ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಖಾತೆಗಳಿಗೆ ಕಡಿವಾಣವೇ ಅವಿಶ್ವಾಸ ಮಂಡನೆಗೆ ಕಾರಣ

ನಗರಸಭೆ ಜೆಡಿಎಸ್ ಸದಸ್ಯ ಆರ್‌. ಗೋವಿಂದರಾಜ್‌ ನೇರ ಆರೋಪ: ಶೀಘ್ರ ವರಿಷ್ಠರಿಗೆ ವರದಿ, ಸದಸ್ಯರ ವಿರುದ್ಧ ಕ್ರಮ
Last Updated 19 ಸೆಪ್ಟೆಂಬರ್ 2015, 8:37 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅಕ್ರಮ ಖಾತೆಗಳಿಗೆ ಕಡಿವಾಣ ಹಾಕಲು ಲೋಕಾಯುಕ್ತರು ಹಾಗೂ ಪೌರಾಡಳಿತ ನಿರ್ದೇಶಕರಿಗೆ ದೂರು ನೀಡಿದ ಪರಿಣಾಮ ನಗರಸಭೆ ಅಧ್ಯಕ್ಷೆ ಶಂಷುನ್ನೀಸಾ, ಉಪಾಧ್ಯಕ್ಷೆ ಮಂಜುಳಾ ಅವರ ವಿರುದ್ಧ ಅವಿಶ್ವಾಸ ಮಂಡಿಸಲಾಗಿದೆ. ಇದರಲ್ಲಿ ಬಡಾವಣೆ  ಮಾಲೀಕರ ಕೈವಾಡ ಇದೆ ಎಂದು ಜೆಡಿಎಸ್‌ ನಗರಸಭೆ ಸದಸ್ಯ ಆರ್‌. ಗೋವಿಂದರಾಜ್‌ ನೇರ ಆರೋಪ ಮಾಡಿದ್ದಾರೆ.

ನಗರಸಭೆಯಲ್ಲಿ 8 ಸಾವಿರ ಅಕ್ರಮ ಖಾತೆಗಳಾಗಿವೆ. ಹಿರಿಯ ಸದಸ್ಯರು ಎಂದು ಹೇಳಿಕೊಳ್ಳುವವರಿಗೆ ಏಕೆ ಇದು ಕಾಣಿಸಲಿಲ್ಲ. ನಗರದ ಅಂಚಿನಲ್ಲಿ ಹತ್ತಾರು ಅಕ್ರಮ ಬಡಾವಣೆಗಳು ನಿರ್ಮಾಣವಾಗಿವೆ. ಈ ಬಡಾವಣೆಗಳಲ್ಲಿನ ನಿವೇಶನಗಳನ್ನು ನಗರಸಭೆಯಲ್ಲಿ ಅಕ್ರಮವಾಗಿ ಖಾತೆಗಳನ್ನು ಮಾಡಿಸಲಾಗಿದೆ ಹಾಗೂ ಇನ್ನು ಅಕ್ರಮ ಖಾತೆಗಳನ್ನು  ಮಾಡಿಸಲು ಅವಕಾಶ ದೊರೆಯದೇ ಇದ್ದ ಕಾರಣ ನಗರಸಭೆಯಲ್ಲಿ ಅಸ್ಥಿರ ಆಡಳಿತಕ್ಕೆ ಮುಂದಾಗಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಕ್ರಮ ಖಾತೆಗಳನ್ನು ರದ್ದುಗೊಳಿಸುವಂತೆ ಪೌರಾಡಳಿತ ಇಲಾಖೆ ನಿರ್ದೇಶಕರು ಈಗಾಗಲೇ ನಗರಸಭೆ ಭೇಟಿ ನೀಡಿ ಆದೇಶ ನೀಡಿದ್ದಾರೆ. ಇದಕ್ಕೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದರು. ಅಧ್ಯಕ್ಷರು ಒಂದೂವರೆ ವರ್ಷಗಳಿಂದ ನೀಡಿದ ಪಾರದರ್ಶಕ ಆಡಳಿತಕ್ಕೆ ಜಯ ಸಂದಿದೆ. ಅವಿಶ್ವಾಸ ಪ್ರಕ್ರಿಯೆ ಪ್ರಾರಂಭವಾಗಿದ್ದರಿಂದ ನಗರಸಭೆಯಲ್ಲಿ ಮೂರು ತಿಂಗಳಿಂದ ಆಡಳಿತ ನಿಷ್ಕ್ರಿಯವಾಗಿದೆ. ಮುಂದಿನ ಒಂದೂವರೆ ವರ್ಷದ ಆಡಳಿತದಲ್ಲಿ ನಗರದಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ವರಿಷ್ಠರಿಗೆ ವರದಿ: ತಮ್ಮದೇ ಪಕ್ಷದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವುದು ಬೇಡ. ಭಿನ್ನಾಭಿಪ್ರಾಯಗಳಿದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳೋಣ. ಅವಿಶ್ವಾಸ ಸಭೆಯಲ್ಲಿ ಭಾಗವಹಿಸಬಾರದು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ. ದೇವೇಗೌಡರು ಹೇಳಿದ್ದರು. ಆದರೆ, ಅವರ ಮಾತನ್ನು ಧಿಕ್ಕರಿಸಿ ಜೆಡಿಎಸ್‌ ರಾಜ್ಯ ಘಟಕದ ಕಾರ್ಯಾಧ್ಯಕ್ಷರಿಂದ ವಿಪ್‌ ತಂದು ಸದಸ್ಯರಿಗೆ ಜಾರಿಗೊಳಿಸಿದ್ದಾರೆ. ಇದು ಪಕ್ಷದ ಬೈಲಾಕ್ಕೆ ವಿರುದ್ಧವಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಸೋಮವಾರದ ನಂತರ ಅವಿಶ್ವಾಸ ಮಂಡಿಸಿರುವ ಸದಸ್ಯರ ವಿರುದ್ಧ ಕೈಗೊಳ್ಳಬೇಕಾಗಿರುವ ಕ್ರಮದ ಕುರಿತು ಚಿಂತಿಸಲಾಗುವುದು.  ಯಾವುದೇ ಕಾರಣಕ್ಕೂ ಪಕ್ಷ ದ್ರೋಹವನ್ನು ಸಹಿಸಲಾಗದು ಎಂದು ಗೋವಿಂದರಾಜು ಹೇಳಿದರು.

₹ 2.60 ಕೋಟಿ ತೆರಿಗೆ ವಸೂಲಿ: ದಶಕಗಳಿಂದ ಬಾಕಿ ಉಳಿಸಿಕೊಂಡಿದ್ದ ಮನೆ ಕಂದಾಯ ಸೇರಿದಂತೆ ಎಲ್ಲವನ್ನೂ ವಸೂಲಿ ಮಾಡುವ ಮೂಲಕ ನಗರಸಭೆಗೆ ಉತ್ತಮ ಆದಾಯ ಬರುವಂತೆ ಮಾಡಲಾಗಿದೆ. ಸಾರ್ವಜನಿಕರಿಗೆ ಮನೆ ಕಂದಾಯ ಪಾವತಿ ಸುಲಭಗೊಳಿಸಲು ನಗರಸಭೆ ಕಚೇರಿಯಲ್ಲಿಯೇ ಬ್ಯಾಂಕ್‌ ಕೌಂಟರ್‌ ತೆರೆಯಲಾಗಿದೆ. ಇದರಿಂದಾಗಿ ₹2.6 ಕೋಟಿ ತೆರಿಗೆ ವಸೂಲಾತಿ ಆಗಿದೆ. ಆಡಳಿತ ಪಕ್ಷದವರೇ ಅಕ್ರಮ ಖಾತೆಗಳ ತನಿಖೆಗೆ ಲೋಕಾಯುಕ್ತರಿಗೆ ದೂರು ನೀಡಿರುವುದು ನಗರದ ಹಾಗೂ ರಾಜ್ಯದ ನಗರಸಭೆ ಇತಿಹಾಸದಲ್ಲೇ ಇದೇ ಪ್ರಥಮ. ₹7,500ಕ್ಕೆ ಒಂದು ಎಕರೆಯಲ್ಲಿನ ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ಅಕ್ರಮ ಖಾತೆಗಳಿಂದಾಗಿ ನಗರಸಭೆಗೆ ಬರಬೇಕಾಗಿದ್ದ ಕೋಟ್ಯಂತರ ರೂಪಾಯಿ ಆದಾಯ ರಿಯಲ್‌ ಎಸ್ಟೇಟ್‌ಗಳವರ ಪಾಲಾಗಿದೆ ಎಂದು ನಗರಸಭೆ ಸದಸ್ಯ ವಡ್ಡರಹಳ್ಳಿರವಿ ಆರೋಪಿದರು.

ಜಾತಿ ಬಳಕೆ ಖಂಡನೆ: ಪಕ್ಷಕ್ಕೆ ನಿಷ್ಠರಾಗಿರುವ ದೇವಾಂಗ ಸಮುದಾಯದ ಅನುಸೂಯಮ್ಮ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ವಾದ ನಮ್ಮದು. ಆದರೆ ಜಾತಿಯನ್ನು ಒಡೆಯುವ ಸಲುವಾಗಿ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್‌,ಬಿಜೆಪಿ ಸದಸ್ಯರೊಂದಿಗೆ ಕೈಜೋಡಿಸಿರುವ ಯಶೋಧಮ್ಮ ರಾಜಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಟಿ.ಎನ್‌.ಪ್ರಭುದೇವ್‌ ದೇವಾಂಗ ಜಾತಿಯನ್ನು ಬಳಸಿಕೊಂಡಿರುವುದು ಖಂಡನೀಯ. ಇದಕ್ಕೆ ಶುಕ್ರವಾರ ನಡೆದ ಅವಿಶ್ವಾಸ ಸಭೆಯ ಮೂಲಕ ತಕ್ಕ ಉತ್ತರ ನೀಡಲಾಗಿದೆ ಎಂದು ನಗರಸಭೆ ಸದಸ್ಯ ಹಾಗೂ ದೇವಾಂಗ ಸಮುದಾಯದ ಮುಖಂಡ ಪಿ.ಸಿ.ಲಕ್ಷ್ಮೀನಾರಾಯಣ್‌ ಹೇಳಿದರು.

ಟಿ.ಎನ್‌. ಪ್ರಭುದೇವ್‌ ವಿರುದ್ಧ  ಉಪಾಧ್ಯಕ್ಷೆ ಕಿಡಿ
ದೊಡ್ಡಬಳ್ಳಾಪುರ: ಒಂದು ವರ್ಷದಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಟಿ.ಎನ್‌. ಪ್ರಭುದೇವ್‌ ಸರ್ವ ಸದಸ್ಯರ ಸಭೆಗಳಲ್ಲಿ ವಿರೋಧ ಪಕ್ಷದ ಸದಸ್ಯರಿಗೆ ಉತ್ತರ ನೀಡುತ್ತ ನಮ್ಮ ಆಡಳಿತವನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ನಗರಸಭೆ ಆಡಳಿತ ಸಂವಿಧಾನ ಬದ್ಧವಾಗಿ ನಡೆಯುತ್ತಿಲ್ಲ ಎಂದು ಅವಿಶ್ವಾಸಕ್ಕೆ ಸಹಿ ಹಾಕಿರುವುದು ಯಾವ ರೀತಿಯ ಸಂವಿಧಾನ ಎಂದು ನಗರಸಭೆ ಉಪಾಧ್ಯಕ್ಷೆ ಮಂಜುಳಾ ಅವರು ಹೇಳಿದರು.

ಪ್ರಭುದೇವ್‌ ಅವರನ್ನೇ ಎರಡನೇ ಅವಧಿಗೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮುಂದುವರಿಸಿದ್ದರೆ ಆಡಳಿತ ಸಂವಿಧಾನ ಬದ್ಧವಾಗಿ ನಡೆಯುತ್ತಿದೆ ಎಂದು ಸಮರ್ಥನೆ ನೀಡುತ್ತಿದ್ದರು. ನಾವು ಸಂವಿಧಾನ ವಿರೋಧವಾಗಿ ಆಡಳಿತ ನೀಡಿರುವುದು ಸಾಬೀತುಪಡಿಸಲಿ ಎಂದು ಶುಕ್ರವಾರ ಪತ್ರಿಕಾಗೋ್ಷ್ ಸವಾಲು ಹಾಕಿದ ಅವರು ಎಲ್ಲ ಸದಸ್ಯರ ವಿಶ್ವಾಸದಿಂದ ಉತ್ತಮ ಆಡಳಿತ ನೀಡಲಾಗುವುದು ಎಂದರು.

ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್‌ನಾಯ್ಕ್ ಮಾತನಾಡಿ, ನಗರಸಭೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನಾಯಿಗಳ ರೀತಿಯಲ್ಲಿ ಕಾವಲು ಕಾಯುತ್ತ ಉತ್ತಮ ಆಡಳಿತ ನೀಡಿದ್ದೇವೆ. ಇದನ್ನು ಸಹಿಸದ ಭೂ ಮಾಫಿಯಾಗಳು ಅವಿಶ್ವಾಸಕ್ಕೆ ಸದಸ್ಯರನ್ನು ಬಳಸಿಕೊಂಡಿದ್ದಾರೆ.

ದೇವಾಂಗ ಜನಾಂಗದರು ಈಗಾಗಲೇ ಹಲವಾರು ಜನ ನಗರಸಭೆಯಲ್ಲಿ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ. ನಗರಸಭೆಯಲ್ಲಿ ಅಧಿಕಾರ ದೊರೆಯದೇ ಇರುವ ಹಿಂದುಳಿದ ವರ್ಗದ ಇನ್ನು ಹಲವಾರು ಜನ ಸದಸ್ಯರಿದ್ದಾರೆ. ಅವರಿಗೂ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT