ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಅವಕಾಶ: ಸಚಿವ

Last Updated 3 ಸೆಪ್ಟೆಂಬರ್ 2015, 10:44 IST
ಅಕ್ಷರ ಗಾತ್ರ

ಶಿರಾ: ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಕಟ್ಟಿಕೊಂಡಿರುವ ಮನೆ, ಕಟ್ಟಡಗಳ ಸಕ್ರಮಕ್ಕೆ ಹೊಸ ಭೂ ಕಂದಾಯ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಅಕ್ರಮ ಕಟ್ಟಡ, ನಿವೇಶನಗಳ ಸಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಿತ್ತು. ಇದನ್ನು ಮನಗಂಡು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿಕೊಂಡಿರುವ ಕಟ್ಟಡಗಳ ಸಕ್ರಮಕ್ಕೆ 94ಸಿ ಫಾರಂ ಸಲ್ಲಿಸಲು ಡಿ.8 ಕೊನೆ ದಿನ. ನಗರ ಪ್ರದೇಶಕ್ಕೆ 94/ಸಿಸಿ ಫಾರಂ ಸಲ್ಲಿಸಲು ನ.27 ಕೊನೆ ದಿನವಾಗಿದೆ ಎಂದು ತಿಳಿಸಿದರು.

ಹೊಸ ಭೂ ಕಂದಾಯ ಕಾಯ್ದೆಯಡಿ ಸರ್ಕಾರಿ ಜಾಗ ಪಡೆಯಲು ಅವಕಾಶವಿದೆ. ನಗರಸಭೆ ಸದಸ್ಯರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಡವರಿಗೆ ಮನೆ ನಿವೇಶನ ವಿತರಿಸಲು ಮುಂದಾಗಬೇಕು ಎಂದರು.

ಶಿರಾ ನಗರದ 5 ಮತ್ತು 6ನೇ ಸರ್ವೇ ನಂಬರಿನ ಕೊಳೆಗೇರಿಯಲ್ಲಿ ಕೆಲ ವರ್ಷಗಳ ಹಿಂದೆ ಕಟ್ಟಿಕೊಂಡಿದ್ದ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು ಸಾಧ್ಯವಾಗದ ಕಾರಣ ಕಾನೂನಿಗೆ ತಿದ್ದುಪಡಿ ತರಬೇಕಾಯಿತು. ನಗರದಲ್ಲಿ 163 ಎಕರೆ, ಗ್ರಾಮೀಣ ಭಾಗದಲ್ಲಿ 700 ಎಕರೆ ಸರ್ಕಾರಿ ಭೂಮಿ ಇದೆ. ಇದರಲ್ಲಿ ನಿವೇಶನ ಹಂಚಲು ಕ್ರಮ ಜರುಗಿಸಲಾಗುವುದು ಎಂದರು.

ತಹಶೀಲ್ದಾರ್ ಹೊನ್ನಶ್ಯಾಮೇಗೌಡ, ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಲ್ಲಾ ಬಕ್ಷ್‌  ಕೆ.ಪ್ಯಾರು, ಸದಸ್ಯ ಸತ್ಯನಾರಾಯಣ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ನಗರ ಆಶ್ರಯ ಸಮಿತಿ ಸದಸ್ಯ ಮೂಡಲಗಿರಿಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರೇಹಳ್ಳಿ ರಮೇಶ್, ಕೆಂಚಮಾರಯ್ಯ, ತಾಲ್ಲೂಕು ಆರಾಧನಾ ಸಮಿತಿ ಅಧ್ಯಕ್ಷ ಸೋರೆಕುಂಟೆ ಸತ್ಯನಾರಾಯಣ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ  ಇದ್ದರು.

ಹಾಟ್ ಕೇಕ್ ಥರ ಅರ್ಜಿ
ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದ ನಂತರ ಅಕ್ರಮ ಕಟ್ಟಡ, ನಿವೇಶನ ಸಕ್ರಮಗೊಳಿಸಲು ಮುದ್ರಿಸಿರುವ ಅರ್ಜಿಗಳು ರಾಜ್ಯಾದಾದ್ಯಂತ ಹಾಟ್ ಕೇಕ್ ಥರ ಖರ್ಚಾಗುತ್ತಿವೆ ಎಂದು ಸಚಿವ ಜಯಚಂದ್ರ ಹೇಳಿದರು.

ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಅರ್ಜಿಗಳನ್ನು ನಾನೇ ಪ್ರಿಂಟ್ ಹಾಕಿಸಿದೆ. ಅದರಲ್ಲಿ ಒಂದಿಷ್ಟು ಸ್ಪೀಕರ್ ಕಾಗೋಡು ತಿಮ್ಮಪ್ಪ ತೆಗೆದುಕೊಂಡು ಹೋದರು. ಸಾಗರದಲ್ಲಿ ಅರ್ಜಿಗಳು ಹಾಟ್ ಕೇಕ್ ತರ ಖರ್ಚಾಗುತ್ತಿವೆ. ಒಳ್ಳೆಯ ಕೆಲಸ ಮಾಡಿದ್ದೀರಿ, ಬಿಡುವಾದಾಗ ಸಾಗರಕ್ಕೆ ಬನ್ನಿ ನಿಮಗೆ ಸನ್ಮಾನ ಮಾಡಬೇಕು ಎಂದು ಫೋನ್ ಮಾಡಿದ್ದರು ಎಂದು ಸಚಿವರು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT