ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಚೀಟಿಗಳಲ್ಲಿ ಹುಲಿ ಸ್ಮರಣೆ

ಇಂದು ವಿಶ್ವ ಹುಲಿ ದಿನ
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಹುಲಿ ವಿಶ್ವದ ಜನಪ್ರಿಯ ಕಾಡುಪ್ರಾಣಿ. ಇದು ನಮ್ಮ ದೇಶದ ರಾಷ್ಟ್ರೀಯ ಪ್ರಾಣಿಯೂ ಹೌದು. ಬಾಂಗ್ಲಾ, ಮಲೇಶಿಯಾ ಹಾಗೂ ದಕ್ಷಿಣ ಕೊರಿಯಾ ದೇಶಗಳಲ್ಲೂ ಹುಲಿಗೆ ಇದೇ ಮನ್ನಣೆ. 2016ರ ಜಾಗತಿಕ ಹುಲಿ ಗಣತಿಯಂತೆ ಈಗ ಉಳಿದಿರುವ ಹುಲಿಗಳ ಸಂಖ್ಯೆ ಸುಮಾರು 3890. ಈ ಪೈಕಿ ಭಾರತ ಉಪಖಂಡದಲ್ಲಿ ಸುಮಾರು 2000 ಹುಲಿಗಳು ವಾಸಿಸುತ್ತಿವೆ.

ಅನಿಮಲ್‌ ಪ್ಲಾನೆಟ್‌ ಈಚೆಗೆ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ ಜನಪ್ರಿಯ ಪ್ರಾಣಿ ಎಂಬ ಗೌರವವನ್ನೂ ಹುಲಿ ಪಡೆದುಕೊಂಡಿದೆ. ಹುಲಿ ಉಳಿಸುವ ಆಂದೋಲನಕ್ಕೆ ವಿಶ್ವಸಂಸ್ಥೆಯೇ ಮುಂದಾಳು.

ಕಳೆದ ನೂರು ವರ್ಷದ ಅವಧಿಯಲ್ಲಿ ಬಂದೂಕುಗಳಿಗೆ ಜೀವತೆತ್ತ ಹುಲಿ ಸಂತತಿ ನಾಮಾವಶೇಷವಾಗುವುದನ್ನು ತಪ್ಪಿಸಲು ಅನೇಕ ದೇಶಗಳು ಹುಲಿಯನ್ನು ಅಸ್ತಿತ್ವದ ಆತಂಕ ಎದುರಿಸುತ್ತಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಿದವು. ಅದನ್ನು ಸಂರಕ್ಷಿಸುವ ಹತ್ತಾರು ಕಾರ್ಯಕ್ರಮಗಳೂ ಮೊದಲಾದವು. ಆಗ ಹುಲಿರಾಯನ ಬಗೆಗೆ ಅರಿವು ಮೂಡಿಸಲು ಅಂಚೆಚೀಟಿಗಳನ್ನು ಉಪಯೋಗಿಸಿಕೊಳ್ಳುವ ಪರಿಪಾಠ ಶುರುವಾಯಿತು.

ಅಂಚೆಚೀಟಿಗಳ ಮೂಲಕ ಹುಲಿಗೆ ಗೌರವ ಸೂಚಿಸಿದ ಮೊದಲ ದೇಶ ಮಲೇಷ್ಯಾ. 1891ರಲ್ಲಿ ಮಲೇಶಿಯಾ ಹುಲಿರಾಯನಿಗೆ ತನ್ನ ಅಂಚೆ ವ್ಯವಸ್ಥೆಯಲ್ಲಿ ಮಾನ್ಯತೆ ನೀಡಿತ್ತು.

ಹುಲಿ ಕೊಂದು ಅದರ ಜೊತೆ ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದ ಸಂಸ್ಥಾನದ ಮುಖ್ಯಸ್ಥರೇ ಭಾರತದಲ್ಲಿ ಅಂಚೆಚೀಟಿಯಲ್ಲಿ ಹುಲಿಯ ಚಿತ್ರ ಮೂಡಿಸಿದ ಮೊದಲಿಗರು ಎನ್ನುವುದು ಸೋಜಿಗದ ಸಂಗತಿ. ಭೂಪಾಲ್‌ ಸಂಸ್ಥಾನ 1940 ರಲ್ಲಿ ಹುಲಿ ಚಿತ್ರ ಇದ್ದ ಅಂಚೆಚೀಟಿ ಪ್ರಕಟಿಸಿತು.

ಭಾರತೀಯ ಅಂಚೆ ಇಲಾಖೆ ಪ್ರಥಮ ಬಾರಿಗೆ ಹುಲಿ ಇರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದು 1963ರಲ್ಲಿ. ಆ ಬಳಿಕ 1974ರಲ್ಲಿ ಡೆಫೆನಿಟೀವ್ (ನಿರಂತರ ಬಳಕೆ)  ಹುಲಿ ಅಂಚೆ ಚೀಟಿಗಳಲ್ಲಿ, ಜೊತೆಗೆ ಪೋಸ್‌್ಟಕಾರ್ಡುಗಳಲ್ಲಿ ಹುಲಿ ಚಿತ್ರಗಳನ್ನು ಉಪಯೋಗಿಸಲಾಗುತ್ತಿದೆ.

1993ರಲ್ಲಿ ‘ಹುಲಿ’ಯನ್ನು ಅಪಾಯದಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ವಿಶ್ವಸಂಸ್ಥೆ ಸೇರಿಸಿತು. ನಂತರ ಪ್ರತಿ ವರ್ಷ ಪ್ರಾಣಿ–ಪರಿಸರ ಸರಣಿಯಲ್ಲಿ 12 ವಿಶೇಷ ಅಂಚೆ ಚೀಟಿಗಳನ್ನು ಇಲಾಖೆ ಪ್ರಕಟಿಸುತ್ತಿದೆ.

ಅಮೆರಿಕ, ಕೆನಡಾ, ರಷ್ಯಾ ಹೀಗೆ ಹತ್ತಾರು ದೇಶಗಳು ಹುಲಿ ಚಿತ್ರವುಳ್ಳ ಬಗೆ ಬಗೆಯ ಅಂಚೆ ಚೀಟಿಗಳನ್ನು ಪ್ರಕಟಿಸಿದವು. ಏಷ್ಯಾ ಖಂಡದ ದೇಶಗಳೂ ಈ ವಿಚಾರದಲ್ಲಿ ಹಿಂದೆ ಬೀಳಲಿಲ್ಲ. ವಿವಿಧ ಮುಖಬೆಲೆಯ ಅಂಚೆ ಚೀಟಿಗಳಲ್ಲಿ ಹುಲಿಯನ್ನು ನೆನಪಿಸಲಾರಂಭಿಸಿದವು.

ಹಾಂಕಾಂಗ್‌ ವೈವಿಧ್ಯಪೂರ್ಣ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವಲ್ಲಿ ಸದಾ ಮುಂದು. 2010ರ ಲೂನಾರ್‌ ವರ್ಷದಲ್ಲಿ ಹುಲಿಗೆ ವಿಶೇಷ ಗೌರವ ನೀಡಿ ವಿಶ್ವದ ಗಮನ ಸೆಳೆಯಿತು. ಆಗ 22 ಕ್ಯಾರೆಟ್‌ ಚಿನ್ನವನ್ನು ಬಳಸಿ ಹುಲಿ ಪ್ರತಿಕೃತಿ ಇರುವ ಅಂಚೆ ಚೀಟಿಯನ್ನು ಹಾಂಕಾಂಗ್‌ ಹೊರ ತಂದಿತು. ಅದರ ಮುಖಬೆಲೆ 50 ಹಾಂಗ್ ಕಾಂಗ್‌  ಡಾಲರ್‌. ಚೀನಾ ಕೂಡ ಹುಲಿ ಅಂಚೆಚೀಟಿಗಳನ್ನು ಸಾಂದರ್ಭಿಕವಾಗಿ ಹೊರ ತರುವುದರಲ್ಲಿ ಹಿಂದೆ ಬಿದ್ದಿಲ್ಲ. ಮಕ್ಕಳೇ ಬಿಡಿಸಿದ ಹುಲಿ ಚಿತ್ರಗಳ ಅಂಚೆಚೀಟಿ ಸರಣಿಯನ್ನು ಬಿಡುಗಡೆ ಮಾಡಿತು. ‘ಲೂನಾರ್‌’ ವರ್ಷಾಚರಣೆ ಸಂದರ್ಭದಲ್ಲಿ ಹಲವು ಹುಲಿ ಅಂಚೆಚೀಟಿಗಳನ್ನು ಹೊರ ತಂದಿತ್ತು.

ತೈವಾನ್‌ನ ನಟೈಫೆ ಮೃಗಾಲಯದ ಶತಮಾನೋತ್ಸವ ಸಂದರ್ಭದಲ್ಲಿ ವಿನೂತನ ಪ್ರಯತ್ನ ನಡೆಯಿತು. ಆ ಮೃಗಾಲಯದಲ್ಲಿರುವ ಹುಲಿಯ ಚಿತ್ರವನ್ನೇ ಮುದ್ರಿಸಿದ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದಾಗ ವಿಶ್ವದ ಹಲವಾರು ದೇಶಗಳ ಸಂಗ್ರಾಹಕರು ಬೇಡಿಕೆ ಇಟ್ಟಿದ್ದರು.

ಸ್ವಾಭಾವಿಕ ಪರಿಸರದಲ್ಲಿರುವ ಹುಲಿಗಳನ್ನು ಸಂರಕ್ಷಣೆ ಮಾಡುವ ಯೋಜನೆಗಳು ಜಾರಿಗೆ ಬಂದು ದಶಕಗಳೇ ಕಳೆದು ಹೋಗಿದೆ. ಇದೀಗ ವಿಶ್ವ ವನ್ಯಜೀವಿ ಸಂಸ್ಥೆ ಮೊದಲ ಬಾರಿಗೆ 2016ರಲ್ಲಿ ಹುಲಿಗಳ ಸಂಖ್ಯೆ ವೃದ್ಧಿಯಾಗಿದೆ ಎಂಬ ಸುದ್ದಿಯನ್ನು ಹೊರ ಹಾಕಿದೆ. ಇದು ಹುಲಿ ಪ್ರಿಯರಿಗೆ ನಿಜಕ್ಕೂ ಸಂತಸದ ವಿಷಯ.        
*
ಹುಲಿ ಅಂಚೆಚೀಟಿ ಸಂಗ್ರಾಹಕ
ಇಲ್ಲೊಬ್ಬ ಯುವಕ ಹುಲಿಗಳ ಬಗ್ಗೆ ವಿಶ್ವದ ಹಲವು ದೇಶಗಳು ಪ್ರಕಟಿಸಿರುವ ಅಂಚೆಚೀಟಿಗಳನ್ನು ಸಂಗ್ರಹಿಸಿ, ಆ ಮೂಲಕ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಅವರ ಹೆಸರು ಡಾ.ಎಂ.ಕೆ.ಕಿಶನ್‌. ಬೆಂಗಳೂರಿನ ವಿಶ್ವೇಶ್ವರಪುರದ ನಿವಾಸಿ.

ವೃತ್ತಿಯಲ್ಲಿ ದಂತವೈದ್ಯರಾದ ಅವರು ಹುಲಿ ಮತ್ತು ನಿಸರ್ಗವನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅವರ ಬಳಿ ಈಗ ವಿವಿಧ ದೇಶಗಳ, ಬಗೆಬಗೆಯ ವಿನ್ಯಾಸಗಳ ಹುಲಿಚಿತ್ರವುಳ್ಳ 70 ಅಂಚೆ ಚೀಟಿಗಳಿವೆ.

‘ಚಿಕ್ಕ ವಯಸ್ಸಿನಿಂದಲೇ ಅಂಚೆ ಚೀಟಿ ಸಂಗ್ರಹದ ಹವ್ಯಾಸ ಇತ್ತು. ಕಳೆದ 3 ವರ್ಷದಿಂದ ಹುಲಿ ಅಂಚೆ ಚೀಟಿಗಳನ್ನು ಸಂಗ್ರಹಿಸುತ್ತಿರುವೆ’ ಎನ್ನುತ್ತಾರೆ ಕಿಶನ್.
ಪ್ಲಾಸ್ಟಿಕ್‌, ಹೊದಿಕೆ, ವಿವಿಧ ಬಣ್ಣಗಳ ಸಿಂಪಡಿಕೆ ಇರುವ ಚೀಟಿಗಳೂ ಅವರ ಸಂಗ್ರಹದಲ್ಲಿ ಸೇರಿವೆ. ಆಸ್ಟ್ರೇಲಿಯಾ ಮೃಗಾಲಯದಲ್ಲಿರುವ ಸುಮಾತ್ರ ಹುಲಿ ಜ್ಞಾಪಕಾರ್ಥ ಕೇವಲ 150 ಅಂಚೆ ಚೀಟಿ ಹೊರ ತರಲಾಗಿತ್ತು. ಅದರಲ್ಲಿ ಒಂದು ಇವರ ಸಂಗ್ರಹದಲ್ಲಿದೆ.

ಸುಮಾರು 40 ಮೊದಲ ದಿನದ ವಿಶೇಷ ಲಕೋಟೆ, ಲೇಸರ್‌ ಹಾಲೊಗ್ರಾಂ ಅಂಚೆ ಕಾರ್ಡ್‌, ಹುಲಿಯುಳ್ಳ ನಾಣ್ಯ. ಹುಲಿ ಠಸ್ಸೆ ಇರುವ ಅಂಚೆ ದಸ್ತಾವೇಜನ್ನೂ ಕಿಶನ್ ಸಂಗ್ರಹಿಸಿದ್ದಾರೆ. ಥಾಯ್ಲೆಂಡ್‌ನಲ್ಲಿರುವ ಹುಲಿ ದೇವಾಲಯ, ಭುವನೇಶ್ವರದ ನಂದನ್‌ ಕಾನನ್‌ನಲ್ಲಿರುವ ಬಿಳಿ ಹುಲಿ ವಿವರ, ಹುಲಿ ತಳಿ ಅಭಿವೃದ್ಧಿ ಕೇಂದ್ರಗಳ ಕುರಿತು ಅಪರೂಪದ ಮಾಹಿತಿಯನ್ನೂ ಇವರು ಸಂಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT