ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಕಾರದಲ್ಲಿ ಮಸುಕಾಗುತಿವೆ ಭರಮಣ್ಣನ ಕುರುಹುಗಳು

Last Updated 25 ಜನವರಿ 2016, 19:30 IST
ಅಕ್ಷರ ಗಾತ್ರ

ಚಿತ್ರದುರ್ಗವನ್ನು ಆಳಿದ ಪಾಳೇಗಾರರಲ್ಲಿ ಗಂಡುಗಲಿ ಮದಕರಿನಾಯಕನನ್ನು ಹೊರತುಪಡಿಸಿದರೆ ಕಂಡುಬರುವ ಮತ್ತೊಂದು ಪ್ರಭಾವಿ ಹೆಸರು ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕರದು. ಈತ ಮದಕರಿಗೆ ತಾತ.  ಕ್ರಿ.ಶ.1689ರಿಂದ 1721ರವರೆಗೆ ದುರ್ಗವನ್ನಾಳಿದ ಭರಮಣ್ಣನೆಂದರೆ ಶಕ್ತಿ-ಭಕ್ತಿಗಳ ಸಂಗಮವೆಂದೇ ಖ್ಯಾತ. ಈತನ ಕಾಲಾವಧಿಯಲ್ಲಿ 21 ಕೆರೆಗಳು, 30 ದೇವಾಲಯಗಳು, ನಾಲ್ಕು ಅರಮನೆಗಳು ಹಾಗೂ ಬಲಿಷ್ಠ ದುರ್ಗಗಳು ನಿರ್ಮಾಣವಾಗಿವೆ. ಐದು ಪಾವಟಿಗೆಗಳ ಉತ್ಸವಾಂಬೆಯ ಅದ್ಭುತ ದೇವಾಲಯ ಮತ್ತು ಸಂತೇಹೊಂಡ ನಿರ್ಮಾಣವಾಗಿದ್ದೂ ಇವನ ಕಾಲದಲ್ಲಿಯೇ.

ಒರೆಗೆ ಕತ್ತಿ ಇಡದೆ ಸದಾ ಯುದ್ಧಗಳಲ್ಲಿ ತೊಡಗಿದ್ದರಿಂದಾಗಿಯೇ ‘ಬಿಚ್ಚುಗತ್ತಿ’ ಭರಮನೆಂದೇ ಈತ ಖ್ಯಾತಿ. ಭರಮಣ್ಣ ಅದೆಂತಹ ಭಾವುಕಭಕ್ತನೆಂದರೆ ‘ನಮ್ಮದು ನಿಂತ ಪಟ್ಟ, ತಮ್ಮದು ಕುಂತಪಟ್ಟ’ ಎಂದು ಗುರುಗಳಿಗೆ ಸಿಂಹಾಸನವನ್ನೇ ಬಿಟ್ಟುಕೊಟ್ಟವ. ಅಷ್ಟೇ ಅಲ್ಲದೇ ಮೇಲುದುರ್ಗದಲ್ಲಿ ತನ್ನ ಅರಮನೆಗೆ ಹತ್ತಿರವಿರುವ ಸಂಪಿಗೆ ಸಿದ್ದೇಶ್ವರ ಹಿಡಂಬೇಶ್ವರ ಆಲಯಗಳ ನಡುವಿನ ಪ್ರದೇಶದಲ್ಲಿ 360 ಅಂಕಣದ ಬೃಹನ್ಮಠವನ್ನು ಕಟ್ಟಿಸಿ ಅಲ್ಲಿ ತಂಗಿದ್ದು, ತಮ್ಮ ಧರ್ಮಕಾರ್ಯಗಳನ್ನು ನೆರವೇರಿಸಲು ಗುರುಗಳಿಗೆ ಅನುಕೂಲ ಮಾಡಿಕೊಟ್ಟ.

ಚಿನ್ನದ ಪಲ್ಲಕ್ಕಿ ಸಿಂಹಾಸನ ಕಿರೀಟಗಳನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದ. ಮೇಲುದುರ್ಗದಲ್ಲಿ ಜನಸಂಖ್ಯೆ ಹೆಚ್ಚಾದಾಗ ಮಹಾಸ್ವಾಮಿಗಳಿಗೆಲ್ಲಿ ತಪೋಭಂಗವಾದೀತೋ ಎಂದು ಅಂಜಿ ಪ್ರತ್ಯೇಕ ಬೃಹನ್ಮಠವನ್ನು 1703ರಲ್ಲಿ ಸ್ಥಾಪಿಸಿದ. ಅದನ್ನು ಈಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳದುರ್ಗದಿಂದ ಮೂರು ಮೈಲಿ ದೂರದಲ್ಲಿ ಎರಡು ಕೆರೆಗಳ ನಡುವೆ ನೂರಾರು ಎಕರೆ ಜಾಗದಲ್ಲಿ ಕಾಣಬಹುದು. ಜನೋಪಯೋಗಿ ಕಾರ್ಯಗಳು ಈತನ ಅವಧಿಯಲ್ಲಿ ನಡೆದಷ್ಟು ಬೇರೆ ಪಾಳೇಗಾರರ ಅವಧಿಯಲ್ಲಿ ನಡೆದ ಉದಾಹರಣೆಗಳಿಲ್ಲ.

ದುರ್ಗದ ದೊರೆಯಾಗಿ, ಕೊಡುಗೈ ದಾನಿಯಾಗಿ ಇಷ್ಟೆಲ್ಲಾ ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸಿ ಸಿರಾದ ಸುಬೇದಾರರೊಂದಿಗೆ ನಡೆದ ಘನಘೋರ ಕಾಳಗದಲ್ಲಿ ಗಾಯಗೊಂಡು 1721ರಲ್ಲಿ ವೀರಮರಣವನ್ನಪ್ಪಿದ ನಾಯಕನ ಸಮಾಧಿಯನ್ನು ಮೇಲುದುರ್ಗದಲ್ಲಿಯೇ ನಿರ್ಮಿಸಲಾಗಿದೆ. ಈ ಸಮಾಧಿಯ ಬಳಿಯೇ ಆತನ ಮಗ ಹಿರೇಮದಕರಿನಾಯಕರ ಸಮಾಧಿಯನ್ನೂ ಕಾಣಬಹುದು. ಜನರಿಗೆ ಸಮಾಧಿಗಳ ಮೇಲುದುರ್ಗದ ಟೇಕಿನ ಬಾಗಿಲಿನಿಂದ ಗಣಪತಿ ಆಲಯಕ್ಕೆ ಹೋಗುವ ಮಾರ್ಗದ ಬಲಬದಿಯಲ್ಲಿ ಝಂಡಾಬತೇರಿಗೆ ಸಮೀಪದಲ್ಲೇ ಇದೆ ಎಂಬುದು ದುರ್ಗದ ಬಹುತೇಕ ಜನರಿಗೇ ತಿಳಿದಿಲ್ಲ! ಝಂಡಾ ಬತೇರಿ ಕಡೆಯಿಂದ ಸುಲಭ ಮಾರ್ಗವಿದ್ದು ಟೇಕಿನ ಬಾಗಿಲಿನಿಂದ ಹೋಗುವ ಮಾರ್ಗ ಕಡಿದಾದ ಬಂಡೆಗಳಿಂದ ಕೂಡಿದೆ. 

(ನಾನು ಬರೆದ ‘ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ’ ಐತಿಹಾಸಿಕ ಕಾದಂಬರಿ 1995ರಲ್ಲಿ ಬಿಡುಗಡೆಯಾದಾಗ ನನ್ನ ಮನವಿ ಮೇರೆಗೆ ಅಂದಿನ ಮಠದ ಆಡಳಿತಾಧಿಕಾರಿ ನಾಯಕನ ಸಮಾಧಿಯನ್ನು ಸ್ವಚ್ಛಗೊಳಿಸಿ ಒಂದಿಷ್ಟು ಬಂಟಿಂಗ್ಸ್‌ಗಳನ್ನು ಕಟ್ಟಿ ಶೃಂಗರಿಸಿ ಪೂಜಿಸಿ ಕೆಳಗಡೆ ‘ಭರಮಣ್ಣನಾಯಕನ ಸಮಾಧಿಗೆ ದಾರಿ’ ಎಂದು ತಾತ್ಕಾಲಿಕವಾಗಿ ರಟ್ಟಿನಲ್ಲಿ ಬರೆಸಿ ನೆಡಿಸಿದ್ದುಂಟು). ಆದರೆ ಈ 20 ವರ್ಷಗಳಲ್ಲಿ ಸಮಾಧಿಯ ದುರಸ್ತಿ ಕಾರ್ಯ ನಡೆಯದೆ ಪಾಳುಬಿದ್ದಿದೆ.  ದುರ್ಗದ ಜನರಿಗೂ ಆಸಕ್ತಿಯಿಲ್ಲ, ಪ್ರಾಚ್ಯವಸ್ತು ಇಲಾಖೆಯವರಿಗೆ ಇತಿಹಾಸಪ್ರಜ್ಞೆ ಇಲ್ಲ. ಇನ್ನು ದುರ್ಗದಲ್ಲಿ ಮುರುಘಾಪರಂಪರೆ ಬೆಳೆಯಲು ಕಾರಣವಾದ ಭರಮಣ್ಣನು ಕಟ್ಟಿಸಿದ ಬೃಹನ್ಮಠದಲ್ಲಿಯೇ ಇಂದಿಗೂ ತಣ್ಣಗಿರುವವರಿಗೂ ಇದರ ಗೊಡವೆ ಬೇಕಿಲ್ಲ.

ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರತಿವರ್ಷ ಮೇಲುದುರ್ಗ ಏರುವಾಗ ಆತನ ಸಮಾಧಿಯ ಬಳಿಯೇ ನಡೆದುಹೋಗುವ ಶರಣರಿಗೆ ನೋಡುವಷ್ಟು ವ್ಯವಧಾನ ಈವರೆಗೆ ದೊರೆಯದಿರುವುದು ವಿಪರ್ಯಾಸ. ಪ್ರಾಚೀನ ಮಠದ ಆವರಣದಲ್ಲೇ ಪ್ರತಿ ವರ್ಷವೂ ನಡೆಯುವ ಸಮಾರಂಭದಲ್ಲಿ ಶರಣರಿಗೆ ರಾಜವಂಶಸ್ಥರಿಂದ ಗೌರವಾರ್ಪಣೆ ನಡೆಯುತ್ತದೆ. ಆದರೆ ಇವರಿಗೆ ನೆಲೆ ಬೆಲೆ ಕೊಟ್ಟ ರಾಜಾ ಭರಮಣ್ಣನಾಯಕರ ಸಮಾಧಿ ನೆನಪೇ ಆಗದೇ? ತಮ್ಮ ಪ್ರಾಚೀನ ಮಠ ಸೋರುತ್ತಿದೆಯೆಂದು ಪ್ರಾಚ್ಯವಸ್ತು ಇಲಾಖೆ ಮೇಲೆ ಒತ್ತಡ ತಂದು ಬಹುವರ್ಷಗಳ ಹಿಂದೆಯೇ ಪ್ರಭಾವ ಬೀರಿ ಮಠಕ್ಕೆ ಚುರಕಿ ಹಾಕಿಸಿಕೊಂಡವರಿಗಾದರೂ ನಾಯಕನ ಬಗ್ಗೆ ಕಿಂಚಿತ್ತಾದರೂ ಗೌರವ   ಕೃತಜ್ಞತೆ ಇರಬೇಕಿತ್ತಲ್ಲವೇ.

‘ಭರಮಣ್ಣನಾಯಕ ಶೌರ್ಯ ಪ್ರಶಸ್ತಿ’ಯ ಜೊತೆಗೆ ₹ 25 ಸಾವಿರ  ನಗದನ್ನು ಸಾಹಸಿಗಳಿಗೆ ಇತ್ತೀಚೆಗೆ ಕೊಡುತ್ತಿದ್ದಾರೆ. ಅಂತೆಯೇ ಪಾಳು ಬಿದ್ದಿರುವ ನಾಯಕರ ಸಮಾಧಿ ಕಾಯಕಲ್ಪ ಮಾಡಿಸಿ ಸ್ಮಾರಕ ಉಳಿಸಿ ಅದನ್ನು ಇತಿಹಾಸ ಅಭಿಮಾನಿಗಳು, ಪ್ರವಾಸಿಗರೂ ನೋಡುವಂತೆ ಮಾಡುವುದು ಕೂಡ ಋಣಸಂದಾಯವಲ್ಲವೆ? ಊರಿನಲ್ಲಿ ಜನಪ್ರತಿನಿಧಿಗಳಿದ್ದಾರೆ, ಅಧಿಕಾರಿಗಳಿದ್ದಾರೆ. ಆದರೆ ಎಲ್ಲರಿಗೂ ಸಂಪಾದನೆ ದಾಹ. ಇಲ್ಲಿ ಖ್ಯಾತ ಇತಿಹಾಸ ಸಂಶೋಧಕರುಗಳ ದಂಡೇ ಇದೆ.  ಕೋಟೆ ಸಂರಕ್ಷಣಾ ವೇದಿಕೆ, ಜಿಲ್ಲಾ ಇತಿಹಾಸಕೂಟವಿದೆ. ಕನ್ನಡ ಸಂಘಸಂಸ್ಥೆಗಳಿವೆ. ಇವರುಗಳಾದರೂ ಸಂಬಂಧಪಟ್ಟ ಇಲಾಖೆ ಮೇಲೆ ಒತ್ತಡ ತಂದು ನಾಯಕನ ಸಮಾಧಿ ಉಳಿಸಿಕೊಳ್ಳುವ ಪ್ರಯತ್ನವನ್ನು ಇನ್ನಾದರೂ ಮಾಡಬೇಕಲ್ಲವೇ.  ನಾಯಕರು ಕೇವಲ ನಾಯಕ ಜನಾಂಗದ ದೊರೆಗಳಲ್ಲ ಚಿತ್ರದುರ್ಗದ ಪ್ರಭುಗಳು. ಇದು ದುರ್ಗದ ಎಲ್ಲರ ಕರ್ತವ್ಯವೆಂದೇಕೆ ಯಾರಿಗೂ ಅನಿಸುತ್ತಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT