ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕರೆಯ ಮಗುವಿಗೆ ಕಾಡುವ ಸಕ್ಕರೆ ರೋಗ

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಧುಮೇಹ (ಸಿಹಿ ಮೂತ್ರ ರೋಗ/ ಡಯಾಬಿಟಿಸ್‌/ಸಕ್ಕರೆ ಕಾಯಿಲೆ) ಪ್ರಾಚೀನವಾಗಿ ಕಂಡು ಹಿಡಿದ ಕೆಲವು ರೋಗಗಳಲ್ಲಿ ಒಂದು. ಒಂದೊಮ್ಮೆ ಸ್ಥೂಲದೇಹಿಗಳು, ಸಿರಿವಂತರಿಗಷ್ಟೇ ಸೀಮಿತವಾಗಿದ್ದ ಸಕ್ಕರೆ ಕಾಯಿಲೆ ಇಂದು ಕೇವಲ ಅವರಿಗಷ್ಟೇ ಸೀಮಿತವಾಗಿಲ್ಲ. ಐವತ್ತು ವರ್ಷ ಮೇಲ್ಪಟ್ಟವರಿಗಷ್ಟೇ ಈ ರೋಗ ಬರುತ್ತದೆಂಬ ಮಾತು ಸಹ ಸುಳ್ಳಾಗಿದ್ದು, ಹತ್ತು–ಹದಿನೈದರ ಆಸುಪಾಸಿನ ಮಕ್ಕಳು, ಯುವಕರು ಸದೃಢ ಶರೀರವುಳ್ಳವರು, ಬಡವರೂ ಈ ಕಾಯಿಲೆಯಿಂದ ನರಳುವುದನ್ನು ನೋಡುತ್ತಿದ್ದೇವೆ.

ಪತ್ರಿಕೆಗಳಲ್ಲಿ, ಇನ್ನಿತರ ಮಾಧ್ಯಮಗಳಲ್ಲಿ ಮಧುಮೇಹದ ಬಗ್ಗೆ ಹಲವಾರು ಲೇಖನಗಳು ಪ್ರಕಟವಾಗಿವೆ. ಈ ಕಾಯಿಲೆ ಮಿತಿಮೀರಿದಾಗ/ಮಾತ್ರೆ ಇಂಜೆಕ್ಷನ್‌ಗಳಿಂದ ಹತೋಟಿಗೆ ಬಾರದಿದ್ದಾಗ ಅಥವಾ ಮಾತ್ರೆ/ ಇಂಜಕ್ಷನ್‌ಗಳನ್ನು ತೆಗೆದುಕೊಳ್ಳದಿದ್ದಾಗ ಆಗಬಹುದಾದ ಅನಾಹುತಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಇಂದಿನ ಧಾವಂತದ ಬದುಕಿನಲ್ಲಿ ಎಂತಹವರೂ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರಾದ್ದರಿಂದ ಪ್ರತಿಯೊಬ್ಬರೂ ಮಧುಮೇಹದ ಬಗ್ಗೆ ಕೂಲಂಕಷವಾಗಿ  ತಿಳಿದಿರುವುದು ಕ್ಷೇಮ.

ನಾವು ತಿಂದ ಆಹಾರದಲ್ಲಿನ ಸಕ್ಕರೆ ಅಂಶ ಎಲ್ಲ ಜೀವಕೋಶಗಳಿಗೆ ತಲುಪಬೇಕಾದರೆ, ಮೇದೋಜ್ಜೀರಕ ಗ್ರಂಥಿ (Pancreas) ಇನ್ಸುಲಿನ್‌ನ್ನು ಉತ್ಪಾದಿಸುವುದು ಅತ್ಯವಶ್ಯ. ಮೇದೋಜ್ಜೀರಕ ಗ್ರಂಥಿಯಿಂದ ನಮ್ಮ ದೇಹಕ್ಕೆ ಬೇಕಾಗುವಷ್ಟು ಇನ್ಸುಲಿನ್‌ ಉತ್ಪಾದನೆ ಕುಂಠಿತವಾದಾಗ ಸಕ್ಕರೆ ಅಂಶ ಜೀವಕೋಶದೊಳಗೆ ತಲುಪದೆ, ರಕ್ತದಲ್ಲಿಯೇ ಶೇಖರಣೆಯಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಅತಿಯಾಗುತ್ತದೆ.

ಒಬ್ಬ ಸಾಮಾನ್ಯ ಮನುಷ್ಯನಲ್ಲಿ 10–12 ಗಂಟೆಗಳ ಉಪವಾಸದ ಬಳಿಕ (ರಾತ್ರಿ ಊಟವಾದ ಬಳಿಕ ಏನನ್ನೂ ಸೇವಿಸದೆ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ರಕ್ತಪರೀಕ್ಷೆ ಮಾಡಿದಾಗ) ರಕ್ತದಲ್ಲಿ 75–110 ಎಂ.ಜಿ/ಡಿ. ಎಲ್‌ ನಷ್ಟು ಸಕ್ಕರೆ ಅಂಶ ಇದ್ದರೆ ಒಳಿತೆಂದು ವೈದ್ಯಕೀಯ ಲೋಕದಲ್ಲಿ ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ. ಇದನ್ನು ‘ಫಾಸ್ಟಿಂಗ್‌ ಬ್ಲಡ್‌ ಶುಗರ್‌’ (ಎಫ್‌ಬಿಎಸ್‌) ಎಂದು ಕರೆಯಲಾಗುತ್ತದೆ. ಎಫ್‌ಬಿಎಸ್‌126 ಎಂ. ಜಿ ದಾಟಿದಾಗ ಮಧುಮೇಹ ಕಾಯಿಲೆ ಇರಬಹುದೆಂದು ಶಂಕಿಸಿ ನಂತರ ಹಲವು ರಕ್ತ ಪರೀಕ್ಷೆಗಳನ್ನು ಮಾಡಿ ಸಕ್ಕರೆ ಕಾಯಿಲೆ ಇದೆಯೇ? ಎಂಬುದನ್ನು ದೃಢಪಡಿಸಿಕೊಳ್ಳಲಾಗುತ್ತದೆ.

ಸಕ್ಕರೆ ಕಾಯಿಲೆ ಇರುವುದು ದೃಢಪಟ್ಟರೆ, ರೋಗಿಯ ವಯಸ್ಸು, ದೇಹಸ್ಥಿತಿ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಇತರ ಕಾಯಿಲೆಗಳ ಸಾಧ್ಯತೆಗಳ ಆಧಾರದ ಮೇಲೆ ಮಾತ್ರೆಗಳ ಮೂಲಕ ಇಲ್ಲವೆ ಇನ್ಸುಲಿನ್‌ನಿಂದ ಸಕ್ಕರೆ ಅಂಶವನ್ನು ಹತೋಟಿಗೆ ತರಲು ವೈದ್ಯರು ಪ್ರಯತ್ನ ಪಡುತ್ತಾರೆ.

ಹೀಗೆ ಚಿಕಿತ್ಸೆ ತೆಗೆದುಕೊಳ್ಳುವ ರೋಗಿಗಳು ಯಾವುದೇ ಕಾರಣಗಳಿಂದ ಮಾತ್ರೆ/ ಇನ್ಸುಲಿನ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಅಥವಾ ಯಾವುದೇ ರೀತಿಯ ಗಾಯ/ ಸೋಂಕು ರೋಗ (ಜ್ವರ, ನ್ಯುಮೋನಿಯ ಭೇದಿ, ಮೂತ್ರ ಸೋಂಕು) ಇಲ್ಲವೆ ತೀವ್ರ ತೆರನಾದ ಒತ್ತಡಕ್ಕೆ ಒಳಗಾದಾಗ (ಮಾನಸಿಕ ರೋಗ ಕುಟುಂಬದಲ್ಲಿ ಸಾವು ಇತರೆ), ಇಲ್ಲವೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದಾಗ ದೇಹದಲ್ಲಿ ಸಕ್ಕರೆ ಅಂಶ ಏರುಪೇರಾಗುತ್ತದೆ. ಅಲಕ್ಷಿಸಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಅತಿಯಾಗಿ (ಕೆಲವೊಮ್ಮೆ 400–600ಎಂಜಿ/ಡಿಎಲ್‌ ತನಕವೂ) ‘ಡಯಾಬಿಟಿಕ್‌ ಕೀಟೋಅಸಿಡೋಸಿಸ್‌ (ಡಿ.ಕೆ.ಎ.) ಎಂಬ ಮಾರಣಾಂತಿಕ ಸ್ಥಿತಿ ತಲುಪಬಹುದು.

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಡಯಾಬಿಟಿಸ್‌ನ್ನು ಹತೋಟಿಗೆ ತರಲು ಇನ್ಸುಲಿನ್‌ ಬೇಕೇ ಬೇಕಾಗಿರುವುದರಿಂದ, ಇಂತಹ ಮಕ್ಕಳಲ್ಲಿ ಡಿಕೆಎ ಬಹುಬೇಗ ಕಾಣಿಸಿಕೊಳ್ಳಬಹುದು. ಆದ್ದರಿಂದ ಪಾಲಕರು ಸದಾ ಜಾಗರೂಕರಾಗಿರುವುದು ಅವಶ್ಯ. ಡಿ.ಕೆ.ಎ. ಲಕ್ಷಣಗಳು: ಡಯಾಬಿಟಿಸ್‌ನಿಂದ ನರಳುವ ರೋಗಿಗಳು ಮೇಲೆ ಹೇಳಿದ ಯಾವುದೇ ಪರಿಸ್ಥಿತಿಗಳಿಂದ ನರಳುತ್ತಿದ್ದು ಜೊತೆಗೆ ವಾಂತಿ, ತೀವ್ರ ಸುಸ್ತು, ಉಸಿರಾಟದಲ್ಲಿ ಏರುಪೇರು, ಬಡಬಡಿಸುವಿಕೆ, ತೀವ್ರತೆರನಾದ ಬಾಯಾರಿಕೆ ಪದೇ ಪದೇ ಮೂತ್ರವಿಸರ್ಜನೆ, ಹೊಟ್ಟೆಯಲ್ಲಿ ಸಂಕಟ/ ನೋವು ಕಾಣಿಸಿಕೊಂಡರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.

ಡಯಾಬಿಟಿಸ್‌ನಲ್ಲಿ ಎರಡು ವಿಧ: ಡಯಾಬಿಟಿಸ್‌ I ಮತ್ತು ಡಯಾಬಿಟಿಸ್‌ I (Type I Diabetes mellitus) ಮಕ್ಕಳು ಮತ್ತು ಯುವಕರಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಈ ಗುಂಪಿನಲ್ಲಿ ಕೆಲವೊಮ್ಮೆ ತುಂಟಾಟದಿಂದ ಆಡಿಕೊಂಡಿರುವ ಮಕ್ಕಳು ವಾಂತಿ ಮತ್ತು ಸುಸ್ತು, ತಲೆಸುತ್ತುವಿಕೆಯಿಂದ ಬಳಲಿ ಅರೆಪ್ರಜ್ಞಾವಸ್ಥೆಯಲ್ಲಿ/ ಪ್ರಜ್ಞಾಶೂನ್ಯರಾಗಿ ಆಸ್ಪತ್ರೆಗೆ ಬಂದಾಗ, ಅವರ ರಕ್ತಪರೀಕ್ಷೆ ಮಾಡಿದಾಗಲೇ ಮಧುಮೇಹ ಇರುವುದು ತಿಳಿದು ಪಾಲಕರು ಆಶ್ಚರ್ಯ ಚಕಿತರಾಗುವುದು ಸಾಮಾನ್ಯ. ಆದ್ದರಿಂದ ಡಯಾಬಿಟಿಸ್‌ನಿಂದ ನರಳುವ ಮಕ್ಕಳು ಸಿಹಿಮೂತ್ರ ಕಾಯಿಲೆ ಇದೆ ಎಂದು ತಿಳಿಯುವ ಮುನ್ನವೇ ಡಿಕೆಎ ಹಂತ ತಲುಪಬಹುದು ಮತ್ತು ಇದು ಮಾರಣಾಂತಿಕವಾಗಿ ಪರಿಣಮಿಸಬಹುದು.

ಮೊದಲೇ ಡಯಾಬಿಟಿಸ್‌ನಿಂದ ಗುರುತಿಸಲ್ಪಟ್ಟ ಮಕ್ಕಳು ಇನ್ಸುಲಿನ್‌ ತೆಗೆದುಕೊಳ್ಳುವುದನ್ನು ತಪ್ಪಿಸಿದಾಗ ಅಥವಾ ಮೇಲೆ ಹೇಳಿದ ಕಾರಣಗಳಿಂದ ನರಳಿದಾಗ ಡಿಕೆಎ ಹಂತ ತಲುಪಿರುತ್ತಾರೆ. ಆದ್ದರಿಂದ ಪಾಲಕರೆ, ಲವಲವಿಕೆಯಿಂದ ಆಡಿಕೊಂಡಿರುವ ನಿಮ್ಮ ಮುದ್ದಾದ ಮಗು ಅತೀವ ಸುಸ್ತು, ವಾಂತಿ, ತೀವ್ರತೆರನಾದ ಬಾಯಾರಿಕೆ, ಮಾಮೂಲಿಗಿಂತ ಹೆಚ್ಚು ಬಾರಿ ಮೂತ್ರವಿಸರ್ಜಿಸುವುದು, ಹೆಚ್ಚು ಸದಾ ತಿನ್ನುತ್ತಿದ್ದರೂ – ತೂಕ ಮಾತ್ರ ದಿನೇ ದಿನೇ ಕಡಿಮೆಯಾದಂತೆನಿಸಿದರೆ, ಬರಬರುತ್ತಾ ತಲೆಸುತ್ತು ಮತ್ತು ಮಂಕು ಕವಿದಂತೆ ಕಾಣುತ್ತಿದ್ದರೆ, ಕೂಡಲೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ಒಮ್ಮೆ ರಕ್ತದ ಸಕ್ಕರೆ ಪ್ರಮಾಣ ಮತ್ತು ಮೂತ್ರಪರೀಕ್ಷೆ ಮಾಡಿಸಿಕೊಳ್ಳುವುದು ಕ್ಷೇಮ.

ಡಯಾಬಿಟಿಸ್‌ II ಸಾಮಾನ್ಯವಾಗಿ ನಲ್ವತ್ತು ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಈ ಗುಂಪಿನವರಿಗೆ ಸಾಮಾನ್ಯವಾಗಿ ಮಾತ್ರೆ ಸಾಧ್ಯವಾಗದಿದ್ದರೆ ಇನ್ಸುಲಿನ್‌ ನೀಡಲಾಗುತ್ತದೆ. ಆದ್ದರಿಂದ ಯಾವುದೇ ಕಾರಣದಿಂದ ಮಾತ್ರೆ/ ಇನ್ಸುಲಿನ್‌ ಇಂಜೆಕ್ಷನ್ ತೆಗೆದು ಕೊಳ್ಳುವುದನ್ನು ಪದೇ ಪದೇ ತಪ್ಪಿಸುತ್ತಿದ್ದರೆ ಮತ್ತು ಮೇಲೆ ಹೇಳಿದ ಯಾವುದೇ ಲಕ್ಷಣಗಳಿಂದ ಬಳಲುತ್ತಿದ್ದರೆ, ಉಸಿರಾಟ ತೀವ್ರವಾಗಿದ್ದು ಘಾಟು ವಾಸನೆಯಿಂದ ಕೂಡಿದ್ದರೆ, ಕೂಡಲೇ ಮನೆಯಲ್ಲಿಯೇ ಸಕ್ಕರೆ ಪ್ರಮಾಣ ಪರೀಕ್ಷಿಸಿ 300ಎಂ.ಜಿ/ಡಿಎಲ್‌ಗಿಂತ ಮೆಲ್ಪಟ್ಟಿದ್ದರೆ  ತಡಮಾಡದೆ ವೈದ್ಯರಲ್ಲಿಗೆ ಧಾವಿಸುವುದು ಉತ್ತಮ.

ಮಧುಮೇಹದಿಂದ ನರಳುವ ರೋಗಿಗಳು ಯಾವುದೇ ರೀತಿಯ ಸೋಂಕಿನಿಂದ ನರಳುತ್ತಿದ್ದರೆ ಮಾತ್ರೆ/ ಇನ್ಸುಲಿನ್‌ನ ಪ್ರಮಾಣವನ್ನು ರೋಗಿಯ ದೇಹಸ್ಥಿತಿಯನ್ನವಲಂಬಿಸಿ ಹೆಚ್ಚಿಸಬೇಕಾಗುತ್ತದೆ. ಆದ್ದರಿಂದ ರೋಗಿಯಾಗಲೀ ಅವರ ಮನೆಯವರಾಗಲಿ ಮೇಲೆ ಹೇಳಿದ ಲಕ್ಷಣಗಳನ್ನು ಅವಲೋಕಿಸುತ್ತಿರಬೇಕು ಮತ್ತು ಅಂತಹವು ಕಂಡು ಬಂದಲ್ಲಿ ಯಾವುದೇ ಉಪೇಕ್ಷೆ ಮಾಡದೆ ವೈದ್ಯರನ್ನು ಭೇಟಿ ಮಾಡಬೇಕು. ತಡವಾದಲ್ಲಿ ‘ಡಯಾಬಿಟಿಸ್‌ ಕೀಟೊ ಅಸಿಡೋಸಿಸ್‌’ ಹಂತ ತಲುಪಿ ಪರಿತಪಿಸಬೇಕಾದೀತು.
‘ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ’.

ಮಾಹಿತಿಗೆ: veebhas@hotmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT