ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಸ್ಮಾರ್ಟಫೋನ್‌ ‘ಸೆಸಮಿ’

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ಸೆಸಮಿ’ ಸ್ಮಾರ್ಟ್‌ಫೋನ್‌ಗೆ ‘ಪ್ರೊಪ್ರೆಅರಿ ಹೆಡ್ ಟ್ರ್ಯಾಕಿಂಗ್‌ ಟೆಕ್ನಾಲಜಿ’ ಅಳವಡಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ಸೆನ್ಸರ್‌ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್, ಬಳಕೆದಾರನ ಶಿರದ ಚಲನೆಯನ್ನು ಬಹಳ ನಿಖರವಾಗಿ ಗುರುತಿಸುತ್ತದೆ. ಕೈಗಳನ್ನು ಸ್ವಲ್ಪವೂ ಅಲುಗಾಡಿಸಲಾಗದಂತಹ ಅಂಗವೈಕಲ್ಯಕ್ಕೆ ತುತ್ತಾಗಿರುವವರು, ತಲೆಯನ್ನು ಎಡಬಲ, ಮೇಲೆ ಕೆಳಗೆ ಅಲುಗಾಡಿಸುವ ಮೂಲಕವೇ ಈ ಸೆಸಮಿ ಸ್ಮಾರ್ಟ್‌ಫೋನ್‌ ಬಳಸಬಹುದಾಗಿದೆ.

‘ಸ್ಮಾರ್ಟ್‌ಫೋನ್‌ ಆಪರೇಟ್ ಮಾಡುವುದು ಹೇಗೆ?’ ಹೀಗೊಂದು ಪ್ರಶ್ನೆಯನ್ನು ಯಾರಿಗಾದರೂ ಕೇಳಿದರೆ, ‘ಅಷ್ಟು ಗೊತ್ತಿಲ್ಲವಾ! ಸ್ಕ್ರೀನ್‌ ಮೇಲೆ ಬೆರಳಾಡಿಸುವುದಷ್ಟೆ. ಅದರಲ್ಲಿ ಮತ್ತೇನೂ ವಿಶೇಷವಿಲ್ಲ’ ಎಂದು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸುಲಭವಾಗಿ ಹೇಳಿಬಿಡುತ್ತಾರೆ.

ಆದರೆ, ಈ ಸಾಮಾನ್ಯ ಉತ್ತರವನ್ನೂ ಮೀರಿಸುವ ತಂತ್ರಜ್ಞಾನದ ಸ್ಮಾರ್ಟ್‌ಫೋನ್‌ವೊಂದನ್ನು ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ. ಅದನ್ನು ಆಪರೇಟ್‌ ಮಾಡುವುದು ಸಾಮಾನ್ಯವಾಗಿ ಎಲ್ಲರೂ ಅಂದುಕೊಂಡಂತೆ ಬೆರಳುಗಳಿಂದಲ್ಲ. ಬದಲಾಗಿ ತಲೆಯ ಚಲನೆ ಮೂಲಕ!

ಅರೆ, ಇದೇನಿದು! ತಲೆ ಚಲನೆಯ ಮೂಲಕ ಸ್ಮಾರ್ಟ್‌ಫೋನ್‌ ಆಪರೇಟ್‌ ಮಾಡುವುದು ನಿಜಕ್ಕೂ ಸಾಧ್ಯವೇ ಎಂದು ಅಚ್ಚರಿಗೊಳ್ಳದಿರಿ. ಇಂಥದ್ದೊಂದು ಸುಲಭಕ್ಕೆ ನಂಬಲಾಗದ ಸಂಗತಿಯನ್ನು ಸಾಧ್ಯವಾಗಿಸಿರುವವರು ಇಸ್ರೇಲ್‌ನ ಗಿಯೊರ ಲಿವ್ನಿ ಎಂಬಾತ.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾದ ಲಿವ್ನಿ, ಜನ್ಮತಃ ಅಂಗವಿಕಲ. ಗಾಲಿಕುರ್ಚಿ ಮೇಲೆಯೇ ಬದುಕು ಸಾಗಿಸುತ್ತಿರುವವರು.

ಆಧುನಿಕ ತಂತ್ರಜ್ಞಾನವನ್ನೇ ಮೇಳೈಸಿಕೊಂಡಿರುವ ದೇಶವಾದ ಇಸ್ರೇಲ್‌ನ ಪ್ರಜೆ ಲಿವ್ನಿ, ಕೈಗಳನ್ನು ಅಲುಡಿಸಲೂ ಆಗದಂತಹ ಅಂಗವೈಕಲ್ಯಕ್ಕೆ ತುತ್ತಾಗಿ ಪರಿತಪಿ ಸುತ್ತಿರುವವರು. ಹಾಗಾಗಿ ತಮ್ಮಂತೆಯೇ ಅಂಗವೈಕಲ್ಯಕ್ಕೆ ಒಳಗಾಗಿರುವವರೂ ಬಳಸಲು ಅನುಕೂಲವಾಗುವಂತಹ ‘ಸೆಸಮಿ’ ಎಂಬ ಹ್ಯಾಂಡ್ಸ್‌ಫ್ರೀ ಆ್ಯಂಡ್ರ್ಯಾಯ್ಡ್ ಸ್ಮಾರ್ಟ್‌ಫೋನ್‌ ಅಭಿವೃದ್ಧಿಪಡಿಸಿದ್ದಾರೆ. ಇದು ವಿಶ್ವದ ಮೊಟ್ಟಮೊದಲ ಸೆಸಮಿ ಸ್ಮಾರ್ಟ್‌ಫೋನ್‌.

ಟಿ.ವಿ ಗೇಮ್‌ಗಳಿಂದ ಸ್ಫೂರ್ತಿ
ಎಂಜಿನಿಯರಿಂಗ್‌ನಲ್ಲಿ ಬಹಳ ಆಸಕ್ತಿ ಹೊಂದಿರುವ ಲಿವ್ನಿ, ‘ಸೆಸಮಿ’ ಸ್ಮಾರ್ಟ್‌ಫೋನ್‌ ಅಭಿವೃದ್ಧಿಗೆ ಟಿ.ವಿ ಗೇಮ್‌ಗಳಿಂದ ಸ್ಫೂರ್ತಿ ಪಡೆದರು. ದೂರದಲ್ಲಿ ಕುಳಿತುಕೊಂಡೇ ರಿಮೋಟ್‌ ಮೂಲಕ ಟಿ.ವಿಯಲ್ಲಿನ ಆಟಗಳನ್ನು ನಿಯಂತ್ರಿಸುವ ವಿಧಾನದತ್ತ ಕುತೂಹಲ ತಳೆದರು. ಕುಳಿತಲ್ಲಿಂದಲೇ ಆಂಗಿಕ ಚಲನೆಯ ಮೂಲಕ ಟಿ.ವಿ ಗೇಮ್‌ ನಿಯಂತ್ರಿಸುವ ಬಗೆ ಅವರ ಸಂಶೋಧನೆಗೆ ಬೆಳಕಿಂಡಿಯಾಯಿತು.

ಈ ರಿಮೋಟ್‌ ಸೆನ್ಸರ್‌ ತಂತ್ರಜ್ಞಾನವನ್ನೇ ಸ್ಮಾರ್ಟ್‌ಫೋನ್‌ಗೂ ಅಳವಡಿಸಿದರೆ ಹೇಗೆ? ಎಂಬ ಪ್ರಶ್ನೆ ಮೂಡಿತು. ಇದು ಸಾಧ್ಯವಾದರೆ ನಾನೂ ಸೇರಿದಂತೆ ಕೈಕಾಲು ಅಲುಗಾಡಿಸಲೂ ಆಗದ ಅದೆಷ್ಟೋ ಮಂದಿ ಅಂಗವಿಕಲರಿಗೆ ಅನುಕೂಲ ವಾಗುತ್ತದೆ. ಇಲ್ಲಿ ಕೈಕಾಲುಗಳಿಗೆ ಬದಲಾಗಿ ತಲೆಯ ಚಲನೆಯನ್ನೇ ಸೆನ್ಸರ್‌ ಗ್ರಹಿಸಿಕೊಂಡು ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಿಸುವಂತಾದರೆ ಹೇಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಸಂಶೋಧನೆ ಆರಂಭಿಸಿದರು.

ಅಂದಿನಿಂದ ಈ ಕುರಿತು ಯೋಚಿಸತೊಡಗಿದ ಲಿವ್ನಿ, ಕೊನೆಗೂ ತಮ್ಮ ಆಲೋಚನೆಗಳಿಗೆ ‘ಸೆಸಮಿ’ ಸ್ಮಾರ್ಟ್‌ಫೋನ್‌ನ ಮೂಲಕ ಮೂರ್ತ ರೂಪ ಕೊಟ್ಟರು.

ಲಿವ್ನಿ ಈಗ ತಾವೇ ಅಭಿವೃದ್ಧಿಪಡಿಸಿದ ‘ಸೆಸಮಿ’ ಸ್ಮಾರ್ಟ್‌ಫೋನ್‌ನಲ್ಲಿ (ಸುಮಾರು ₨62 ಸಾವಿರ ಬೆಲೆ ಬಾಳುವಂತಹದು) ತನ್ನ ಮಕ್ಕಳು ಮತ್ತು ಸ್ನೇಹಿತರಿಗೆ ನಿತ್ಯ ಸಂದೇಶ ಕಳುಹಿಸುತ್ತಾರೆ. ಹೀಗೆ ಸ್ಮಾರ್ಟ್‌ಫೋನ್‌ ಅನುಕೂಲಗಳನ್ನು ಕಣ್ತುಂಬಿಕೊಳ್ಳಲಷ್ಟೆ ಸಾಧ್ಯವಾಗಿದ್ದ, ಕೈಗಳಿಂದ ಸ್ಪರ್ಶಿಸಿ ಬಳಸಲಾಗದ ನಿರಾಶರಾಗಿದ್ದ ಅದೆಷ್ಟೊ ಅಂಗವಿಕಲರಿಗೆ ಈ ಸೆಸಮಿ ಫೋನ್‌ ಬಹಳ ಪ್ರಯೋಜನಕಾರಿಯಾಗಿದೆ.

ಕೈಗಳನ್ನು ಸ್ವಲ್ಪವೂ ಅಲುಗಾಡಿಸಲಾಗದಂತಹ ಅಂಗವೈಕಲ್ಯಕ್ಕೆ ತುತ್ತಾಗಿರು ವವರು, ತಲೆಯನ್ನು ಎಡಬಲ, ಮೇಲೆ ಕೆಳಗೆ ಅಲುಗಾಡಿಸುವ ಮೂಲಕವೇ ಈ ಸೆಸಮಿ ಸ್ಮಾರ್ಟ್‌ಫೋನ್‌ ಬಳಸಬಹುದಾಗಿದೆ.

‘ಸೆಸಮಿ’ ಸ್ಮಾರ್ಟ್‌ಫೋನ್‌ ಖರೀದಿಸಲು ಈಗಾಗಲೇ ನೋಂದಣಿ  ಮಾಡಿಸಿರುವ 30 ಅಂಗವಿಕಲರಿಗೆ ತಾವು ಈವರೆಗೆ ಸಿದ್ಧಪಡಿಸಿರುವ  ಮೊಬೈಲ್‌ಗಳನ್ನು ದಾನವಾಗಿ ನೀಡಲು ಲಿವ್ನಿ ಆಲೋಚಿಸಿದ್ದಾರೆ.

ಹೆಡ್‌ ಟ್ರ್ಯಾಕಿಂಗ್ ಟೆಕ್ನಾಲಜಿ
‘ಸೆಸಮಿ’ ಸ್ಮಾರ್ಟ್‌ಫೋನ್‌ಗೆ ‘ಪ್ರೊಪ್ರೆಅರಿ ಹೆಡ್ ಟ್ರ್ಯಾಕಿಂಗ್‌ ಟೆಕ್ನಾಲಜಿ’ ಅಳವಡಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ಸೆನ್ಸರ್‌ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್, ಬಳಕೆದಾರನ ಶಿರದ ಚಲನೆಯನ್ನು ಬಹಳ ನಿಖರವಾಗಿ ಗುರುತಿಸುತ್ತದೆ. ಆ ಮೂಲಕ ಬಳಕೆದಾರರು ಸ್ಕ್ರೀನ್‌ ಮೇಲಿನ ಕರ್ಸರ್‌ ಅನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ.

ಇಲ್ಲಿ ‘ಕರ್ಸರ್‌’ ಅತಿ ಮುಖ್ಯ. ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಲ್ಲಿ ಬೆರಳಾಡಿಸುವ ಮೂಲಕ ಆಪರೇಟ್‌ ಮಾಡುವಂತೆ, ಅಂಗವಿಕಲರೂ ಸಹ ‘ಫ್ರಂಟ್‌ ಕ್ಯಾಮೆರಾ’ ಹೊಂದಿರುವ ‘ಸೆಸಮಿ’ಯಲ್ಲಿ ತಲೆ ಚಲನೆಯ ಮೂಲಕ ಸುಲಭವಾಗಿ ಕರೆ ಮಾಡಬಹುದು, ಸಂದೇಶ ಕಳುಹಿಸಬಹುದು, ಗೇಮ್ ಆಡಬಹುದು ಹಾಗೂ ಅಂತರ್ಜಾಲದಲ್ಲಿ ಮಾಹಿತಿ ಹುಡುಕಬಹುದು.

ಪ್ರಶಸ್ತಿ
ಕೈಯಾಡಿಸಲಾಗದ ಅಂಗವಿಕಲರೂ ಬಳಸಬಹುದಾದ ವಿಶ್ವದ ಮೊದಲು ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆ ಹೊಂದಿರುವ ‘ಸೆಸಮಿ’ ಸ್ಮಾರ್ಟ್‌ಫೋನ್‌ಗೆ 10 ಲಕ್ಷ ಡಾಲರ್‌ ಮೌಲ್ಯದ ‘ವೆರಿಝೊನ್ ಪವರ್‌ಫುಲ್ ಆನ್ಸರ್ಸ್ ಅವಾರ್ಡ್’ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT