ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಥ ಹೇಳಿಕೆ ಎಂದಿಗೂ ಒಪ್ಪಲಾಗದು: ಮೋದಿ

Last Updated 3 ಮಾರ್ಚ್ 2015, 13:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ಅಂಥ ಹೇಳಿಕೆಗಳನ್ನು ಬೆಂಬಲಿಸಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಪ್ರಧಾನಿ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಮಾತನಾಡಿದರು.

‘ಯಾರಾದರು ಅಂಥ ಹೇಳಿಕೆ ನೀಡಿದರೆ ನಾವು ಅದನ್ನು ಎಂದಿಗೂ ಬೆಂಬಲಿಸುವುದಿಲ್ಲ’ ಎಂದು ಮುಫ್ತಿ ಸಯೀದ್ ಅವರ ವಿವಾದಾತ್ಮಕ ಹೇಳಿಕೆ ಪ್ರಸ್ತಾಪಿಸುತ್ತ ಸದನದಲ್ಲಿ ಅವರು ನುಡಿದರು.

‘ಯಾರೋ ಎಲ್ಲಿಯೋ ಒಂದು ಹೇಳಿಕೆ ನೀಡಿದರೆ ಪ್ರತಿಕ್ರಿಯಿಸುವಂತೆ ಇಲ್ಲಿ ನಮ್ಮನ್ನು ಒತ್ತಾಯಿಸುತ್ತಾರೆ. ಶಾಂತಿಯುತ ಚುನಾವಣೆಗೆ ಅವಕಾಶ ನೀಡಿದ ಕೀರ್ತಿ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಸಲ್ಲುತ್ತದೆ’ ಎಂದು ಮೋದಿ ಪ್ರತಿಕ್ರಿಯಿಸಿದರು.

ಈ ವೇಳೆ, ‘ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಪಿಡಿಪಿಗೆ ನೀಡಿರುವ ಬೆಂಬಲವನ್ನು ಬಿಜೆಪಿ ಹಿಂಪಡೆಯಲಿದೆಯೇ?’ ಎಂಬಂಥ ಪ್ರಶ್ನೆಗಳು ಕೆಲ ಸದಸ್ಯರಿಂದ ತೂರಿ ಬಂದವು.

ಅದಕ್ಕೆ ಉತ್ತರಿಸಿದ ಪ್ರಧಾನಿ, ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಯಾಗಿದೆ. ಅದರಡಿ ಸರ್ಕಾರ ಮುಂದುವರಿಯಲಿದೆ ಎಂದು ಸದನ ಹಾಗೂ ದೇಶದ 125 ಕೋಟಿ ಜನತೆಗೆ ನಾನು ಭರವಸೆ ನೀಡಲು ಬಯಸುವೆ’ ಎಂದರು.

‘ಪಾಕಿಸ್ತಾನ, ಉಗ್ರ­ಗಾಮಿ­ಗಳು ಮತ್ತು ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಶಾಂತಿಯುತ ಮತ­ದಾನ ನಡೆಯುವಂತಹ ವಾತಾವರಣ ಸೃಷ್ಟಿಸಿದರು’ ಎಂದು ಮುಫ್ತಿ ಸಯೀದ್ ಅವರು ಹೇಳಿದ್ದರು. ಮುಫ್ತಿ ಅವರ ಹೇಳಿಕೆಗೆ ಪ್ರಧಾನಿ ಅವರು ಪ್ರತಿಕ್ರಿಯಿಸಬೇಕು ಎಂದು ಕಳೆದೆರಡು ದಿನಗಳಿಂದ ಸಂಸದರು ಒತ್ತಾಯಿಸುತ್ತಿದ್ದರು.

ಇದೇ ವೇಳೆ, ‘ಭಯೋತ್ಪಾದನೆ ವಿರುದ್ಧದ ಸರ್ಕಾರದ ಆಕ್ರಮಣಕಾರಿ ನೀತಿ ಮುಂದುವರಿಯಲಿದೆ’ ಎಂದ ಪ್ರಧಾನಿ, ‘ಸಂಸತ್ತಿನಲ್ಲಿ ಅನುಮೋದನೆ ಪಡೆದ ಎಲ್ಲಾ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT