ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷನ ಮೊದಲ ಓದು

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಬಯಲುಗಳ ಚಿತ್ರಣ ಬದಲಿಸುವುದೇ ಹಿಂಗಾರು ಮಳೆ. ಏರಿದ ತಾಪಮಾನಕ್ಕೆ ಜೀವ ಕಳೆದುಕೊಂಡಂತೆ ಮೌನವಾಗಿದ್ದ ಬಯಲುಗಳಲ್ಲಿ ಜೋಳ, ಸಜ್ಜೆ, ನವಣೆಗಳೆಲ್ಲಾ ಚಿಗುರೊಡೆದು ಅಂತ್ಯಕಾಣದ ಸಮುದ್ರದಂತೆ ಅನಂತ ಬಯಲನ್ನು ಆವರಿಸಿಬಿಡುತ್ತವೆ.

ಇದೇ ಹೊತ್ತಿಗೆ ಉತ್ತರದ ಚಳಿಗೆ ನೆಲೆಕಳೆದುಕೊಂಡ ಹಕ್ಕಿಗಳು ಇತ್ತ ಹಾರಿಬರುತ್ತವೆ. ಪಿಪಿಟ್, ಬಂಟಿಂಗ್, ಫಿಂಚ್, ವಾರ್ಬಲರ್ಸ್, ತ್ರಶ್, ಲಾರ್ಕ್, ಪ್ಯಾಶ್ಚರ್ ಮತ್ತಿತ್ತರ ಹಕ್ಕಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸಿ ಉತ್ತರ ಕರ್ನಾಟಕದ ಅಖಂಡ ಬಯಲುಗಳಲ್ಲಿ ಚದುರಿಹೋಗುತ್ತವೆ.

ಆ ನಂತರ ಸುಗ್ಗಿ, ಎಲ್ಲೆಂದರಲ್ಲಿ ಸುಗ್ಗಿ. ಪುಟ್ಟ ಅಟ್ಟಣಿಗೆ ಏರಿ ಬೀಸುವ ಗಾಳಿಗೆ ಕಾಳು ತೂರುವ ಕೆಲಸ ರೈತರಿಗೆ. ಆಗ ಚೆಲ್ಲಿ ಹರಿದಾಡಿದ ಕಾಳಿನ ಕಣಗಳನ್ನು ದೋಚುವ ಕೆಲಸ ಹಕ್ಕಿಗಳದು. ಸುಗ್ಗಿಗೆ ಮುತ್ತುವ ಹಕ್ಕಿಗಳಾವುವೆಂದು ಗುರುತಿಸುವುದು ಕಷ್ಟ. ನಾಟಕದ ತೆರೆ ಜಾರಿ ರಂಗ ಬದಲಾದಂತೆ ಆವರಿಸುವ ಬಗೆಬಗೆಯ ಹಕ್ಕಿಗಳು. ಆಗ ಡಾ. ಸಲೀಂ ಅಲಿ ಅವರ ಹಕ್ಕಿಗಳ ಪುಸ್ತಕಕ್ಕೆ ಶರಣಾಗದೆ ಅನ್ಯದಾರಿ ಇಲ್ಲ.

ಅಂದು ತಿಮ್ಮಣ್ಣ ಸಜ್ಜೆ ತೂರುವಾಗ ಮುತ್ತಿದ ಹಕ್ಕಿಗಳನ್ನು ಗುರುತಿಸಲು ಸಲೀಂ ಅಲಿ ಅವರ ಪುಸ್ತಕ ತೆರೆದು ಕುಳಿತೆ. ತುಸು ಹೊತ್ತಿನಲ್ಲಿ ಸಹಾಯಕ ಅಂಬರೀಷ ಬೆನ್ನು ಹಿಂದೆ ಬಂದು ನಿಂತ.

ಅಡವಿಬಾವಿಯ ಅಂಬರೀಷನಿಗೆ ಎರಡು ಎಕರೆ ಭೂಮಿ ಇತ್ತು. ಸರ್ಕಾರ ನೀಡಿರುವ ಆ ಭೂಮಿಯಲ್ಲಿ ವ್ಯವಸಾಯ ಸಾಗುವುದಿಲ್ಲ. ಡಾಂಬರ್ ಹಾಕುವ ಮುನ್ನ ರಸ್ತೆಗೆ ಹರಡಿರುವ ಜಲ್ಲಿಯಂತೆ ಹೊಲದ ತುಂಬ ಪುಡಿಗಲ್ಲು. ಆಕಾಶದಲ್ಲಿ ಮೋಡಗಳು ಅಲೆದಾಡಿದಾಗ ನೆರೆಯ ರೈತರು ಮಾಡಿದಂತೆ ತನ್ನ ಕಲ್ಲು ಭೂಮಿಯನ್ನೂ ಉಳುಮೆ ಮಾಡುವುದು ಅವನ ಕೆಲಸ. ಮಳೆ ಬಿದ್ದಾಗ ಆ ಕಲ್ಲಿನ ಹಾಸಿಗೆಯ ಮೇಲೆ ಬಿತ್ತನೆ ಚೆಲ್ಲಿದ್ದಾನೆಯೆ ಹೊರತು ಎಂದೂ ಕೊಯ್ಲು ಮಾಡಿದ ನೆನಪಿಲ್ಲ.

ತೋಳಗಳನ್ನು ಹುಡುಕುತ್ತಾ ಉತ್ತರ ಕರ್ನಾಟಕದಲ್ಲಿ ಅಲೆಯುವಾಗ ಅಂಬರೀಷ ನಮ್ಮ ಸಹಾಯಕನಾದ. ಆರೂವರೆ ಅಡಿ ಎತ್ತರಕ್ಕಿದ್ದ ಅವನೊಂದಿಗೆ ಬಯಲು ಸುತ್ತುವುದು ಕಷ್ಟವೆನಿಸುತ್ತಿತ್ತು. ಆತ ಸ್ಲೋಮೋಷನ್‌ನಲ್ಲಿ ನಡೆಯುವಂತೆ ಕಂಡರೂ ಉದ್ದನೆಯ ಕಾಲುಗಳನ್ನು ಚಾಚುತ್ತಾ ನಮ್ಮೆಲ್ಲರಿಗಿಂತ ಮುಂದಿರುತ್ತಿದ್ದ.

ಬೇಡರ ಜಾತಿಗೆ ಸೇರಿದ ಅವನಿಗೆ ಬೇಟೆ ಆನುಷಂಗಿಕವಾಗಿ ಹರಿದುಬಂದಿರುವ ವಿದ್ಯೆ. ಸದಾ ನೆಲಕ್ಕೆ ಮುಖಮಾಡಿ ಮೊಲ, ಕಾಡು ಹಂದಿ, ಕೌಜುಗ, ಬುರ್ಲಿ ಹಕ್ಕಿಗಳು ಬಿಟ್ಟುಹೋಗಿರುವ ಹೆಜ್ಜೆಗಳನ್ನು ಹಿಂಬಾಲಿಸಿ ಸಾಗುವುದು ಅವನ ನಿತ್ಯದ ಕಸುಬು. ಮೂಡಿದ ಹೆಜ್ಜೆಗಳನ್ನಾಧರಿಸಿ ಅಲೆದಾಡಿರುವ ಜೀವಿಗಳನ್ನು ನಿಖರವಾಗಿ ಗುರುತಿಸುವ ಪ್ರತಿಭೆಯನ್ನು ಮೈಗೂಡಿಸಿಕೊಂಡಿದ್ದ. ಅಷ್ಟೇಅಲ್ಲ, ಕಪ್ಪು ಭೂಮಿಯ ಕದಡಿದ ಮಣ್ಣಿನಲ್ಲಿ ಅಸ್ಪಷ್ಟವಾಗಿ ಕಾಣುವ ಹೆಜ್ಜೆಗಳನ್ನು ಸುಲಭವಾಗಿ ಓದಬಲ್ಲವನಾಗಿದ್ದ.

ಕಡುಗಪ್ಪು ಬಣ್ಣವಿದ್ದ ಅಂಬರೀಷ ಕಪ್ಪುಬಂಡೆಗಳನ್ನು ಒರಗಿ ಕುಳಿತಾಗ ಗೋಚರಿಸುತ್ತಿರಲಿಲ್ಲ. ಅತ್ತ ಬರುವ ತೋಳಗಳಿಗೂ ಅಡಗಿ ಕುಳಿತಿರುವ ಅಂಬರೀಷನನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿತ್ತೇನೊ?

ಉತ್ತರ ಕರ್ನಾಟಕದಲ್ಲಿ ಸಾವಿರಾರು ಬೀದಿ ನಾಯಿಗಳು. ಅವು ಅಲೆದಾಡದ ಸ್ಥಳಗಳೇ ಇಲ್ಲ. ಹೆಜ್ಜೆಗಳನ್ನು ಹಿಂಬಾಲಿಸಿ ತೋಳಗಳ ಜಾಡನ್ನು ಭೇದಿಸುವ ನಮ್ಮ ಪ್ರಯತ್ನಕ್ಕೆ ಈ ಬೀದಿನಾಯಿಗಳ ಹೆಜ್ಜೆಗಳು ತೊಡಕಾದವು. ನಾಯಿ, ತೋಳ, ನರಿಗಳ ಹೆಜ್ಜೆಗಳೆಲ್ಲಾ ದೂಳಿನ ನೆಲದಲ್ಲಿ ಒಂದೇ ಬಗೆಯಲ್ಲಿ ಕಾಣುವುದರಿಂದ ಅವುಗಳನ್ನು ಪ್ರತ್ಯೇಕಿಸಿ ಅರ್ಥಮಾಡಿಕೊಳ್ಳುವುದು ಸವಾಲಿನ ಕೆಲಸ. ಈ ಗೊಂದಲದಲ್ಲಿ ಮುಳುಗಿದ್ದಾಗ ಅಂಬರೀಷ ನಮ್ಮ ನೆರವಿಗೆ ಬರುತ್ತಿದ್ದ. ಇದಲ್ಲದೆ ಮುಗ್ಧವಾಗಿ, ಪ್ರಾಮಾಣಿಕವಾಗಿ ಯೋಚಿಸುವ ಸ್ವಭಾವದಿಂದ ದಿನದಿಂದ ದಿನಕ್ಕೆ ನಮ್ಮೆಲ್ಲರಿಗೂ ಹತ್ತಿರವಾದ.

ಸಲೀಂ ಅಲಿ ಪುಸ್ತಕ ತಿರುವುತ್ತ ಕುಳಿತಿದ್ದನ್ನು ಏಕಚಿತ್ತದಿಂದ ಗಮನಿಸುತ್ತಿದ್ದ ಅಂಬರೀಷ ‘ಇದೇನು’ ಎಂದು ಪ್ರಶ್ನಿಸಿದ. ‘ಇದು ಯಾವ ಯಾವ ಜಾತಿಯ ಹಕ್ಕಿಗಳು ಎಲ್ಲಿ ವಾಸ ಮಾಡುತ್ತವೆ ಎಂಬುದನ್ನು ತಿಳಿಸುವ ಪುಸ್ತಕ. ಹಕ್ಕಿಗಳನ್ನು ಗುರುತಿಸಲು ಚಿತ್ರಗಳನ್ನು ಬಿಡಿಸಿದ್ದಾರೆ, ನೋಡು’ ಎಂದು ಚಿತ್ರಗಳಿದ್ದ ಪುಟವನ್ನು ತೋರಿಸಿದೆ.

‘ಇಂಥದ್ದೆಲ್ಲ ಇರುತ್ತಾ...’ ಎಂದು ನಿಬ್ಬೆರಗಾಗಿ ನಿಂತ. ತುಸು ಸಮಯದ ಬಳಿಕ ಪಕ್ಕದಲ್ಲೇ ನಿಂತಿದ್ದ ಅಂಬರೀಷನ ಕೈಗೆ ಪುಸ್ತಕ ಇಟ್ಟು ನನ್ನ ಕೆಲಸದಲ್ಲಿ ಮಗ್ನನಾದೆ.

ಅವನತ್ತ ಎಂಟ್ಹತ್ತು ನಿಮಿಷಗಳ ಬಳಿಕ ಅಲುಗದೆ ನಿಂತಿದ್ದ ಅಂಬರೀಷನತ್ತ ನೋಡಿದೆ. ತಲೆಕೆಳಗಾಗಿ ಪುಸ್ತಕ ಹಿಡಿದಿದ್ದ. ಪುಸ್ತಕದ ಮೇಲಿದ್ದ ಹಕ್ಕಿಯ ಚಿತ್ರವನ್ನು ನೆಟ್ಟಗೆ ಕಾಣಲು ಕತ್ತನ್ನು ಬಾಗಿಸಿ ಪ್ರಯಾಸಪಡುತ್ತಿದ್ದ. ಪುಸ್ತಕವನ್ನು ಸರಿಪಡಿಸಿ ಅವನ ಕೈಗಿತ್ತೆ. ಸ್ವಲ್ಪ ಸಮಯದ ಬಳಿಕ ನೋಡಿದಾಗ ಅವನು ಪುಸ್ತಕ ಪಡೆದುಕೊಂಡ ಭಂಗಿಯಲ್ಲೇ ನಿಂತಿದ್ದ.

ಪುಸ್ತಕದಲ್ಲಿನ ಚಿತ್ರಗಳಿರುವ ಪುಟವನ್ನು ತೆರೆದು ಕೊಟ್ಟೆ. ಅದೆಷ್ಟೋ ಹೊತ್ತಿನ ಬಳಿಕವೂ ಅವನು ಮತ್ತೆ ಅದೇ ಪುಟ ಹಿಡಿದು ನಿಂತಿದ್ದ. ಪಕ್ಕಕ್ಕೆ ಸರಿದು, ‘ಮುಂದಿನ ಪುಟಗಳಲ್ಲಿ ಇನ್ನೂ ಅನೇಕ ಬಗೆಯ ಹಕ್ಕಿಗಳಿವೆ’ ಎಂದು ಪುಟಗಳನ್ನು ತೆರೆಯಲು ತಿಳಿಸಿಕೊಟ್ಟೆ. ನನ್ನ ಮುಂದೆ ಒಂದೆರಡು ಬಾರಿ ಅಭ್ಯಾಸ ಮಾಡುವಂತೆ ಸೂಚಿಸಿದೆ. ಅಂಬರೀಷ ಪ್ರಯತ್ನಿಸಿದ, ಮತ್ತೆ ಪ್ರಯತ್ನಿಸಿದ. ಮುಂದಿನ ಪುಟ ಬಿಡಿಸಲು ಆತನಿಗೆ ಸಾಧ್ಯವಾಗಲಿಲ್ಲ. ಪ್ರತಿ ಪ್ರಯತ್ನದಲ್ಲಿ 20–30 ಹಾಳೆಗಳು ಹಿಡಿಹಿಡಿಯಾಗಿ ಜಾರಿಬಿಡುತ್ತಿದ್ದವು.

ಸಲೀಂ ಅಲಿ 50 ವರ್ಷಗಳ ಕಾಲ ಉಪಖಂಡವನ್ನು ಸುತ್ತಿ ರಚಿಸಿದ್ದ ಆ ಮಹಾಗ್ರಂಥ ಅಂಬರೀಷನ ಐದಾರು ತಿರುವುಗಳಲ್ಲೇ ಮುಕ್ತಾಯಗೊಳ್ಳುತ್ತಿತ್ತು. ಹಕ್ಕಿಗಳ ಚಿತ್ರಗಳಿದ್ದ ಮತ್ತೊಂದು ಪುಟ ತೆರೆದು ಬದಿಗೆ ಸರಿಸಿದೆ. ಅಕ್ಷರಗಳ ವಿವರಣೆಗಳನ್ನೆಲ್ಲ ಕಡೆಗಣಿಸಿ ಹಕ್ಕಿಚಿತ್ರಗಳಲ್ಲಿ ಮೈಮರೆತ. ಹರಡಿದ್ದ ಹಕ್ಕಿಚಿತ್ರಗಳನ್ನು ಸ್ಪರ್ಶಿಸುತ್ತಾ ನಿಂತ. ಅವುಗಳೊಂದಿಗೆ ಸಂಭಾಷಣೆಯಲ್ಲಿ ತೊಡಗಿದ.

ಪುಟ ತಿರುಗುವ ಮತ್ತೊಂದು ಪ್ರಯತ್ನದಲ್ಲಿ ಮತ್ತೆ ಅದೆಷ್ಟೋ ಹಾಳೆಗಳು ಒಟ್ಟಾಗಿ ಜಾರಿ ಪುಟವೊಂದು ತೆರೆದುಕೊಂಡಿತು. ತಾನು ಬಲ್ಲ, ಊರಿನಲ್ಲಿ ನಿತ್ಯ ಹಾಡುವ ಹಕ್ಕಿಗಳು ಪುಟದ ತುಂಬ ಅಲಂಕರಿಸಿದ್ದವು. ಪ್ರತಿಮೆಯಂತೆ ನಿಂತಿದ್ದ ಅಂಬರೀಷ ಒಮ್ಮೆಲೆ ಪುಳಕಿತಗೊಂಡ. ಚಿತ್ರದಿಂದ ಚಿತ್ರಕ್ಕೆ ಮೆಲ್ಲನೆ ಬೆರಳುಗಳನ್ನು ಸರಿಸುತ್ತಾ ಕರಿಗುಬ್ಬಿ, ಚಿಟ್‌ಗುಬ್ಬಿ, ಗುಡ್ಡದವಾರಿ, ಕಬ್ಬಕ್ಕಿ, ಕನ್ನೆನವಲು, ಗುಡ್ಡದ ಬುರ್ಲಿ, ಲ್ಯಾವಕ್ಕಿ, ಕುರುಡ್ ಬುರ್ಲಿ ಎಂದು ಹಕ್ಕಿಗಳನ್ನು ಕೂಗಿ ಕರೆದ. ಅವನ ಎದೆಯೊಳಗಿನ ಹಕ್ಕಿ ರೆಕ್ಕೆಬಿಚ್ಚಿತ್ತು.

ತೆರೆದ ಪುಸ್ತಕವನ್ನು ಮೇಜಿನ ಮೇಲಿರಿಸಿ, ತೋಳುಗಳನ್ನು ಸಡಿಲಬಿಟ್ಟು ಹಕ್ಕಿಗಳ ರೆಕ್ಕೆ ಕಟ್ಟಿಕೊಂಡ. ಗಂಟಲನ್ನು ಉಬ್ಬಿಸಿ ಆಗಸದತ್ತ ಮುಖ ಮಾಡಿ ಲಾವಕ್ಕಿಯಾದ. ನಡುನಡುವೆ ಸೀಟಿ ಹಾಕುತ್ತಾ ಕರಿಗುಬ್ಬಿಯಾದ. ಹಾಳೆಗಳಲಿ ಮಲಗಿದ್ದ ಹಕ್ಕಿಗಳನ್ನು ಸ್ಪರ್ಶಿಸುತ್ತಾ ಧ್ಯಾನಕ್ಕೆ ಶರಣಾದವನಂತೆ ಮೌನವಾಗಿ ಮತ್ತೆ ಹಕ್ಕಿಗಳ ಹಾಡನ್ನು ಪುಂಖಾನುಪುಂಖವಾಗಿ ಹಾಡಿದ.

ಆತ ಬೇರೊಂದು ಲೋಕದಲ್ಲಿ ಸಂಚರಿಸುತ್ತಾ ತಾನು ಎಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಹಕ್ಕಿಲೋಕದಲ್ಲಿ ಪ್ರವಾಸ ಮಾಡುತ್ತಿದ್ದ. ಮರುಗಳಿಗೆಯಲ್ಲಿ ಕಣ್ಣು ಎಡಪುಟದತ್ತ ತಿರುಗಿ– ‘ಬೆಳವ... ಓ ಬೆಳವ...’ ಎಂದು ಚಪ್ಪಾಳೆ ಹಾಕಿದ. ಕ್ಷಣಾರ್ಧದಲ್ಲಿ ಕವನ ಕಟ್ಟಿ...

ಓ... ಬೆಳವ... ಬೂದಿ ಬೆಳವ...
ಕುಕುರೂ ದಾಸಪ್ಪ.
ನನ್ ಪುಟ್ಟಿ, ನಿನ್ ಪುಟ್ಟಿ,
ಎಲ್ಲಿಟ್ಟೆ?
ಹಳ್ಳದಾಗಿಟ್ಟೆ,
ಹಳ್ಳ ಬಂತು.
ಹರ್‌ಕಂಡ್ ಹೋಯ್ತು...

ಎಂದು ಹಾಡು ನಿಲ್ಲಿಸುವ ವೇಳೆಗೆ ಅಡವಿಬಾವಿಯ ಅದೆಷ್ಟೋ ಹಕ್ಕಿಗಳು ಹಾಡಿದವು. ಸಲೀಂ ಅಲಿ ಬರೆಯಲು ಮರೆತಿದ್ದ ಹತ್ತಾರು ಕವನಗಳು ರಚನೆಯಾದವು. ಆ ಹಾಡುಗಳ ಧಾಟಿ, ಆ ಆ ಹಕ್ಕಿಗಳು ಕೂಗುವ ಲಯಕ್ಕೆ ಕರಾರುವಕ್ಕಾಗಿ ಹೊಂದಿಕೊಳ್ಳುತ್ತಿತ್ತು. ನಮಗರಿವಿಲ್ಲದ ಜಾನಪದಲೋಕದ ಹೊಸ ಆಯಾಮವೊಂದಕ್ಕೆ ಅಂಬರೀಷ ನಮ್ಮನ್ನು ಕರೆದೊಯ್ದಿದ್ದ.

ಮತ್ತೆ ಮುಂದಿನ ಪುಟ ತೆರೆಯಬೇಕು. ಅವನೇ ಕಲಿಯಲೆಂದು ದೂರದಲ್ಲೇ ಕುಳಿತೆ. ಆಗ ಸಂಜೆಯಾಗಿತ್ತು. ಕಣದಲ್ಲಿ ಸಜ್ಜೆ ತೂರಲು ತಿಮ್ಮಣ್ಣ ಅಟ್ಟಣಿಗೆ ಏರಿ ನಿಂತ. ಹೆಂಡತಿ ಮಕ್ಕಳೆಲ್ಲ ತಿಮ್ಮಣ್ಣನ ನೆರವಿಗೆ ನಿಂತಿದ್ದರು. ಬೀಸುತ್ತಿದ್ದ ಗಾಳಿಯಲ್ಲಿ ಹೊಟ್ಟು ಸಜ್ಜೆಯಿಂದ ಬೇರ್ಪಟ್ಟು ಕಣಕಣಗಳಾಗಿ ತೇಲುತ್ತಿದ್ದವು.

ಹದವಾಗಿ ಬೀಸುತ್ತಿದ್ದ ಗಾಳಿ ಒಮ್ಮೆಲೆ ಸುರುಳಿ ಸುತ್ತುತ್ತಾ ಸುಂಟರಗಾಳಿಯ ರೂಪ ಪಡೆದು ಅಂಬರೀಷನ ಪುಸ್ತಕಕ್ಕೆ ಅಪ್ಪಳಿಸಿತು. ಯಾರ ನೆರವೂ ಇಲ್ಲದೆ ಪುಟಗಳು ಪಟಪಟನೆ ತೆರೆದು ಮರೆಯಾಗತೊಡಗಿದವು. ದಿಗಿಲಿನಿಂದ ಅತ್ತಿತ್ತ ನೋಡಿದ ಅವನ ಕಣ್ಣು ಸದ್ದು ಮಾಡುತ್ತಿದ್ದ ಹಾಳೆಗಳತ್ತ ಹೊರಳಿತು. ಓಡುತ್ತಿದ್ದ ಪುಟಗಳ ನಡುವೆ ತಾನು ಬಲ್ಲ ಹಕ್ಕಿ ಕಂಡೊಡನೆ ಅಗಲವಾದ ಕೈಗಳಿಂದ ಪುಟವನ್ನು ಅಪ್ಪಿ ಹಿಡಿದ. ಪುಟದಲ್ಲಿ ರೆಂಬೆಯ ಮೇಲೆ ಕುಳಿತಿರುವ ಗಿಡುಗ, ಹೊಂಚು ಹಾಕಿ ಗುಬ್ಬಿಗಳನ್ನು ಬೇಟೆಗೆ ಸಿಕ್ಕಿಸುವ ಗಿಡುಗ. ಅರಳಿದ ಕಣ್ಣುಗಳಿಂದ ಅತ್ತಿತ್ತ ನೋಡಿ...

ಕಾವಲು ಹಕ್ಕಿ ಕಾವು
ಕಾವಲಿ ಮೇಲೆ ಕಾವು

ಎಂದು ಗುಬ್ಬಿಗಳಿಗೆ ವೈರಿ ಗಮನಿಸಿದ ಎಚ್ಚರಿಕೆಯ ಹಾಡು ಹಾಡಿದ... ನಂತರ ಗಾಳಿ ತಣ್ಣಗಾಯಿತು, ಬಳಿಕ ಪುಟಗಳು ತೆರೆದುಕೊಳ್ಳಲ್ಲಿಲ್ಲ. ಈ ಸುಗ್ಗಿಯ ಗಾಳಿಯೇ ಹೀಗೆ ಯಾವುದೋ ನಿಶ್ಚಿತ ಹೊತ್ತಿನಲ್ಲಿ ಬೀಸಿ ಸದ್ದಿಲ್ಲದೆ ಮಲಗಿ ಬಿಡುತ್ತದೆ. ಮಲಗಿದ ಗಾಳಿ ಮತ್ತೆ ಎದ್ದು ಬೀಸಲಿಲ್ಲ.
ತಿಮ್ಮಣ್ಣ ತೂರುವುದನ್ನು ನಿಲ್ಲಿಸಿದ. ಪುಟ್ಟ ಮಗುವೊಂದಿಗೆ ಬಿದಿರಿನ ಪುಟ್ಟಿ ಹಿಡಿದು ಬಂದ ಮುದುಕಿಗೆ ಎರಡು ಕೊಳಗ ಸಜ್ಜೆ ಸುರಿದ.

‘ಅದ್ಯಾರು ತಿಮ್ಮಣ್ಣ...’

‘ಅವರಿಗೆ ಭೂಮಿ ಗೀಮಿ ಒಂದೂ ಇಲ್ಲ. ಬಹಳ ಬಡವರು’ ಎಂದ.

ಅವರು ತೆರಳಿದ ಬಳಿಕ ಇನ್ಯಾರೋ ಬಂದು ಟವಲ್ ಅಗಲಿಸಿ ನಿಂತರು. ಅವರಿಗೂ ಒಂದಿಷ್ಟು ಸಜ್ಜೆ ತುಂಬಿ ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ.

‘ತಂಬೂರಿ ಬಾರಿಸುವವರ್ರೀ.... ಈಗ ಯಾರೂ ಅವರಿಗೆ ರೊಕ್ಕ ಕೊಡಂಗಿಲ್ರೀ’.

ತಿಮ್ಮಣ್ಣನ ವಹಿವಾಟು ನಡೆದಿರುವಾಗ ನೂರಾರು ಹಕ್ಕಿಗಳು ಸಜ್ಜೆಗೆ ಮುತ್ತಿದ್ದವು.

‘ತಿಮ್ಮಣ್ಣ, ನಿನ್ನ ಸಜ್ಜೆ ಎಲ್ಲಾ ಮುಗಿದುಹೋಯ್ತು. ಅಲ್ಲಿ ನೋಡು’, ಎಂದು ಹಕ್ಕಿಗಳತ್ತ ಕೈ ತೋರಿದೆ.

ಅತ್ತ ನೋಡಿದ ತಿಮ್ಮಣ್ಣ ಹಕ್ಕಿಗಳನ್ನು ಗದರಿಸಲಿಲ್ಲ.

‘ಗುಬ್ಬಿಗಳು ಸಾರ್... ಅವು ಎಷ್ಟ್ ತಿಂತವೆ’ ಎಂದು ಮುಗುಳ್ನಕ್ಕ.

ಕಾಲಕ್ಕೆ ಬೀಳದ ಮಳೆ, ಸಮಯಕ್ಕೆ ಬೀಸದ ಗಾಳಿಯನ್ನು ನಂಬಿಕೊಂಡು ಬದುಕುತ್ತಿದ್ದ ತಿಮ್ಮಣ್ಣನ ಸಂತೃಪ್ತಿಗೆ ಕೊರತೆ ಕಾಣಲಿಲ್ಲ.

ಅತ್ತ ಅಂಬರೀಷನ ಪ್ರಯತ್ನ ಮುಂದುವರೆದಿತ್ತು. ಬಿಡಿಬಿಡಿಯಾಗಿ ಪುಟಗಳನ್ನು ತೆರೆಯಲು ಆತನಿಗೆ ಸಾಧ್ಯವಾಗಲೇ ಇಲ್ಲ.

ಕಷ್ಟದ ದುಡಿಮೆಯನ್ನಷ್ಟೇ ಬಲ್ಲ ಆ ಬೆರಳುಗಳಿಗೆ ತೆಳ್ಳನೆಯ ಹಾಳೆಗಳು ದಕ್ಕಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT