ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ಸೌಲಭ್ಯಕ್ಕೆ ಮಾನವರಹಿತ ವಿಮಾನ

ಅಕ್ಷರ ಗಾತ್ರ

ಅಂತರ್ಜಾಲ ಸಂಪರ್ಕ ಇಲ್ಲದ ವಲಯ ಅಥವಾ ಪ್ರದೇಶಗಳಿಗೆ ಮಾನವರಹಿತ ಲೇಸರ್‌ ವಿಮಾನಗಳ (ಡ್ರೋನ್‌) ಮೂಲಕ ಇಂಟರ್ನೆಟ್‌ ಸೌಲಭ್ಯ ಕಲ್ಪಿಸಲು ಫೇಸ್‌ಬುಕ್‌ ಮುಂದಾಗಿದೆ.

ಯಾವ ಪ್ರದೇಶದಲ್ಲಿ ಅಂತರ್ಜಾಲ ಸೌಲಭ್ಯ ಇಲ್ಲವೋ ಅಂಥ ಸ್ಥಳಗಳಿಗೆ ಮಾನವರಹಿತ ವಿಮಾನಗಳಿಂದ ಲೇಸರ್‌ ಕಿರಣ  ಮೂಲಕ ಈ ಸೇವೆ ಒದಗಿಸಲಿದೆ. ಈ ನಿಟ್ಟಿನಲ್ಲಿ ಕಂಪೆನಿಯು ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಮಾನವ ರಹಿತ ವಿಮಾನಗಳ ಯಶಸ್ವಿ ಪರೀಕ್ಷೆ ನಡೆಸಿದೆ.

ಸೌರಶಕ್ತಿ ಸಹಾಯದಿಂದ 60 ಸಾವಿರ ಅಡಿ ಎತ್ತರದಲ್ಲಿ ಹಾರಾಡಬಲ್ಲ ಈ ವಿಮಾನದ ರೆಕ್ಕೆಗಳ ಉದ್ದವೇ 29 ಮೀಟರ್‌. ಒಂದರ್ಥದಲ್ಲಿ ಬೋಯಿಂಗ್‌ 737 ವಿಮಾನಕ್ಕೆ ಸಮ ಎನ್ನಬಹುದು. ಆದರೆ, ಇದರ ತೂಕ ಒಂದು ಸಾಮಾನ್ಯ ಕಾರಿಗಿಂತ ಕಡಿಮೆ ಎನ್ನುವುದೇ ವಿಶೇಷ. ಅಸೆಂಟಾ ಕಂಪೆನಿ ವಿನ್ಯಾಸಗೊಳಿಸಿರುವ ಈ ಹಗುರ ವಿಮಾನಗಳನ್ನು ಫೇಸ್‌ಬುಕ್‌ 2014ರ ಮಾರ್ಚ್‌ನಲ್ಲೇ ಖರೀದಿಸಿದೆ.

‘ಬ್ರಿಟನ್‌ನಲ್ಲಿ ಮಾನವರಹಿತ ಲೇಸರ್‌ ವಿಮಾನಗಳ ಮೊದಲ ಯಶಸ್ವಿ ಪರೀಕ್ಷೆ ಪೂರ್ಣಗೊಳಿಸಿದ್ದೇವೆ. ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 10ರಷ್ಟು ಜನ ಇಂದಿಗೂ ಅಂತರ್ಜಾಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಡ್ರೋನ್‌ ವಿಮಾನದಿಂದ ಅಂತಹವರಿಗೂ ಈ ಸೌಲಭ್ಯ ಸಿಗಲಿದೆ.

ಅಲ್ಲದೇ ಸಾಮಾಜಿಕ ಜಾಲತಾಣಗಳ ಮಾರುಕಟ್ಟೆ ವಿಸ್ತರಣೆಗೂ ಇದರಿಂದ ಸಹಾಯವಾಗಲಿದೆ’ ಎನ್ನುತ್ತಾರೆ ಫೇಸ್‌ಬುಕ್‌ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್‌ ಜುಕರ್‌ಬುರ್ಗ್‌. ‘ಇಡೀ ವಿಶ್ವಕ್ಕೆ ಅಂತರ್ಜಾಲ ಸಂಪರ್ಕ ಕಲ್ಪಿಸಲು ನಾವು ಕೈಗೊಂಡಿರುವ Internet.org ಅಭಿಯಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮಾನವರಹಿತ ವಿಮಾನಗಳನ್ನು ವಿನ್ಯಾಸಗೊಳಿಸಲಾಗಿದೆ’ ಎನ್ನುತ್ತಾರೆ ಜುಕರ್‌ಬರ್ಗ್.

‘ಒಂದೊಮ್ಮೆ ನಾವು ಗುರಿ ಮುಟ್ಟಿದರೆ, ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ಅಂತರ್ಜಾಲ ಸೇವೆಯ ಜೊತೆಗೆ ಬೇಕಾದ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ’ ಎಂಬುದು ಫೇಸ್‌ಬುಕ್‌ ಮುಖ್ಯ ತಾಂತ್ರಿಕ ಅಧಿಕಾರಿ ಮೈಕ್‌ ಸ್ಕ್ರಾಫರ್‌ ಅವರ ಅಭಿಪ್ರಾಯ.

ಗ್ರಾಮೀಣ ಪ್ರದೇಶ ಹಾಗೂ ಇಂಟರ್ನೆಟ್‌ ಸೌಲಭ್ಯ ಹೊಂದಿರದ ಸ್ಥಳಗಳಲ್ಲಿ ಮಾನವರಹಿತ ವಿಮಾನಗಳನ್ನು ಕಳುಹಿಸಿ ಅವುಗಳಿಂದ ಅಂತರ್ಜಾಲ ಸೌಲಭ್ಯವನ್ನು ಫೇಸ್‌ಬುಕ್‌ ಒದಗಿಸಲಿದೆ ಎಂದು ‘ಗಾರ್ಡಿಯನ್‌’ ಪತ್ರಿಕೆ ಕೂಡ ವರದಿ ಮಾಡಿದೆ.

ಯಾವ ಸ್ಥಳಗಳು ಅಂತರ್ಜಾಲ ಸೌಕರ್ಯದಿಂದ ವಂಚಿತವಾಗಿವೆಯೋ ಅಂತಹ ಪ್ರದೇಶಗಳಿಗೆ ಇಂಟರ್ನೆಟ್‌ ಸೌಕರ್ಯ ಕಲ್ಪಿಸಲು ಗೂಗಲ್‌ ಸಹ ಮುಂದಾಗಿದೆ. ಇದಕ್ಕಾಗಿ ಅದು ಬಲೂನ್‌ ಮತ್ತು ಡ್ರೋನ್‌ಗಳನ್ನು ಬಳಸಿಕೊಳ್ಳಲಿದೆ. 2014ರ ಏಪ್ರಿಲ್‌ನಲ್ಲಿ ಗೂಗಲ್‌ ಕಂಪೆನಿಯು ಅಮೆರಿಕದ ಟೈಟನ್‌ ಏರೋಸ್ಪೆಸ್‌ ಕಂಪೆನಿಯಿಂದ ಮಾನವರಹಿತ ವಿಮಾನಗಳನ್ನು ಖರೀದಿಸಿದೆ.

ಗೂಗಲ್‌ ಹಾಗೂ ಫೇಸ್‌ಬುಕ್‌ ಪ್ರತಿಯೊಬ್ಬರಿಗೂ ಅಂತರ್ಜಾಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮಾನವರಹಿತ ವಿಮಾನಗಳ ಮೊರೆ ಹೋಗಿವೆ. ಆದರೆ, ಈ ಸೇವೆ ಯಾವಾಗ ಮತ್ತು ಯಾವ ಪ್ರದೇಶದಲ್ಲಿ ಮೊದಲು ಲಭ್ಯವಾಗಲಿದೆ ಎಂಬ ಪ್ರಶ್ನೆಗೆ ಇನ್ನಷ್ಟು ದಿನ ಕಾಯಬೇಕಷ್ಟೇ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT