ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಯಲ್ಲಿ ಹಳ್ಳಿಗೂ ಇ-ಕಾಮರ್ಸ್

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಆನ್‌ಲೈನ್ ಶಾಪಿಂಗ್ ಆಕರ್ಷಣೆ ಹೊಸ ತಲೆಮಾರಿಗೆ, ಮಹಾ ನಗರಗಳಿಗೆ  ಮಾತ್ರ ಎನ್ನುವುದು ಪೂರ್ಣ ನಿಜವಲ್ಲ.  ಅವಕಾಶ ಗಳು ಇರದ ಕಾರಣ ಉಳಿದೆಡೆಗಳಿಗೂ ವ್ಯಾಪಿಸಿಕೊಳ್ಳುವುದು  ಇ-ಕಾಮರ್ಸ್ ಪ್ರಪಂಚಕ್ಕೆ ಈವರೆಗೂ ಸಾಧ್ಯವಾಗಿಲ್ಲ ಅಷ್ಟೆ.

ಒಂದೊಮ್ಮೆ ಎರಡು ಮತ್ತು ಮೂರನೇ ಹಂತದ ನಗರ ಗಳಲ್ಲಿನ ಗ್ರಾಹಕರು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳನ್ನು ಅವರ ಮನೆ ಬಾಗಿಲಿಗೇ ಮುಟ್ಟಿಸುವುದು ಸಾಧ್ಯವಾದರೆ!

ಆಗ ನಿಜಕ್ಕೂ ಆನ್‌ಲೈನ್‌ ಕಂಪೆನಿಗಳ ಪಾಲಿಗೆ ಅತ್ಯಂತ ವಿಶಾಲವಾದ ಮಾರುಕಟ್ಟೆ ಹಾಗೂ ‘ಸಾಗರದಷ್ಟು ಅವಕಾಶ ಗಳು’ ದೊರಕಿದಂತೆಯೇ ಸರಿ. ಇನ್ನೊಂದು ತುದಿಯಲ್ಲಿ ಚಿಕ್ಕ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಭಾಗದ ಜನರಿಗೂ, ತಮಗೆ ಬೇಕಾದ ವಸ್ತುಗ ಳನ್ನು ‘ಮಹಾ ನಗರ’ದ ಜನ ರಂತೆಯೇ ಕಡಿಮೆ ಬೆಲೆಗೆ, ಅದೂ ಕಡಿಮೆ ಬೆಲೆಯಲ್ಲಿ ಮನೆಯ ಬಾಗಿಲಿಗೇ ತರಿಸಿಕೊಳ್ಳಲು ಸಿಕ್ಕ ಖುಷಿಯ ಸಂದರ್ಭವೂ ಆಗಿರಲಿದೆ!

ಈ ದಿಶೆಯಲ್ಲಿ ದೇಶದ ಆನ್‌ಲೈನ್‌ ಮಾರುಕಟ್ಟೆಗೆ ದೊಡ್ಡ ಶಕ್ತಿಯಾಗಿ, ಅವಕಾಶಗಳ ಗಣಿಯಾಗಿ ಒದಗಿಬಂದಿದೆ ಭಾರತೀಯ ಅಂಚೆ ಇಲಾಖೆ.
ಸಾಮಾನ್ಯ ಅಂಚೆ ವಿಲೇವಾರಿ,  ಹಣ ವರ್ಗಾವಣೆ, ಉಳಿತಾಯ ಯೋಜನೆಗಳು ಮತ್ತು ವಿಮಾ ಸೇವೆಗಳನ್ನು ಒದಗಿ ಸುತ್ತಿರುವ ಅಂಚೆ ಇಲಾಖೆಯು ಬೃಹತ್ ಪ್ರಮಾಣದ ಸಂಪ ನ್ಮೂಲಗಳನ್ನು ಹೊಂದಿದೆ. ಗ್ರಾಮೀಣ ಪ್ರದೇಶದಲ್ಲೂ ಗಟ್ಟಿ ನೆಲೆ ಕಂಡುಕೊಂಡಿದೆ. ಹಾಗಾಗಿ ಈ ಎಲ್ಲ ಸಂಪನ್ಮೂಲಗಳನ್ನೂ ಸದ್ಬಳಕೆ ಮಾಡಿಕೊಂಡು ಇ–ವಾಣಿಜ್ಯ ಸೇವೆ ಒದಗಿಸಲು ಅಂಚೆ ಇಲಾಖೆ ಮುಂದಾಗಿದೆ. ಆ ಮೂಲಕ ದೊಡ್ಡ ಮಟ್ಟದ ಪರಿವರ್ತನೆಯ ಹಾದಿಯಲ್ಲಿ ಮೊದಲಡಿ ಇಟ್ಟಿದೆ.

ವಿಶ್ವಾಸಾರ್ಹತೆ ಮತ್ತು ಬೃಹತ್ ಸಂಪರ್ಕದ ಜಾಲವನ್ನೇ ಬಂಡವಾಳ ಮಾಡಿಕೊಂಡು ಅಂಚೆ ಇಲಾಖೆ ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಯುವ ಪೀಳಿಗೆಯನ್ನು ಆಕರ್ಷಿಸಿರುವ ಆನ್‌ಲೈನ್ ವಹಿವಾಟಿನಲ್ಲಿನ ವಿಪುಲ ಅವಕಾಶ ಗಳನ್ನು ಬಳಸಿಕೊಂಡು ವರಮಾನ ಹೆಚ್ಚಿಸಿಕೊಳ್ಳಲು ಇಲಾಖೆ ಇತ್ತ ಚಿತ್ತ ಹರಿಸಿರುವುದು ಗಮನಾರ್ಹ.

ಮೊದಲ ಹಂತದಲ್ಲಿ ಇ–ಕಾಮರ್ಸ್‌ ವಹಿವಾಟಿನಲ್ಲಿ ತೊಡಗಿರುವ ಖಾಸಗಿ ಕಂಪೆನಿಗಳು ನೀಡುವ ವಸ್ತುಗಳನ್ನು ವಿಲೇವಾರಿ ಮಾಡುವ ಮೂಲಕ ಅಂಚೆ ಇಲಾಖೆ ‘ಇ–ವಾಣಿಜ್ಯ’ ಕ್ಷೇತ್ರ ಪ್ರವೇಶಿಸಿದೆ. ಈ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್.ಕಾಂ, ಮೈಂತ್ರ.ಕಾಂ, ಸ್ನ್ಯಾಪ್‌ಡೀಲ್.ಕಾಂ ಅಮೆಜಾನ್ ಮೊದಲಾದ ಇ-ಕಾಮರ್ಸ್ ಕಂಪೆನಿಗಳ ಜತೆ ಅಂಚೆ ಇಲಾಖೆ ಒಪ್ಪಂದವನ್ನೂ ಮಾಡಿಕೊಂಡಿದೆ.

‘ಇ’ ವಹಿವಾಟಿಗೆ ಆ್ಯಪ್‌

ಅಂಚೆ ಇಲಾಖೆ ಇ–ವಾಣಿಜ್ಯಕ್ಕಾಗಿ ಮೊಬೈಲ್‌ ಅಪ್ಲಿಕೇಷನ್‌ಗಾಗಿ ವಿಶೇಷ ಆ್ಯಪ್‌ ರೂಪಿಸಲಿದೆ. ಈ ಮೊಬೈಲ್‌ ಆಪ್‌  ಆ್ಯಂಡ್ರಾಯ್ಡ್‌ ಆಧಾರಿತವಾಗಿದೆ. ಇದರಲ್ಲಿ ಉತ್ಪನ್ನಗಳ ವಿಲೇವಾರಿಯಾಗುವ ಸಮಯ, ಅಂಚೆ ಕಚೇರಿಗಳ ವಿವರ ಮುಂತಾದ ವಿಶೇಷ ಮಾಹಿತಿಗಳನ್ನು ಒಳಗೊಂಡಿದೆ.

ಇ-ಕಾಮರ್ಸ್‌ ಕಂಪೆನಿಗಳು ವಿತರಿಸುವ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವುದು ಮತ್ತು ‘ಕ್ಯಾಷನ್ ಆನ್ ಡೆಲಿವರಿ’ ಸೇವೆ ನೀಡುವುದು ಅಂಚೆ ಇಲಾಖೆ ಒಪ್ಪಂದದ ಸಾರಾಂಶ. ಪ್ರಾಯೋಗಿಕವಾಗಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಸ್ಪೀಡ್ ಪೋಸ್ಟ್ ಮೂಲಕ ವಿತರಿಸುವ ಕಾರ್ಯ ನಡೆಸುತ್ತಿದೆ. ಶೀಘ್ರವೇ ದೇಶದ ವಿವಿಧೆಡೆಗೂ ಸೇವೆಯನ್ನು ವಿಸ್ತರಿಸಲಿದೆ.

ರೂ500 ಕೋಟಿ ವರಮಾನ
ವಿವಿಧ ಕಂಪೆನಿಗಳ  ಪಾರ್ಸಲ್‌ಗಳನ್ನು ವಿಲೇವಾರಿ ಮಾಡುವ ಮೂಲಕವೇ 2014–15ನೇ ಸಾಲಿನಲ್ಲಿ ಅಂಚೆ ಇಲಾಖೆ ರೂ500 ಕೋಟಿ ವರಮಾನ ಗಳಿಸಿದೆ.

ಸದ್ಯಕ್ಕೆ ಕೈಗೊಂಡಿರುವ ಇ-ಕಾಮರ್ಸ್‌ ಸರಕು ವಿತರಣೆ ಯೋಜನೆ ಯಶಸ್ವಿಯಾದರೆ ಅಂಚೆ ಇಲಾಖೆಯೇ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್‌ ಮಾರುಕಟ್ಟೆ ಪ್ರವೇಶಿಸಲು ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಅಂಚೆ ತರಬೇತಿ ಕೇಂದ್ರಗಳನ್ನು ತೆರೆದು ಸಿಬ್ಬಂದಿಗೆ ತರಬೇತಿ ನೀಡಲು ನಿರ್ಧರಿಸಿದೆ.
ವಿಶೇಷ ವಹಿವಾಟಿಗಾಗಿಯೇ ಮೊಟ್ಟಮೊದಲ ‘ಇ–ವಾಣಿಜ್ಯ’ ಕೇಂದ್ರವನ್ನು ನವದೆಹಲಿಯ ಸಫ್ದರ್‌ಜಂಗ್‌ ಪ್ರದೇಶದಲ್ಲಿ ಆರಂಭಿಸಲಾಗಿದೆ.
ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಕೇಂದ್ರ ನಿತ್ಯ 30 ಸಾವಿರ ಪಾರ್ಸೆಲ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಸಾಮರ್ಥ್ಯವನ್ನು ದುಪ್ಪಟ್ಟು ಗೊಳಿಸಿಕೊಳ್ಳಲಿದೆ. ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲೂ ಅಂಚೆಯ ಇ-ವಾಣಿಜ್ಯ ಕೇಂದ್ರಗಳು ಆರಂಭ ಗೊಳ್ಳಲಿವೆ.

ಇ–ವಾಣಿಜ್ಯ ಕೇಂದ್ರದ ಮೂಲಕ 24 ಗಂಟೆ ಒಳಗೆ ಸರಕು ವಿತರಣಾ ಸೇವೆ ಒದಗಿಸಲಿದೆ. ತಂತ್ರಾಂಶ ಆಧಾರಿತ ವಿತರಣಾ ವ್ಯವಸ್ಥೆ ಇದಾಗಿರುವುದರಿಂದ ಸರಕು ವಿತರಣೆಯ ಯಾವ ಹಂತದಲ್ಲಿದೆ ಎಂಬುದರ ಬಗೆಗೂ ಮಾಹಿತಿ ಪಡೆಯಬಹುದು.

‘ಈಗ ಹಳ್ಳಿಗಳಲ್ಲೂ ಇಂಟರ್‌ನೆಟ್ ಸೌಲಭ್ಯ ದೊರೆಯುತ್ತಿದೆ ಮತ್ತು ಕಂಪೆನಿಗಳು ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿವೆ. ಮುಖ್ಯವಾಗಿ ಒಂದೇ ಸೂರಿನ ಅಡಿಯಲ್ಲಿ ಬಹುತೇಕ ವಸ್ತುಗಳು ದೊರೆಯುತ್ತಿವೆ. ಹೀಗಾಗಿ ಗ್ರಾಹಕರು ಆನ್‌ಲೈನ್ ಶಾಪಿಂಗ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ಉತ್ಪನ್ನಗಳನ್ನು ವಿಲೇವಾರಿ ಮಾಡುವುದು ಖಾಸಗಿ ಕಂಪೆನಿಗಳಿಗೆ ದೊಡ್ಡ ಸವಾಲು. ಇದನ್ನೇ ಇಂಡಿಯಾ ಪೋಸ್ಟ್‌ ಬಂಡವಾಳ ಮಾಡಿಕೊಂಡಿದೆ’ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಇ– ವಾಣಿಜ್ಯ ವಹಿವಾಟನ್ನು ಸ್ವತಂತ್ರವಾಗಿ ನಡೆಸಲು ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಇದಕ್ಕಾಗಿಯೇ ಅಗತ್ಯವಿರುವ ವಿಶೇಷ ತಂತ್ರಜ್ಞಾನ ಸಹ ರೂಪಿಸಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗ ದಿದ್ದರೆ ಉಳಿಗಾಲವಿಲ್ಲ’ ಎನ್ನುವುದು ಇಲಾಖೆಯ ಹಿರಿಯ ಅಧಿಕಾರಗಳ ಅಭಿಮತ.

35 ನಗರಗಳಿಗೆ ಸೀಮಿತ
ಸದ್ಯಕ್ಕೆ ಇ–ವಾಣಿಜ್ಯದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಕಂಪೆನಿ ಗಳು ದೇಶದಲ್ಲಿನ ಸುಮಾರು 35 ನಗರಗಳಲ್ಲಿ ಮಾತ್ರ ವಹಿವಾಟು ನಡೆಸುತ್ತಿವೆ. ಈ ನಗರಗಳ ಹೊರತಾಗಿ ಉತ್ಪನ್ನಗಳ ವಿಲೇವಾರಿ ಕಷ್ಟಸಾಧ್ಯವಾಗುತ್ತಿದೆ. ಅಂದರೆ ಅಂಚೆ ಇಲಾಖೆಯ ಸುಮಾರು ಆರು ಸಾವಿರ ಪಿನ್‌ಕೋಡ್‌ಗಳಿರುವ ಸ್ಥಳಗಳಿಗೆ ಮಾತ್ರ ವಿಲೇವಾರಿಯಾಗು ತ್ತಿವೆ. ಉಳಿದ 19 ಸಾವಿರ ಪಿನ್‌ಕೋಡ್‌ ಸ್ಥಳಗಳಿಗೆ ವಸ್ತುಗಳನ್ನು ತಲು ಪಿಸಲು ಸಾಧ್ಯವಾಗುತ್ತಿಲ್ಲ. ಇವು ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಸೇರಿದ್ದು, ವಿಲೇವಾರಿ ಸುಲಭವಲ್ಲ. ಇದಕ್ಕಾಗಿಯೇ ಹೆಚ್ಚಿನ ಸಿಬ್ಬಂದಿ, ಸಾರಿಗೆ ಸೌಲಭ್ಯ ಒದಗಿಸಬೇಕು. ಹೀಗಾಗಿಯೇ ಖಾಸಗಿ ಕಂಪೆನಿಗಳು  ತಾವೇ ವಿಧಿಸಿಕೊಂಡಿರುವ ಗಡಿಯನ್ನು ದಾಟಲು ಯತ್ನಿಸುತ್ತಿಲ್ಲ. ಆದ್ದರಿಂದ ಖಾಸಗಿ ಕಂಪೆನಿಗಳು ಮಾನವ ಸಂಪನ್ಮೂಲ ಸೇರಿದಂತೆ ಸಕಲ ಸೌಲಭ್ಯ ಹೊಂದಿರುವ ಅಂಚೆ ಇಲಾಖೆಯನ್ನು ಬಳಸಿಕೊಳ್ಳಲು ಮುಂದಾಗಿವೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಇ–ವಾಣಿಜ್ಯ ಸೇವೆಗೂ ಇದು ಅಪಾರ ಅನುಕೂಲ ಕಲ್ಪಿಸಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬೃಹತ್‌ ಆನ್‌ಲೈನ್ ವಹಿವಾಟು!
ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುವ ಆನ್‌ಲೈನ್‌ ವಹಿವಾಟು ಅಪಾರ ವೇಗದಲ್ಲಿ ಬೆಳೆಯುತ್ತಿದೆ. ಪ್ರಸ್ತುತ ಭಾರತದ ಇ-ಕಾಮರ್ಸ್‌ ಮಾರುಕಟ್ಟೆಯು ರೂ1.27 ಲಕ್ಷ ಕೋಟಿ ಪ್ರಮಾಣದ್ದಾಗಿದೆ. ಇದು ಮುಂದಿನ 15 ವರ್ಷಗಳಲ್ಲಿ 15 ಪಟ್ಟು ವೃದ್ಧಿ ಕಾಣಲಿದ್ದು, ರೂ19,05 ಲಕ್ಷ ಕೋಟಿಗಳಷ್ಟು ಗಾತ್ರಕ್ಕೆ ತಲುಪಲಿದೆ. ಅಂದರೆ, 2030ರ ವೇಳೆಗೆ ಇ–ಕಾಮರ್ಸ್ ಮಾರುಕಟ್ಟೆಯು ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ (ಜಿಡಿಪಿಗೆ) ಶೇ 2.5ರಷ್ಟು ಕೊಡುಗೆ ನೀಡುವ ನಿರೀಕ್ಷೆ ಇದೆ ಎಂಬುದು ಸದ್ಯದ ಅಂದಾಜು.

ಖಾಸಗಿ ಪ್ರಾಬಲ್ಯದ ಮಾರುಕಟ್ಟೆಯಲ್ಲಿ ಅಂಚೆಗೆ ಪೈಪೋಟಿ ಸಾಧ್ಯವೇ?

ಖಾಸಗಿ ಕಂಪೆನಿಗಳು ಮಾರುಕಟ್ಟೆ ಹಿಡಿತ ಸಾಧಿಸುತ್ತಿರುವ ಸಂದರ್ಭದಲ್ಲಿ ಅಂಚೆ ಇಲಾಖೆಗೆ ಇ–ವಾಣಿಜ್ಯ ಕ್ಷೇತ್ರ ಸವಾಲಾಗಲಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.

ಚೀನಾದ ಎರಡನೇ ಅತಿ ದೊಡ್ಡ ಶ್ರೀಮಂತ, ಆಲಿಬಾಬಾ ಇ–ವಾಣಿಜ್ಯ ಸಂಸ್ಥೆಯ ಮಾಲೀಕ ಜಾಕ್ ಮಾ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ದೇಶದ ‘ಇ–ವಾಣಿಜ್ಯ’ ವಿಭಾಗದಲ್ಲಿ ಗಟ್ಟಿಯಾಗಿ ನೆಲೆ ನಿಂತಿರುವ ಫ್ಲಿಫ್ ಕಾರ್ಟ್, ಅಮೆಝಾನ್ ಮತ್ತು ಸ್ನ್ಯಾಪ್‌ಡೀಲ್‌ಗೆ 'ಆಲಿಬಾಬಾ'  ಪೈಪೋಟಿ ನೀಡಲು ಸಜ್ಜಾಗಿದೆ.

ಇಂತಹ ಸನ್ನಿವೇಶದಲ್ಲಿ ಅಂಚೆ ಇಲಾಖೆ ಪೂರ್ವ ಸಿದ್ಧತೆಯೊಂದಿಗೆ ಮಾರುಕಟ್ಟೆಯ ಆಳ ಅಗಲವನ್ನು ಅರಿತು ಯಶಸ್ವಿಯಾಗುವುದೇ ಎನ್ನುವುದು ಸಹ ಕುತೂಹಲ ಮೂಡಿಸ

ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿರುವ ಸ್ಮಾರ್ಟ್ ಫೋನ್‌ಗಳು, ಮೂಲಸೌಕರ್ಯಗಳಲ್ಲಿ ಸುಧಾರಣೆ ಮತ್ತು ಆನ್‌ಲೈನ್‌ನಲ್ಲಿ ವಹಿವಾಟು ನಡೆಸುವುದು ಸುಲಭವಾಗುತ್ತಿರುವುರಿಂದ ಇ–ವಾಣಿಜ್ಯ ಕ್ಷೇತ್ರ  ಬೃಹದಾಕಾರವಾಗಿ ಬೆಳೆಯುತ್ತಿದೆ. ಮುಂದಿನ 15 ವರ್ಷಗಳಲ್ಲಿ  ಕನಿಷ್ಠ 30 ಕೋಟಿ ಗ್ರಾಹಕರು ಆನ್‌ಲೈನ್‌ ವಹಿವಾಟು ನಡೆಸುತ್ತಾರೆ ಎಂದು ಗೋಲ್ಡಮನ್‌ ಸ್ಯಾಷ್‌‌ ಸಂಸ್ಥೆಯ ವರದಿ ತಿಳಿಸಿದೆ.

2030ರ ವೇಳೆಗೆ ದೇಶದಲ್ಲಿನ 100 ಕೋಟಿ ಜನರು ಡಿಜಿಟಲ್ ವ್ಯವಸ್ಥೆ ಹೊಂದಿರುತ್ತಾರೆ. ಆ ಮೂಲಕ ಭಾರತ ಡಿಜಿಟಲ್‌ ವ್ಯವಸ್ಥೆ ಹೊಂದಿದ ವಿಶ್ವದ ಎರಡನೇ ದೊಡ್ಡ ದೇಶವಾಗಿರಲಿದೆ ಎಂಬುದನ್ನು ಅಧ್ಯಯನ ವರದಿ ತಿಳಿಸಿದೆ.

ಇದನ್ನು ಸಮರ್ಥಿಸುವಂತೆ ಅಸೋಚಾಮ್‌–ಡೆಲಾಯ್ಟ್‌ ಜಂಟಿ ಅಧ್ಯಯನ ವರದಿ ಸಹ, ವೇಗವಾಗಿ ಬೆಳೆಯುತ್ತಿರುವ ಇ–ವಾಣಿಜ್ಯ ಕ್ಷೇತ್ರ ಈ ವರ್ಷಾಂತ್ಯ ವೇಳೆಗೆ ದೇಶದಲ್ಲಿ ರೂ1.02 ಲಕ್ಷ ಕೋಟಿಗಳಷ್ಟು ವಹಿವಾಟು ನಡೆಸುವ ನಿರೀಕ್ಷೆ ಇದೆ ಎಂದು  ತಿಳಿಸಿದೆ.

ಅಮೆರಿಕ, ಯುರೋಪ್ ಮತ್ತು ಜಪಾನ್‌ ಮೂಲದ ಇ–ವಾಣಿಜ್ಯ ಕಂಪೆನಿಗಳು  ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಭಾರತ, ಬ್ರೆಜಿಲ್‌ ಮತ್ತು ಚೀನಾದತ್ತ ಮುಖ ಮಾಡಿರುವುದು ಸಹ ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಲಿದೆ.

30 ಕೋಟಿ ಮಂದಿ ನೆಟ್‌ ಬಳಕೆ
ದೇಶದಲ್ಲಿ 2014ರಲ್ಲಿ 30 ಕೋಟಿ ಇಂಟರ್‌ನೆಟ್‌ ಬಳಕೆದಾರರಿದ್ದರು. ಈ ಸಂಖ್ಯೆ ಪ್ರತಿ ದಿನಕ್ಕೂ ಹೆಚ್ಚಾಗುತ್ತಿದೆ. 23.5 ಕೋಟಿ ಜನರು ಮೊಬೈಲ್‌ ಮೂಲಕ ಇಂಟರ್‌ನೆಟ್‌ ಬಳಸುತ್ತಾರೆ. ಹೀಗಾಗಿ ಮೊಬೈಲ್‌ ಆಪ್‌ಗಳನ್ನು ರೂಪಿಸಲು ಎಲ್ಲ ಇ–ವಾಣಿಜ್ಯ ಕಂಪೆನಿಗಳು ಹೆಚ್ಚು ಗಮನಹರಿಸಿವೆ ಎಂದು ವರದಿ ತಿಳಿಸಿದೆ.

ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ದೇಶದ ಮೂಲೆ ಮೂಲೆಗಳ ಗ್ರಾಹಕರನ್ನು ತಲುಪಲು ಸಾಧ್ಯ. ಫ್ಲಿಪ್‌ಕಾರ್ಟ್‌, ಅಮೆಝಾನ್‌ ಮತ್ತು ಜಬಾಂಗ್‌ ಕಂಪೆನಿಗಳು ಸುಮಾರು ಅರ್ಧದಷ್ಟು ವರಮಾನವನ್ನು ಮೊಬೈಲ್‌ ಶಾಪಿಂಗ್‌ನಿಂದ ನಡೆಯುವ ವಹಿವಾಟಿನಿಂದ ಗಳಿಸುತ್ತಿವೆ ಎಂದು ವರದಿ ತಿಳಿಸಿದೆ.

ಅಂಚೆ ಇಲಾಖೆಯ ಸಾಮರ್ಥ್ಯ
ಭಾರತೀಯ ಅಂಚೆ ಇಲಾಖೆ ದೇಶದಲ್ಲಿ 1.55 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿದೆ.  ಇದರಲ್ಲಿ 1.39 ಲಕ್ಷ ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ 23,344 ಅಂಚೆ ಕಚೇರಿಗಳಿದ್ದವು. ಈ ಕಚೇರಿಗಳು ಸಹ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದವು. ಸ್ವಾತಂತ್ರ್ಯ ದೊರೆತ ನಂತರ ಸುಮಾರು ಏಳು ಪಟ್ಟು ಬೆಳವಣಿಗೆಯಾಗಿದೆ. ಸರಾಸರಿ 21.21 ಚದರ ಕಿಲೋ ಮೀಟರ್‌ ವ್ಯಾಪ್ತಿಯ  7175 ಜನರಿಗೆ ಒಂದು ಅಂಚೆ ಕಚೇರಿ ಸೇವೆ ಒದಗಿಸುತ್ತದೆ. ಕರ್ನಾಟಕದಲ್ಲಿ 1700 ಗಣಕೀಕೃತ ಅಂಚೆ ಕಚೇರಿಗಳಿವೆ. ಜತೆಗೆ 7900 ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿವೆ.

ರಾಜ್ಯದಲ್ಲಿ 2 ಲಕ್ಷ ವಸ್ತು ವಿಲೇವಾರಿ
ಕರ್ನಾಟಕದಲ್ಲಿ ಈಗ  ಅಮೆಜಾನ್, ಮೈಂತ್ರ.ಕಾಮ್, ಫ್ಲಿಪ್‌ಕಾರ್ಟ್‌ ಮತ್ತು ಸ್ನಾಪ್‌ಡೀಲ್‌ಗಳ ಸುಮಾರು 2 ಲಕ್ಷ ವಸ್ತುಗಳನ್ನು ಪ್ರತಿ ತಿಂಗಳು ಅಂಚೆ ಇಲಾಖೆ ವಿಲೇವಾರಿ ಮಾಡುತ್ತಿದೆ. ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಈ ಉತ್ಪನ್ನಗಳು ವಿಲೇವಾರಿಯಾಗುತ್ತಿವೆ.
ಇದಕ್ಕಾಗಿಯೇ ಈ ನಾಲ್ಕು ಕಂಪೆನಿಗಳ ಹಾಗೂ ಅಂಚೆ ಇಲಾಖೆಯ ವಿಶೇಷ ತಂತ್ರಜ್ಞಾನವನ್ನು ಒಂದುಗೂಡಿಸಲಾಗಿದೆ. ಇದರಿಂದ ವಸ್ತುಗಳನ್ನು ಸುಲಭವಾಗಿ ವಿಲೇವಾರಿ ಮಾಡಲು ಸಾಧ್ಯವಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಈ ನಾಲ್ಕು ಕಂಪೆನಿಗಳಿಂದ ಅಂದಾಜು ರೂ2ರಿಂದ 5 ಕೋಟಿ ವರಮಾನ ದೊರೆಯುತ್ತಿದೆ.

ಜನತೆ ಇನ್ನೂ ಅಂಚೆ ಇಲಾಖೆ ಮೇಲೆ  ಅಪಾರ ವಿಶ್ವಾಸವಿಟ್ಟಿದ್ದಾರೆ. ಮಾವೋವಾದಿಗಳು ಸಹ ಅಂಚೆ ಕಚೇರಿಗಳ ಮೇಲೆ ದಾಳಿ ನಡೆಸಲು ಹಿಂಜರಿಯುತ್ತಾರೆ. ದಾಳಿ ನಡೆಸಿದರೆ ಜನರ ಅನುಕಂಪ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಮಾವೋವಾದಿಗಳಿಗೂ ಗೊತ್ತು. ವಿಶ್ವಾಸಾರ್ಹತೆ ಮೇಲೆ ಸಾಗುತ್ತಿರುವ ಅಂಚೆ ಇಲಾಖೆ  ಇ–ವಾಣಿಜ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ರವಿಶಂಕರ್‌ ಪ್ರಸಾದ್‌,
 ಸಂಪರ್ಕ ಖಾತೆ ಸಚಿವ

ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳು ಇ–ಕಾಮರ್ಸ್‌ ವಹಿವಾಟಿನ ದಿಕ್ಕನ್ನೇ ಬದಲಾಯಿಸಿವೆ
ಡಿ.ಎಸ್‌. ರಾವತ್‌, 
ಅಸೋಚಾಮ್ ಮಹಾ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT