ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಈಜುಕೊಳ ಆರಂಭ

ಮಡಿಕೇರಿ: ಉದ್ಘಾಟನೆಯ ಒಂಬತ್ತು ತಿಂಗಳ ನಂತರ ಬಳಕೆಗೆ ಮುಕ್ತ
Last Updated 18 ಮೇ 2015, 6:54 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣ ದಲ್ಲಿರುವ ಈಜುಕೊಳವು ಅಂತೂ ಇಂತೂ ಕಾರ್ಯಾರಂಭ ಮಾಡಿದೆ.
ಉದ್ಘಾಟನೆಯಾಗಿ ಒಂಬತ್ತು ತಿಂಗಳು ಕಳೆದ ನಂತರ ನಗರದ ಈಜುಪ್ರಿಯರಿಗೆ ‘ಈಜು ಭಾಗ್ಯ’ ಕೂಡಿ ಬಂದಿದೆ. ಶಾಸಕ ಅಪ್ಪಚ್ಚು ರಂಜನ್‌ ಕಳೆದ ಸರ್ಕಾರದಲ್ಲಿ ಕ್ರೀಡಾ ಸಚಿವ ರಾಗಿದ್ದಾಗ ಈಜುಕೊಳ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದು, ಈಗ ಸಾಕಾರಗೊಂಡಂತಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಸುಮಾರು ₨ 2 ಕೋಟಿ ವೆಚ್ಚದಲ್ಲಿ ಈಜುಕೊಳವನ್ನು ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಕಳೆದ ವರ್ಷ ಪೂರ್ಣ ಗೊಂಡಿತ್ತು. ಆದರೆ, ವಿದ್ಯುತ್‌ ಸಂಪರ್ಕ ಹಾಗೂ ಒಳಚರಂಡಿ ಕಾಮಗಾರಿಗಳು ನಿಧಾನವಾಗಿದ್ದರಿಂದ ಸಾರ್ವಜನಿಕರಿಗೆ ಲಭ್ಯವಾಗಲು ವಿಳಂಬವಾಗಿತ್ತು.

ಈಗ ಇವೆಲ್ಲ ಕಾಮಗಾರಿಗಳು ಪೂರ್ಣಗೊಂಡು, ಈಜುಕೊಳವನ್ನು ಆಸಕ್ತರ ಉಪಯೋಗಕ್ಕೆ ತೆರೆಯ ಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ ಹೇಳಿದರು.

ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಈಜುಕೊಳ ತೆರೆಯಲಾಗಿರುತ್ತದೆ. ವಿಶೇಷ ವಾಗಿ ಯುವತಿಯರಿಗೆ ಸಂಜೆ 4ರಿಂದ 5 ಗಂಟೆಯವರೆಗೆ ಸಮಯವನ್ನು ನಿಗದಿ ಪಡಿಸಲಾಗಿದೆ ಎಂದು ಈಜುಕೊಳದ ಮೇಲ್ವಿಚಾರಕ ರವಿ ಹೇಳಿದರು.

ಸದ್ಯಕ್ಕೆ ಪ್ರತಿ ಗಂಟೆಗೆ 30 ರೂಪಾಯಿ ದರ ನಿಗದಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ತಿಂಗಳ ಪಾಸ್‌ ನೀಡುವ ಯೋಚನೆ ಇದೆ ಎಂದು ನುಡಿದರು.

ಈಜುಕೊಳದಲ್ಲಿ ಎರಡು ವಿಭಾಗ ಗಳನ್ನು ಮಾಡಲಾಗಿದೆ.  3 ಅಡಿ ಎತ್ತರದ ವಿಭಾಗವನ್ನು ಮಕ್ಕಳಿಗಾಗಿ ಹಾಗೂ 6 ಅಡಿ ಎತ್ತರದ ವಿಭಾಗವನ್ನು ದೊಡ್ಡವರಿ ಗಾಗಿ ಮಾಡಲಾಗಿದೆ. ಈಜುಕೊಳದಲ್ಲಿ ಜೀವರಕ್ಷಕ ಹುದ್ದೆಗೆ ಇಬ್ಬರನ್ನು ನೇಮಿಸಲಾಗಿದೆ. 
ಈಜುಕೊಳದ ಪಕ್ಕದಲ್ಲಿ ಬೋರ್‌ ವೆಲ್‌ ಕೊರೆಸಲಾಗಿದ್ದು, ನಿರಂತರವಾಗಿ ನೀರು ಪೂರೈಸಲಾಗುತ್ತದೆ.

ನೀರು ಶುದ್ಧೀಕರಣ ಘಟಕವನ್ನು ಅಳವಡಿಸ ಲಾಗಿದ್ದು, ಪ್ರತಿದಿನ ಈಜುಕೊಳದ ನೀರು ಶುದ್ಧೀಕರಿಸಲಾಗುತ್ತದೆ. ಸುಮಾರು 1.5 ಲಕ್ಷ ಲೀಟರ್‌ ನೀರಿನ ಸಾಮರ್ಥ್ಯ ಹೊಂದಿದೆ.

ಪುರುಷರಿಗೆ ಹಾಗೂ ಸ್ತ್ರೀಯರಿಗೆ ಪ್ರತ್ಯೇಕವಾದ ಸ್ನಾನದ ಗೃಹಗಳು ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಬಟ್ಟೆ ಬದಲಾಯಿಸುವ ಕೊಠಡಿಗಳು ಕೂಡ ಇವೆ. ಸುಸಜ್ಜಿತ ಈಜುಕೊಳ ತಲೆಎತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT