ರದರ್ಶನ ಎಂದ ಕೂಡಲೇ ರಾಮಾಯಣ- ಮಹಾಭಾರತದ ಕಥಾನಕಗಳ ಪರಿಚಯ, ಅರಮನೆ ದಿಬ್ಬಣ, ರಾಮ-ರಾವಣರ ಯುದ್ಧ, ಚಾಮುಂಡಿ-ಮಹಿಷಾಸುರ, ‘ಶರಪಂಜರ’ ಸಿನಿಮಾದ ಕಲ್ಪನಾ ಹಾಡು... ಹೀಗೆ ಒಂದಷ್ಟು ದೃಶ್ಯಗಳು ಕಣ್ಮುಂದೆ ಸಾಲುಗಟ್ಟುತ್ತವೆ.
ಆದರೆ, ಹೀಗೆ ಸಾಲುಗಟ್ಟುವ ದೃಶ್ಯಗಳೆಲ್ಲ ಇಂದು ಸವಕಲಾಗಿವೆ. ಈಗ ಬೊಂಬೆ ಪ್ರದರ್ಶನದ ಸ್ವರೂಪವೇ ಬದಲಾಗುತ್ತಿದೆ. ಅಣುಬಾಂಬ್ ದಾಳಿ, ಉಗ್ರರ ಉಪಟಳ, ಕಾರ್ಗಿಲ್ ಸಮರದಂಥ ಸಮಕಾಲೀನ ವಿಚಾರಗಳ ’ಥೀಮ್’ ಆಧರಿತ ಗೊಂಬೆ ಪ್ರದರ್ಶನ ಪ್ರಚಲಿತಕ್ಕೆ ಬರುತ್ತಿದೆ.
ಇಂಥ ‘ಥೀಮ್’ಗಳನ್ನೇ ಮೀರಿಸುವಂಥ ವಿಶೇಷ ಮಾದರಿಯ ಬೊಂಬೆ ಪ್ರದರ್ಶನ ಯಲಚೇನಹಳ್ಳಿಯ ಸುಧೀಂದ್ರ ಅವರ ಮನೆಯಲ್ಲಿತ್ತು. ಸಮಗ್ರ ಕೃಷಿ ಪದ್ಧತಿ, ಮರ ಆಧಾರಿತ ಬೇಸಾಯ, ನೆಲ-ಜಲ ಸಂರಕ್ಷಣೆಯಲ್ಲಿ ಚೆಕ್ ಡ್ಯಾಂ, ಒಡ್ಡುಗಳ ಉಪಯೋಗ, ಜೀವಂತ ಬೇಲಿ, ಜೀವ ವೈವಿಧ್ಯ ಕೃಷಿಯ ಪ್ರಾತ್ಯಕ್ಷಿಕೆ, ಕೈತೋಟ ಸಂಸ್ಕೃತಿ, ಕುಂಟೆ, ಕೂರಿಗೆ, ಬಂಡಿಯಂತಹ ಕೃಷಿ ಸಾಧನಗಳು ಹಾಗೂ ಗ್ರಾಮೀಣ ಕುಟುಂಬ ವ್ಯವಸ್ಥೆಯನ್ನು ಈ ಬೊಂಬೆಗಳ ಮೂಲಕ ಪ್ರದರ್ಶಿಸಿದ್ದು ವಿಶೇಷ.
ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಹತ್ತು ವರ್ಷಗಳ ಕೆಲಸ ಮಾಡಿರುವ ಸುಧೀಂದ್ರ ಅವರಿಗೆ ಶುದ್ಧ ಪರಿಸರ, ಸ್ವಾಸ್ಥ್ಯ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣದ ಬಗ್ಗೆ ಎಲ್ಲಿಲ್ಲದ ಪ್ರೀತಿ. ‘ಕೃಷಿ ಗ್ರಾಮೀಣರಿಗಷ್ಟೇ ಸೀಮಿತವಲ್ಲ, ಅದು ನಗರದವರಿಗೂ ಪರಿಚಯವಾಗಬೇಕು. ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಯುವಕರಿಗೆ ಈ ಸಮಕಾಲೀನ ಕೃಷಿ ಪದ್ಧತಿಗಳು ತಿಳಿಯಬೇಕು. ಆ ಉದ್ದೇಶದಿಂದಲೇ ‘ಸಮಗ್ರ ಕೃಷಿ ಪದ್ಧತಿ’ಯನ್ನು ಬೊಂಬೆ ಪ್ರದರ್ಶನದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಇವು ಮಕ್ಕಳ ಮನಸ್ಸನ್ನು ಬೇಗ ಆಕರ್ಷಿಸುತ್ತವೆ. ವಿಷಯವನ್ನೂ ಸರಳವಾಗಿ ರವಾನಿಸುತ್ತವೆ’ ಎನ್ನುತ್ತಾರೆ.
ರಾಮಾಯಣ- ಮಹಾಭಾರತದ ಕಥೆಗಳು ಎಲ್ಲ ಟಿವಿಗಳಲ್ಲೂ ಬಿತ್ತರವಾಗುತ್ತವೆ. ಆದರೆ ಕೃಷಿ-ಪರಿಸರ -ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳಿಗೆ ಎಲ್ಲೂ ಸ್ಥಳವಿಲ್ಲ. ಕನಿಷ್ಠ ಹೀಗಾದರೂ ನಗರದ ಯುವಕರಿಗೆ ಕೃಷಿ ಪದ್ಧತಿಗಳು, ಪರಿಸರ ವಿಚಾರಗಳು ತಲುಪಲಿ ಎಂಬುದು ಸುಧೀಂದ್ರ ಅವರ ಅಭಿಪ್ರಾಯ.
ಈ ಗೊಂಬೆ ಪ್ರದರ್ಶನ ಇಂದು, ನಾಳೆ ಮುಂದುವರಿಯುತ್ತದೆ. ಸುಧೀಂದ್ರ ಅವರ ವಿಳಾಸ : ಬೆಳದಿಂಗಳು, ನಂ. 204, ಬ್ಲಾಕ್4, ಗಾನಾ ರಿಜೆನ್ಸಿ, ಯಲಚೇನಹಳ್ಳಿ.