ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕ ವೀರರಿಗೆ ಬೇಕಿದೆ ಸಾಮಾನ್ಯ ಪ್ರಜ್ಞೆ

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಜನವರಿ ತಿಂಗಳಾದ್ದರಿಂದ ಸಿಲಬಸ್ ಮುಗಿಸುವ ಧಾವಂತಗಳೆಲ್ಲ  ಕೊನೆ­ಗೊಂಡು ತರಗತಿಗಳು ಕೊಂಚ ನಿರಾಳ. ಪ್ರಥಮ ಪಿಯುಸಿ ಮಕ್ಕಳಿಗೆ ಅದಾವುದೋ ಕಾರ್ಯವನ್ನು ನಿಯೋಜಿಸಿ ತರಗತಿಯಲ್ಲಿ ಅವರು ಗಲಾಟೆ ಮಾಡದಂತೆ ಅಡ್ಡಾಡುತ್ತಿದ್ದೆ.

ವಿದ್ಯಾರ್ಥಿಯೊಬ್ಬ ಬಳಿಗೆ ಕರೆದ. ಕೊಟ್ಟಿದ್ದ ಪ್ರಶ್ನೆಗಳಲ್ಲಿ ಏನೋ ಗೊಂದಲ ಆಗಿರಬೇಕೆಂದು­ಕೊಂಡು ವಿಚಾರಿಸಿದೆ. ಆದರೆ ಅವನ ಸಂದೇಹ ಬೇರೆಯದೇ ಆಗಿತ್ತು. ‘ಮಿಸ್, ನೀವು ಪಿಯುಸಿ­ಯ­ಲ್ಲಿದ್ದಾಗ ಇಂಗ್ಲಿಷ್ ಬಿಟ್ಟು ಬೇರೆ ಯಾವುದ­ರಲ್ಲಿಯೂ ಪಾಸ್ ಆಗಲಿಲ್ಲವಾ?’ ಎಂಬ ಅವನ ಪ್ರಶ್ನೆಯ ತಲೆಬುಡ ನನಗೆ ಅರ್ಥವಾಗಲಿಲ್ಲ. ಎಲ್ಲ ವಿಷಯಗಳಲ್ಲೂ ತೇರ್ಗಡೆಯಾಗದೇ ಉಪ­ನ್ಯಾಸಕಿ­ಯಾಗಲು ಸಾಧ್ಯವೇ?

ಅಷ್ಟೂ ಗೊತ್ತಾಗದ ದಡ್ಡ ಅವನಲ್ಲ ಎಂಬುದು ನನಗೆ ಗೊತ್ತಿತ್ತು. ಆದರೆ ಅಂಥ ವಿದ್ಯಾರ್ಥಿಯಿಂದ ಇದೇನು ಪ್ರಶ್ನೆ ಎಂಬುದು ನನಗೆ ಗೋಜಲೆನಿಸಿತು. ‘ಅಲ್ಲಪ್ಪಾ, ನೀನೀಗ ಹತ್ತನೇ ತರಗತಿಯಲ್ಲಿ ಎಲ್ಲ ವಿಷಯಗಳಲ್ಲೂ ಪಾಸಾಗಿ ತಾನೇ ಪಿಯುಸಿಗೆ ಬಂದಿರುವುದು? ಪ್ರತಿ ಹಂತದಲ್ಲೂ ಹಾಗೇ. ಕೇವಲ ಒಂದೇ ವಿಷಯದಲ್ಲಿ ಪಾಸಾದರೆ ಮುಂದಿನ ಅಧ್ಯಯ­ನಕ್ಕೆ ಅವಕಾಶ ಆಗುವುದಿಲ್ಲ’ ಎಂಬಲ್ಲಿಂದ ಸ್ನಾತಕೋತ್ತರ ಪದವಿ, ಬಳಿಕ ಯುಜಿಸಿ ನಡೆಸುವ ಅರ್ಹತಾ ಪರೀಕ್ಷೆ ಎಲ್ಲದರ ಬಗೆಗೂ ವಿವರಿಸಿದೆ.

‘ಅಲ್ಲಾ ಮಿಸ್, ನೀವು ಇಂಗ್ಲಿಷ್ ಒಂದನ್ನೇ ಪಾಠ ಮಾಡುತ್ತೀರಲ್ಲಾ ಅದಕ್ಕೆ ಕೇಳಿದೆ. ಬಿಸಿನೆಸ್ ಸ್ಟಡೀಸ್, ಕನ್ನಡ ಎಲ್ಲ ನೀವು ಮಾಡೋಕಾಗುತ್ತಾ’ ಅವನ ಪ್ರಶ್ನೆ ಮುಂದುವರಿ­ಯಿತು. ಎಂಬಿಎ ಮಾಡಿದ ವ್ಯಕ್ತಿ ವೈದ್ಯನಾಗು­ವುದು ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೇ ಇಂಗ್ಲಿಷ್‌ನಲ್ಲಿ ಎಂ.ಎ ಮಾಡಿದವರು ಕಾಮರ್ಸ್‌ ಪಾಠ ಮಾಡಲು ಸಾಧ್ಯವಿಲ್ಲ ಎಂದು ಉದಾಹರಿಸಿ ಅವನ ಸಂದೇಹ ಪರಿಹರಿಸುವ ಪ್ರಯತ್ನ ಮಾಡಿದೆ.

ಇಂದಿನ ವಿದ್ಯಾರ್ಥಿಗಳು ನಮ್ಮ ತಲೆಮಾರಿ­ಗಿಂತ ತುಂಬಾ ಮುಂದೆ ಇದ್ದಾರೆ ಎಂಬುದು ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು. ಆದರೆ ನಿಜವಾಗಿಯೂ ಈ ಮಕ್ಕಳು ಕೇವಲ ಅಂಕಗಳ ಬೆಂಬತ್ತುವ ಶೂರರಾಗುವಂತೆ ನಮ್ಮ ಒಟ್ಟು ವ್ಯವಸ್ಥೆ ಬದಲಾಗಿರುವುದು ನಿಚ್ಚಳ. ತರಗತಿ­ಯಲ್ಲಿ ಮೊದಲಿಗರಿರಬೇಕು, ಐಚ್ಛಿಕ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆಯಬೇಕು, ‘ಪರ್ಸೆಂಟೇಜಿಗೆ’ ಸೇರುವುದಿಲ್ಲ­ವಾದ್ದರಿಂದ ಭಾಷೆ ಎಂಬುದನ್ನು ಓದುವ ಅಗತ್ಯವಿಲ್ಲ ಮತ್ತು ಅದಕ್ಕೆ ವ್ಯಯಿಸುವ ಸಮಯ ಕೇವಲ ವ್ಯರ್ಥ ಎಂಬಂತಹ ಮಕ್ಕಳ ನಿಲುವನ್ನು ಸ್ವತಃ ಹೆತ್ತವರೇ ಸಮರ್ಥಿಸುತ್ತಾರೆ.

ಒಂದು ವೇಳೆ ಮಕ್ಕಳೇನಾದರೂ ಭಾಷೆಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಸಿಕೊಂಡರೆ ‘ಬರೀ ಟೈಮ್ ವೇಸ್ಟ್ ಮಾಡ್ತಾರೆ’ ಎನ್ನುವ  ಹೆತ್ತ­ವರನ್ನೂ ನಾನು ಕಂಡಿದ್ದೇನೆ. ಆದರೆ ಪರೀಕ್ಷಾ ಅಂಕಪಟ್ಟಿ ಬಂದಾಗ ಮಾತ್ರ ‘ಎಲ್ಲದ­ರಲ್ಲೂ ಮಗ ತೊಂಬತ್ತಕ್ಕಿಂತ ಮೇಲೆ ಸ್ಕೋರ್ ಮಾಡ್ತಾನೆ. ಆದರೆ ಭಾಷೆಯಲ್ಲಿ ಮಾತ್ರ ಅರ­ವತ್ತು ದಾಟಲ್ಲ. ಅದೇನು ಪಾಠ ಮಾಡ್ತಾರೋ’ ಎಂದು ಭಾಷಾ ಶಿಕ್ಷಕರಿಗೆ ಶಾಪ ಹಾಕುತ್ತಾರೆ!

ಪ್ರಮುಖವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಷಯಗಳಿಗೆಲ್ಲ ಬೆಳಿಗ್ಗೆ ಐದೂವರೆಯಿಂದಲೇ ಟ್ಯೂಷನ್ ಯಂತ್ರಗಳು ಆರಂಭವಾಗುತ್ತವೆ. ಈ ಮಕ್ಕಳ ದಿನಚರಿಯೂ ಅಷ್ಟೇ. ಟ್ಯೂಷನ್ ಮುಗಿಸಿ ಹೊಟ್ಟೆಗಿಷ್ಟು ತಿಂಡಿ ತಿಂದ ಶಾಸ್ತ್ರ ಮಾಡಿ ತರಗತಿಗಳಿಗೆ ಓಡಿದರೆಂದರೆ, ಅಲ್ಲಿ ಮಾಡುವ ಕೆಲಸ ಮತ್ತೇನಿಲ್ಲ; ಟ್ಯೂಷನ್ ತರಗತಿಗಳಲ್ಲಿ ಕಲಿತು ಬಂದದ್ದನ್ನು ಪ್ರದರ್ಶಿಸಿ ಎಲ್ಲರ ಮುಂದೆ ತಾನು ಜಾಣನಾಗುವುದು ಮತ್ತು ಟ್ಯೂಷನ್ನಿಗೂ ತರಗತಿಯಲ್ಲಿ ಉಪನ್ಯಾಸಕರು ಹೇಳಿದ್ದಕ್ಕೂ ತಾಳ­ಮೇಳ ಸರಿಹೊಂದಿಸುವುದು. ಎಲ್ಲ ವಿಷಯಗಳ ನಂತರ ಬರುವ ಭಾಷಾ ತರಗತಿಗಳೇನಿದ್ದರೂ ರಿಲಾಕ್ಸ್ ಆಗುವುದಕ್ಕೆ!

ಹಾಗಾಗಿ ಭಾಷಾ ಉಪನ್ಯಾಸಕರು ಕಥೆ ಹೇಳಬೇಕು, ಹಾಡಬೇಕು; ಒಟ್ಟಿನಲ್ಲಿ ಮಕ್ಕಳನ್ನು ರಂಜಿಸಬೇಕು. (ಸಾಧ್ಯವಾದರೆ ತಮ್ಮ ತರಗತಿಗ­ಳಲ್ಲಿ ಮಕ್ಕಳು ಅಸಹಾಯಕರಾಗಿ ನಿದ್ದೆ ಹೋಗು­ವುದನ್ನು ನೋಡುತ್ತಾ ಹತಾಶರಾಗಬೇಕು. ಇಲ್ಲವೇ ‘ಕೋರ್ ಸಬ್ಜೆಕ್ಟು’ಗಳಿಗೆ ಸಂಬಂಧಿಸಿದ ನೋಟ್ಸ್ ಬರೆಯುವ ವಿದ್ಯಾರ್ಥಿಗಳನ್ನು ಗಮ­ನಿಸಿಯೂ ಗಮನಿಸದಂತೆ, ಬೆಲ್ ಹೊಡೆಯು­ವವರೆಗೆ ತಮ್ಮ ಭಾಷಾ ಕೌಶಲ ಪ್ರಕಟಿಸಿ ಹೊರಗೆ ಬಂದು ಬಿಡಬೇಕು).

ಆದರೆ ಯಾವುದೇ ವಿದ್ಯಾರ್ಥಿಯ ಈ ಅಂಕ­ಗಳ ಹಿಂದಿನ ಓಟ ಎಲ್ಲಿಯವರೆಗೆ ಎಂದು ಯಾರೂ ಯೋಚಿಸುವುದಿಲ್ಲ. ಈ ಓಟದ ತರಾತುರಿ­­ಯಲ್ಲಿ ಅವರು ಕಳೆದುಕೊಳ್ಳುವ ಅನೇಕ ಸಂಗತಿಗಳು ಅವರಿಗೆ ಅರ್ಥವಾಗು­ವುದಿಲ್ಲ, ಹೆತ್ತವರಿಗೆ ಗಮನಿಸಲು ಸಮಯವಿಲ್ಲ.
ತರಗತಿಯಲ್ಲಿ ಎಲ್ಲವನ್ನೂ ಕಲಿಸಿಕೊಡ­ಬಹುದು. ಎಲ್ಲ ಪಾಠಗಳನ್ನೂ ಮಾಡಬಹುದು. ಆದರೆ ಸಾಮಾನ್ಯ ಪ್ರಜ್ಞೆಯನ್ನು ರೂಢಿಸಿಕೊಳ್ಳು­ವುದು ಹೇಗೆ? ಬದುಕಿನಲ್ಲಿ ತೀರಾ ಅವಶ್ಯವಿರುವ ಮೃದು ಕೌಶಲಗಳನ್ನು ಈ ಮಕ್ಕಳಲ್ಲಿ ತುಂಬುವುದು ಸಾಧ್ಯವೇ ಎಂದು ಪ್ರಶ್ನಿಸಿಕೊಂಡರೆ ಅನುಮಾನ ಮೂಡುತ್ತದೆ.

ಈ ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸುವ ವೇಗದ ಗತಿಯನ್ನು ಅವಲೋಕಿಸಿದರೆ ಅಚ್ಚರಿ ಎನಿಸುತ್ತದೆ. ತರಗತಿಯ ಕಲಿಕೆಯಲ್ಲಿ ತೀರಾ ನಿಧಾನಿ ಎಂದು ಕರೆಸಿಕೊಂಡವನೂ ಮೊಬೈಲ್, ಕಂಪ್ಯೂಟರುಗಳ ವಿಷಯದಲ್ಲಿ ನಾವು ಹುಬ್ಬೇರಿಸುವಷ್ಟು ನೈಪುಣ್ಯ ಸಾಧಿಸು­ತ್ತಾನೆ. ಆದರೆ ತರಗತಿಯ ವಾತಾವರಣದಲ್ಲಿ ತಾನಿರಬೇಕಾದ ರೀತಿ, ಶಿಕ್ಷಕ ವೃಂದದವರೊಂ­ದಿಗೆ ವರ್ತಿಸಬೇಕಾದ ಕ್ರಮಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದಂತೆ ನಡೆದುಕೊಳ್ಳುತ್ತಾನೆ.

ಕಾಲೇಜಿನ ಆವರಣದಲ್ಲಿ ಭೇಟಿಯಾದರೂ ಇವರು ಯಾರೋ ತನಗೆ ಪರಿಚಯವೇ ಇಲ್ಲ ಎಂಬಂತೆ ಮುಖಭಾವ ಮಾಡಿಕೊಂಡು ನಡೆವ ವಿದ್ಯಾರ್ಥಿಗಳನ್ನು ನೋಡಿದಾಗಲೆಲ್ಲ ‘ಇವರಿ­ಗೇನಾ ನಾವು ಪಾಠ ಹೇಳುತ್ತಿರುವುದು’ ಎಂಬ ಪ್ರಶ್ನೆ ನಮ್ಮನ್ನೇ ಕಾಡಬೇಕು.
ಇಂದಿನ ಶಿಕ್ಷಣ ವ್ಯವಸ್ಥೆ ದುರ್ಬಲವಾಗಿದೆ, ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ಗುಲ್ಲು ಆಗೀಗ ಏಳುತ್ತದೆ. ಪಠ್ಯಕ್ರಮಗಳು ಬದ­ಲಾ­ದಾಗ ತರಹೇವಾರಿ ವಿಮರ್ಶೆಗಳು ಎದುರಾ­ಗುತ್ತವೆ. ಇತರ ವಿಷಯಗಳ ಜತೆಗೆ ಸಾಮಾನ್ಯ ಜ್ಞಾನದ ಅಧ್ಯಯನವೂ ವಿದ್ಯಾರ್ಥಿ­ಗಳಿಗೆ ಇದ್ದದ್ದೇ. ಆದರೆ ಸಾಮಾನ್ಯ ಪ್ರಜ್ಞೆ ಎಂಬುದು ಮಾತ್ರ ಹೇಳಹೆಸರಿಲ್ಲದಂತೆ ಮೂಲೆಗುಂಪಾಗು­ತ್ತಿರುವುದು ಯಾಕೆಂಬುದು ನಿಜಕ್ಕೂ ಅರ್ಥವಾಗದ ಸಂಗತಿ.

ಇಲ್ಲವಾದಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬನ ಕಲ್ಪನೆಯಲ್ಲಿ ಬೇರೆ ಯಾವ ವಿಷಯದಲ್ಲಿ ಪಾಸಾಗದಿದ್ದರೂ ಭಾಷಾ ಉಪನ್ಯಾಸಕರಾಗು­ವುದು ಸಾಧ್ಯ ಎಂಬೊಂದು ಯೋಚನೆ ಮೊಳಕೆ­ಯೊ­ಡೆಯುತ್ತಿರಲಿಲ್ಲ ಅಥವಾ ಭಾಷಾ ಅಧ್ಯಯನ­ವೆಂದರೆ ಅಷ್ಟು ಸುಲಭದ, ಅಸಡ್ಡೆಯ ಸಂಗತಿ ಎಂಬ ಆಲೋಚನೆ ಮೂಡಲೂ ಸಾಧ್ಯವಿರಲಿಲ್ಲ.

ನಮ್ಮ ಶಿಕ್ಷಣ ವ್ಯವಸ್ಥೆ ಪುಸ್ತಕದ ಬದನೆಕಾಯಿ­ಗಳನ್ನು ಸೃಷ್ಟಿಸುತ್ತಿದೆಯೇ ಹೊರತು ವಿದ್ಯಾರ್ಥಿ­ಗಳ ದಿನನಿತ್ಯದ ಬದುಕಿಗೆ ಬೇಕಾದ ಸಾಮಾನ್ಯ ಜ್ಞಾನವನ್ನು ನೀಡುತ್ತಿಲ್ಲ ಎಂಬುದಕ್ಕೆ ಇಂತಹ ನೂರಾರು ನಿದರ್ಶನಗಳು ಸಿಗುತ್ತವೆ. ಇದರ ಬಗ್ಗೆ ಶಿಕ್ಷಕರಿಂದ ತೊಡಗಿ ಶಿಕ್ಷಣ ಸಂಸ್ಥೆಗಳ ಆಡಳಿತದ ಹೊಣೆ ಹೊತ್ತಿರುವವರವರೆಗೆ ಎಲ್ಲರೂ ಯೋಚಿ­ಸ­ಬೇಕಾಗಿದೆ. ಪಠ್ಯಪುಸ್ತಕಗಳಿಂದಾಚೆ ನಮ್ಮ ಮಕ್ಕಳೂ ಶಿಕ್ಷಕರೂ ಏನನ್ನೂ ಯೋಚಿಸದ ವ್ಯವಸ್ಥೆ ಸೃಷ್ಟಿಯಾಗಿಬಿಟ್ಟಿದೆ. ಎಲ್ಲರಿಗೂ ವಿದ್ಯಾಭ್ಯಾಸ ದೊರೆಯಬೇಕು ನಿಜ. ಅದು ಗಗನ ಕುಸುಮ ಆಗಬಾರದು. ಹಾಗೆಂದು ಅದನ್ನು ತೀರಾ ಸರಳೀಕೃತಗೊಳಿಸುವ ಪ್ರಯತ್ನವೇಕೆ?

ಶಿಕ್ಷಣದ ಗುಣಮಟ್ಟವನ್ನೇ ಕಡಿಮೆಗೊಳಿಸಿ, ಅರ್ಹತೆಯೊಂದಿಗೂ ರಾಜಿ ಮಾಡಿಕೊಳ್ಳುತ್ತಾ ನಡೆಯುತ್ತಿರುವ ನಮ್ಮ ಒಟ್ಟೂ ವ್ಯವಸ್ಥೆ ಕಟ್ಟಕಡೆ­ಯದಾಗಿ ನಮ್ಮೆಲ್ಲರನ್ನೂ ಕರೆದೊಯ್ದು ನಿಲ್ಲಿಸುವುದು ಎಲ್ಲಿಗೆ?

ಈ ಪ್ರಶ್ನೆಗೆ ಉತ್ತರ ಈಗಲೇ ಕಂಡುಕೊಳ್ಳ­ಬೇಕಾದ ಅನಿವಾರ್ಯ ನಮ್ಮೆದುರಿಗೆ ಇದೆ. ಮುಂದಿನ ತಲೆಮಾರಿನ ಈ ವಿದ್ಯಾರ್ಥಿ­ಗಳು ನಿಜಾರ್ಥದಲ್ಲಿ ವಿದ್ಯಾವಂತರಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT