ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಓದಿಗೆ ಕೇಳುಪುಸ್ತಕಗಳು

Last Updated 18 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯ ವಿದ್ಯಾರ್ಥಿಗಳಿಗೆ ಬೋಧಿಸುವುದಕ್ಕಿಂತ ಅಂಧ ವಿದ್ಯಾರ್ಥಿಗಳಿಗೆ ಬೋಧಿಸುವುದು ದೊಡ್ಡ ಸವಾಲು. ಅಂಧರಿಗೆಂದೇ ಪ್ರತ್ಯೇಕ ಪ್ರೌಢಶಾಲೆಗಳಿವೆ. ಆದರೆ ಕಾಲೇಜು ಶಿಕ್ಷಣಕ್ಕೆ ಅಂಧರೂ ಸಾಮಾನ್ಯ ಕಾಲೇಜುಗಳಿಗೇ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ಬ್ರೈಲ್ ಲಿಪಿ ಆಧರಿಸಿದ ಪ್ರೌಢ ಶಿಕ್ಷಣದಿಂದ ಸಾಮಾನ್ಯ ಕಾಲೇಜು ಶಿಕ್ಷಣಕ್ಕೆ ಬಂದಾಗ ಅಂಧರಿಗೆ, ಈಜು ಬರದವರನ್ನು ಸಮುದ್ರಕ್ಕೆ ಬಿಟ್ಟಂತಾಗುವುದೇ ಸರಿ.

ಪ್ರಾಧ್ಯಾಪಕರು ಸಾಮಾನ್ಯ ವಿದ್ಯಾರ್ಥಿಗಳಿಗೆ ಮಾಡುವ ಪಾಠವನ್ನೇ ರೆಕಾರ್ಡ್ ಮಾಡಿಕೊಂಡೋ ಅಥವಾ ಬ್ರೈಲ್‌ ಲಿಪಿಯಲ್ಲಿ ಬರೆದುಕೊಂಡು ಅಭ್ಯಾಸ  ಮಾಡಬೇಕಾದದ್ದು ಅಂಧ ವಿದ್ಯಾರ್ಥಿಗಳಿಗೆ ಅನಿವಾರ್ಯ. ಪಠ್ಯದ ಸಿಗದ ಮಾಹಿತಿಗಾಗಿ ಈ ವಿದ್ಯಾರ್ಥಿಗಳು ಶಿಕ್ಷಕರ ಹಿಂದೆ ಬೀಳುವುದೂ ಅನಿವಾರ್ಯ. ಜತೆಗೆ ಪಠ್ಯ ಪುಸ್ತಕ ಬ್ರೈಲ್‌ ಲಿಪಿಯಲ್ಲಿ ಲಭ್ಯವಿಲ್ಲದಿರುವುದು, ಇದ್ದರೂ ದುಬಾರಿ ಬೆಲೆ, ನಿರ್ವಹಣೆಯೂ ಕಷ್ಟ. ಈ ಎಲ್ಲಾ ಕಾರಣಗಳು ಅಂಧರನ್ನು ಉನ್ನತ ಶಿಕ್ಷಣದಿಂದ ವಿಮುಖರಾಗುವಂತೆ ಮಾಡಿದೆ.

ಒಂದೊಮ್ಮೆ ಅಂಧರು ಉನ್ನತ ಶಿಕ್ಷಣಕ್ಕೆ ಬಂದರೂ ಅವರ ಆಯ್ಕೆಯಲ್ಲಿ ಸಂಗೀತ ಪ್ರಧಾನವಾಗಿರುತ್ತದೆ. ಸಂಗೀತದ ನಂತರದ ಪ್ರಾಧಾನ್ಯ ಮಾನವಿಕ ಶಾಸ್ತ್ರಗಳಿಗೆ. ಅಂಧರಿಗೆ ಬೋಧಿಸಲು ಹೆಚ್ಚಿನ ಆಸ್ಥೆ, ತಾಳ್ಮೆ ಮತ್ತು ಬ್ರೈಲ್ ಲೈಬ್ರರಿಯಂತಹ ದುಬಾರಿ ಬಾಬತ್ತಿನ ಅಗತ್ಯವಿರುವುದರಿಂದ ಬಹುತೇಕ ಕಾಲೇಜುಗಳು ಅಂಧರಿಗೆ ಸೀಟು ನೀಡಲು ಮೀನ ಮೇಷ ಎಣಿಸುತ್ತವೆ. ಆದರೆ ಬೆಂಗಳೂರಿನಲ್ಲಿರುವ ಸರ್ಕಾರಿ ಕಾಲೇಜೊಂದರಲ್ಲಿ ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 31 ಅಂಧ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಒಂದೇ ಕಾಲೇಜೊಂದರಲ್ಲಿ 31 ಅಂಧರು ವಿದ್ಯಾಭ್ಯಾಸ ಮಾಡುತ್ತಿರುವುದು ದೊಡ್ಡ ವಿಷಯವೇ ಹೌದು.

ಬೆಂಗಳೂರಿನ ವಿಜಯನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂಧ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಅಂತಹ ಒಂದು ಅಂಧ ಸ್ನೇಹಿ ಬೋಧನಾ ವಿಧಾನವನ್ನು ಈ ಕಾಲೇಜಿನ ಪ್ರಾಧ್ಯಾಪಕರು ಅನುಸರಿಸುತ್ತಿದ್ದಾರೆ. ಹೀಗಾಗಿಯೇ 2008ರಲ್ಲಿ ಕೇವಲ 5ರಷ್ಟಿದ್ದ ಅಂಧ ವಿದ್ಯಾರ್ಥಿಗಳ ಸಂಖ್ಯೆ 2015ನೇ ಸಾಲಿನಲ್ಲಿ 31ಕ್ಕೆ ಏರಿದೆ.

ಈ ಕಾಲೇಜಿನಲ್ಲಿ ದೊಡ್ಡ ಬ್ರೈಲ್‌ ಲೈಬ್ರರಿ ಇದೆ. ಇದಕ್ಕಿಂತಲೂ ಹೆಚ್ಚಾಗಿ ಇಲ್ಲಿ ಕೇಳು ಪುಸ್ತಕಗಳ ಸ್ವರೂಪದಲ್ಲಿರುವ ಕನ್ನಡದ ನೂರಕ್ಕೂ ಹೆಚ್ಚು ಕಥೆ ಮತ್ತು ಕಾದಂಬರಿಗಳ ಸಂಗ್ರಹವಿದೆ. ಈ ಸಂಗ್ರಹ ತನ್ನ ವ್ಯಾಪ್ತಿಯಲ್ಲಿ ಪದವಿ ತರಗತಿಗಳ ಪಠ್ಯ ಪುಸ್ತಕಗಳೂ ಇವೆ. ಈ ಸಂಗ್ರಹ ಸುಮ್ಮನೆ ಬಂದದ್ದಲ್ಲ. ಅದರ ಹಿಂದೆ ಕನ್ನಡ ಪ್ರಾಧ್ಯಾಪಕರೊಬ್ಬರ ಒತ್ತಾಸೆ, ಹಲವು ಪ್ರಾಧ್ಯಾಪಕರ, ಹಳೆಯ ವಿದ್ಯಾರ್ಥಿಗಳ, ವಿದ್ಯಾರ್ಥಿಗಳ ಶ್ರಮ ಮತ್ತು ಕಾಲೇಜಿನ ಅಂದಂದಿನ ಪ್ರಾಂಶುಪಾಲರ ನೆರವಿದೆ.

‘ನಾನು ಮೊದಲ ವರ್ಷದ ಪದವಿ ತರಗತಿಯಲ್ಲಿ ಇದ್ದಾಗ ಬ್ರೈಲ್‌ನಲ್ಲಿ ಬರೆದುಕೊಳ್ಳುತ್ತಿದ್ದೆ. ಕೇಳಿದ ಪಾಠವನ್ನಷ್ಟೇ ಬ್ರೈಲ್‌ನಲ್ಲಿ ಬರೆದುಕೊಳ್ಳಲು ಸಾಧ್ಯವಾಗುತ್ತಿತ್ತು. ನಾನು ತೆಗೆದುಕೊಂಡಿದ್ದ ಕಾಂಬಿನೇಷನ್‌ನಲ್ಲಿ ಕನ್ನಡ ಸಾಹಿತ್ಯವೂ ಒಂದು ವಿಷಯ. ಕಥೆ ಮತ್ತು ಕವನಗಳನ್ನು ಗೆಳೆಯರು ಓದಿ ಎಂಪಿ3ಯಲ್ಲಿ ರೆಕಾರ್ಡ್ ಮಾಡಿಕೊಡುತ್ತಿದ್ದರು. ಕನ್ನಡ ಪ್ರಾಧ್ಯಾಪಕರಾದ ಲಲಿತಾಂಬ ಮೇಡಂ ಸಹ ರೆಕಾರ್ಡ್ ಮಾಡಿಕೊಡುತ್ತಿದ್ದರು’ ಎನ್ನುತ್ತಾರೆ ಈ ಕಾಲೇಜಿನ ಹಳೆಯ ವಿದ್ಯಾರ್ಥಿ ಶ್ರೀನಿವಾಸಮೂರ್ತಿ ಬಿ.ಜಿ.ಶ್ರೀನಿವಾಸಮೂರ್ತಿ ಮತ್ತು ಅವರ ಗೆಳೆಯರ ಪ್ರಕಾರ, ಕೇಳು ಪುಸ್ತಕಗಳ ಪರಿಕಲ್ಪನೆ ಹುಟ್ಟಿಗೆ ಹೀಗೆ ಪಠ್ಯಗಳನ್ನು ಅಂಧ ವಿದ್ಯಾರ್ಥಿಗಳಿಗೆ ರೆಕಾರ್ಡ್ ಮಾಡಿಕೊಡುವುದು ಕಾರಣ.

‘ನಾವು ಅಂತಿಮ ಪದವಿಗೆ ಬರುವಷ್ಟರಲ್ಲಿ ಯುಜಿಸಿ ಅನುದಾನದಲ್ಲಿ ನಮ್ಮ ಕಾಲೇಜಿಗೆ ಬ್ರೈಲ್‌ ಲೈಬ್ರರಿ ಬಂದಿತ್ತು. ಆದರೆ ಮುಂದಿನ ವರ್ಷದಲ್ಲಿ ಪಠ್ಯ ಬದಲಾದ್ದರಿಂದ, ಲೈಬ್ರರಿಯಲ್ಲಿ ಬ್ರೈಲ್‌ ಲಿಪಿಯಲ್ಲಿದ್ದ ಬಹುತೇಕ ಪುಸ್ತಕಗಳು ಔಟ್ ಆಫ್ ಡೇಟ್ ಆಗಿದ್ದವು. ಅಷ್ಟರಲ್ಲೇ ನಮ್ಮ ಕಾಲೇಜಿಗೆ ವರ್ಗವಾಗಿ ಹಿಂದಿರುಗಿದ ಲಲಿತಾಂಬ ಮೇಡಂ ಕೇಳುಪುಸ್ತಕಗಳ ಪರಿಕಲ್ಪನೆಗೆ ಮುಂದಡಿ ಇಟ್ಟರು’ ಎಂದು ಶ್ರೀನಿವಾಸಮೂರ್ತಿ ನೆನಪಿಸಿಕೊಳ್ಳುತ್ತಾರೆ.

2012ನೇ ಸಾಲಿನಲ್ಲಿ ಕಾಲೇಜಿಗೆ ವರ್ಗವಾಗಿ ವಾಪಸ್ ಬಂದ ಡಾ.ಎನ್.ಆರ್.ಲಲಿತಾಂಬ ಅವರು ಚೇತನಾ ಘಟಕದ ನೇತೃತ್ವ ವಹಿಸಿಕೊಂಡರು. ಬ್ರೈಲ್ ಪುಸ್ತಕಗಳನ್ನು ತರಿಸುವುದು, ಮುದ್ರಿಸುವುದು ಮತ್ತು ನಿರ್ವಹಣೆ ಖರ್ಚಿನ ಬಾಬತ್ತು ಎಂಬುದು ಆಗಾಗಲೇ ಸಾಬೀತಾಗಿತ್ತು. ಹೀಗಾಗಿ ಕೇಳುಪುಸ್ತಕಗಳನ್ನು ರೂಪಿಸುವುದು ವೆಚ್ಚದ ವಿಷಯ ಮತ್ತು ನಿರ್ವಹಣೆ ದೃಷ್ಟಿಯಿಂದ ಲಾಭದಾಯಕ ಎಂಬ ಅರಿವು ಆಗಿತ್ತು.

ಕಲಿಕೆ -ಗಳಿಕೆ
ವಿದ್ಯಾಭ್ಯಾಸದ ಖರ್ಚನ್ನು ಸಂಪಾದಿಸಲು ಕಾಲೇಜಿನ ಹಲವು ವಿದ್ಯಾರ್ಥಿಗಳು ವಿವಿಧೆಡೆ ಪಾರ್ಟ್‌ಟೈಂ ಕೆಲಸ ಮಾಡುತ್ತಿದ್ದರು. ಇದರಿಂದ ತರಗತಿ ನಡೆಯುತ್ತಿರುವಾಗಲೇ ಹಲವು ವಿದ್ಯಾರ್ಥಿಗಳು ಕೆಲಸಕ್ಕೆಂದು ಹೋಗುತ್ತಿದ್ದರು. ಈ ಸಮಸ್ಯೆ ನಿವಾರಣೆಗೆಂದೇ ಆರಂಭಿಸಿದ ಯೋಜನೆ ಕಲಿಕೆ-ಗಳಿಕೆ. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯ, ಕಚೇರಿ ಮತ್ತು ಪ್ರಯೋಗಾಲಯಗಳಲ್ಲಿ ಸಹಾಯಕರಾಗಿ ಕೆಲಸ ಮಾಡುವುದು. ಈ ರೀತಿ ಅವರು ದುಡಿದ ಒಟ್ಟು ಗಂಟೆಗಳಿಗೆ ತಿಂಗಳಾಂತ್ಯದಲ್ಲಿ ವೇತನ ನೀಡಲಾಗುತ್ತದೆ.

ವಿದ್ಯಾರ್ಥಿ ಸ್ನೇಹಿಯಾಗಿದ್ದ ಈ ಯೋಜನೆ ಕಾಲೇಜಿನಲ್ಲಿ ಯಶಸ್ವಿಯಾಗಿತ್ತು. ಈ ಯೋಜನೆಯನ್ನೇ ಮಾದರಿಯಾಗಿಟ್ಟುಕೊಂಡು ಪುಸ್ತಕಗಳನ್ನು ಓದಿ, ರೆಕಾರ್ಡ್ ಮಾಡಿಕೊಡುವ ವಿದ್ಯಾರ್ಥಿಗಳಿಗೆ ನಿಗದಿತ ವೇತನ ನೀಡಲಾಗುತ್ತಿತ್ತು. ಇದೂ ಯಶಸ್ವಿಯಾಯಿತು. ಯುಜಿಸಿ ಅನುದಾನ ಮುಗಿದರೂ, ಹಲವು ವಿದ್ಯಾರ್ಥಿಗಳು ಉಚಿತವಾಗೇ ಕೇಳುಪುಸ್ತಕಗಳನ್ನು ರೂಪಿಸಿಕೊಡುತ್ತಿದ್ದಾರೆ. ಹೀಗಾಗಿ ಈ ಕೆಲಸ ಇಂದಿಗೂ ನಡೆಯುತ್ತಲೇ ಇದೆ.

ನಮ್ಮ ಕಾಲೇಜಿನ ಕನ್ನಡ ಸಾಹಿತ್ಯದ ಸಾಮಾನ್ಯ ವಿದ್ಯಾರ್ಥಿಗಳು ಓದಿರುವ ಕಥೆ ಕಾದಂಬರಿಗಳಿಗಿಂತ ಹೆಚ್ಚಿನ ಕಾದಂಬರಿಗಳನ್ನು ನಮ್ಮ ಅಂಧ ವಿದ್ಯಾರ್ಥಿಗಳು ಕೇಳಿದ್ದಾರೆ ಎನ್ನುತ್ತಾರೆ ಲಲಿತಾಂಬ. ಜತೆಗೆ ಹಲವು ಸಾರ್ವಜನಿಕರು, ಸಂಘ ಸಂಸ್ಥೆಗಳೂ ಪುಸ್ತಕಗಳನ್ನು ಓದಿ ಕೊಡುವ ನೆರವು ಮಾಡಿಕೊಡುತ್ತಿದ್ದಾರೆ. ಹೀಗೆ ಎಲ್ಲ ಸಾಂಘಿಕ ಪ್ರಯತ್ನದಿಂದ ಈ ಕಾಲೇಜಿನಲ್ಲಿ ಕೇಳು ಪುಸ್ತಕಗಳ ಗ್ರಂಥಾಲಯ ರೂಪುಗೊಳ್ಳುತ್ತಿದೆ.

ಈ ಕಾಲೇಜಿನಲ್ಲಿ ಕೇಳು ಪುಸ್ತಕಗಳ ಸಂಗ್ರಹ ಇರುವುದು, ಅಂಧ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯಗಳ ಮೂಲಕ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ಮುಟ್ಟಿದೆ. ಹೀಗಾಗಿ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೇಳುಪುಸ್ತಕಗಳನ್ನು ನಕಲು ಮಾಡಿಕೊಳ್ಳಲು ನಮ್ಮ ಕಾಲೇಜಿಗೆ ಬರುತ್ತಾರೆ. ಈ ರೀತಿ ನಮ್ಮ ಕೇಳು ಪುಸ್ತಕಗಳು ರಾಜ್ಯದ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಿಗೂ ತಲುಪಿವೆ ಎಂದು ಲಲಿತಾಂಬ ಅವರು ಸಂತಸ ವ್ಯಕ್ತಪಡಿಸುತ್ತಾರೆ. ಹೆಚ್ಚಿನ ಕೇಳುಪುಸ್ತಕಗಳನ್ನು ನಕಲು ಮಾಡಿಕೊಳ್ಳಬೇಕಿದ್ದರೆ, ಆಯಾ ಕಾಲೇಜಿನ ಪ್ರಾಂಶುಪಾಲರಿಂದ ಅನುಮತಿ ಪತ್ರ ತರಬೇಕು.

ಆದರೆ ಬಹುತೇಕ ಖಾಸಗಿ ಕಾಲೇಜಿನ ಪ್ರಾಂಶುಪಾಲರು ಪತ್ರ ನೀಡಲು ನಿರಾಕರಿಸುತ್ತಾರೆ. ನಮ್ಮಲ್ಲಿ ಕೇಳು ಪುಸ್ತಕಗಳಿವೆ, ನಿಮಗೆ ಅಗತ್ಯವಿದ್ದರೆ ಹೇಳಿ ಕಳುಹಿಸಿಕೊಡುತ್ತೇವೆ ಎಂದಾಗಲೂ ಬಹುತೇಕ ಕಾಲೇಜುಗಳಿಂದ  ಈವರೆಗೆ ಉತ್ತರವೇ ಬಂದಿಲ್ಲ ಎಂದು ಲಲಿತಾಂಬ ಅವರು ಬೇಸರ ವ್ಯಕ್ತಪಡಿಸುತ್ತಾರೆ. ಕೇಳುಪುಸ್ತಕಗಳ ಅಗತ್ಯವಿರುವ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರಿಂದ ಅನುಮತಿ ಪತ್ರ ಪಡೆದುಕೊಂಡು ಬಂದರೆ, ಅವನ್ನು ನಕಲು ಮಾಡಿಕೊಡುತ್ತೇವೆ ಎನ್ನುತ್ತಾರೆ ಲಲಿತಾಂಬ. ಹೀಗೆ ಹಲವು ಮಿತಿಗಳ ನಡುವೆಯೇ ಕೇಳುಪುಸ್ತಕಗಳನ್ನು ರೂಪಿಸುವ ಮತ್ತು ಅವನ್ನು ಅಂಧರಿಗೆ ತಲುಪಿಸುವ ಕೆಲಸ ನಡೆಯುತ್ತಲೇ ಇದೆ.

ಚೇತನಾ ಘಟಕ
ಅಂಧ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ರೂಪುತಳೆದದ್ದೇ ಚೇತನಾ ಘಟಕ. ಯುಜಿಸಿ ಅನುದಾನದಲ್ಲಿ ಅಸ್ತಿತ್ವಕ್ಕೆ ಬಂದ ಚೇತನಾ ಘಟಕದಲ್ಲಿ ಬ್ರೈಲ್‌ ಲೈಬ್ರರಿ ಇದೆ. ಇದರ ನೇತೃತ್ವ ವಹಿಸಿರುವ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಎನ್‌.ಆರ್‌ ಲಲಿತಾಂಬ ಅವರು, ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಅಂಧ ವಿದ್ಯಾರ್ಥಿಗಳ ಶ್ರೇಯಕ್ಕಾಗಿ ದುಡಿಯುತ್ತಿದ್ದಾರೆ. ಕಾಲೇಜಿನ ಬೇರೆ ಬೇರೆ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅವರ ನೆರವಿಗೆ ನಿಂತಿದ್ದಾರೆ.

ಚೇತನಾ ಘಟಕದಲ್ಲಿ ಸುಮಾರು 12 ಡೆಸ್ಕ್‌ಟಾಪ್‌ಗಳಿವೆ. ಎಲ್ಲಾ ಡೆಸ್ಕ್‌ಟಾಪ್‌ಗಳಲ್ಲೂ ಸ್ಕ್ರೀನ್ ರೀಡಿಂಗ್ ತಂತ್ರಾಂಶಗಳಿವೆ. ಜತೆಗೆ ಎಲ್ಲದರಲ್ಲೂ ಅಡಾಸಿಟಿ ಎಂಬ ಆಡಿಯೊ ಎಡಿಟಿಂಗ್ ತಂತ್ರಾಂಶಗಳಿವೆ.  ಅವುಗಳನ್ನು ಬಳಸಲು ಅಗತ್ಯವಾದ ತರಬೇತಿಯನ್ನು ಅಂಧ ವಿದ್ಯಾರ್ಥಿಗಳಿಗೆ ಪರಿಣತರಿಂದ ಕೊಡಿಸಲಾಗಿದೆ. ಹೀಗಾಗಿ ಗೆಳೆಯರು, ಪ್ರಾಧ್ಯಾಪಕರು ರೆಕಾರ್ಡ್ ಮಾಡಿಕೊಟ್ಟ ಪಠ್ಯವನ್ನು ಅಂಧ ವಿದ್ಯಾರ್ಥಿಗಳೇ ಇಲ್ಲಿ ಎಡಿಟ್ ಮಾಡಿಕೊಳ್ಳುತ್ತಾರೆ. ಬಿಡುವಿನ ವೇಳೆಯಲ್ಲಿ ಲಿಲತಾಂಬ ಅವರು ರೆಕಾರ್ಡಿಂಗ್ ಮತ್ತು ಎಡಿಟಿಂಗ್ ಕೆಲಸ ಮಾಡುತ್ತಾರೆ. ಇವುಗಳ ಜತೆಗೆ ಅಂಧ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಉಪನ್ಯಾಸ ಮತ್ತು ಕಾರ್ಯಾಗಾರವನ್ನೂ ಚೇತನಾ ಘಟಕ ಆಯೋಜಿಸುತ್ತಿದೆ. ಇವುಗಳಿಂದ ನಮಗೆ ನಿಜಕ್ಕೂ ಉಪಯೋಗವಾಗಿದೆ ಎನ್ನುತ್ತಾರೆ ಕಾಲೇಜಿನ ಎಲ್ಲಾ ಅಂಧ ವಿದ್ಯಾರ್ಥಿಗಳು. 
*
ಪಠ್ಯ ಪುಸ್ತಕಗಳಷ್ಟೇ...
ಕೇಳಪುಸ್ತಕಗಳನ್ನು  ರೂಪಿಸಲು ಆಯ್ಕೆ ಮಾಡಿಕೊಂಡ ಕಥೆ, ಕಾದಂಬರಿ, ಆತ್ಮಕಥೆಗಳು ಎಲ್ಲವೂ ಬೆಂಗಳೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ನಿಗದಿಪಡಿಸಿದ ಪಠ್ಯಪುಸ್ತಕಗಳು. ಚೇತನಾ ರೂಪಿಸಿದ ಕೇಳುಪುಸ್ತಕಗಳಲ್ಲಿ ಯಾವುದೂ ಮಾರಾಟಕ್ಕಿಲ್ಲ. ಅಂಧ ವಿದ್ಯಾರ್ಥಿಗಳ ಓದಿಗೆ ಮಾತ್ರ.

ಪಠ್ಯಗಳಲ್ಲಿಲ್ಲದ ಕೆಲವು ಪುಸ್ತಕಗಳನ್ನೂ ಕೇಳುಪುಸ್ತಕಗಳಾಗಿ ರೂಪಿಸಲಾಗಿದೆ. ಆದರೆ ಅದಕ್ಕೂಮುನ್ನ ಸಂಬಂಧಪಟ್ಟ ಲೇಖಕರಿಂದ ಮೌಖಿಕ ಅನುಮತಿ ಪಡೆಯಲಾಗಿದೆ. ಅಂಧ ಮಕ್ಕಳ ಉಪಯೋಗಕ್ಕೆ ಎಂದು ಕೇಳಿದಾಗ ಯಾರೂ ಇಲ್ಲ ಎಂದಿಲ್ಲ. ಜತೆಗೆ ತಮ್ಮಿಂದ ಆಗಬಹುದಾದ ನೆರವನ್ನೂ ನೀಡುತ್ತೇವೆ ಎಂದಿದ್ದಾರೆ ಎನ್ನುತ್ತಾರೆ ಚೇತನಾ ಘಟಕದ ರೂವಾರಿ ಲಲಿತಾಂಬ.

ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಉಮಾದೇವಿ ಅವರು ಭಾರತೀಯ ಸಂವಿಧಾನ ವಿಷಯದ 1200 ಪ್ರಶ್ನೋತ್ತರಗಳನ್ನು ಬರೆದು, ರೆಕಾರ್ಡ್ ಮಾಡಿಕೊಟ್ಟಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಲ್ಲಿ ನಮ್ಮ ಅಂಧ ವಿದ್ಯಾರ್ಥಿಗಳಿಗೆ ಈ ಪ್ರಶ್ನೋತ್ತರಗಳು ಸಾಕಷ್ಟು ನೆರವಾಗಿವೆ ಎನ್ನುತ್ತಾರೆ ಅವರು.
*
ಬೇಕು ಯೂನಿಕೋಡ್‌, ಇ-ಬುಕ್
ಯೂನಿಕೋಡ್‌ ಆವೃತ್ತಿಯಲ್ಲಿ ಇರುವ ಕನ್ನಡವನ್ನು ಸ್ಪಷ್ಟವಾಗಿ ಓದಿ ಹೇಳುವ ಕಂಪ್ಯೂಟರ್‌ ಸ್ಕ್ರೀನ್ ರೀಡಿಂಗ್ ತಂತ್ರಾಂಶ ಲಭ್ಯವಿದೆ. ಇಂಗ್ಲಿಷ್‌ನಲ್ಲಿ ಪ್ರಕಟವಾಗುವ ಬಹುತೇಕ ಪುಸ್ತಕಗಳ ಇ-ಬುಕ್ ಆವೃತ್ತಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀಗಾಗಿ ಅಂಧರು ಅವುಗಳನ್ನು ಓದಲು ಯಾವುದೇ ತೊಡಕಿಲ್ಲ. ಆದರೆ ಈ ಹೊತ್ತಿನ ಮಾರುಕಟ್ಟೆ ತಂತ್ರವಾದ ಇ-ಬುಕ್‌  ಎಂಬ ಪರಿಕಲ್ಪನೆಯಿಂದ ಕನ್ನಡ ಪುಸ್ತಕೋದ್ಯಮ ವಿಮುಖವಾಗೇ ಇದೆ ಎನ್ನುತ್ತಾರೆ ಲಲಿತಾಂಬ.

ಕನ್ನಡದಲ್ಲಿ ಪ್ರಕಟವಾಗುವ ಪ್ರತಿ ಪುಸ್ತಕಗಳ ಇ-ಬುಕ್ ಆವೃತ್ತಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿರಬೇಕು. ಇದರಿಂದ ಅಂಧರಿಗೂ ನಾವು ಓದುವ ಅವಕಾಶವನ್ನು ನೀಡಿದಂತಾಗುತ್ತದೆ. ಪ್ರಕಟಿತ ಪುಸ್ತಕಗಳ ಮುಖಬೆಲೆಯನ್ನೇ ಇ-ಬುಕ್‌ಗಳಿಗೂ ನಿಗದಿಪಡಿಸಲಿ. ದಿನಗಟ್ಟಲೆ ಕೂತು ಪುಸ್ತಕಗಳನ್ನು ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ, ಇ-ಬುಕ್‌ಗಳು ಓದುವ ಸಂಸ್ಕೃತಿಯನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಇದರಿಂದ ಓದುವ ಸಂಸ್ಕೃತಿಯಿಂದ ದೂರವೇ ಉಳಿದ ಅಂಧರಿಗೂ ಓದುವ ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬುದು ಅವರ ಆಶಯ.
*
ಚೇತನಾ ಘಟಕದಲ್ಲಿ ಇರುವ ಕೆಲವು ಕೇಳು ಪುಸ್ತಕಗಳು

1. ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
2. ಊರುಕೇರಿ-1- ಡಾ. ಸಿದ್ಧಲಿಂಗಯ್ಯ
3. ರುಡಾಲಿ (ಅನುವಾದಿತ) ಮಹಾಶ್ವೇತಾದೇವಿ
4. ಅಮೃತಾ ಪ್ರೀತಂ ಕಥೆಗಳು
5. ಮಹಾದೇವಿಯಕ್ಕನ ರಗಳೆ
6. ಯಾವ ಮೋಹನ ಮುರಳಿ ಕರೆಯಿತು - ಚಂದ್ರಶೇಖರ ಆಲೂರು
7. ಅಮ್ಮ ಹೇಳಿದ ಎಂಟು ಸುಳ್ಳುಗಳು - ಎ.ಆರ್.ಮಣಿಕಾಂತ್
8. ಅಕ್ರಮ ಸಂತಾನ - ಶರಣಕುಮಾರ ಲಿಂಬಾಳೆ
9. ಮಂಟೆಸ್ವಾಮಿ ಕಥಾಪ್ರಸಂಗ -ಎಚ್.ಎಸ್. ಶಿವಪ್ರಕಾಶ್
10. ಸ್ಮಶಾನ ಕುರುಕ್ಷೇತ್ರ - ಕುವೆಂಪು
11. ಆಯ್ದ ಸ್ವಾತಂತ್ರ್ಯೋತ್ತರ ಕಥೆಗಳು
12. ಟಾಲ್‌ಸ್ಟಾಯ್ ಕಥೆಗಳು
13. ಚೋಮನ ದುಡಿ -ಕೆ.ಶಿವರಾಮ ಕಾರಂತ
14. ಬರಿದಾಗುತ್ತಿರುವ ನನ್ನ ಪ್ರೀತಿಯ ಕಡಲು -ಎಚ್.ನಾಗವೇಣಿ
15. ವಡ್ಡಾರಾಧನೆಯ ಆಯ್ದ ಕಥೆಗಳು
16. ಚಿದಂಬರ ರಹಸ್ಯ -ಕೆ.ಪಿ.ಪೂರ್ಣಚಂದ್ರ ತೇಜಸ್ವಿ
17. ಜೂಲಿಯಸ್ ಸೀಸರ್‌ (ಅನುವಾದಿತ)
18. ಮಹಾರಾತ್ರಿ - ಕುವೆಂಪು
19. ಹಲಗಲಿಯ ಬೇಡರು -ಕ್ಯಾತನಹಳ್ಳಿ ರಾಮಣ್ಣ
20. ಊರುಭಂಗ -ಎಲ್.ಗುಂಡಪ್ಪ
21. ಜಲಗಾರ - ಕುವೆಂಪು
22. ವೈಕಂ ಬಷೀರ್‌ ಅವರ ಅನುವಾದಿತ ಕಥೆಗಳು
23. ಆಯ್ದ ವಚನಗಳು
24. ಹೆಬ್ಬೆರಳು - ಗೋವಿಂದ ಪೈ
25. ಬೆರಳ್‌ಗೆ ಕೊರಳ್ - ಕುವೆಂಪು
26. ಏಕಲವ್ಯ - ಡಾ.ಸಿದ್ಧಲಿಂಗಯ್ಯ
27. ಸಾದತ್ ಹಸನ್ ಮಾಂಟೊ ಅವರ ಕಥೆಗಳು
28. ಚಿರಸ್ಮರಣೆ -ನಿರಂಜನ
29. ರಸೀದಿ ಟಿಕೇಟು -ಅಮೃತಾ ಪ್ರೀತಂ
30. ಮಂದ್ರ -ಎಸ್.ಎಲ್.ಭೈರಪ್ಪ
31. ಯಶೋಧರ ಚರಿತೆ -ಜನ್ನ
32. ಪಂಪಭಾರತದ ಆಯ್ದ ಭಾಗಗಳು
33. ಹರಿಶ್ಚಂದ್ರ ಕಾವ್ಯದ ಆಯ್ದ ಭಾಗಗಳು
34. ಹರಿಹರನ ರಗಳೆಗಳು
35. ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು - ಸಾರಾ ಅಬೂಬಕರ್
*
ವಿಳಾಸ: 
ಚೇತನಾ ಘಟಕ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಹಂಪಿನಗರ ವಾರ್ಡ್, ವಿಜಯನಗರ,
ಬೆಂಗಳೂರು- 560104.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT