ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿ, ಮಾಲ್‌ 24 ಗಂಟೆ ತೆರೆದಿರಲು ಅವಕಾಶ

ಮಾದರಿ ಮಸೂದೆಗೆ ಕೇಂದ್ರ ಸಂಪುಟ ಸಮ್ಮತಿ
Last Updated 29 ಜೂನ್ 2016, 22:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಂಗಡಿ, ಮಾಲ್‌ ಮತ್ತು ಸಿನಿಮಾ ಮಂದಿರಗಳು ವರ್ಷದ ಎಲ್ಲ ದಿನಗಳಲ್ಲೂ  ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುವ ಮಾದರಿ ಕಾಯ್ದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ  ತನ್ನ ಅನುಮೋದನೆ ನೀಡಿದೆ.

ಕಾರ್ಖಾನೆ ಕಾಯ್ದೆಗೆ ಒಳಪಡದ  10 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ಮಾಡುವ  ಅಂಗಡಿ ಮುಂಗಟ್ಟುಗಳು ಈ ಹೊಸ ಮಾದರಿ ಕಾಯ್ದೆ ವ್ಯಾಪ್ತಿಗೆ ಬರಲಿವೆ.

ವರ್ಷದ ಎಲ್ಲ ದಿನಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ  (ಬಾಗಿಲು ತೆಗೆಯುವ ಮತ್ತು ಮುಚ್ಚುವ) ಸ್ವಾತಂತ್ರ್ಯ  ಒದಗಿಸಲಾಗಿದೆ. ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಅಗತ್ಯ ಭದ್ರತೆ ಮತ್ತು ಕೆಲಸದ ಸ್ಥಳದಲ್ಲಿ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು, ಕ್ಯಾಂಟೀನ್‌, ವಾಹನ ಸೌಲಭ್ಯ, ಪ್ರಥಮ ಚಿಕಿತ್ಸೆ, ಪ್ರತ್ಯೇಕ ಶೌಚಾಲಯ  ಮತ್ತು ಶಿಶು ಪಾಲನಾ ಕೇಂದ್ರಗಳನ್ನು ಒದಗಿಸಬೇಕು ಎಂದು ಕಾಯ್ದೆಯಲ್ಲಿ ಸೂಚಿಸಲಾಗಿದೆ.

ಕಾರ್ಖಾನೆ ಕಾಯ್ದೆಯಡಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಇಲ್ಲ.  ಈ ಸಂಬಂಧದ ಕಾಯ್ದೆ ತಿದ್ದುಪಡಿಯು ಇನ್ನೂ ಸಂಸತ್ತಿನ ಒಪ್ಪಿಗೆ ಪಡೆಯಬೇಕಾಗಿದೆ.

ನೇಮಕಾತಿ, ತರಬೇತಿ, ವರ್ಗಾವಣೆ ಮತ್ತು ಬಡ್ತಿ ವಿಷಯಗಳಲ್ಲಿ ಮಹಿಳೆಯರ ಬಗ್ಗೆ ಯಾವುದೇ ಬಗೆಯ ತಾರತಮ್ಯ ಎಸಗಬಾರದು ಎಂದೂ ನಿರ್ಬಂಧಿಸಲಾಗಿದೆ. ‘ಮಾದರಿ ಅಂಗಡಿ ಮತ್ತು ಮುಂಗಟ್ಟು (ಉದ್ಯೋಗ ನಿಯಂತ್ರಣ ಮತ್ತು ಸೇವಾ ಪರಿಸ್ಥಿತಿ) ಮಸೂದೆ 2016’ಗೆ ಸಂಪುಟವು ತನ್ನ ಅನುಮೋದನೆ ನೀಡಿದೆ. ಈ  ಮಾದರಿ  ಕಾಯ್ದೆ ಜಾರಿಗೆ ತರಲು ಸಂಸತ್ತಿನ ಅನುಮೋದನೆ ಬೇಕಾಗಿಲ್ಲ.

ಅಂಗಡಿ, ಮಳಿಗೆ, ಮಾಲ್‌ಗಳು ವರ್ಷಪೂರ್ತಿ ದಿನದ ಹೆಚ್ಚಿನ ಅವಧಿಗೆ ತೆರೆದಿರುವುದರಿಂದ ಹೆಚ್ಚಿನ ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ.  ಈ ಮಾದರಿ ಕಾನೂನನ್ನು ದೇಶದಾದ್ಯಂತ  ಜಾರಿಗೆ ಬರಬೇಕೆಂಬ ಕಡ್ಡಾಯ ಮಾಡಲಾಗಿಲ್ಲ. ರಾಜ್ಯ ಸರ್ಕಾರಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಮಾದರಿ ಕಾನೂನನ್ನು ಮಾರ್ಪಡಿಸಿ ಅಳವಡಿಸಿಕೊಳ್ಳಬಹುದು. ಎಲ್ಲ ರಾಜ್ಯಗಳು ಸುಲಭವಾಗಿ ಅಳವಡಿಸಿಕೊಳ್ಳಲು ಮತ್ತು ದೇಶದಾದ್ಯಂತ ಏಕರೂಪದ ಕೆಲಸದ ಅವಧಿ ಇರಬೇಕೆಂಬ ಉದ್ದೇಶದಿಂದ ಮಾದರಿ ಕಾಯ್ದೆಯನ್ನು ರೂಪಿಸಲಾಗಿದೆ.

ವರ್ತಕರ ಸ್ವಾಗತ
ದಿನದ 24 ಗಂಟೆಗಳವರೆಗೂ ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದು ದೇಶದಲ್ಲಿನ ರಿಟೇಲ್‌ ವಹಿವಾಟು ಹೊಸ ಎತ್ತರಕ್ಕೆ ಏರಲಿದೆ ಎಂದು ವರ್ತಕರು ಹರ್ಷ ವ್ಯಕ್ತಪಡಿಸಿದ್ದಾರೆ.

‘ಈ ನಿರ್ಧಾರವು ಗ್ರಾಹಕರಿಗೆ ಹೆಚ್ಚು ಅನುಕೂಲತೆ ಕಲ್ಪಿಸುವುದರ ಜತೆಗೆ, ಹೆಚ್ಚುವರಿ ಕೌಶಲ ಉದ್ಯೋಗಗಳನ್ನೂ ಸೃಷ್ಟಿಸಲಿದೆ. ಇದೊಂದು ‘ಲೈಸನ್ಸ್‌ ರಾಜ್‌’ ವ್ಯವಸ್ಥೆಯ ಅಂತ್ಯವಾಗಿರಲಿದೆ. ರಾಜ್ಯ ಸರ್ಕಾರಗಳು ಇದನ್ನು ಅಳವಡಿಸಿಕೊಳ್ಳುವುದರ ಮೇಲೆ ಇದರ ಯಶಸ್ಸು ಆಧರಿಸಿದೆ’ ಎಂದು ಶಾಪರ್ಸ್‌ ಸ್ಟಾಪ್‌ನ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಶ್ರೀಖಂಡೆ ಅವರು ಪ್ರತಿಕ್ರಿಯಿಸಿದ್ದಾರೆ.

‘ಇದೊಂದು ಸ್ವಾಗತಾರ್ಹ ಕ್ರಮವಾಗಿದ್ದು, ಎಲ್ಲ ರಾಜ್ಯ ಸರ್ಕಾರಗಳೂ ಇದನ್ನು ಅಳವಡಿಸಿಕೊಳ್ಳಬೇಕು’ ಎಂದು ವಾಲ್‌ಮಾರ್ಟ್‌ ಇಂಡಿಯಾ ಅಧ್ಯಕ್ಷ ಕ್ರಿಷ್‌ ಅಯ್ಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT