ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದವರ್ಧನೆ ಇರಲಿ ಹೀಗೆ...

ಚೆಲುವಿನ ಚಿತ್ತಾರ
Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸೌಂದರ್ಯದ ಬಗ್ಗೆ ಎಲ್ಲರೂ ಕುತೂಹಲಿಗಳೇ. ಚೆಂದವಾಗಿ ಕಾಣಬೇಕು, ಮಾಡಿರುವ ಮೇಕಪ್‌ ಇನ್ನೊಬ್ಬರು ಮೆಚ್ಚುವಂತಿರಬೇಕು, ತೊಟ್ಟಿರುವ ದಿರಿಸು ಆಕರ್ಷಕವಾಗಿರಬೇಕು.... ಇದು ಬಹುತೇಕ ಯುವಕ ಯುವತಿಯರ ಕನಸು.

ಅಂದದ ಬೆನ್ನುಹತ್ತಿ ಸೌಂದರ್ಯಕ್ಕಾಗಿ ನಾನಾ ರೀತಿಯಲ್ಲಿ ಪ್ರಯತ್ನಿಸುವುದು ಇಂದಿನವರ ಜಾಯಮಾನವಾಗಿಬಿಟ್ಟಿದೆ. ಹೀಗಾಗಿಯೇ ಮಾರುಕಟ್ಟೆಯಲ್ಲೂ ದಿನಕ್ಕೊಂದು ಬಗೆಯ ಸೌಂದರ್ಯವರ್ಧಕಗಳು ಹೆಜ್ಜೆಯೂರುತ್ತಿವೆ. ಆದರೆ ನಾವು ಬಳಸುವ ನವನವೀನ ಉತ್ಪನ್ನಗಳು ಹಾಗೂ ಮೇಕಪ್‌ ಮಾಡಿಕೊಳ್ಳುವಲ್ಲಿ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ಸೌಂದರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಅಲ್ಲದೆ ತ್ವಚೆಯ ತಾಜಾತನವನ್ನು ಮಾಯಮಾಡಿ ಅತಿಬೇಗನೆ ವಯಸ್ಸಾದವರಂತೆ ಕಾಣುವಂತೆ ಮಾಡಬಲ್ಲವು ಎಂಬುದನ್ನು ಕೆಲ ಸಂಶೋಧನೆಗಳು ಹೇಳಿವೆ.

ತ್ವಚೆಯ ಅಂದವನ್ನು ಹೆಚ್ಚಿಸುವ ಬದಲು ಕುಂದಿಸುವ ಕೆಲ ಅಂಶಗಳ ಬಗ್ಗೆ ಕಾಳಜಿವಹಿಸಿ ಎಂಬುದನ್ನೂ ಈ ಸಂಶೋಧನೆಯಲ್ಲಿ ಹೇಳಲಾಗಿದೆ.

ತ್ವಚೆಯ ತಾಜಾತನವನ್ನು ಉಳಿಸಿಕೊಳ್ಳಿ 
ತಾಜಾತನ ತುಂಬಿದ ತ್ವಚೆ ಆರೋಗ್ಯಕರವಾಗಿ ಕಾಣುವುದಷ್ಟೇ ಅಲ್ಲ ಸುಂದರವಾಗಿಯೂ ಕಾಣುತ್ತದೆ. ಅನೇಕ ಹೆಂಗಳೆಯರಿಗೆ ಪ್ರತಿದಿನ ಕನಿಷ್ಠ ಎರಡು ಬಾರಿ ಮುಖವನ್ನು ನೀರಿನಿಂದ ತೊಳೆಯಬೇಕು ಎಂಬುದೇ ಗೊತ್ತಿಲ್ಲ. ಹೀಗಾಗಿ ಸದಾ ಸೌಂದರ್ಯವರ್ಧಕಗಳನ್ನು ಮುಖಕ್ಕೆ ಮೆತ್ತಿಕೊಂಡಿರುವುದನ್ನು ಬಿಟ್ಟು ತ್ವಚೆಗೆ ತುಸು ಉಸಿರಾಡಲು ಬಿಡಿ ಎಂದು ಸಲಹೆ ನೀಡುತ್ತವೆ ಸಂಶೋಧನೆಗಳು.

ಬ್ಲಶರ್‌ನ ಅತಿ ಬಳಕೆ ಬೇಡ
ಅತಿಯಾಗಿ ಬ್ಲಶರ್‌ ಬಳಸಿ ಮೇಕಪ್‌ ಮಾಡಿಕೊಳ್ಳುವುದರಿಂದ ನೀವು ಇನ್ನಷ್ಟು ವಯಸ್ಸಾದವರಂತೆ ಕಾಣಿಸುವಿರಿ. ಕೆನ್ನೆಯ ಮೇಲೆ ಬ್ಲಶರ್‌ನಿಂದ ತುಸು ಮೇಕಪ್‌ ಮಾಡಿದರೂ ಸಾಕು; ಅದು ನಿಮ್ಮ ಮುಖಕ್ಕೆ ತಾಜಾತನದ ಲುಕ್‌ ನೀಡುತ್ತದೆ. ಕೆನ್ನೆತುಂಬ ಬ್ಲಶ್‌ ಮಾಡದೆ ಮೂಳೆ ಇರುವ ಜಾಗಕ್ಕೆ ಮಾತ್ರ ಕೆಳಗಿನಿಂದ ಮೇಲಕ್ಕೆ ಬ್ಲಶ್‌ ಮಾಡಿದರೆ ಸುಂದರವಾಗಿ ಕಾಣಬಹುದಂತೆ.

ಟಾಲ್ಕಂ ಪೌಡರ್‌ ಹೆಚ್ಚು ಬಳಸದಿರಿ
ಪ್ರತಿನಿತ್ಯ ಟಾಲ್ಕಂ ಪೌಡರ್‌ (ಪುಡಿ ರೂಪದಲ್ಲಿರುತ್ತದೆ) ಬಳಸುವುದನ್ನು ಆದಷ್ಟು ಕಡಿಮೆ ಮಾಡಿ. ಇದು ನಿಮ್ಮ ತ್ವಚೆಯನ್ನು ಒಣಗಿಸುವುದಲ್ಲದೆ ಮುಖದಲ್ಲಿನ ಗೆರೆಗಳು ಎದ್ದು ಕಾಣುವಂತೆ ಮಾಡುತ್ತವೆ. ಮುಖದಲ್ಲಿ ಚೈತನ್ಯ ಕಡಿಮೆಯಾಗಿ ವಯಸ್ಸಿನ ಗೆರೆಗಳೇ ಹೆಚ್ಚಾಗಿ ಕಾಣುತ್ತವೆ. ತಜ್ಞರು ಟಾಲ್ಕಂ ಪೌಡರ್‌ ಬದಲಾಗಿ ಪ್ರೆಸ್ಡ್‌ ಪೌಡರನ್ನೇ ಬಳಸುವಂತೆ ಸಲಹೆ ನೀಡುತ್ತಾರೆ.

ಲಿಪ್‌ಸ್ಟಿಕ್‌ ಪಾಠ
ಮುಖದ ಅಂದ ಹೆಚ್ಚಿಸುವ ತುಟಿಗೆ ವಿವಿಧ ಬಣ್ಣಗಳ ಲಿಪ್‌ಸ್ಟಿಕ್‌ಗಳು ಬಂದಾಗಿವೆ. ಆದರೆ ಅನೇಕರಿಗೆ ತಮ್ಮ ಮೊಗಕ್ಕೆ ಯಾವ ಬಣ್ಣ ಹೆಚ್ಚು ಹೊಂದುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಅತಿಯಾದ ಗಾಢ ಬಣ್ಣದ ಲಿಪ್‌ಸ್ಟಿಕ್‌ಗಳು ಎಳೆವಯಸ್ಸಿನವರ ಮುಖದ ಅಂದ ಹೆಚ್ಚಿಸುತ್ತದೆ. ಆದರೆ ಮಧ್ಯ ವಯಸ್ಸಿನವರು ಅಥವಾ ವಯಸ್ಸಾದವರು ಗಾಢ ಬಣ್ಣದ ಲಿಪ್‌ಸ್ಟಿಕ್‌ ಲೇಪಿಸಿಕೊಳ್ಳುವುದರಿಂದ ಕೆಟ್ಟದಾಗಿ ಕಾಣುತ್ತದೆ. ವಯಸ್ಸಾದಂತೆ ತುಟಿಗಳು ತೆಳುವಾಗುವುದರಿಂದ ತೆಳು ಬಣ್ಣದ ಲಿಪ್‌ಸ್ಟಿಕ್‌ ಬಳಸುವುದು ಉತ್ತಮ.

ಹುಬ್ಬು ಇರಲಿ ಹಾಯಾಗಿ
ಯಾವುದೇ ಆದರೂ ಅಗತ್ಯಕ್ಕಿಂತ ಹೆಚ್ಚೆನಿಸಿದರೆ ಅದು ಮಾರಕವೇ. ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಸರಿಯಾದ ಐಬ್ರೊ ಅವಶ್ಯಕ, ನಿಜ. ಆದರೆ ಒಮ್ಮೆ ಐಬ್ರೊ ಮಾಡಿಸಿಕೊಂಡ ನಂತರ ಪ್ರತಿದಿನ ಅದನ್ನು ಮತ್ತಷ್ಟು ಅಂದಗೊಳಿಸಲು ಪ್ರಯತ್ನಿಸುವ ಅವಶ್ಯಕತೆ ಇಲ್ಲ. ಕೆಲವರಿಗೆ ಪ್ರತಿದಿನ ಹುಬ್ಬಿನ ಸುತ್ತಲೂ ಸಹಜವಾಗಿ ಬೆಳೆಯುತ್ತಿರುವ ಕೂದಲನ್ನು ತೆಗೆದುಹಾಕುವ ದುರಭ್ಯಾಸವಿರುತ್ತದೆ. ಇದರಿಂದ ಸೂಕ್ಷ್ಮವಾದ ತ್ವಚೆಗೆ ಹೊಡೆತ ಬೀಳುವುದಲ್ಲದೆ ಹುಬ್ಬುಕೂಡ ಅತ್ಯಂತ ತೆಳುವಾಗಿ ಕೆಟ್ಟದಾಗಿ ಕಾಣುತ್ತದೆ. ಹುಬ್ಬುಗಳು ಮತ್ತೆ ಬೆಳೆದಾಗ ಪೆನ್ಸಿಲ್‌ ಮುಖಾಂತರ ಅವುಗಳನ್ನು ತುಸು ದಪ್ಪವಾಗಿಸುವುದೇ ಉತ್ತಮ.

ಪ್ರತಿದಿನ ಎಣ್ಣೆ ಲೇಪನ ಬೇಡ
ಕೂದಲಿನ ಆರೈಕೆಯಲ್ಲಿ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆಯಾದರೂ ಪ್ರತಿದಿನ ಎಣ್ಣೆ ಲೇಪನ ಮಾಡುವ ಅವಶ್ಯಕತೆ ಇಲ್ಲ. ಬದಲಾಗಿ ಆಗಾಗ್ಗೆ ಬೆಚ್ಚಗಿನ ಎಣ್ಣೆಯಿಂದ ಮಸಾಜ್‌ ಮಾಡಿಕೊಳ್ಳುವುದು ಕೂದಲಿನ ಸೌಂದರ್ಯ ಹೆಚ್ಚಿಸುವುದಲ್ಲದೆ ನಿಮ್ಮ ಅಂದವನ್ನೂ ದುಪ್ಪಟ್ಟಾಗಿಸುತ್ತದೆ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT