ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಭವನ ಕಾಮಗಾರಿ ಕುಂಠಿತ

₨ 2.60 ಕೋಟಿ ಖರ್ಚಾಗಿದ್ದರೂ ಅಪೂರ್ಣ: ನಿರ್ಮಾಣ ಶುರುವಾಗಿದ್ದು 2006ರಲ್ಲಿ
Last Updated 28 ಮಾರ್ಚ್ 2015, 10:28 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನದ ಕಾಮಗಾರಿ ಕಳೆದ ಒಂಬತ್ತು ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ತಾಲ್ಲೂಕಿನ ದಲಿತ ಸಮುದಾಯದ ಹಲವು ವರ್ಷಗಳ ಕನಸು ನನಸಾಗದೆ ಉಳಿದಿದೆ.

ಸುಮಾರು ₹  2.9 ಕೋಟಿ ಅಂದಾಜು ವೆಚ್ಚದಲ್ಲಿ 2006ರಲ್ಲಿ ಆರಂಭಗೊಂಡ ಭವನದ ಕಾಮಗಾರಿ ಈವರೆಗೆ ₹ 2.60 ಕೋಟಿ ಖರ್ಚಾಗಿದ್ದರೂ ಅರ್ಧಂಬರ್ಧ ಕಟ್ಟಡ ನಿರ್ಮಾಣ­ದವರೆಗೆ ಬಂದಿದೆ. ತೆವಳುತ್ತಾ ಸಾಗುತ್ತಿದ್ದ ಕಾಮಗಾರಿ ಕಳೆದ ಒಂದು ವರ್ಷದಿಂದ ಸ್ಥಗಿತವಾಗಿ ಈಗ ಅಪೂರ್ಣಗೊಂಡಿರುವ ಕಟ್ಟಡ ಕುಡುಕರ, ಜೂಜುಕೋರರ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

ತಾಲ್ಲೂಕಿನ ದಲಿತ ವರ್ಗದ ಸಭೆ, ಸಮಾರಂಭಗಳಿಗೆ ಬಳಸುವ ಉದ್ದೇಶ­ದಿಂದ ಸುಸಜ್ಜಿತ ಭವನ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಿ, ಕಾಮಗಾರಿಗೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಮೂಲಗಳಿಂದ ಹಣ ಹೊಂದಿಸಲಾಗಿದ್ದರೂ ಕಟ್ಟಡ ಪೂರ್ಣಗೊಳ್ಳಲು ಇನ್ನೂ ಕನಿಷ್ಟ ₹ 1.50 ಕೋಟಿ ಬೇಕು ಎಂಬುದು ಅಧಿಕಾರಿಗಳ ವಾದ.

ಭವನಕ್ಕೆ ಗ್ರಾನೈಟ್ ಅಳವಡಿಕೆ, ಸ್ಟೈರ್‌ಕೇಸ್, ಕಿಟಕಿ ಮತ್ತು ಬಾಗಿಲುಗಳ ಅಳವಡಿಕೆ, ಭವನದ ಸುತ್ತ ವಾಹನ ನಿಲುಗಡೆ ಮತ್ತು ಟೈಲ್ಸ್ ಅಳವಡಿಕೆ, ಚರಂಡಿ ನಿರ್ಮಾಣ ಸೇರಿದಂತೆ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಕಾಮಗಾರಿ ವಿಳಂಭವಾಗುತ್ತಾ ಹೋದಂತೆ ಕಾಮಗಾರಿಯ ವೆಚ್ಚ ₹ 2 ಕೋಟಿಗೂ ಮೀರುವ ಸಂಭವವಿದೆ. ರಾಜ್ಯ ಸರ್ಕಾರದಿಂದ ಅಂಬೇಡ್ಕರ್ ಭವನಕ್ಕೆ ಈವರೆಗೆ ₹ 2 ಕೋಟಿ ಹಣ ಬಿಡುಗಡೆಯಾಗಿ ಈವರೆಗಿನ ಕಾಮಗಾರಿ ನಡೆದಿದೆ.

ದಲಿತ ಸಮುದಾಯದ ಅಸಮಾಧಾನ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಸ್ಥಗಿತವಾಗಿರುವುದು ತಾಲ್ಲೂಕಿನ ದಲಿತ ಸಮುದಾಯವನ್ನು ಕೆರಳಿಸಿದ್ದು, ದಲಿತರು ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆಯಾದ ಎರಡು ಮೂರು ವರ್ಷಗಳ ನಂತರ ಕಾಮಗಾರಿ ಆರಂಭಿಸಿದ ಮಿನಿ ವಿಧಾನಸೌಧ,  ಸರ್ಕಾರಿ ಬಸ್ ನಿಲ್ದಾಣ ಪೂರ್ಣಗೊಂಡು ಎರಡು ಮೂರು ವರ್ಷಗಳೇ ಕಳೆದು ಹೋಗಿವೆ. ಕಳೆದ ವರ್ಷ ಕಾಮಗಾರಿ ಆರಂಭಿಸಿದ ನ್ಯಾಯಾಲಯ ಕಟ್ಟಡ ಅರ್ಧ ಮಕ್ತಾಯ ಕಂಡಿದೆ. ಆದರೆ ಅಂಬೇಡ್ಕರ್ ಭವನಕ್ಕೆ ಮಾತ್ರ ಏಕೆ ಈ ನಿರ್ಲಕ್ಷ್ಯ ಎಂದು ದಲಿತ ಮುಖಂಡರಾದ ಹನುಮಂತಯ್ಯ, ವೆಂಕಟೇಶ್, ವಿಷಕಂಠಮೂರ್ತಿ, ಜಯಕಾಂತ್, ಶಿವಾನಂದ್ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪ್ರತಿವರ್ಷ ಅಂಬೇಡ್ಕರ್ ಜಯಂತಿ ಬಂದಾಗ ಜೊತೆಗೆ ಪ್ರತಿ ಚುನಾವಣೆ  ಸಂದರ್ಭದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅಂಬೇಡ್ಕರ್ ಭವನ ಪೂರ್ಣಗೊಳಿಸುವ ಮಾತುಗಳನ್ನಾಡುತ್ತಾರೆ. ಆದರೆ ನಂತರ ಆ ಬಗ್ಗೆ ಎಲ್ಲಿಯೂ ಪ್ರಯತ್ನಶೀಲರಾಗುವುದಿಲ್ಲ. ಅಂಬೇಡ್ಕರ್ ಭವನದ ಇಂದಿನ ದುಸ್ಥಿತಿಗೆ ಶಾಸಕರು ಹಾಗೂ ಅಧಿಕಾರಿಗಳೇ ಕಾರಣ ಎಂಬುದು ಅಪ್ಪಗೆರೆ ಸತೀಶ್, ಶಿವಕುಮಾರ್, ಸಿದ್ದರಾಮು, ಸುಜೀವನಕುಮಾರ್, ಕುಮಾರ್ ಅವರ ಆರೋಪ.

ಭವನ ಪೂರ್ಣ­ಗೊಳಿಸಲು  ಮುಂದಾಗದಿದ್ದರೆ ತಾಲ್ಲೂಕು ಆಡಳಿತ ಅಂಬೇಡ್ಕರ್ ಜಯಂತಿ ಆಚರಿಸಲು ಬಿಡುವುದಿಲ್ಲ. ಭವನವನ್ನು ಸ್ವಚ್ಛಗೊಳಿಸಿ ನಾವೆ ಅಂಬೇಡ್ಕರ್ ಜಯಂತಿ ಆಚರಿಸುತ್ತೇವೆ ಎಂದು ಪಟ್ಟ ಹಿಡಿದಿರುವ ದಲಿತ ಸಮುದಾಯ ಈಗಾಗಲೇ ಭವನ ಕಾಮಗಾರಿ ವಿಳಂಭ ಖಂಡಿಸಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

ಜೂಜು-ಮೋಜಿನ ತಾಣ: ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ವಿಳಂಬ ಯಾರಿಗೆ ಬೇಸರ­ವಾಗಿ­ದೆಯೊ ಗೊತ್ತಿಲ್ಲ. ಆದರೆ ಕೆಲವು ಪುಂಡರ ಪಾಲಿಗಂತು ಇದು ಸ್ವಂತ ಮನೆಯಂತಾಗಿದೆ. ಕೆಲವರು ಈ ಅಪೂರ್ಣ ಕಟ್ಟಡವನ್ನು ಜೂಜು ಮತ್ತು ಮದ್ಯದ ಮೋಜಿಗೆ ಬಳಸಿಕೊಳ್ಳುತ್ತಿದ್ದಾರೆ. ಕೆಲವರಿಗಂತೂ ಈ ಕಟ್ಟಡ ಶೌಚಾಲಯವಾಗಿದೆ.

ಅಂಬೇಡ್ಕರ್ ಭವನ ಕಾಯಲು ಕಾವಲುಗಾರ ಇಲ್ಲದಿರುವುದೇ ಇಂತಹ ಚಟುವಟಿಕೆ ನಡೆಯಲು ಕಾರಣವಾಗಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸುತ್ತಿರುವ ಭವನಕ್ಕೆ ಕಾವಲುಗಾರ ಇಲ್ಲ ಎಂಬುದು ನಿಜಕ್ಕೂ ಆಶ್ಚರ್ಯ. ಹಾಗೆಯೇ ಕೆಲವು ಸೋಮಾರಿಗಳು ಈ ಭವನವನ್ನು ಕಾಲಹರಣ ಮಾಡಲು, ನಿದ್ರೆ ಮಾಡಲು ಸಹ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಚಾರಿಸಲು ಭವನದ ಉಸ್ತುವಾರಿ ಹೊತ್ತಿರುವ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ವೆಂಕಟೇಶ್ ಅವರಿಗೆ ಕರೆ ಮಾಡಿದಾಗ ಅವರು ಸ್ವೀಕರಿಸಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT