ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕೋರ್ಟ್‌ಗೆ ಕಾಲಿಯಾ ಪ್ರಕರಣ?

Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಕ್ಯಾಪ್ಟನ್ ಸೌರಭ್ ಕಾಲಿಯಾ, 1999ರ ಕಾರ್ಗಿಲ್ ಯುದ್ಧದಲ್ಲಿ  ಪ್ರಾಣದ ಹಂಗನ್ನೇ ತೊರೆದು ಶತ್ರುವಿನ ವಿರುದ್ಧ ಹೋರಾಡಿದ ಯೋಧ. ಬಳಿಕ ದುರದೃಷ್ಟವಶಾತ್ ಪಾಕಿಸ್ತಾನದ ಸೈನಿಕರ ಕೈವಶವಾಗಿ ಬರ್ಬರವಾಗಿ ಹತ್ಯೆಗೀಡಾದವರು.

ಪಾಕಿಸ್ತಾನದ ಈ ಅಮಾನವೀಯ ಕೃತ್ಯವನ್ನು ಕೆಲವು ತಾಂತ್ರಿಕ ತೊಡಕುಗಳಿಂದಾಗಿ, ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಭಾರತಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಆದರೆ ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ ಒಪ್ಪಿಗೆ ಕೊಟ್ಟಿದ್ದೇ ಆದರೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿದ್ಧ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೇಳಿದೆ. ಇದು ಅಂತರರಾಷ್ಟ್ರೀಯ ನ್ಯಾಯಾಲಯದ ಕಾರ್ಯ ನಿರ್ವಹಣೆ, ಕಾರ್ಯವ್ಯಾಪ್ತಿ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಒಂದು ಉತ್ತಮ ಅವಕಾಶವನ್ನು ಮಾಡಿಕೊಟ್ಟಿದೆ.

ರಾಷ್ಟ್ರ– ರಾಷ್ಟ್ರಗಳ ಮಧ್ಯೆ ಸಂಪರ್ಕ ಹೆಚ್ಚುತ್ತಿದ್ದರೂ ಅವುಗಳ ನಡುವಿನ ಭಿನ್ನಾಭಿಪ್ರಾಯಗಳು ಉಲ್ಬಣಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ವಿವಾದಗಳನ್ನು ಬಗೆಹರಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ, ಸ್ಥಾಯಿ ಮಧ್ಯಸ್ಥಿಕೆ ನ್ಯಾಯಾಲಯ ಹಾಗೂ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ ಅತ್ಯಂತ ಪ್ರಮುಖವಾದವು.

ಅಂತರರಾಷ್ಟ್ರೀಯ ನ್ಯಾಯಾಲಯ
ವಿಶ್ವಸಂಸ್ಥೆಯ ಜೊತೆಗೆ 1945ರಲ್ಲಿ ಅಸ್ತಿತ್ವಕ್ಕೆ ಬಂದ ಅಂತರರಾಷ್ಟ್ರೀಯ ನ್ಯಾಯಾಲಯ ನೆದರ್‌ಲೆಂಡ್‌ನ ಹೇಗ್ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಾರತವೂ ಸೇರಿದಂತೆ ವಿಶ್ವಸಂಸ್ಥೆಯ ಎಲ್ಲ 193 ಸದಸ್ಯ ರಾಷ್ಟ್ರಗಳೂ ಈ ನ್ಯಾಯಾಲಯದ ಸದಸ್ಯರಾಗಿದ್ದು, 15 ನ್ಯಾಯಮೂರ್ತಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಭಾರತದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಲವೀರ್ ಭಂಡಾರಿ ಈ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಅಂತರರಾಷ್ಟ್ರೀಯ ನ್ಯಾಯಾಲಯ ಮುಖ್ಯವಾಗಿ ರಾಷ್ಟ್ರ-ರಾಷ್ಟ್ರಗಳ ನಡುವಿನ ವಿವಾದಗಳನ್ನು ಇತ್ಯರ್ಥಪಡಿಸುತ್ತದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಅಥವಾ ವ್ಯಕ್ತಿ ಹಾಗೂ ದೇಶದ ನಡುವಿನ ವಿವಾದಗಳನ್ನು ತೀರ್ಮಾನಿಸುವ ಅಧಿಕಾರ ವ್ಯಾಪ್ತಿಯನ್ನು ಇದು ಹೊಂದಿಲ್ಲ. ಆದಾಗ್ಯೂ ತನ್ನ ನಾಗರಿಕರ ಪರವಾಗಿ ಒಂದು ದೇಶ ಮತ್ತೊಂದು  ದೇಶದ ವಿರುದ್ಧ ಇಲ್ಲಿ ದಾವೆ ಹೂಡಬಹುದಾಗಿದೆ.

ಅಂತರರಾಷ್ಟ್ರೀಯ ಒಪ್ಪಂದಗಳು, ಅಂತರರಾಷ್ಟ್ರೀಯ ಸಂಪ್ರದಾಯಗಳು, ನಾಗರಿಕ ರಾಷ್ಟ್ರಗಳು ಒಪ್ಪಿದ ಕಾನೂನಿನ ತತ್ವಗಳು, ವಿವಿಧ ರಾಷ್ಟ್ರಗಳ ನ್ಯಾಯಾಲಯಗಳ ತೀರ್ಪುಗಳು ಮತ್ತು ವಿದ್ವಾಂಸರ ಬರಹಗಳ ಆಧಾರದ ಮೇಲೆ ಅಂತರರಾಷ್ಟ್ರೀಯ ನ್ಯಾಯಾಲಯ ತನ್ನ ತೀರ್ಪನ್ನು ನೀಡುತ್ತದೆ.

ನಮ್ಮ ಸ್ಥಳೀಯ ನ್ಯಾಯಾಲಯಗಳಂತೆ, ಅಂತರರಾಷ್ಟ್ರೀಯ ನ್ಯಾಯಾಲಯವೂ ಸಾರ್ವಭೌಮ ರಾಷ್ಟ್ರಗಳ ಮೇಲೆ ತನ್ನಷ್ಟಕ್ಕೇ ನ್ಯಾಯಾಧಿಕಾರವನ್ನು ಚಲಾಯಿಸುವಂತಿಲ್ಲ. ಇದಕ್ಕೆ ಆಯಾ ರಾಷ್ಟ್ರಗಳ ಒಪ್ಪಿಗೆ ಬೇಕು. ಹೀಗಾಗಿ ಎಂತಹ ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ ವಿವಾದಗಳನ್ನು ಇತ್ಯರ್ಥಪಡಿಸಬಹುದು ಎಂದರೆ, ಎರಡು ಅಥವಾ ಹೆಚ್ಚು ರಾಷ್ಟ್ರಗಳು ಈ ಕುರಿತು ವಿಶೇಷ ಒಪ್ಪಂದ ಮಾಡಿಕೊಂಡರೆ, ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದಗಳಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗುವ ಆಯ್ಕೆ ಇದ್ದರೆ ಅಂತಹ ವಿವಾದಗಳನ್ನು ಬಗೆಹರಿಸಬಹುದು.

ನ್ಯಾಯಾಲಯದ ಅಧಿಕಾರಕ್ಕೆ ಸಂಬಂಧಿಸಿದಂತೆ ಬಹು ಮುಖ್ಯವಾದ ಅಂಶವೆಂದರೆ, ಅಂತರರಾಷ್ಟ್ರೀಯ ನ್ಯಾಯಾಲಯ ಶಾಸನದ ಅನುಚ್ಛೇದ- 36(2)ರ ಪ್ರಕಾರ ರಾಷ್ಟ್ರಗಳು ಘೋಷಣೆಯ ಮೂಲಕ ಷರತ್ತುಬದ್ಧ ನ್ಯಾಯಾಧಿಕಾರವನ್ನು ಘೋಷಿಸಬೇಕು. ಅಂದರೆ, ರಾಷ್ಟ್ರಗಳು ನ್ಯಾಯಾಲಯಕ್ಕೆ ತಮ್ಮ ಮೇಲೆ ಹೂಡುವ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಷರತ್ತುಬದ್ಧ ಅಧಿಕಾರವನ್ನು ನೀಡಬಹುದು. ಇದರ ಪ್ರಕಾರ ಘೋಷಿಸಿದ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳ ಮೇಲೆ ನ್ಯಾಯಾಲಯದ ವ್ಯಾಪ್ತಿಯನ್ನು ಒಂದು ರಾಷ್ಟ್ರವು ಒಪ್ಪಬಹುದು ಹಾಗೂ ಅಂತಹ ತೀರ್ಪನ್ನು ಆ ರಾಷ್ಟ್ರ ಪಾಲಿಸಲೇಬೇಕಾಗುತ್ತದೆ. ಬಹುತೇಕ ರಾಷ್ಟ್ರಗಳು ತಾವು ಮಾಡಿದ ಘೋಷಣೆಯ ನೆಪ ಒಡ್ಡಿ ನ್ಯಾಯಾಲಯದ ನ್ಯಾಯಿಕ ವ್ಯಾಪ್ತಿಯಿಂದ ಹೊರಗುಳಿಯುತ್ತಿವೆ. ಇಂತಹ ಷರತ್ತುಬದ್ಧ ನ್ಯಾಯಿಕ ವ್ಯಾಪ್ತಿಯನ್ನು ಭಾರತ, ಪಾಕಿಸ್ತಾನ ಸೇರಿದಂತೆ 71 ರಾಷ್ಟ್ರಗಳು ಘೋಷಿಸಿವೆ. 

ಇದಕ್ಕೆ ಪೂರಕವಾಗಿ, 1974ರಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದ ಸ್ವರ್ಣಸಿಂಗ್‌ ಅವರು 12 ಘೋಷಣೆಗಳನ್ನು ಒಳಗೊಂಡ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದು ಇಂದಿಗೂ ಚಾಲ್ತಿಯಲ್ಲಿದೆ. ಇದರ ಪ್ರಕಾರ, ಈ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ಯಾವುದೇ ರಾಷ್ಟ್ರವು ಭಾರತದ ಮೇಲೆ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡುವಂತಿಲ್ಲ. ಇವುಗಳಲ್ಲಿ ಪ್ರಮುಖ ಘೋಷಣೆಗಳು ಹೀಗಿವೆ:

* ವಿವಾದವನ್ನು ಸಂಧಾನ ಸೇರಿದಂತೆ ಇತರ ಯಾವುದೇ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಉಭಯ ರಾಷ್ಟ್ರಗಳೂ ಒಪ್ಪಿದ್ದರೆ.

* ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳೊಂದಿಗಿನ ವಿವಾದ.

* ಭಾರತದ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೆ ಒಳಪಡುವ ವಿವಾದಗಳು.

* ಯಾವುದೇ ವಿವಾದದಿಂದ ಉಂಟಾದ/ ಸಂಬಂಧಿಸಿದ ದ್ವೇಷದ ಪರಿಸ್ಥಿತಿ ಅಥವಾ ಸಶಸ್ತ್ರ ಸಂಘರ್ಷ.

* ಜಂಟಿಯಾಗಿ/ ಏಕಾಂಗಿಯಾಗಿ ಸ್ವರಕ್ಷಣೆಗೆ ಅಥವಾ ದಾಳಿಯನ್ನು ತಡೆಯಲು ಕೈಗೊಂಡ ಕ್ರಮಗಳ ಬಗೆಗಿನ ವಿವಾದಗಳು.

* ಸಾರ್ವಭೌಮವಲ್ಲದ ರಾಷ್ಟ್ರ ಅಥವಾ ಭೂಭಾಗದೊಂದಿಗಿನ ವಿವಾದಗಳು,

* ಭಾರತದ ಗಡಿಗೆ ಸಂಬಂಧಿಸಿದ ವ್ಯಾಜ್ಯಗಳು.

ಹೀಗೆ ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಯಾವುದೇ ರಾಷ್ಟ್ರವು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಹೂಡಿದರೆ, ಭಾರತವು ಈ ಮೇಲಿನ ಘೋಷಣೆಯನ್ನು ಮುಂದಿಟ್ಟುಕೊಂಡು ಅಂತಹ ದಾವೆಯನ್ನು ವಿರೋಧಿಸಬಹುದು. ಜೊತೆಗೆ ನ್ಯಾಯಾಲಯ ಸಹ ಅಂತಹ ದಾವೆಗಳನ್ನು ಸ್ವೀಕರಿಸದೇ ಇರುವುದಕ್ಕೆ ಅವಕಾಶ ಇದೆ. ಹಾಗೆಯೇ ಬೇರೊಂದು ದೇಶವೂ ಭಾರತ ಹೂಡಿದ ದಾವೆಯನ್ನು ತನ್ನ ಘೋಷಣೆಯ ಆಧಾರದ ಮೇಲೆ ಪ್ರತಿರೋಧಿಸಬಹುದು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಪಾಕಿಸ್ತಾನ ಸಹ ಹಲವು ಘೋಷಣೆಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾಡಿಕೊಂಡಿದೆ.

ಹೆಚ್ಚಿನ ಪ್ರಕರಣಗಳಲ್ಲಿ ಪ್ರತಿವಾದಿ ದೇಶಗಳು ನ್ಯಾಯಾಲಯದ ನ್ಯಾಯಿಕ ವ್ಯಾಪ್ತಿಯನ್ನು ಪ್ರಶ್ನಿಸುತ್ತವೆ. ಹಾಗಾಗಿ ಮೊದಲು ನ್ಯಾಯಾಲಯವು ಯಾವುದೇ ವ್ಯಾಜ್ಯವನ್ನು ತನಗೆ ತೀರ್ಮಾನಿಸಲು ಅಧಿಕಾರವಿದೆಯೇ ಇಲ್ಲವೇ ಎಂಬುದನ್ನು ತೀರ್ಮಾನಿಸಬೇಕಾಗುತ್ತದೆ. ಒಂದು ವೇಳೆ ತನಗೆ ಅಧಿಕಾರವಿದೆ ಎಂದಾದರೆ, ಅದು  ಮುಂದುವರಿದು ಸರಿ– ತಪ್ಪನ್ನು ತೀರ್ಮಾನಿಸುತ್ತದೆ. ಅಂತರರಾಷ್ಟ್ರೀಯ ನ್ಯಾಯಾಲಯವು ಒಂದು ರಾಷ್ಟ್ರವನ್ನು ತಪ್ಪಿತಸ್ಥ ಎಂದು ಪರಿಗಣಿಸಿದರೆ ಆ ತೀರ್ಪನ್ನು ಜಾರಿಗೊಳಿಸುವ ಜವಾಬ್ದಾರಿ ವಿಶ್ವಸಂಸ್ಥೆಯ ಅಂಗವಾದ ಭದ್ರತಾ ಮಂಡಳಿಯದ್ದು.

ಭಾರತದ ವಿವಾದ
ಈವರೆಗೂ ಭಾರತ ನಾಲ್ಕು ಬಾರಿ ಅಂತರರಾಷ್ಟ್ರೀಯ ನ್ಯಾಯಾಲಯದ ಎದುರು ಬಂದಿದ್ದು, ಒಮ್ಮೆ ಮಾತ್ರ ಸ್ವತಃ ದಾವೆ ಹೂಡಿದೆ (ಅಂತರ ರಾಷ್ಟ್ರೀಯ ವೈಮಾನಿಕ ಸಂಘಟನೆಯ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ ಮೊಕದ್ದಮೆ- ಭಾರತ ವರ್ಸಸ್‌  ಪಾಕಿಸ್ತಾನ). ಉಳಿದ ಮೂರು ಪ್ರಕರಣಗಳಲ್ಲಿ ಪೋರ್ಚುಗಲ್ 1955ರಲ್ಲಿ ಒಮ್ಮೆ, ಪಾಕಿಸ್ತಾನ ಎರಡು ಬಾರಿ ಹಾಗೂ ಮಾರ್ಷಲ್ ಐಲ್ಯಾಂಡ್ ಒಮ್ಮೆ ದಾವೆ ಹೂಡಿವೆ.

ಭಾರತದ ವಿರುದ್ಧ ಪಾಕಿಸ್ತಾನ 1973ರಲ್ಲಿ ತನ್ನ 195 ಸೈನಿಕರ ಮಾರಣ ಹೋಮ ನಡೆದಿದೆ ಎಂದು ಬೊಬ್ಬೆ ಇಟ್ಟು ಹೂಡಿದ್ದ ಮೊಕದ್ದಮೆಯನ್ನು ತಾನೇ ಹಿಂತೆಗೆದುಕೊಂಡಿತು. ಇನ್ನೊಮ್ಮೆ 1999ರಲ್ಲಿ ಪಾಕಿಸ್ತಾನದ ಗೂಢಚರ್ಯ ವಿಮಾನವನ್ನು ಭಾರತ ಹೊಡೆದು ಉರುಳಿಸಿದಾಗ ಇದನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಪಾಕಿಸ್ತಾನವು ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರವಾಗಿದ್ದರಿಂದ ತನ್ನ ಘೋಷಣೆಯ ಪ್ರಕಾರ ನ್ಯಾಯಾಲಯಕ್ಕೆ ಈ ಪ್ರಕರಣವನ್ನು ತೀರ್ಮಾನಿಸಲು ಅಧಿಕಾರ ವ್ಯಾಪ್ತಿಯಿಲ್ಲ ಎಂಬ ಭಾರತದ ವಾದವನ್ನು ನ್ಯಾಯಾಲಯವು ಒಪ್ಪಿ, ಪಾಕಿಸ್ತಾನದ ದಾವೆಯನ್ನು ತಳ್ಳಿಹಾಕಿತು.

ದ್ವೀಪ ರಾಷ್ಟ್ರವಾದ ಮಾರ್ಷಲ್ ಐಲ್ಯಾಂಡ್ 2014ರಲ್ಲಿ ಭಾರತ, ಪಾಕಿಸ್ತಾನ ಹಾಗೂ ಇತರ ಏಳು ಪರಮಾಣು ಸಶಕ್ತ ರಾಷ್ಟ್ರಗಳ ವಿರುದ್ಧ ಅಣ್ವಸ್ತ್ರ ಪ್ರಯೋಗ ನಿಷೇಧ  ಹಾಗೂ ಅಣ್ವಸ್ತ್ರಗಳನ್ನು ನಾಶಗೊಳಿಸಲು ಒತ್ತಾಯಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹದಲ್ಲಿ ಪೈಪೋಟಿಗೆ ಇಳಿದಿರುವುದರಿಂದ ವಿಶ್ವ ಶಾಂತಿಗೆ ಧಕ್ಕೆಯಾಗುತ್ತಿದೆ ಎಂದು ಅದು ದೂರಿದೆ. ಮಾರ್ಷಲ್‌ ಐಲ್ಯಾಂಡ್‌ನ ಆರೋಪಕ್ಕೆ ಪ್ರತಿಕ್ರಿಯಿಸಲು ನ್ಯಾಯಾಲಯ ಕಳೆದ ವರ್ಷದ ಜೂನ್‌ 16ರಂದು ಭಾರತಕ್ಕೆ 6 ತಿಂಗಳ ಕಾಲಾವಕಾಶ ನೀಡಿತ್ತು. ಬಳಿಕ ಅದನ್ನು ಈ ವರ್ಷದ ಜೂನ್‌ 16ರವರೆಗೂ ಮುಂದೂಡಲಾಗಿತ್ತು.

ಇದೀಗ ಭಾರತದ ಮನವಿಯ ಮೇರೆಗೆ, ಪ್ರತಿಕ್ರಿಯೆ ಸಲ್ಲಿಸಲು ಬರುವ ಸೆಪ್ಟೆಂಬರ್ 16ರವರೆಗೂ ಸಮಯಾವಕಾಶ ನೀಡಲಾಗಿದೆ. ಕ್ಯಾಪ್ಟನ್ ಸೌರಭ್ ಕಾಲಿಯಾ ಪ್ರಕರಣವನ್ನು ಅಂತರ ರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯುವ ಸರ್ಕಾರದ ನಿರ್ಧಾರಕ್ಕೆ ನಮ್ಮ ಸುಪ್ರೀಂಕೋರ್ಟ್‌ ಹಸಿರು ನಿಶಾನೆ ತೋರಿದ್ದೇ ಆದರೆ, ಪಾಕಿಸ್ತಾನವು ಅಂತರ ರಾಷ್ಟ್ರೀಯ ನ್ಯಾಯಾಲಯದ ನ್ಯಾಯಿಕ ವ್ಯಾಪ್ತಿಯನ್ನು ಒಪ್ಪುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT