ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ ಗಳಿಕೆಯ ನಾಗಾಲೋಟ

Last Updated 23 ಮೇ 2016, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗೆ ಕಲಿಕೆಯ ಖುಷಿ, ಗುರುವಿಗೆ ಕಲಿಸಿದ ಸಂತೃಪ್ತಿಯನ್ನು ಮರೆಮಾಚುವ ಅಂಕಗಳ ಲೆಕ್ಕಾಚಾರ ಉತ್ತಮ ಶೈಕ್ಷಣಿಕ ಸ್ಥಿತಿಯ ಪ್ರತಿಫಲನವಲ್ಲ

ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದಾಯ್ತು. ಯಥಾಪ್ರಕಾರ ಅಂಕ ಗಳಿಕೆಯಲ್ಲಿ ಮಂಚೂಣಿಯಲ್ಲಿದ್ದ ವಿದ್ಯಾರ್ಥಿಗಳ ಸಂಭ್ರಮ, ಕೊಂಚ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳ ನೋವು, ಕಡಿಮೆ ಅಂಕ ಹಾಗೂ ಫೇಲ್ ಆದ ಕೆಲವು ವಿದ್ಯಾರ್ಥಿಗಳ ಸಾವುಗಳನ್ನೂ ಗಮನಿಸಿದ್ದಾಯ್ತು.

ಈ ಬಾರಿಯ ಫಲಿತಾಂಶದಲ್ಲಿ ಪೂರ್ಣಾಂಕ ಗಳಿಕೆಯ ದಾಖಲೆಯೂ ಆಗಿ, ಆ ವಿದ್ಯಾರ್ಥಿಯ ಉತ್ತರ ಪತ್ರಿಕೆಗಳನ್ನು ಎಲ್ಲರಿಗೂ ಒದಗಿಸುವ ಬೇಡಿಕೆಯನ್ನೂ ಮಂಡಿಸಲಾಯಿತು. ಪೂರ್ಣಾಂಕಕ್ಕಿಂತ ಒಂದೆರಡು ಅಂಕಗಳನ್ನು ಕಡಿಮೆ ಪಡೆದ ಮಕ್ಕಳ ನೋವು, ಮಾನಸಿಕ ಆಘಾತ ಹಾಗೂ ಇನ್ನೂ ಸ್ವಲ್ಪ ಚೆನ್ನಾಗಿ ಪರೀಕ್ಷೆ ಬರೆದಿದ್ದರೆ ಪೂರ್ಣಾಂಕಗಳೇ ಬರುತ್ತಿದ್ದವು ಎಂಬ ವಿಮರ್ಶೆಗಳನ್ನು ನೋಡಿದ್ದಾಯಿತು.

ಈ ಎಲ್ಲದರ ಮಧ್ಯೆ ಈ ಅಂಕ ಗಳಿಕೆಯ ಹುಚ್ಚು ಓಟದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು, ಕಡಿಮೆ ಶೇಕಡಾವಾರು ಗಳಿಕೆಯ ಶಾಲೆಗಳ ಶಿಕ್ಷಕರು ಹಾಗೂ ಜಿಲ್ಲೆಗಳ ಅಧಿಕಾರಿಗಳು ಸದ್ದಿಲ್ಲದೆ ಅನುಭವಿಸಿದ ಮುಜುಗರ, ಆತಂಕ ಹಾಗೂ ಮಾನಸಿಕ ಯಾತನೆಯನ್ನು ಯಾರೂ ಗುರುತಿಸದಿರುವುದು ಅಥವಾ ಗುರುತಿಸಿದರೂ ಮೌನ ವಹಿಸಿರುವುದು ಅಚ್ಚರಿಯೇ ಸರಿ.

ಹತ್ತನೇ ತರಗತಿಯು ಶಾಲಾ ಶಿಕ್ಷಣದ ಪ್ರಮುಖ ಘಟ್ಟಎಂಬುದು ಸರಿ. ಅದೇ ರೀತಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕ ಗಳಿಕೆಯ ಸ್ಪರ್ಧೆ ಇರಬೇಕೆಂಬುದೂ ಸರಿಯೆ.

ಆದರೆ ಹತ್ತನೇ ತರಗತಿಯ ಪೂರ್ವದ ತರಗತಿಗಳಿಗಿಲ್ಲದ ಮಿತಿಮೀರಿದ ಪ್ರಾಶಸ್ತ್ಯವನ್ನು ಏಕಾಏಕಿ ಹತ್ತನೇ ತರಗತಿಗೆ ನೀಡುವುದರಿಂದ ಶಿಕ್ಷಣದ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುವುದರ ಜೊತೆಗೆ ಅಂಕ ಗಳಿಕೆಗೆ ವಾಮಮಾರ್ಗಗಳನ್ನು ಹಿಡಿಯುವ ಸಾಧ್ಯತೆಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಕಲಿತ ವಿದ್ಯಾರ್ಥಿಗೆ ದಕ್ಕಬೇಕಾದ ಖುಷಿ, ಸಂತಸ ಹಾಗೂ ಕಲಿಸಿದ ಗುರುವಿಗೆ ಒದಗಬೇಕಾದ  ಸಂತೃಪ್ತಿಯನ್ನು ಮರೆಮಾಚಿ, ಅಂಕಗಳ ಲೆಕ್ಕಾಚಾರದಲ್ಲಿಯೇ ಮುಳುಗುವ ಸನ್ನಿವೇಶವು ಉತ್ತಮ ಶೈಕ್ಷಣಿಕ ಸ್ಥಿತಿಯ ಪ್ರತಿಫಲನವಲ್ಲ.

ವಿದ್ಯಾರ್ಥಿ-ಶಿಕ್ಷಕರು ಸಹಜ ಕುತೂಹಲ, ಆಸಕ್ತಿಯ ಹಂಬಲದಿಂದ ಜೊತೆಗೂಡಿ ಕಲಿಸುವ, ಕಲಿಯುವ ಸನ್ನಿವೇಶಗಳ ನಿರ್ಮಾಣವೇ ಉತ್ತಮ ಶೈಕ್ಷಣಿಕ ಸನ್ನಿವೇಶದ ಪ್ರಮುಖ ಅಳತೆಗೋಲು ಎನ್ನಬಹುದು.

ಇದಕ್ಕೆ ಬದಲಾಗಿ ವಿದ್ಯಾರ್ಥಿ ಗಳಿಸುವ ಅಂಕಗಳೇ ಸರ್ವಶ್ರೇಷ್ಠ ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಿದ್ಧ ಸೂತ್ರಗಳನ್ನು ಮಂತ್ರಗಳಂತೆ ತಿಳಿಸಿಕೊಡುವ ಶಿಕ್ಷಕರೇ ಅತ್ಯಂತ ಯಶಸ್ವಿ ಶಿಕ್ಷಕರೆಂಬ ಶೈಕ್ಷಣಿಕ ಸನ್ನಿವೇಶಗಳು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗವು.

ಕೆಲವೇ ವಿದ್ಯಾರ್ಥಿಗಳ ಸಾಧನೆಯು ಇತರರಲ್ಲಿ ಕೀಳರಿಮೆ ಹುಟ್ಟು ಹಾಕಬಾರದೆಂಬ ಕಾರಣಕ್ಕೆ ಹಲವಾರು ವರ್ಷಗಳಿಂದಲೇ ಶಾಲಾ ಶಿಕ್ಷಣದಲ್ಲಿ ರ್‍ಯಾಂಕ್ ನೀಡುವ ಪದ್ಧತಿಗೆ ತಿಲಾಂಜಲಿ ನೀಡಲಾಯಿತು.

ಇದರ ಜೊತೆಗೆ ಅಂಕಗಳ ಕುರಿತಾದ ಮಿತಿಮೀರಿದ ಪ್ರಾಶಸ್ತ್ಯವನ್ನು ತಗ್ಗಿಸಲು ಹಾಗೂ ಅವು ತರುವ ಅಪಾಯಗಳನ್ನು ತಪ್ಪಿಸಲು ಗ್ರೇಡ್‌ಗಳನ್ನು ಪರಿಚಯಿಸಲಾಯಿತು.

ವಿದ್ಯಾರ್ಥಿಗಳ ಸಾಧನೆಯನ್ನು ವರ್ಷದ ಕೊನೆಯಲ್ಲಿ ನಡೆಸಲಾಗುವ ಒಂದೇ ಒಂದು ವಾರ್ಷಿಕ ಪರೀಕ್ಷೆಯ ಮೂಲಕ ನಿರ್ಧರಿಸುವುದನ್ನು ತಪ್ಪಿಸಿ, ವರ್ಷವಿಡೀ ವಿದ್ಯಾರ್ಥಿಗಳು ಭಾಗವಹಿಸುವ ಹಲವು ಚಟುವಟಿಕೆಗಳ ಮೂಲಕ ಪರಿಪೂರ್ಣ ಕಲಿಕೆಯತ್ತ ಅವರು ಸಾಗುವಂತೆ ಮಾಡಲು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ (ಸಿ.ಸಿ.ಇ.) ಪದ್ಧತಿಯನ್ನು ಅಳವಡಿಸಲಾಯಿತು.

ಆದಾಗ್ಯೂ ಈ ನೂತನ ಅಂಶಗಳನ್ನು ಹತ್ತನೇ ತರಗತಿಯಲ್ಲಿ ಪರಿಪೂರ್ಣವಾಗಿ ಅಳವಡಿಸಿಕೊಂಡು, ಅಂಕಗಳಿಗಿರುವ ಮಿತಿಮೀರಿದ ಪ್ರಾಶಸ್ತ್ಯವನ್ನು ತಗ್ಗಿಸುವೆಡೆಗೆ ಪ್ರಜ್ಞಾಪೂರ್ವಕ ಪ್ರಯತ್ನಗಳ ಅನುಷ್ಠಾನವಾಗುತ್ತಿಲ್ಲ.

ಅಂಕಗಳ ಮೇಲುಗೈ ತಪ್ಪಿಸಲು ಏನು ಮಾಡಬಹುದೆಂಬುದನ್ನು ಗಮನಿಸೋಣ. ಹತ್ತನೇ ತರಗತಿಯಲ್ಲಿ ಈಗಾಗಲೇ ಅನುಷ್ಠಾನದಲ್ಲಿರುವ ಸಿ.ಸಿ.ಇ. ಪದ್ಧತಿಯನ್ನು ಇನ್ನೂ ಬಲಪಡಿಸಿ, ಗ್ರೇಡ್‌ಗಳ ಬಳಕೆಯನ್ನು ಹಂತ ಹಂತವಾಗಿ ಪೂರ್ಣಪ್ರಮಾಣದಲ್ಲಿ ಜಾರಿಗೆ ತರಬೇಕು.

ಇದರ ಜೊತೆ ಸಿ.ಸಿ.ಇ.ಯ ಸಮರ್ಪಕ ಅನುಷ್ಠಾನ ಇತರ ತರಗತಿಗಳಲ್ಲಿಯೂ ಆಗುವಂತೆ ಕ್ರಮ ವಹಿಸಬಹುದು. ಹತ್ತನೇ ತರಗತಿಯ ಫಲಿತಾಂಶ ಪ್ರಕಟಣೆಯು ಸಹಜ ವಿದ್ಯಮಾನವಾಗುವಂತೆ ಮಾರ್ಪಡಿಸಬಹುದು. ವಿದ್ಯಾರ್ಥಿಗಳ ಶೇಕಡಾವಾರು ಅಂಕ ಘೋಷಣೆ ತಪ್ಪಿಸಿ, ಇಷ್ಟು ವಿದ್ಯಾರ್ಥಿಗಳು ಎ+, ಎ ಗ್ರೇಡ್ ಪಡೆದಿದ್ದಾರೆಂಬ ರೀತಿಯ ಮಾಹಿತಿಯನ್ನು ನೀಡಬಹುದು.

ಹತ್ತನೇ ತರಗತಿಯಲ್ಲಿ ಆಗಬಹುದಾದ ಇನ್ನೊಂದು ಮಹತ್ವದ ಮಾರ್ಪಾಡೆಂದರೆ ‘ಫೇಲ್’ ಪರಿಕಲ್ಪನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವುದು. ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ‘ಫೇಲ್’ ಎಂಬ ಪದವೇ ಆತ್ಮವಿಶ್ವಾಸ ಕುಗ್ಗುವಂತೆ ಮಾಡುತ್ತದೆ. ಇದರಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಜೀವಗಳನ್ನೇ ಕಳೆದುಕೊಂಡಿರುವ ಉದಾಹರಣೆಗಳು ನಮ್ಮ ಮುಂದಿವೆ.

ಈ ಹಿನ್ನೆಲೆಯಿಂದ, ಹತ್ತನೇ ತರಗತಿಯಲ್ಲಿ ನಿಗದಿತ ಗ್ರೇಡ್ ಪಡೆಯದ (35 ಅಂಕ ಪಡೆಯದ) ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್‌ಸಿ ಕೋರ್ಸ್ ಪೂರೈಕೆಯ ಪ್ರಮಾಣಪತ್ರ ನೀಡಬಹುದು. ಈ ರೀತಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರೆಸಲು ಇಚ್ಛಿಸಿದಲ್ಲಿ ಮಾತ್ರ ಮತ್ತೆ ಪರೀಕ್ಷೆ ಎದುರಿಸಿ, ಎಸ್ಎಸ್ಎಲ್‌ಸಿ ಪೂರೈಕೆ ಪ್ರಮಾಣಪತ್ರ ಪಡೆಯಬಹುದು.

ಇನ್ನುಳಿದಂತೆ ನಿಗದಿತ ಗ್ರೇಡ್ ಪಡೆಯದ ಲಕ್ಷಾಂತರ ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿ, ಅವರಿಗೆ ಸರಿಹೊಂದುವ ಕೌಶಲಗಳನ್ನು ಅಲ್ಪ ಕಾಲದಲ್ಲಿ ಕಲಿಸುವ ವ್ಯವಸ್ಥೆ ಮಾಡಬಹುದು.

ಈ ಕಾರ್ಯದಲ್ಲಿ ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳನ್ನು ತೊಡಗಿಸಿಕೊಂಡು, ಅವರ ಆಸಕ್ತಿ, ಸಾಮರ್ಥ್ಯಗಳಿಗೆ ತಕ್ಕಂತಹ ಉದ್ಯೋಗ ಕಲ್ಪಿಸುವೆಡೆಗೂ ಗಮನಹರಿಸಬಹುದು. ಈ ರೀತಿ ಮಾಡಿದಲ್ಲಿ ‘ಎಸ್ಎಸ್ಎಲ್‌ಸಿ ಫೇಲ್’ ಎಂಬ ಹಣೆಪಟ್ಟಿಯಿಂದ ಭವಿಷ್ಯವನ್ನೇ ಮಸುಕು ಮಾಡಿಕೊಳ್ಳುವವರ ಬದುಕನ್ನು ಉಜ್ವಲಗೊಳಿಸಬಹುದು.

ಪ್ರಸ್ತುತ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮನ್ನಣೆ–ಗೌರವ ದೊರೆಯುವ ಮಾದರಿ ಚಾಲ್ತಿಯಲ್ಲಿರುವ ಕಾರಣ, ಹೆಚ್ಚಿನ ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡದೆ ಹೆಚ್ಚು ಅಂಕ ಗಳಿಸಲು ಒತ್ತಡ ಹೇರುತ್ತಾರೆ. ಇದರಿಂದ ಎಷ್ಟೋ ಮಕ್ಕಳ ಸಹಜ ಪ್ರತಿಭೆ ಕಮರುತ್ತಿದೆ.

ಶೈಕ್ಷಣಿಕ ಕಲಿಕೆಗಳ ಜೊತೆ ಇತರ ಸಹ ಶೈಕ್ಷಣಿಕ ಚಟುವಟಿಕೆಗಳ ಸಾಧನೆಯನ್ನೂ ಒಳಗೊಳ್ಳುವಂತೆ ಮಾಡಿದಲ್ಲಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ವಿಕಾಸಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಶಿಕ್ಷಣದ ನಿಜವಾದ ಉದ್ದೇಶವೇ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಗೆಳೆಯುವುದಲ್ಲವೇ? ಜ್ಞಾನಾರ್ಜನೆಯ ನೈಜ ಉದ್ದೇಶದಿಂದ ಶಾಲೆಗಳು ಕಾರ್ಯ ನಿರ್ವಹಿಸುವಂತೆ ಮಾಡುವುದರಿಂದ ಅಂಕಗಳನ್ನೇ ಬಿಂಬಿಸಿ,

ಹೆಚ್ಚಿನ ಶುಲ್ಕ ವಿಧಿಸುವ ಶಾಲೆಗಳಿಗೂ ಕಡಿವಾಣ ಹಾಕಿದಂತಾಗುತ್ತದೆ. ವಿದ್ಯಾರ್ಥಿಗಳಿಗಿರುವ ಆತಂಕ ದೂರವಾಗಿ ನಿಜಾರ್ಥದಲ್ಲಿ ಮಕ್ಕಳ ಕೇಂದ್ರಿತ ಶಿಕ್ಷಣ ಪೂರೈಕೆ ಉದ್ದೇಶ ಸಾಧನೆಯಾದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT