ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾರಗುಡ್ಡ ಒಂದೂರಿನ ಎರಡು ಕಥೆ

Last Updated 19 ಜನವರಿ 2013, 19:59 IST
ಅಕ್ಷರ ಗಾತ್ರ

ದಶಕದ ಹಿಂದಿನ ಮಾತು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದ್ವೀಪ ಪ್ರದೇಶ ಕರೂರು ಹೋಬಳಿಯ ಹತ್ತಾರು ಗ್ರಾಮಗಳ ಜನರು ಒಕ್ಕೊರಲಿನಿಂದ ಕೂಗಿದ್ದರು- `ಅಂಬಾರಗುಡ್ಡ ನಮ್ಮದು'. `ಪ್ರಾಣ ಕೊಟ್ಟೇವು ಗುಡ್ಡದಲ್ಲಿ ಗಣಿಗಾರಿಕೆಗೆ ಬಿಡೆವು' ಎನ್ನುವ ಮಾತೂ ಅನುರಣಿಸಿತ್ತು. ಆ ಕೂಗಿನಲ್ಲಿ ಇಷ್ಟು ವರ್ಷಗಳ ಕಾಲ ತಮ್ಮದೇ ತಲೆಯ ಮೇಲೆ ಬಾಗಿಕೊಂಡಿದ್ದ ಅಂಬಾರಗುಡ್ಡ ಎಂಬ ಪಶ್ಚಿಮಘಟ್ಟದ ಕೊಡಚಾದ್ರಿ ಶ್ರೇಣಿಯ ಎರಡನೇ ದೊಡ್ಡ ಪರ್ವತ, ಮ್ಯಾಂಗನೀಸ್ ಗಣಿಗಾರಿಕೆಗೆ ಸಿಕ್ಕು ದಿನದಿಂದ ದಿನಕ್ಕೆ ಗುಡ್ಡ ಜಾರಿ ಗದ್ದೆಯ ಮೇಲೆ ಬೀಳುವ ಆತಂಕವಿತ್ತು.

ಈಗ ಅದೇ ಜನ ಮತ್ತೊಮ್ಮೆ ಕೂಗಿಕೊಳ್ಳುತ್ತಿದ್ದಾರೆ: `ನಮ್ಮೂರ ಅಂಬಾರಗುಡ್ಡಕ್ಕೆ ನಾವೇ ಕಾಲಿಡುವಂತಿಲ್ಲ. ಗುಡ್ಡ ಕಾದ ನಮ್ಮನ್ನೇ ಒಕ್ಕಲೆಬ್ಬಿಸುತ್ತಿದ್ದಾರೆ, ನ್ಯಾಯ ಬೇಕು'. ಅಂಬಾರಗುಡ್ಡ ಪ್ರದೇಶವನ್ನು `ಜೀವ ವೈವಿಧ್ಯ ಪಾರಂಪರಿಕ ತಾಣ' ಎಂದು ಸರ್ಕಾರ ಗೆಜೆಟ್‌ನಲ್ಲಿ ಘೋಷಣೆ ಮಾಡಿದೆ. ಸರ್ಕಾರಿ ಆದೇಶ ಹೊರಬಿದ್ದು ವರ್ಷ ಕಳೆದಿದೆ. ಬಹುಸಂಖ್ಯಾತ ಆದಿವಾಸಿ ಕುಣುಬಿ ಜನಾಂಗದವರೇ ಕೂಡಿರುವ ಗುಡ್ಡದ ಕಾಲಿನ ಜನ ಒಕ್ಕಲೆಬ್ಬಿಸುವ ಭೀತಿ ಎದುರಿಸುತ್ತಿದ್ದಾರೆ.

ದಶಕದ ಕೆಳಗೆ ಮೊದಲ ಬಾರಿಗೆ ಅಂಬಾರಗುಡ್ಡ ಪ್ರದೇಶ ರಾಜ್ಯ ಮಟ್ಟದಲ್ಲಿ ಸುದ್ದಿಯಾದದ್ದು ಇಲ್ಲಿ ಆರಂಭಗೊಂಡ ಮ್ಯಾಂಗನೀಸ್ ಅದಿರು ಗಣಿಗಾರಿಕೆಯಿಂದ. ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗದ ಸಂಕಣ್ಣ ಸಾನುಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮರಾಠಿ ಗ್ರಾಮದ ಮೂಲಕವೇ ಅಂಬಾರಗುಡ್ಡ ಪ್ರವೇಶಿಸಬೇಕು.

ಕೊಡಚಾದ್ರಿ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟದ ಈ ಗುಡ್ಡ ಕರಾವಳಿಯಿಂದ ಬರುವ ಮಾನ್ಸೂನ್ ಮಾರುತವನ್ನು ತಡೆಯುವ ಜತೆ ಶರಾವತಿ ನದಿಯ ಉಪನದಿಗಳಾದ ಎಣ್ಣೆಹೊಳೆ, ಮಳೂರು ಹೊಳೆಯ ಉಗಮ ಸ್ಥಾನ ಕೂಡಾ ಹೌದು. ಶರಾವತಿ ನದಿಯು ಉಡುಪಿ ಜಿಲ್ಲೆಯ ನಾಗೋಡಿ ಜಲಾನಯನ ಪ್ರದೇಶದ ಕಡೆ ಹರಿಯದಂತೆ ತಡೆಯುವ ಈ ಪರ್ವತ ಇಳಿಜಾರಿನ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ.

2002ರ ಹೊತ್ತಿಗೆ ಬೆಂಗಳೂರು ಮೂಲದ ಖಾಸಗಿ ಕಂಪನಿಯೊಂದು ಸರ್ಕಾರದ ಪರವಾನಿಗೆ ಪಡೆದಿದೆ ಎಂದು ಹೇಳಿಕೊಂಡು ಈ ಗುಡ್ಡಕ್ಕೆ ರಸ್ತೆ ಕೊರೆಯುವ ಕೆಲಸವನ್ನು ಕೈಗೆತ್ತಿಕೊಂಡಿತು. ಸ್ಥಳೀಯ ಜನರು ತಮ್ಮೂರಿಗೆ ರಸ್ತೆ ಬಂದ ಸಂಭ್ರಮದಲ್ಲಿ ಸುಮ್ಮನಿದ್ದರು. ಕೆಲವೇ ತಿಂಗಳಲ್ಲಿ ಅಂಬಾರಗುಡ್ಡದ ನೆತ್ತಿಗೆ ದೊಡ್ಡದಾದ ರಸ್ತೆ ಕೊರೆಯಲಾಯಿತು. ನೋಡನೋಡುತ್ತಿದ್ದಂತೆ ದೊಡ್ಡ ದೊಡ್ಡ ಯಂತ್ರಗಳು ಬಂದು ಗುಡ್ಡದ ತುದಿಯಲ್ಲಿ ಪ್ರತಿಷ್ಠಾಪಿತವಾದವು.

ಕಿವಿ ಅವಡುಗಚ್ಚುವ ಶಬ್ದದ ನಡುವೆ ಗುಡ್ಡ ದಿನದಿಂದ ದಿನಕ್ಕೆ ಆಕಾರ ಕಳೆದುಕೊಂಡಿತು. ನಮ್ಮೂರಿನಲ್ಲಿ ಮ್ಯಾಂಗನೀಸ್ ಅದಿರು ಗಣಿಗಾರಿಕೆ ಆರಂಭವಾಗಿದೆ ಎಂಬುದು ಜನರ ಗಮನಕ್ಕೆ ಬರುವ ಹೊತ್ತಿಗಾಗಲೇ ಅದರ ಪರಿಣಾಮ ಕಣ್ಣೆದುರಿಗೆ ಸ್ಪಷ್ಟವಾಯಿತು. ಮೊದಲ ಮಳೆ ಬಿದ್ದ ಕೂಡಲೇ ಗುಡ್ಡದ ತುದಿಯ ಮ್ಯಾಂಗನೀಸ್ ಅದಿರು ಮಿಶ್ರಿತ ಮಣ್ಣು ಗುಡ್ಡದ ಕಾಲಿನ ಗ್ರಾಮದ ನೂರಾರು ಎಕರೆ ಬತ್ತ ಬೆಳೆಯುವ ಗದ್ದೆಗಳಿಗೆ ಬಂದು ಕುಳಿತಿತು. ನೇಗಿಲ ಕುಳ ನೆಲವನ್ನು ಊಳಲಿಕ್ಕೆ ಆಗದಷ್ಟು ಭೂಮಿ ಗಟ್ಟಿಯಾಯಿತು. ಬೆಳೆ ಕೈಕೊಟ್ಟಿತು. ಅನ್ನಕ್ಕೆ ಕಲ್ಲು ತಂದರು ಎಂದು ಕೋಪ ಮಾಡಿಕೊಂಡ ಸ್ಥಳೀಯ ಗ್ರಾಮಸ್ಥರು ಗಣಿಗಾರಿಕೆ ವಿರುದ್ಧ ದನಿ ಎತ್ತಿದರು.

ಹೊಸನಗರದ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ರೈತರ ಹೋರಾಟದ ನೇತೃತ್ವ ವಹಿಸಿದರು. ಹೈಕೋರ್ಟ್‌ನಲ್ಲಿ ಖಾಸಗಿ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸಲಾಯಿತು. ದ್ವೀಪದ ಕರೂರು ಮತ್ತು ಬಾರಂಗಿ ಅವಳಿ ಹೋಬಳಿಯ ಸುಮಾರು ಹದಿನೈದು ಸಾವಿರ ಜನ ಹೋರಾಟಕ್ಕೆ ಬೆಂಬಲ ನೀಡಿ ರಸ್ತೆಗೆ ಇಳಿದರು. ಇದೆಲ್ಲದರ ಪರಿಣಾಮವಾಗಿ ಸರ್ಕಾರ ಎಚ್ಚೆತ್ತುಕೊಂಡಿತು. ಅಂಬಾರಗುಡ್ಡದಲ್ಲಿ ಗಣಿಗಾರಿಕೆ ನಿಂತಿತು.

ಗುಡ್ಡದ ನೆತ್ತಿಯ ಮೇಲಿದ್ದ ಯಂತ್ರಗಳು ಕೆಳಗಿಳಿದವು. ಒಂದೆರಡು ವರ್ಷ ಗುಡ್ಡದಲ್ಲಿ ತೆಗೆದಿರುವ ಅದಿರನ್ನು ಕೊಂಡೊಯ್ಯುವ ಪ್ರಯತ್ನಕ್ಕೂ ಖಾಸಗಿ ಕಂಪನಿ ಮುಂದಾಯಿತು. ಜನಶಕ್ತಿಯ ಮುಂದೆ ಅದೂ ಸಾಧ್ಯವಾಗಲಿಲ್ಲ. ಗಣಿಗಾರಿಕೆ ಶಬ್ದಕ್ಕೆ ಹೆದರಿ ಊರು ಬಿಟ್ಟಿದ ಕಾಡು ಹಕ್ಕಿಗಳು ಮತ್ತೆ ಬಂದು ಗುಡ್ಡದಲ್ಲಿ ಗೂಡು ಕಟ್ಟಿದವು.

ಗಣಿಗಾರಿಕೆ ಸ್ಥಗಿತದಿಂದ ನಿಜವಾಗಿ ನಿಟ್ಟುಸಿರು ಬಿಟ್ಟವರು ಗುಡ್ಡದ ಕಾಲಿನಲ್ಲಿ ಹಾಡಿ ಮಾಡಿಕೊಂಡ ಕುಣುಬಿ ಜನಾಂಗದವರು. ಕಾಡಿನ ಜತೆ ಅವಿನಾಭಾವ ಸಂಬಂಧ ಹೊಂದಿರುವ ಕುಣುಬಿಗಳು ಈ ನೆಲದ ನಿಜ ವಾರಸುದಾರರು. ಅಂಬಾರಗುಡ್ಡ ಗಣಿಗಾರಿಕೆ ಮುಂದುವರಿದಿದ್ದರೆ ಅವರ ಪರಿಸರ ನಾಶವಾಗಿ ಬದುಕು ಅತಂತ್ರವಾಗುತ್ತಿತ್ತು. ಗಣಿಗಾರಿಕೆ ನಿಂತ ದಿನ ಕುಣುಬಿಯರ ಹಾಡಿಯಲ್ಲಿ ಸಂಭ್ರಮ ಹಾಡಾಗಿ ಹೊರ ಹೊಮ್ಮಿತ್ತು. ರಾತ್ರಿಯಿಡೀ ಹಾಡು ಕುಣಿತ ನಡೆದಿತ್ತು.

ಇದೆಲ್ಲ ಘಟಿಸಿ ಆರು ವರ್ಷ ಕಳೆದಿದೆ. ಈಗ ಅಂಬಾರಗುಡ್ಡ ಮತ್ತೆ ಸುದ್ದಿಯಲ್ಲಿದೆ. ಅದೇ ಕುಣುಬಿಯರು ಮತ್ತೆ ಆತಂಕದಲ್ಲಿದ್ದಾರೆ. ಕರ್ನಾಟಕ ಜೀವವೈವಿಧ್ಯ ಅಧಿನಿಯಮ, 2002ರ ಸೆಕ್ಷನ್ 37 ಉಪವಿಧಿ 1ರ ಪ್ರಕಾರ ಅಂಬಾರಗುಡ್ಡ ಒಳಗೊಂಡಂತೆ 3857 ಎಕರೆ ಭೂಪ್ರದೇಶವನ್ನು ಸರ್ಕಾರ ಜೀವವೈವಿಧ್ಯ ತಾಣವೆಂದು ಘೋಷಿಸಿದೆ. ಇದರಿಂದಾಗಿ ಕಳೆದ ನೂರಾರು ವರ್ಷದಿಂದ ಬದುಕು ಕಂಡುಕೊಂಡ ಸಮುದಾಯಗಳು ಒಕ್ಕಲೇಳುವ ಆತಂಕ ಎದುರಾಗಿದೆ.

ಕರ್ನಾಟಕ ಸರ್ಕಾರ ನ.18, 2011ರಂದು ಎರಡನೇ ಅಧಿಸೂಚನೆ ಹೊರಡಿಸಿ ಅಂಬಾರಗುಡ್ಡದ ಜೈವಿಕ ಸೂಕ್ಷ್ಮತೆಯ ಫಲಿತಾಂಶವಾಗಿ ವಿವಿಧ ಜಾತಿಯ ಕಾಡು ಪ್ರಾಣಿಗಳು, ವಿಶೇಷ ಜೇನು ತಳಿ, ಮುಖ್ಯವಾಗಿ ಶರಾವತಿ ನದಿಯ ಉಪ ನದಿಗಳ ಉಗಮ ಸ್ಥಾನದ ಕಾರಣ ನೀಡಿ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯ ಪಡೆ ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ `ಜೈವಿಕ ಪಾರಂಪರಿಕ ವೈವಿಧ್ಯತಾ ತಾಣ' ಘೋಷಣೆಯ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅಚ್ಚರಿ ಏನೆಂದರೆ ಈ ಮಾಹಿತಿ ಗುಡ್ಡದ ಕಾಲಿನ ಜನರಿಗೆ ನಿಜವಾಗಿ ತಲುಪಿದ್ದು ಮೊನ್ನೆ ಮೊನ್ನೆ!

ಸರ್ಕಾರದ ನಿರ್ಧಾರ ಅಂಬಾರಗುಡ್ಡ ವ್ಯಾಪ್ತಿಯ ನಲವತ್ತಕ್ಕೂ ಹೆಚ್ಚು ಜನನಿಬಿಡ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದೆ. ಪಾರಂಪರಿಕ ಅರಣ್ಯ ಎನ್ನುವ ಕಾರಣ ಒಡ್ಡಿ ನಾಳೆ ನಮ್ಮನ್ನು ಒಕ್ಕಲೆಬ್ಬಿಸುತ್ತಾರೆ ಎನ್ನುವ ಆತಂಕ ಸ್ಥಳೀಯರದು. ಇದಕ್ಕೆ ಪೂರಕ ಎಂಬಂತೆ ಕಳೆದ ಇಪ್ಪತ್ತು ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡಿ ಜಮೀನು ಮಂಜೂರಾತಿಗೆ ಈ ಹಿಂದೆಯೇ ಅರ್ಜಿ ಸಲ್ಲಿಸಿರುವ ಈ ಗ್ರಾಮಗಳ ರೈತರಿಗೆ ಪಾರಂಪರಿಕಾ ತಾಣದ ಕಾರಣವೊಡ್ಡಿ ಭೂ ಒಡೆತನದ ಹಕ್ಕನ್ನು ನಿರಾಕರಿಸಲಾಗಿದೆ.

ಶರಾವತಿ ನದಿಗೆ ಕಟ್ಟಿದ ಹಿರೆಭಾಸ್ಕರ ಮತ್ತು ಲಿಂಗನಮಕ್ಕಿ ಜಲಾಶಯದಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿರುವ ನಮ್ಮ ಬದುಕನ್ನು ಹೈರಾಣಗೊಳಿಸುವ ಇಂತಹ ನಿರ್ಣಯವನ್ನು ತಮ್ಮ ಗಮನಕ್ಕೆ ತರದೇ ಜಾರಿಗೆ ತಂದ ಸರ್ಕಾರದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಖಾಸಗಿ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿ ಗುಡ್ಡ ಬಿಡಿಸಿಕೊಂಡ ಅವರ ಖುಷಿ ಮಾಯವಾಗಿದೆ.

ದಶಕದ ಹಿಂದೆ ಖಾಸಗಿಯವರು ಅಂಬಾರಗುಡ್ಡ ಸೀಳಲು ಬರುವಾಗ ದೊಡ್ಡ ದೊಡ್ಡ ಯಂತ್ರದ ಮೂಲಕ ಸದ್ದು ಮಾಡುತ್ತಾ ಬಂದಿದ್ದರು. ಜನರು ಎಚ್ಚರಗೊಂಡು `ಅಂಬಾರಗುಡ್ಡ ರಕ್ಷಿಸಿ' ಎಂದು ಸರ್ಕಾರಕ್ಕೆ ಮನವಿ ನೀಡಿ ಪ್ರತಿಕ್ರಿಯೆಗೆ ಕಾದಿದ್ದರು. ಸರ್ಕಾರ ಮಲಗಿದೆ ಎಂದು ಗೊತ್ತಾದಾಗ ತಾವೇ ಧ್ವನಿ ಎತ್ತಿ ಗೆದ್ದಿದ್ದರು. ಈ ಬಾರಿ ಸ್ವತಃ ಸರ್ಕಾರವೇ ಗುಡ್ಡದ ರಕ್ಷಣೆಯ ಹೆಸರಿನಲ್ಲಿ ತಮ್ಮ ಹಳ್ಳಿಯನ್ನು ಸೇರಿ ಬೇಲಿ ಹಾಕಲು ಮುಂದಾಗಿದೆ. ನಮ್ಮನ್ನು ಬಾಣಲೆಯಿಂದ ಬೆಂಕಿಗೆ ತಳ್ಳಲು ನಮ್ಮದೇ ಸರ್ಕಾರ ಮುಂದಾಗಿದೆ ಎಂಬುದು ಅವರ ಒಳ ನೋವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT