ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಪಟ್ಟಿ ಲೋಪ ತಿದ್ದುಪಡಿಗೆ ಹೆಚ್ಚಿನ ಶುಲ್ಕ ವಸೂಲಿ

ದಾವಣಗೆರೆ ವಿಶ್ವವಿದ್ಯಾಲಯದ ವಿರುದ್ಧ ಎಬಿವಿಪಿ ಆರೋಪ
Last Updated 30 ಸೆಪ್ಟೆಂಬರ್ 2014, 9:54 IST
ಅಕ್ಷರ ಗಾತ್ರ

ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯ ಅಂಕಪಟ್ಟಿಯಲ್ಲಿನ ಲೋಪದೋಷ ತಿದ್ದುಪಡಿಗೆ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜಿಲ್ಲಾ ಘಟಕದ ಕಾರ್ಯಕರ್ತರು, ವಿದ್ಯಾರ್ಥಿಗಳು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ದಾವಣಗೆರೆ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಆಂತರಿಕ ಪರೀಕ್ಷಾ ಅಂಕಗಳ ತಿದ್ದುಪಡಿ ಮಾಡಲು ವಿದ್ಯಾರ್ಥಿಗಳಿಂದ ಪ್ರತಿ ಅಂಕಪಟ್ಟಿಗೆ₨ 500 ಶುಲ್ಕ ನಿಗದಿ ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ  ಸ್ನಾತಕೋತ್ತರ ಪದವಿ ಮುಗಿಸಿದ ಕೂಡಲೇ ವಿದ್ಯಾರ್ಥಿಗಳೇ ಮುಂದೆ ಅಲ್ಲಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಅಧೋಗತಿಯತ್ತ ತಲುಪಿದೆ ಎಂದು ದೂರಿದರು.

ವಾಹನ ನಿಲುಗಡೆಗೆ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಸ್ಥಳಾವಕಾಶವಿಲ್ಲ. ಆವರಣದೊಳಗೆ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲಾಗುತ್ತಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗೆ ಬಹುತೇಕ ಪದವಿ ಕಾಲೇಜುಗಳಲ್ಲಿ ಪ್ರತ್ಯೇಕ ಮಹಿಳಾ ವಿಶ್ರಾಂತಿ ಕೊಠಡಿ ಇಲ್ಲದಿರುವುದು ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿದರು.

ಬೇಡಿಕೆಗಳು: ದಾವಣಗೆರೆ ವಿಶ್ವವಿದ್ಯಾಲಯ ಕಡ್ಡಾಯವಾಗಿ ಹಿಂದೆ ಇದ್ದ ಪರೀಕ್ಷಾ ಶುಲ್ಕ ನೀತಿ ಮುಂದುವರಿಸಬೇಕು. ಕೇವಲ ಒಂದು ಬಾರಿ ಮಾತ್ರ ಅಂಕಪಟ್ಟಿ ಶುಲ್ಕ ಪಡೆಯಬೇಕು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಪ್ರತಿ ಬಾರಿ ಪರೀಕ್ಷಾ ಶುಲ್ಕದೊಂದಿಗೆ ಅಂಕಪಟ್ಟಿ ಶುಲ್ಕ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು.

ಅಂಕಪಟ್ಟಿಯಲ್ಲಿನ ಲೋಪ ತಿದ್ದುಪಡಿಗೆ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಯಾವುದೇ ನಿರ್ಣಯ ಜಾರಿಗೊಳಿಸುವ ಮೊದಲು ವಿದ್ಯಾರ್ಥಿ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆಯೊಂದಿಗೆ ಚರ್ಚಿಸಿದ ನಂತರ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಸಂಘಟನೆಯ ನಗರ ಘಟಕದ ಉಪಾಧ್ಯಕ್ಷ ಪ್ರಸಾದ್‌, ಕಾರ್ಯದರ್ಶಿ ಚಂದ್ರಶೇಖರ್‌, ಅಕ್ಷಯ್‌, ದೇವರಾಜ್‌, ಅಂಬಿಕಾ, ಸೌಂದರ್ಯ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಡವಿದ್ಯಾರ್ಥಿಗಳಿಗೆ ತೊಂದರೆ
ಚಳ್ಳಕೆರೆ: ದಾವಣಗೆರೆ ವಿಶ್ವವಿದ್ಯಾಲಯವು ಪದವಿ ಪರೀಕ್ಷೆ ಮತ್ತು ಅಂಕಪಟ್ಟಿ ಶುಲ್ಕ ಹೆಚ್ಚಿಸಿರುವುದನ್ನು ಖಂಡಿಸಿ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದೊಂದಿಗೆ ಕಾಲೇಜಿನ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ದಾವಣಗೆರೆ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದಾಗಿನಿಂದಲೂ ವಿದ್ಯಾರ್ಥಿಗಳಿಗೆ ಹೊರೆಯಾಗುವಂತಹ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. ವಿಶ್ವವಿದ್ಯಾಲಯಕ್ಕೆ ಒಳಪಡುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ಸೇರಿದಂತೆ  ಎಲ್ಲಾ ತಾಲ್ಲೂಕುಗಳು ಬರಗಾಲಕ್ಕೆ ಈಡಾಗಿವೆ. ಬರಗಾಲದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ರೈತರ, ಕೂಲಿ ಕಾರ್ಮಿಕರ, ಹಿಂದುಳಿದವರ, ಮತ್ತು ಪರಿಶಿಷ್ಟ ಜಾತಿ, ಪಂಗಡದವರ ಮಕ್ಕಳು ಪದವಿ ಪಡೆಯಲು ಕಾಲೇಜಿಗೆ ಪ್ರವೇಶ ಪಡೆಯುತ್ತಿದ್ದಾರೆ. ದೂರದ ಹಳ್ಳಿಗಳಿಂದ ಕಾಲೇಜಿಗೆ ಬರುವುದೇ ಸಮಸ್ಯೆಯಾಗಿರುವ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಶುಲ್ಕವನ್ನು ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೂಡಲೇ ಪರೀಕ್ಷೆ ಮತ್ತು ಅಂಕಪಟ್ಟಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಎಬಿವಿಪಿ ಸಂಚಾಲಕ ಗೋಪನಹಳ್ಳಿ ಜಿ.ಎಚ್‌.ತಿಪ್ಪೇಸ್ವಾಮಿ, ನಗರ ಕಾರ್ಯದರ್ಶಿ ಎಸ್.ರವಿಕುಮಾರ್, ಟಿ.ಸುಪ್ರೀತಾ, ಮಾರುತಿ, ಅಜಯ್‌, ಪದ್ಮನಾಭ, ಅಭಿಷೇಕ, ಜನಾರ್ದನ, ಚೈತ್ರಾ, ಓಂಶ್ರೀ, ನಾಗವೇಣಿ, ಪರ್ವಿನ್‌ಬಾನು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT