ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚಿನ ಜನರ ಬವಣೆ

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ನಗರದ ಮುಖ್ಯ ಪ್ರದೇಶಗಳಲ್ಲಾದರೆ ಕಸವನ್ನು ಮನೆಯಿಂದ ಸಂಗ್ರಹಿಸಲೆಂದೇ ದಿನವೂ ಪಿಕ್‌ ಅಪ್ ವ್ಯಾನ್‌ಗಳು ಬರುತ್ತವೆ. ಆದರೆ ಬೆಂಗಳೂರಿನ ಅಂಚಿನಲ್ಲಿನ ಪ್ರದೇಶಗಳ ಸ್ಥಿತಿಯೇ ಭಿನ್ನ. ಇಲ್ಲಿನ ಕಸದ ಸಮಸ್ಯೆ ಕುರಿತು ಯೋಚಿಸುವವರೇ ಇಲ್ಲ. ಉದಾಹರಣೆಗೆ ನಾವು ವಾಸವಿರುವ ಕೆಂಗೇರಿ ಸುತ್ತಮುತ್ತಲ ಪ್ರದೇಶವನ್ನೇ ಗಮನಿಸಿ. ಅಲ್ಲಿ ಕಸ ಸಂಗ್ರಹಿಸಲು ಯಾವುದೇ ವ್ಯಾನ್ ಪ್ರತಿದಿನ ಬರುವುದಿಲ್ಲ.

ವಾರಕ್ಕೊಮ್ಮೆ ಬಂದರೂ, ಅಷ್ಟೂ ದಿನ ಕಸವನ್ನು ನಾವು ಎಲ್ಲಿ ಸಂಗ್ರಹಿಸಿಡುವುದು? ಈಗೀಗ ಬೆಂಗಳೂರಿನ ಅಂಚಿನ ಪ್ರದೇಶಗಳಲ್ಲಿ ಲೇಔಟ್‌ಗಳ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ. ಆದರೆ ಈ ಲೇಔಟ್‌ಗಳ ಅಕ್ಕಪಕ್ಕದ ಸ್ಥಳಗಳು ಕಸ ತುಂಬಿದ ತಾಣಗಳೇ ಆಗಿರುತ್ತವೆ.

ಕಸ ಚೆಲ್ಲಬೇಡಿ, ಅಲ್ಲಿ ಇಲ್ಲಿ ಹಾಕಬೇಡಿ ಎನ್ನುತ್ತಾರೆ. ಹೌದು, ಇದನ್ನು ಒಪ್ಪೋಣ. ಹಾಗಿದ್ದ ಮೇಲೆ ಸಂಗ್ರಹವಾಗುವ ಕಸವನ್ನು ಎಲ್ಲಿ ಇಟ್ಟುಕೊಳ್ಳುವುದು? ಎಂಥವರೂ ವಾರಾನುಗಟ್ಟಲೆ ಕಸವನ್ನು ಮನೆಯಲ್ಲಿ ಇಟ್ಟು ಕೊಳಕು ವಾಸನೆ ಸೇವಿಸಲು ಇಷ್ಟಪಡುವುದಿಲ್ಲ. ಹಿಂದೆಲ್ಲಾ ಕಸದ ತೊಟ್ಟಿಗಳಿರುತ್ತಿದ್ದವು. ಈಗ ಅವೂ ಇಲ್ಲ. ಹಂದಿ ನಾಯಿಗಳು ಬರುತ್ತವೆ ಎಂದು ತೊಟ್ಟಿಗಳನ್ನೂ ಇಡುತ್ತಿಲ್ಲ.

ಪರ್ಯಾಯವಾಗಿ ಹುಟ್ಟಿಕೊಂಡ ಪಿಕ್‌ಅಪ್ ವಾಹನಗಳು ಹೆಸರಿಗೆ ಮಾತ್ರ ಇವೆ. ಅಪರೂಪಕ್ಕೆ ಬರುವ ವ್ಯಾನ್‌ನ ಸಿಬ್ಬಂದಿ ಕಸ ತೆಗೆದುಕೊಂಡು ಹೋಗುತ್ತಾರೆ ಎನ್ನುವಂತಿಲ್ಲ.


ಇವರು ಮನೆಗಳ ಬಳಿ ಬಂದು ಸೀಟಿ ಹೊಡೆದಾಗ ನೆಲಮಹಡಿಯಲ್ಲಿದ್ದವರು ಬೇಗ ಹೋಗಿ ಕಸ ಹಾಕುತ್ತಾರೆ. ಎರಡನೇ ಮೂರನೇ ಮಹಡಿಯಲ್ಲಿದ್ದವರು ಕೆಳಗೆ ಇಳಿದು ಬರುವಷ್ಟರಲ್ಲಿ  ಕಸ ಸಂಗ್ರಹಿಸುವ ನೌಕರರು ಹೊರಟೇ ಹೋಗಿರುತ್ತಾರೆ. ಸೀಟಿ ಶಬ್ದ ಮಾತ್ರ ಎಲ್ಲೋ ಕೇಳುತ್ತಿರುತ್ತದೆ.

ಸಂಗ್ರಹಿಸುವವರು ಸಿಗಲಿಲ್ಲ ಎಂದು ಮಹಡಿಯಿಂದ ತಂದ ಕಸವನ್ನು ಕೆಳಗೆ ಇಟ್ಟರೆ, ನಾಯಿಗಳು ಎಳೆದು ಗಲೀಜು ಮಾಡುತ್ತವೆ. ಕೆಳಗಿನ ಮನೆಯವರು ಕಸ ಇರಿಸಿಕೊಳ್ಳಲು ಒಪ್ಪುವುದಿಲ್ಲ. ಪರಿಸ್ಥಿತಿ ಹೀಗಿದ್ದ ಮೇಲೆ ಇನ್ನೇನು ಮಾಡುವುದು?

ಕಸವನ್ನು ಬೀದಿಯಲ್ಲಿ ಎಸೆಯಬಾರದು, ಕಸ ಎಸೆಯುವುದರಿಂದ ಭೂಮಿ ಮೇಲೆ ಕೆಟ್ಟ ಪರಿಣಾಮವಾಗುತ್ತದೆ, ಕಸದ ಅಸಮರ್ಪಕ ವಿಲೇವಾರಿಯಿಂದ ಆಗುವ ಸಮಸ್ಯೆಗಳ ಕುರಿತು ಪ್ರಜ್ಞಾವಂತರಾದ ನಮಗೂ ಅರಿವಿದೆ.

ಆದರೆ ಇಂಥ ಪರಿಸ್ಥಿತಿ ನಮ್ಮನ್ನು ಅನಿವಾರ್ಯವಾಗಿ ಕಸವನ್ನು ಗಂಟು ಮೂಟೆ ಕಟ್ಟಿ ರಸ್ತೆ ಬದಿ ಎಸೆಯುವಂತೆ ಮಾಡಿದೆ. ಕಸವನ್ನು ಬೀದಿ ಬದಿ ಎಸೆಯಬಾರದು ಎಂದು ನಾವು ಒಂದು– ಒಂದೂವರೆ ಕಿಲೋಮೀಟರ್‌ವರೆಗೂ ತೊಟ್ಟಿ ಅಥವಾ ಸಂಗ್ರಹ ಸ್ಥಳವನ್ನು ಹುಡುಕಿಕೊಂಡು ಹೋದೆವು. ಅಲ್ಲೆಲ್ಲೂ ಸಿಗಲೇ ಇಲ್ಲ. ಒಲ್ಲದ ಮನಸ್ಸಿನಿಂದ ಬೀದಿಯಲ್ಲೇ ಎಸೆದುಬರುವಂತಾಯಿತು. ಅಂಥ ಅಸಹಾಯಕ ಸ್ಥಿತಿ ನಮ್ಮದು.

ಕಸದಿಂದ ಗೊಬ್ಬರ ಮಾಡಿ ಎನ್ನುತ್ತಾರೆ. ಗೊಬ್ಬರ ತಯಾರಿಸಲು ಜಾಗ ಎಲ್ಲಿದೆ? ಅಪಾರ್ಟ್‌ಮೆಂಟ್‌ಗಳಲ್ಲಿದ್ದರಂತೂ ಗೊಬ್ಬರ ತಯಾರಿ ಮತ್ತು ಬಳಕೆ ಮಾತು ದೂರವೇ ಸರಿ.

ಹಸಿ ಕಸವಾದರೆ ಮಣ್ಣಿನೊಳಗೆ ಹೂತು ಒಂದು ಮಟ್ಟಿಗೆ ನಿರ್ವಹಣೆ ಮಾಡಬಹುದು. ಒಣ ಕಸದ ಕಥೆ? ಪ್ಲಾಸ್ಟಿಕ್, ಥರ್ಮಾಕೋಲ್, ಫೈಬರ್ ಇವನ್ನೆಲ್ಲ ಎಲ್ಲಿ ಹಾಕುವುದು?
ಪ್ಲಾಸ್ಟಿಕ್ ಸಂಗ್ರಹಿಸುವ ಕೆಲಸ ನಡೆಯುತ್ತಲೇ ಇಲ್ಲ. ಪ್ಲಾಸ್ಟಿಕ್ ಮರುಬಳಕೆ ಮಾಡುವ ಕೈಗಾರಿಕೆಗಳಲ್ಲಿ ಪ್ಲಾಸ್ಟಿಕ್‌ನ ಕೊರತೆ ಇದೆ. ಶೇಕಡಾ 30ರಷ್ಟು ಮಾತ್ರ ಅಲ್ಲಿ ಪ್ಲಾಸ್ಟಿಕ್ ಸಂಗ್ರಹಗೊಳ್ಳುತ್ತಿದೆಯಂತೆ. ಅಂದರೆ ಪ್ಲಾಸ್ಟಿಕ್ ಸಂಗ್ರಹಿಸುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದರ್ಥ.

ಆದ್ದರಿಂದ ಬೀದಿಯಲ್ಲಿ ಚಿಂದಿ ಆಯುವವರನ್ನು ಪ್ಲಾಸ್ಟಿಕ್ ಸಂಗ್ರಹಕ್ಕೆ ಸರಿಯಾಗಿ ಬಳಸಿಕೊಳ್ಳಬೇಕು. ಸಬ್ಸಿಡಿ ಹೆಚ್ಚು ಮಾಡುವ ಮೂಲಕ ಅವರನ್ನು ಪ್ರೇರೇಪಿಸಬೇಕು. ಆಗ ನೋಡಿ, ಎಲ್ಲ ಬೀದಿ ಮತ್ತು ಚರಂಡಿಗಳು ಸಹಜ ಎನ್ನುವಂತೆ ಪ್ಲಾಸ್ಟಿಕ್ ಮುಕ್ತವಾಗಿ ಸ್ವಚ್ಛಗೊಳ್ಳುತ್ತವೆ.

ನಗರವನ್ನು ಶುದ್ಧವಾಗಿ ಇರಿಸುವುದು ನಾಗರಿಕರ ಹೊಣೆಗಾರಿಕೆ ಎಂಬುದನ್ನು ನಾನು ನಿರಾಕರಿಸುವುದಿಲ್ಲ. ಅದೇ ಸಂದರ್ಭದಲ್ಲಿ ಇದು ಬಿಬಿಎಂಪಿಯ ಹೊಣೆಗಾರಿಕೆ ಎನ್ನುವುದನ್ನೂ ನಾನು ಮರೆಯುವುದಿಲ್ಲ.

ನಮ್ಮ ಮಹಾನಗರ ಪಾಲಿಕೆಗೆ ಸದಾಶಿವನಗರದಂಥ ಜಾಗಗಳ ಮೇಲೆಯೇ ಹೆಚ್ಚು ಆಸಕ್ತಿ. ಅಂಚಿನಲ್ಲಿ ಬದುಕುವ ನಮ್ಮಂಥವರು ಏನು ಮಾಡಬೇಕು. ಪಾಲಿಕೆ ಇಂಥ ಸ್ಥಳಗಳ ಕಡೆಗೂ ಕಣ್ಣು ಹಾಯಿಸಬೇಕಲ್ಲವೇ?

ಈ ಸಮಸ್ಯೆ ಹೇಳೋಣವೆಂದು ಸಂಬಂಧಪಟ್ಟವರ ಬಳಿಗೆ ಹೋದರೆ, ಇದು ನಮ್ಮ ಸುಪರ್ದಿಗೆ ಬರುವುದಿಲ್ಲ ಎನ್ನುವ ಉತ್ತರ ಸಿಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೂ ಒಬ್ಬರು ಹೆಲ್ತ್‌ ಇನ್‌ಸ್ಪೆಕ್ಟರ್ ಇರುತ್ತಾರೆ.

ಆದರೆ ಅವರು ಯಾರು, ಅವರ ಸಂಪರ್ಕ ಸಂಖ್ಯೆ ಏನು ಎಂಬುದು ನಾಗರಿಕರಿಗೆ ಗೊತ್ತಿರುವುದಿಲ್ಲ. ಕಷ್ಟಪಟ್ಟು ತಿಳಿದು ಮಾಡಿದರೂ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಈ ವಿಷಯದಲ್ಲಿ ಬಿಬಿಎಂಪಿಯನ್ನು ಎಷ್ಟು ಉಗ್ರವಾಗಿ ಖಂಡಿಸಿದರೂ ತಪ್ಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT