ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಕಾರದ ಜೊತೆಗೆ ಜಯದ ಹಾದಿಯಲ್ಲಿ

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಸುಂದರ ಜೋಡಿ ಕಪ್ಪುಕಂಗಳ ಗುಂಡುಮೊಗದ ಆ ಹೆಣ್ಣುಮಗುವಿನ ನಡೆ-ನುಡಿಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ‘ರಜನಿ’ ಹೆಸರಿನ ಅವಳು ಇರುಳ ಹಾದಿಯಲ್ಲಿ ಬದುಕಿನ ಪಯಣ ಸಾಗಿಸಬೇಕಾಗುತ್ತದೆ  ಎನ್ನುವುದು ಪೋಷಕರಿಗೆ ತಿಳಿದಿರಲಿಲ್ಲ. 

ಆರನೇ ವಯಸ್ಸು ಕಳೆಯುತ್ತಿದ್ದಂತೆ ವಿಲ್ಸನ್ ಗಾರ್ಡನ್‌ನ ಕೆ. ಎಂ. ಶಾಲೆಗೆ ಸೇರಿದಾಗ ‘ಪ್ರತಿಭಾ ಸಂಪನ್ನೆ’ಯಾಗಿದ್ದಳು. ಅವಳು ಮೂರನೇ ತರಗತಿಗೆ ಕಾಲಿಟ್ಟದ್ದಳು. ಒಂದು ರಾತ್ರಿ ಶೀತ ಉಲ್ಬಣಿಸಿತು. ಮರುದಿನ ಬೆಳಗ್ಗೆ ಅಮ್ಮ ರಾಜಲಕ್ಷ್ಮಿ ಮಗಳನ್ನು ವೈದ್ಯರ ಬಳಿ ಕರೆದೊಯ್ದರು.

ಡಾಕ್ಟರ್‌ ಕೊಟ್ಟ ಮಾತ್ರೆ ತಿಂದು ಮಲಗಿದ ಪುಟಾಣಿಗೆ ನಿದ್ದೆಯೇ ಬರಲಿಲ್ಲ. ಇನ್ನಷ್ಟು ಕಿರಿಕಿರಿ, ತಾಳಲಾರದಷ್ಟು ನೋವು-ಅಲರ್ಜಿ ಉಂಟಾಗಿ ಮೈಮೇಲೆಲ್ಲ ಗುಳ್ಳೆಗಳಾದವು. ಕಣ್ಣುಗಳೆರಡು ಕೆಂಡದುಂಡೆಗಳಾದವು. ಸಂಜೆ ಅಮ್ಮ ಪುನಃ ವೈದ್ಯರ ಬಳಿ ರಜನಿಯನ್ನು ಕರೆದೊಯ್ಯದಾಗ ಅವರು ಇನ್ನೊಂದು ಪೆನ್ಸಿಲಿನ್ ಮಾತ್ರೆ ತೆಗೆದುಕೊಳ್ಳಲು ಸೂಚಿಸಿದರು. ಎರಡನೇ ಮಾತ್ರೆ ತೆಗೆದುಕೊಂಡ ನಂತರ ಪರಿಸ್ಥಿತಿ ಬಿಗಡಾಯಿಸಿತು. 

ಪ್ರತಿಕೂಲ ಪರಿಣಾಮ ಉತ್ತುಂಗ ತಲುಪಿತ್ತು.  ಬೆಳಗ್ಗೆ ರಜನಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ದೇಹದ ಚರ್ಮವೆಲ್ಲ ಸುಟ್ಟಿತ್ತು. ತುಟಿಗಳು ಒಡೆದು ಹೋಗಿದ್ದವು. ಕಣ್ಣುಗಳಲ್ಲೂ ಉರಿ,  ದೇಹದ ಒಳ-ಹೊರಗೂ ಸುಟ್ಟ ಸ್ಥಿತಿ, ಅಪಾರ ನೋವು. ಪುಟ್ಟ ದೇಹಕ್ಕೆ ಮೊದಲ ಒಂದು ತಿಂಗಳು ಪೈಪ್ ಮೂಲಕವೇ ದ್ರವಾಹಾರವನ್ನೇ ನೀಡಲಲಾಗುತ್ತಿತ್ತು.  ಹೀಗೆ ಐದು ತಿಂಗಳು ಆಸ್ಪತ್ರೆಯಲ್ಲಿ ಕಳೆದಳು ರಜನಿ.

ಪೆನ್ಸಿಲಿನ್ ಮಾತ್ರೆಯ ಪ್ರಭಾವದಿಂದ ರಜನಿಯ ದೇಹದೊಳಗೆ ಸ್ಟೀವನ್ ಜಾನ್ಸನ್ ಸಿಂಡ್ರೋಮ್ ದಾಳಿ ಮಾಡಿತ್ತು. ಈ  ಸಿಂಡ್ರೋಮ್ ಯಾವುದಾದರೂ ಒಂದು ಅಂಗದ ಮೇಲೆ ತನ್ನ ಪ್ರಭಾವ ಹೆಚ್ಚಿಸುತ್ತ ಶಾಶ್ವತವಾಗಿ ಆ ಅಂಗವನ್ನು ನಾಶಗೊಳಿಸುತ್ತಿದೆ.

ರಜನಿಯ ಕಣ್ಣುಗಳಿಗೆ ಆ ಸಿಂಡ್ರೋಮ್ ಎರಗಿತ್ತು. ಆರಂಭದಲ್ಲಿ ರಜನಿಯ ಕಣ್ಣುಗಳಿಂದ ಸದಾ ನೀರು ಸುರಿಯುತ್ತಿತ್ತು. ನಂತರ ಕಣ್ಣುಗಳ ಒಳಭಾಗದಲ್ಲಿ ಒಣ ಅನುಭವ. ಜೊತೆಗೆ ಕಣ್ಣಿನೊಳಗೆ ಬಾಗಿ ಬೆಳೆಯುವ ರೆಪ್ಪೆಗಳು ಕಾರ್ನಿಯಾಗೆ ನಿರಂತರವಾಗಿ ಬಡಿದು ಇನ್ನಷ್ಟು ಹಾನಿ, ಯಾತನೆ ಕೊಡುತ್ತಿದ್ದವು.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಆರಂಭದಲ್ಲಿ – ಕಣ್ಣಿನೊಳಕ್ಕೆ ಬೆಳೆದ ರೆಪ್ಪೆಗಳನ್ನು ಹತ್ತು ದಿನಕ್ಕೊಮ್ಮೆ ತೆಗೆಸಿಕೊಂಡು ಬರುತ್ತಿದ್ದರು ರಜನಿ. ಅವು ನಿರಂತರವಾಗಿ ಚುಚ್ಚಿ ಅಸಾಧ್ಯ ನೋವು.

ಬಾಲೆ ರಜನಿಯನ್ನು  ಮಾತನಾಡಿಸಲು ಯಾರೂ ಬರುತ್ತಿರಲಿಲ್ಲ. ಜಾಣ ಕುವರಿ ತಲ್ಲಣಗೊಂಡಳು. ಈ ಸ್ಥಿತಿಯಲ್ಲೂ ಶಾಲಾಶಿಕ್ಷಣ ಮುಂದುವರಿಸಿದಳು. ಐದು ತಿಂಗಳು ಆಸ್ಪತ್ರೆಯಲ್ಲಿದ್ದರೂ ಈ ಮೊದಲಿನ ಟೆಸ್ಟ್‌ಗಳಲ್ಲಿನ ಸಾಧನೆ ಕಾರಣ ಅಂತಿಮ ಪರೀಕ್ಷೆಗೆ ಅನುಮತಿ ಸಿಕ್ಕಿತು.

ಕಣ್ಣುಗಳ ತೊಂದರೆ ನಡುವೆಯೂ  ಪರೀಕ್ಷೆ ಬರೆದು ಪಾಸ್ ಆದಳು, ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದಳು. ಬಾಲ್ಯದ ಸೊಬಗು ಅವಳಿಗೆ ದೊರೆಯಲಿಲ್ಲ. ಆದರೆ, ಅಪ್ಪ, ಅಮ್ಮ, ಇಬ್ಬರು ತಮ್ಮಂದಿರು ಚೆನ್ನಾಗಿಯೇ ನೋಡಿಕೊಂಡರು.  ಬಳಿಕ ಹೈಸ್ಕೂಲ್‌ಗೆ ರಜನಿ ಪ್ರವೇಶ ಪಡೆದಳು.

ಪ್ರತಿ ವಾರ ಒಳರೆಪ್ಪೆ ಕೀಳಿಸಿಕೊಳ್ಳಲು ವೈದ್ಯರ ಬಳಿ ಹೋಗುತ್ತಿದ್ದರೂ ದೃಷ್ಟಿ ಹೋಗಬಹುದು ಎಂಬ ಶಂಕೆ ಬರಲಿಲ್ಲ. ಎರಡೂ ಕಂಗಳ ಕಾರ್ನಿಯಾ ದುರ್ಬಲವಾಗುತ್ತಿದ್ದರೂ ಕಷ್ಟಪಟ್ಟು ಓದಿದ ರಜನಿ 1985ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.75 ಅಂಕಗಳೊಂದಿಗೆ ತೇರ್ಗಡೆಯಾದಳು.

ಜೂನಿಯರ್, ಸೀನಿಯರ್ ಟೈಪಿಂಗ್‌ ಮುಗಿಸಿದಳು. ಶಾರ್ಟ್ ಹ್ಯಾಂಡ್  ಜ್ಯೂನಿಯರ್ ಪೂರ್ತಿಗೊಳಿಸಿ ಇಂಟರ್‌ಮೀಡಿಯೆಟ್‌ಗೆ ಹೋದಾಗ ಪದಗಳ ಸಂಜ್ಞೆಯ ಸಾಲುಗಳು ಕಾಣಿಸದಾದವು. ಕಣ್ಣುಗಳ ಅಗಾಧ ತೊಂದರೆಯ ನಡುವೆಯೂ ಓದುತ್ತಿದ್ದಳು. 

ಕರಕುಶಲ ಕಲೆಯಲ್ಲೂ ತೊಡಗಿಸಿಕೊಂಡಳು. ಆದರೆ ದೃಷ್ಟಿ ಅವನತಿಯತ್ತ ಸಾಗಿತ್ತು. ಎಲೆಕ್ಟ್ರಾಲಿಸಿಸ್ ಮೂಲಕ ಒಳರೆಪ್ಪೆಗಳ ಬೇರನ್ನೇ ಸುಟ್ಟರೂ ರೆಪ್ಪೆಗಳು ವೇಗವಾಗಿ ಹುಟ್ಟಿಕೊಳ್ಳುತ್ತಿದ್ದವು.  ಸುಡುವುದರಿಂದ ಚರ್ಮಕ್ಕೆ ಹಾನಿ ಎಂದು ಎಲೆಕ್ಟ್ರಾಲಿಸಿಸ್ ಕೈಬಿಡಲಾಯಿತು.

ಆ ವೇಳೆಗೆ ಬಲಗಣ್ಣು ಸಾಕಷ್ಟು ಪ್ರಮಾಣದಲ್ಲಿ ದೃಷ್ಟಿ ಕಳೆದುಕೊಂಡಿತ್ತು. ವೈದ್ಯರು ಕಾರ್ನಿಯಾ ಗ್ರಾಫ್ಟಿಂಗ್‌ನ ಸಲಹೆ ನೀಡಿದರು. ಈ ವೇಳೆಗೆ ಯಾವ ಶೈಕ್ಷಣಿಕ ವರ್ಷವನ್ನೂ ಬಿಡದೇ ಕಾಮರ್ಸ್ ಪದವಿ ತಲುಪಿದ್ದರು ರಜನಿ! ಪಿಯುಸಿ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಮುಗಿಸಿ, ಪದವಿಗೆ ವಿಜಯಾ ಕಾಲೇಜಿಗೆ ಪ್ರವೇಶ ಪಡೆದರು ರಜನಿ.

ಕರಗಿಹೋದ ಕಾರ್ನಿಯಾ
ಬಲಗಣ್ಣಿಗೆ ಅಳವಡಿಸಿದ ಕಾರ್ನಿಯಾ ಕರಗಿ ಹೋಯಿತು.  ಇನ್‌ಫೆಕ್ಷನ್ ಅಧಿಕಗೊಂಡಿತು. ಮತ್ತೆ ಕಾರ್ನಿಯಾ ಸಿಗುವವರೆಗೂ ಮನೆಯಿಂದ ಹೊರಗೆ ಹೋಗುವಂತಿರಲಿಲ್ಲ. ಬಲಗಣ್ಣಿನ ಸ್ಥಳ ಗುಂಡಿಯಂತಾಗಿತ್ತು. ಆರು ತಿಂಗಳ ಕಾಲ ಬೇರೆ ಕಾರ್ನಿಯಾ ಸಿಗಲೇ ಇಲ್ಲ.

ಸಿಕ್ಕಿದ ಕಾರ್ನಿಯಾವನ್ನು ಬಲ ಕಣ್ಣಿಗೆ ಅಳವಡಿಸುವಾಗ ವೈದ್ಯರು ಅದು ಕರಗದಿರಲಿ ಎಂದು ಕೆಳಗಡೆ ರೆಪ್ಪೆ ಮತ್ತು ಮೇಲಿನ ಚರ್ಮ ತೆಗೆದು ಜೋಡಿಸಿದರು. ಈ ಕಾರ್ನಿಯಾ ಸಹ ವಿಫಲವಾಗಿ ಬಲಗಣ್ಣು ಪೂರ್ತಿ ದೃಷ್ಟಿ ಕಳೆದುಕೊಂಡಿತು. ಎಡಗಣ್ಣಿನಲ್ಲಿ ಸ್ವಲ್ಪವೇ ದೃಷ್ಟಿ ಇತ್ತು. ರಜನಿಗೆ ಆರು ತಿಂಗಳು ಕಾಲೇಜಿಗೆ ಹೋಗಲು ಸಾಧ್ಯವಾಗಲಿಲ್ಲ.

ಆಗ ಡಿಸೆಂಬರ್.  ‘ಮಾರ್ಚ್‌ನಲ್ಲಿ ಪರೀಕ್ಷೆ ಎದುರಿಸಲೇ ಬೇಕು’ ಎಂದು ನಿರ್ಧರಿಸಿದರು. ಬಲಗಣ್ಣಿಗೆ  ಬಟ್ಟೆ ಕಟ್ಟಿಕೊಂಡು ಎಡಗಣ್ಣಿನ ಮೂಲಕ ಕತ್ತಲು-ಬೆಳಕಿನ ಆಟದಲ್ಲೇ ಓದಿದರು. ಸಹಪಾಠಿಗಳು  ಕಾರ್ಬನ್ ಕಾಪಿ ಇಟ್ಟು ನೋಟ್ಸ್ ತಂದೊಪ್ಪಿಸುತ್ತಿದ್ದರು. ಕಡಿಮೆ ಸಾಮರ್ಥ್ಯದ ಎಡಗಣ್ಣಿನ ದೃಷ್ಟಿಯಲ್ಲೇ ಓದಿ ಪದವಿ ಮುಗಿಸಿದರು! 1990ರಲ್ಲಿ ಪದವಿ ಫಲಿತಾಂಶ ಬಂದಾಗ ಶೇ.72 ಅಂಕ ಗಳಿಸಿದ್ದರು.

ಕಣ್ಣಿನ ಸಮಸ್ಯೆ ಕಂಡು ಯಾರೂ ಕೆಲಸ ಕೊಡಲಿಲ್ಲ. ಆಗ (90ರ ದಶಕದಲ್ಲಿ) ಅಂಗವಿಕಲರಿಗೆ ನೆರವಾಗುವ ಯೋಜನೆಗಳಿರಲಿಲ್ಲ. ಕೇವಲ ಬಿಕಾಂ ಪದವಿಯಿಂದ ಕೆಲಸದ ಅವಕಾಶ ಕಡಿಮೆ. ಎಂಕಾಂ ಮಾಡಬೇಕೆಂದರೆ ಅಪ್ಪನ ನೆರವು ಬೇಕು.

ಕೆಎಸ್‌ಆರ್‌ಟಿಸಿಯಲ್ಲಿ ಲೆಕ್ಕಪತ್ರ ವಿಭಾಗದಲ್ಲಿ ತಂದೆ ಗೋಪಾಲಕೃಷ್ಣ ಕಾರ್ಯನಿರ್ವಹಿಸುತ್ತಿದ್ದರು. ಮನೆಯಲ್ಲಿ ಅವರೊಬ್ಬರೇ ದುಡಿಯುವವರು. ಇಬ್ಬರು ತಮ್ಮಂದಿರು ಓದುತ್ತಿದ್ದರು. ಉಪನ್ಯಾಸಕರೊಬ್ಬರು, ‘ಸಿಎ ಪಾಸ್ ಮಾಡಿದರೆ ನೀವೇ ಪ್ರ್ಯಾಕ್ಟೀಸ್ ಮಾಡಬಹುದು’ ಎಂದರು.

ಸಿಎ ಕಡೆಗೆ ನಡೆ
ಒಂದೇ ಕಣ್ಣಿನ ತೀರಾ ಕ್ಷೀಣ ದೃಷ್ಟಿಯಲ್ಲೇ ಸಿಎ ಓದಲು ಆರಂಭಿಸಿದರು ರಜನಿ. ಆರ್ಟಿಕಲ್‌ಶಿಪ್ ಮಾಡುವಾಗ ಬಸ್ ನಂಬರ್‌ ತಿಳಿಯುತ್ತಿರಲಿಲ್ಲ. ಎಲ್ಲೋ ಇಳಿದು ಎಲ್ಲೋ ಹೋಗಿರುತ್ತಿದ್ದರು. ಮೊದಲ ಹಂತ ಇಂಟರ್‌ಮಿಡಿಯೇಟ್ ನ ಎರಡೂ ಗ್ರೂಪ್‌ನ ಒಟ್ಟು ಎಲ್ಲ ಪ್ರಶ್ನೆಪತ್ರಿಕೆಗಳಿಗೆ ಏಕಕಾಲಕಕ್ಕೆ ಉತ್ತರ ಬರೆದು ಮೊದಲ ಯತ್ನದಲ್ಲೇ ಉತ್ತೀರ್ಣಗೊಂಡರು (1992)!

ಪೂರ್ತಿ ಅಳಿದ ದೃಷ್ಟಿ
ಅಂತಿಮ ಸಿಎ ಮೊದಲ ಗ್ರೂಫ್‌ನ ಪರೀಕ್ಷೆಗೆ ಸಿದ್ಧರಾದರು. ಎಡಗಣ್ಣು  ಸುಮಾರು ಶೇ. 90ರಷ್ಟು ದೃಷ್ಟಿ ಕಳೆದುಕೊಂಡಿತ್ತು. ಬಲಕಣ್ಣು ಈ ಮೊದಲೇ ದೃಷ್ಟಿ ಕಳೆದುಕೊಂಡಿತ್ತು. ಪರೀಕ್ಷಾ ಕೊಠಡಿಯಲ್ಲಿ ಬಾಗಿಲ ಬಳಿ ಕುಳಿತು  ಪ್ರಶ್ನೆಪತ್ರಿಕೆಯ ಒಂದೊಂದೇ ಲೈನ್ ಅಂತರದಲ್ಲಿ ಮಡಚಿಕೊಳ್ಳುತ್ತ ಪ್ರಶ್ನೆಯನ್ನು ಗ್ರಹಿಸುತ್ತ,

ಉತ್ತರ ಪತ್ರಿಕೆ ಬರೆಯುವಾಗಲೂ ಅದೇ  ತಂತ್ರ ಉಪಯೋಗಿಸುತ್ತ ಎದುರಾಗಿದ್ದ  ತೊಂದರೆಗೆ ಸವಾಲೆಸೆದು ಜಯಶೀಲರೂ ಆದರು. ಈ ಪರೀಕ್ಷೆಯಲ್ಲೂ ಪಾಸಾದರು. ಪರೀಕ್ಷೆ ಮುಗಿದ ಕೆಲದಿನಗಳಲ್ಲಿ ಎಡಗಣ್ಣು ಪೂರ್ತಿಯಾಗಿ ದೃಷ್ಟಿ ಕಳೆದುಕೊಂಡಿತು.

ಆದರೆ ರಜನಿ ಖಿನ್ನತೆಗೆ ಒಳಗಾದರು. ಛಲ ಸುಪ್ತವಾಯಿತು. 2ನೇ ಗ್ರೂಪ್‌ನ ಪರೀಕ್ಷೆಗೆ ಸಿದ್ಧತೆ ನಡೆಯಲಿಲ್ಲ. ಇನ್ನೊಂದು ಆಘಾತ ಎದುರಾಗಿತ್ತು. ತಂದೆ ಗೋಪಾಲಕೃಷ್ಣರಿಗೆ ರಕ್ತದ ಕ್ಯಾನ್ಸರ್ ದೃಢಪಟ್ಟಿತ್ತು. ಈ ವೇಳೆ ತಾವು ಪೂರ್ತಿ ಅಂಧೆ ಎಂದು ಪೋಷಕರಿಗೆ ತಿಳಿಸಲಾಗದೇ ರಜನಿ  ಕುಗ್ಗಿಹೋದರು. ತಡಕಾಡುತ್ತ ಮನೆಯಲ್ಲಿ ವೈಯಕ್ತಿಕ ಕೆಲಸಗಳನ್ನು ನಿರ್ವಹಿಸುತ್ತಿದ್ದರು.   ಕೆಲ ವರ್ಷ ಉರುಳಿದವು. ಈ ನಡುವೆಯೇ ವೀಣೆ ಕಲಿತರು.

ಸೋದರ ನರೇಂದ್ರ ‘ಸಹಜಯೋಗ’ ಧ್ಯಾನ ಕಾರ್ಯಕ್ರಮಕ್ಕೆ ಅಕ್ಕನನ್ನು ಕರೆದುಕೊಂಡ ಹೋದ. ರಜನಿ ಧ್ಯಾನ ಶುರು ಮಾಡಿದ ಮೇಲೆ ಖಿನ್ನತೆ ಕಡಿಮೆಯಾಗುತ್ತ ಬಂತು. ತಿಂಗಳುಗಳು ಉರುಳುತ್ತಿದ್ದಂತೆ  ಒಳರೆಪ್ಪೆಗಳ ಬೆಳವಣಿಗೆ ಕುಂಠಿತಗೊಂಡಿತ್ತು. 

ಒಳರೆಪ್ಪೆ ತೆಗೆಸಲು ಆಸ್ಪತ್ರೆಗೆ ಈಗ ಐದಾರು ತಿಂಗಳಿಗೆ ಒಮ್ಮೆ ಹೋಗಬೇಕಾಯಿತು. ಅದುವರೆಗೆ ಪ್ರತಿ 10 ನಿಮಿಷಕ್ಕೆ ಡ್ರಾಪ್ಸ್ ಹಾಕಿಕೊಳ್ಳುತ್ತಿದ್ದವರು ಈಗ  4 ಗಂಟೆ ಹಾಕದಿದ್ದರೂ ತೊಂದರೆ ಇರಲಿಲ್ಲ. 2000ರ ನವೆಂಬರ್‌ನಲ್ಲಿ ತಂದೆ ನಿಧನರಾದರು.

ತಂದೆ ನಿಧನರಾಗಿ ಎರಡು  ತಿಂಗಳಾಗಿತ್ತು.  ‘ಸಮರ್ಥನಂ’ ಎಂಬಲ್ಲಿ ಕಂಪ್ಯೂಟರ್ ಶಿಕ್ಷಣ ಪಡೆಯಲು ಸೇರಿಕೊಂಡರು. ವೃದ್ಧಾಪ್ಯಕ್ಕೆ ಅಡಿ ಇಡುತ್ತಿದ್ದ ತಾಯಿ ಬೇಗನೆ ಎದ್ದು, ತಿಂಡಿ, ಅಡುಗೆ ಮುಗಿಸಿ ಮಗಳನ್ನು ಸಂಸ್ಥೆಗೆ ಕರೆತರುತ್ತಿದ್ದರು. ಆರಂಭದಲ್ಲಿ ತರಗತಿ ಮುಗಿಯುವ ತನಕ ತಾಯಿ ಅಲ್ಲಿಯೇ ಕುಳಿತು ವಾಪಸ್ ಮನೆಗೆ ಕರೆದುಕೊಂಡು ಬರುತ್ತಿದ್ದರು.

ಬಳಿಕ ರಜನಿ ಒಬ್ಬರೇ ಹೋಗುತ್ತಿದ್ದರು. ಕೋಲು ಬಳಸುತ್ತಿರಲಿಲ್ಲ. ಒಮ್ಮೆ ರಸ್ತೆ ದಾಟುವಾಗ ಬೈಕ್‌ಗೆ ಡಿಕ್ಕಿ ಹೊಡೆಯುವುದರಲ್ಲಿದ್ದರು. ಕೋಲು ಬಳಸುವ ಕುರಿತು ರಜನಿಗೆ ಮುಜುಗರವಿತ್ತು.  ಅಂದಿನಿಂದಲೇ ಕೋಲು ಬಳಸಿದರು. ಅದು ಇನ್ನಷ್ಟು ಸ್ವಾವಲಂಬನೆ, ಆತ್ಮವಿಶ್ವಾಸ ನೀಡಿತು.

ಏಳು ವರ್ಷದ ಬಳಿಕ  ಅಂಧೆ ರಜನಿ ಅಂತಿಮ ಪರೀಕ್ಷೆಗೆ ಬರೆಯಲು ಸಿದ್ಧರಾದರು. ಸಮರ್ಥನಂ ಕಾರ್ಯಕರ್ತರು ಸಿಎ ಪುಸ್ತಕಗಳ ಪುಟಗಳ ಜೆರಾಕ್ಸ್ ತೆಗೆದು ಸ್ಕಾನ್ ಮಾಡಿ, ಬಳಿಕ ವರ್ಡ್‌ಗೆ ರೂಪಾಂತರಿಸಿ ಕೊಟ್ಟರು.

ಜಾಸ್ ಸಾಫ್ಟ್‌ವೇರ್ ಬಳಸಿ ಅಧ್ಯಯನ ಆರಂಭಿಸಿದರು ರಜನಿ.  ಸ್ಕ್ರೈಬ್ ಮೂಲಕ 2002ರಲ್ಲಿ ರಜನಿ ಪರೀಕ್ಷೆ ಬರೆದರು. 2003ರಲ್ಲಿ ಸಿಎ ಫಲಿತಾಂಶ ಬಂದಾಗ ರಜನಿ ಪಾಸಾಗಿದ್ದರು. ಜೊತೆಗೆ ಭಾರತದಲ್ಲಿ ಸಿಎ ಮಾಡಿದ ಪ್ರಥಮ ಅಂಧ ಮಹಿಳೆ ಎಂಬ ಗೌರವ ಅವರ ಪಾಲಾಗಿತ್ತು.

ಆದರೆ  ಕೆಲಸ ಸಿಗಲಿಲ್ಲ. ಸಮರ್ಥನಂ ನಲ್ಲಿ ಅಂಗವಿಕಲ, ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡ ಲಾರಂಭಿಸಿದರು.  ಸಿಎ ಬಳಿಕ ಪ್ರಥಮ ಕೆಲಸ ಸಿಕ್ಕಿದ್ದು ‘ತಾಜ್ ವೆಸ್ಟ್ ಎಂಡ್’ ಸಂಸ್ಥೆಯಲ್ಲಿ. ಕಮ್ಯುನಿಟಿ ಕೋ–ಆರ್ಡಿನೇಟರ್ ಆಗಿ ಮೂರು ವರ್ಷ  ಕೆಲಸ ಮಾಡಿದರು.

2003ರಲ್ಲಿ ಇನ್‌ಫೋಸಿಸ್ ಸಂಸ್ಥೆ ಸೇರಿ ಆರು ವರ್ಷ ಕೆಲಸ ಮಾಡಿದರು. ವಾರಾಂತ್ಯ ಸಮರ್ಥನಂನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು. 2012ರಿಂದ  ಸಿಬಿಎಂ ಸ್ವಯಂಸೇವಾ ಸಂಸ್ಥೆಯಲ್ಲಿ ಹಣಕಾಸು ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ರಜನಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT