ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಮಾರ್ಗದರ್ಶಕ ಸ್ಮಾರ್ಟ್‌ಕೇನ್‌

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಸ್ಮಾರ್ಟ್‌ಕೇನ್‌’ (ಚತುರ ಊರುಗೋಲು) ಶಬ್ದ ಕೇಳುತ್ತಿದ್ದಂತೆ ಮನದ ಪಟಲದ ಮೇಲೆ ಮೂಡಿದ್ದು ಬಾಲ್ಯದಲ್ಲಿ ಹೇಳುತ್ತಿದ್ದ ‘ಅಜ್ಜನ ಕೋಲಿದು ನನ್ನಯ ಕುದುರೆ’ಯ ಪದ್ಯ. ‘ಕೋಲು’ ವಯಸ್ಸಾದವರಿಗೆ, ನಡೆಯಲಾಗದ ಅಶಕ್ತರಿಗೆ, ಕಣ್ಣು–ಕಿವಿ ಇಲ್ಲದವರಿಗೆ ಆಸರೆಯ ಸಾಧನ. ಈ ಕೋಲು ಇಂದಿನ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳಿಗೆ ಒಳಗಾಗಿ ಹೊಸ ರೂಪಗಳನ್ನು ಪಡೆಯುತ್ತಾ ಸಾಗಿದೆ.

ದೈಹಿಕ ನ್ಯೂನತೆಯಿರುವ, ಹುಟ್ಟುತ್ತಲೇ ಬೆನ್ನಿಗಂಟಿದ ಮಿದುಳ ಪಾರ್ಶ್ವವಾಯುವಿಗೆ (ಸೆರೆಬ್ರಲ್‌ ಪಾಲ್ಸಿ) ಒಳಗಾದ ಮಕ್ಕಳಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಹಲವು ಉಪಕರಣಗಳನ್ನು ಆವಿಷ್ಕರಿಸಲು ಹೊರಟ ವಿಶ್ವವಿದ್ಯಾನಿಲಯಗಳಲ್ಲಿನ ಸಂಶೋಧನೆಗಳಿಗೆ ಆರ್ಥಿಕ ಸಹಾಯವನ್ನು ನೀಡುವ ಸೌಲಭ್ಯ ಅಮೆರಿಕದಲ್ಲಿದೆ.

ಅಂಗವಿಕಲರು ಸ್ವಾವಲಂಬನೆಯಿಂದ ಬದುಕಲು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಂತಹ ಹೊಸ ಹೊಸ ಆವಿಷ್ಕಾರಗಳ ಶೋಧನೆಗೆ ಒತ್ತು ನೀಡುವ ಹಲವು ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಲ್ಲಿ ಹೊಸ ಹೊಳಹುಗಳನ್ನು ಉದ್ಯಮಶೀಲತೆಯನ್ನು ಹುಟ್ಟುಹಾಕುವತ್ತ ಕಾರ್ಯನಿರ್ವಹಿಸುತ್ತಿವೆ.

ಈ ದಿಸೆಯಲ್ಲಿ ನ್ಯೂಯಾರ್ಕ್ ಬಳಿಯ ರೋಚೆಸ್ಟರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ಆರ್‌ಐಟಿ) ಸಂಶೋಧನಾ ವಿಭಾಗವು ಮೆಕಾನಿಕಲ್‌ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಮತ್ತು ಬಹು ಶಿಸ್ತೀಯ ಜ್ಞಾನಕ್ಷೇತ್ರಗಳ ಹಲವು ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ನಿಟ್ಟಿನಲ್ಲಿ ಸಂಶೋಧನಾ ಕಾರ್ಯಗಳನ್ನು ನಡೆಸುತ್ತಿದೆ.

ಪ್ರೊಫೆಸರ್‌ ವೋ ಅವರ ನೇತೃತ್ವದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳ ತಂಡ ‘ಸ್ಮಾರ್ಟ್‌ಕೇನ್‌’ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ವಿಶ್ವವಿದ್ಯಾನಿಲಯ ಸಂಶೋಧಕರನ್ನು, ಹೂಡಿಕೆದಾರರನ್ನು, ಉತ್ಪಾದಕರನ್ನು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ತನ್ನ ಸಭೆಗೆ ಆಹ್ವಾನಿಸಿ ದೈಹಿಕ ನ್ಯೂನತೆಯುಳ್ಳವರು ಸಮಾಜದಲ್ಲಿನ ಇನ್ನಿತರರಂತೆ ಬದುಕು ಸಾಗಿಸುವಂತಾಗಲು ಅವರಿಗಾಗಿ ಕೆಲವೊಂದು ಉಪಕರಣಗಳನ್ನು ಅವಿಷ್ಕಾರಗೊಳಿಸುವುದರ ಬಗ್ಗೆ ಚರ್ಚಿಸಿ ಅಂಧರು ತಮ್ಮ ದೈಹಿಕ ನ್ಯೂನತೆಯನ್ನು ಮೀರಿ ಬದುಕುವಂತಹ ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂಬ ಧ್ಯೇಯವನ್ನಿಟ್ಟುಕೊಂಡು ಸ್ಮಾರ್ಟ್‌ಕೇನ್‌ ಉಪಕರಣವನ್ನು ರೂಪಿಸಲಾಗಿದೆ ಎಂಬ ವಿಚಾರವನ್ನು ಮನದಟ್ಟು ಮಾಡಿಕೊಟ್ಟಿದೆ.

ಇಂದು ಜಗತ್ತಿನಲ್ಲಿ ಕಿವುಡು–ಅಂಧತ್ವ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಸುತ್ತಲ ಪರಿಸರದಲ್ಲಿನ ಹಲವು ರೀತಿಯ ಅಡೆತಡೆಗಳಿಂದ ಇವರು ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಈ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಅವರಿಗೆ ಹಲವು ಬಾಹ್ಯ ಸಹಾಯಗಳನ್ನು ಒದಗಿಸಲಾಗುತ್ತಿದೆ. ಸಾಂಪ್ರದಾಯಿಕವಾದ ಸಾಧಾರಣ ಕೋಲು, ಕುರುಡರಿಗೆ ದಾರಿ ತೋರಿಸುವ ತರಬೇತಾದ ನಾಯಿ ಸೇರಿದಂತೆ ವಿವಿಧ ಪ್ರಾಣಿಗಳ ಸಹಾಯವನ್ನೂ ಪಡೆದುಕೊಳ್ಳುವ ಕ್ರಮವಿದೆ.

ಇದೇ ನಿಟ್ಟಿನಲ್ಲಿ ಕಡಿಮೆ ಧ್ವನಿಯಿರುವ ಅಲ್ಟ್ರಾಸೋನಿಕ್‌ ಶ್ರವಣಾತ್ಮಕ ಸಾಧನಗಳದು ಸೀಮಿತ ಕಾರ್ಯ. ಜನದಟ್ಟಣೆಯ ನಗರದ ರಸ್ತಗಳಲ್ಲಿನ ಸಿಗ್ನಲ್‌ಗಳನ್ನು, ಸೂಚನೆಗಳನ್ನು, ಧ್ವನಿಗಳನ್ನು ಕೇಳಿಸಿಕೊಳ್ಳುವುದು ಅಸಾಧ್ಯ. ಮೊದಲು ಕುರುಡರು ಬಿಳಿ ಬಣ್ಣದ ಕೋಲನ್ನು ಬಳಸುತ್ತಿದ್ದು, ನಡೆಯುವಾಗ ಎಡಬಲಗಳತ್ತ ಗಟ್ಟಿಯಾಗಿ ಕುಟ್ಟುತ್ತಾ ಸಾಗಬೇಕಿತ್ತು. ಆಸರೆಗೋಲು, ಶಬ್ದತರಂಗಗಳ ಮೂಲದ ಕೋಲುಗಳಿಂದ ವಸ್ತುವಿನ ಇರುವಿಕೆ ಮತ್ತು ಅದರ ದೂರವನ್ನು ತಿಳಿಯಲು ಸಾಧ್ಯವಾಗದೆ ತೊಂದರೆಗೊಳಗಾಗುತ್ತಿದ್ದರು. ಅಷ್ಟೇ ಅಲ್ಲ, ಈಗಿರುವ ಸುಧಾರಿತ ಉಪಕರಣಗಳು ನೆಲಮಟ್ಟದ ವಸ್ತುಗಳ ಬಗ್ಗೆ ಮಾತ್ರ ಪತ್ತೆಹಚ್ಚಿ ಕೊಡುತ್ತವೆಯೇ ಹೊರತು ಮೆಟ್ಟಿಲುಗಳನ್ನು ಹತ್ತಿ–ಇಳಿಯುವ ಬಗ್ಗೆ ಅರಿವನ್ನುಂಟು ಮಾಡುವುದಿಲ್ಲ.

ಈ ಬಗೆಯ ತೊಂದರೆಗಳನ್ನು ಮನಗಂಡ ಇಂದಿನ ಇಂಜಿನಿಯರ್‌ಗಳು ಆಳವಾದ ಸಂಶೋಧನೆ ನಡೆಸಿ ದೈಹಿಕ ಸಂವೇದನೆಯನ್ನುಂಟು ಮಾಡುವ ಎಲೆಕ್ಟ್ರಾನಿಕ್‌ ಕೇನ್‌ ಒಂದನ್ನು ರೂಪಿಸಿದರು. ಕುರುಡರಿಗೆ ಹೆಚ್ಚಿನ ರಕ್ಷಣೆಯನ್ನು ನೀಡುವಂತಹ ಈ ಸಾಧನಕ್ಕೆ ‘ಸ್ಮಾರ್ಟ್‌ಕೇನ್‌’ ಎಂಬ ಹೆಸರನ್ನೂ ಇಟ್ಟರು.

ಕುರುಡರಿಗೆ ಸರಾಗವಾಗಿ ಚಲಿಸಲು, ಸುಲಭವಾಗಿ ಮೆಟ್ಟಿಲುಗಳನ್ನು ಹತ್ತಿಳಿಯಲು ಶಬ್ದತರಂಗಗಳ ಮೂಲಕ ಕಂಪನಗಳು ಕೋಲಿನ ಮೂಲಕ ಕೈಗೆ, ಅಲ್ಲಿಂದ ಮೆದುಳಿಗೆ ರವಾನೆಯಾಗುವಂತೆ ಈ ಸ್ಮಾರ್ಟ್‌ಕೇನ್‌ ವಿನ್ಯಾಸಗೊಳಿಸಲಾಗಿದೆ.

ಮಹಡಿ ಮೆಟ್ಟಿಲುಗಳ ಇರುವಿಕೆ ಮತ್ತು ತಲೆಗಿಂತ ಮೇಲಕ್ಕಿರುವ ವಸ್ತುಗಳನ್ನು ಪತ್ತೆಹಚ್ಚಿ ಕೊಡುವುದು ಈ ವಿಶಿಷ್ಟ ಸಾಧನದ ಮುಖ್ಯ ಉದ್ದೇಶ.
ಆಲ್ಟ್ರಾಸೋನಿಕ್‌ ಸಾಧನ ‘8ಎಫ್‌04’ ಅನ್ನು ಬಳಸಿ ಮೂರು ಸೆಂಟಿಮೀಟರ್‌ನಿಂದ ಮೂರು ಮೀಟರ್‌ ಗಳವರೆಗೂ ಶಕ್ತಿಯುತ ಕಂಪನಗಳ ಮೂಲಕ ಸಂವೇದನೆಗಳನ್ನು ರವಾನಿಸುವಂತಹ ರೀತಿಯಲ್ಲಿ ಈ ಸ್ಮಾರ್ಟ್‌ಕೇನ್ ವಿನ್ಯಾಸಗೊಂಡಿದೆ. ಇದರಲ್ಲಿನ ಅಲ್ಟ್ರಾಸೋನಿಕ್‌ ಮತ್ತು ಬ್ಲೂಟೂತ್‌ಗಳ ಸ್ವರೂಪ ಅತ್ಯಂತ ಸೂಕ್ಷ್ಮವಾಗಿದ್ದು, ಯಾವುದೇ ಅಡ್ಡಿಯಿಲ್ಲದೆ ಸ್ಮಾರ್ಟ್‌ಕೇನ್‌ನಲ್ಲಿ ಅಳವಡಿಸಬಹುದಾಗಿದೆ. ಕಡಿಮೆ ಶಕ್ತಿಯ (ಲೋ ಪವರ್‌) ಮೋಡ್‌ಗಳಿಂದ ಕೋಲನ್ನು ಸುಲಭವಾಗಿ ಅತ್ತಿತ್ತ ತಿರುಗಿಸಬಹುದಾಗಿದೆ.

ಕುರುಡರಿಗೆ ಆಧಾರವಾಗಿ ಭವಿಷ್ಯದಲ್ಲಿ ಮೊಬೈಲ್‌ ಆ್ಯಪ್‌ಗಳ ಮೂಲಕ ಸ್ಮಾರ್ಟ್‌ಕೇನ್‌ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ.  ಈ ಆ್ಯಪ್‌ಗಳನ್ನು ಬಳಸುವುದರ ಮೂಲಕ ನಡೆಯುವ ಮಾರ್ಗದಲ್ಲಿನ ಅಡೆತಡೆಗಳನ್ನು ಗುರುತಿಸಲು, ಕೋಲಿನ ಕಂಪನಗಳು ಮತ್ತು ಜಿಯೋ–ಟ್ರ್ಯಾಕ್‌ ಮೂಲಕ ಕೋಲಿನ ದಾರಿಯನ್ನು ಕಂಡುಕೊಂಡು ದಾರಿ ತಪ್ಪಿದ ಕುರುಡನಿರುವ ಜಾಗವನ್ನು ಪತ್ತೆ ಹಚ್ಚಲು ಸಹಾಯಕವಾಗುವಂತಹ ಹೊಸ ಸಾಧ್ಯತೆಗಳ ಸಂಶೋಧನಾತ್ಮಕ ಅಧ್ಯಯನವೂ ನಡೆಯುತ್ತಿದೆ.

ಮುಂದಿನ ಮೂರು ವರ್ಷಗಳಲ್ಲಿ ಈ ಸ್ಮಾರ್ಟ್‌ಕೇನ್‌ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಇವೆ ಎನ್ನುತ್ತಾರೆ ಈ ತಂತ್ರಜ್ಞರ ತಂಡದ ಮಾರ್ಗದರ್ಶಕ ಪ್ರಾಧ್ಯಾಪಕರು.

200 ಡಾಲರ್‌ಗಿಂತ (ಈಗಿನ ವಿದೇಶಿ ವಿನಿಮಯ ಲೆಕ್ಕದಲ್ಲಿ ₨12,140) ಕಡಿಮೆ ದರದಲ್ಲಿ ಕುರುಡರು ಈ ಉಪಕರಣವನ್ನು ಖರೀದಿಸುವಂತಾಗಲು ಮತ್ತು ಈಗಾಗಲೇ ಇರುವ ಅಂಧರ ಮಾರ್ಗದರ್ಶಕ ಕೋಲಿಗೆ ಅತಿಸೂಕ್ಷ್ಮ ವಿನ್ಯಾಸದ ಈ ಸಾಧನವನ್ನು ಅಳವಡಿಸಲೂಬಹುದು ಎನ್ನುತ್ತಾರೆ.

‘ಅಜ್ಜನ ಕೋಲಿದು ನನ್ನಯ ಕುದುರೆ, ಹೆಜ್ಜೆ ಹೆಜ್ಜೆಗೂ ಕುಣಿಯುವ ಕುದುರೆ’ ಯಾಗಿರುವ ಅಜ್ಜನ ಕೋಲು ಆಧುನಿಕ ತಂತ್ರಜ್ಞಾನದ ಸ್ಪರ್ಶದಿಂದ ಹೊಸ ಹೊಸ ರೀತಿಯ ರೂಪಧಾರಣೆಗೆ ಒಳಗಾಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT