ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗಣಿಗಾರಿಕೆ: ಸಿಬಿಐ ತನಿಖೆಗೆ ‘ಸುಪ್ರೀಂ’ ನಕಾರ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಕ್ಕೆ ಒಳಗಾಗಿರುವ ಗಣಿ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮ­ವಾರ ನಿರಾಕರಿಸಿತು.

ಆದರೆ,  ದೊಡ್ಡ ಪ್ರಮಾಣದಲ್ಲಿ ಅಕ್ರಮ ಎಸಗಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ವತಂತ್ರವಾಗಿವೆ ಎಂದು ಕೋರ್ಟ್‌ ಹೇಳಿದೆ.

ಅಕ್ರಮ ಗಣಿಗಾರಿಕೆ ಆರೋಪಕ್ಕೆ ಒಳಗಾಗಿರುವ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಬೇಕೆಂದು ಮನವಿ ಮಾಡಿ ಧಾರವಾಡ ಮೂಲದ ‘ಸಮಾಜ ಪರಿವರ್ತನಾ ಸಮು­ದಾಯ’ ಸಲ್ಲಿಸಿ­ರುವ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜೆ.­ಎಸ್. ಖೇಹರ್‌ ನೇತೃತ್ವದ ತ್ರಿಸದಸ್ಯ ಹಸಿರು ಪೀಠ ಸಿಬಿಐ ತನಿಖೆ ನಡೆಸಲು ನಿರಾಕರಿಸಿತು.

ಆದರೆ, ಶೇಕಡಾ ಹತ್ತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಎಸಗಿರುವ ಕಂಪೆನಿಗಳ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಗಣಿ– ಖನಿಜ ಸಂಪತ್ತು  ಅಭಿವೃದ್ಧಿ ಕಾಯ್ದೆ (ಎಂಎಂ­ಡಿಆರ್) ಮತ್ತು ಅರಣ್ಯ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲು ಸ್ವತಂತ್ರವಾಗಿವೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು.

ಈ ಪ್ರಕರಣದ ವಿಚಾರಣೆ ಸಮಯ­ದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಸಮಾಜ ಪರಿವರ್ತನಾ ಸಮುದಾ­ಯದ ವಕೀಲ ಪ್ರಶಾಂತ್‌ ಭೂಷಣ್‌ ಶೇಕಡಾ 10ರಷ್ಟು ನಿಯಮ ಉಲ್ಲಂಘಿಸಿದ ಕಂಪೆನಿಗಳ  ಮೇಲೂ ಕ್ರಮ ಆಗಬೇಕು ಎಂದು ಪ್ರತಿಪಾ­ದಿಸಿದರು.

ಸುಪ್ರೀಂ ಕೋರ್ಟ್‌ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿಯು ಅಕ್ರಮ ಎಸಗಿರುವ ಗಣಿ ಕಂಪೆನಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ. ಕನಿಷ್ಠ ಪ್ರಮಾಣದಲ್ಲಿ ಅಕ್ರಮ ಎಸಗಿ­ರುವ ಕಂಪೆನಿಗಳನ್ನು ‘ಎ’ ವರ್ಗದಡಿ ಇಡಲಾಗಿದೆ. ಶೇ. 10ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಿಯಮ ಉಲ್ಲಂಘಿಸಿರುವ ಕಂಪೆನಿಗಳನ್ನು ‘ಬಿ’ ವರ್ಗದಲ್ಲಿ,  ಅದಕ್ಕಿಂತ ಹೆಚ್ಚಿನ ಪ್ರಮಾ­ಣ­ದಲ್ಲಿ ಅಕ್ರಮ ಎಸಗಿರುವ ಕಂಪೆನಿಗಳು ‘ಸಿ’ ಗುಂಪಿನಲ್ಲಿ ಸೇರಿಸಲಾಗಿದೆ.

‘ಸಿ’ ಗುಂಪಿನಲ್ಲಿರುವ ಗಣಿ ಕಂಪೆನಿಗಳ ಗಣಿಗಾರಿಕೆ ಅನುಮತಿ ರದ್ದು ಪಡಿಸ­ಲಾಗಿದೆ. ಅಕ್ರಮ ಎಸಗಿ­ರುವ ಕಂಪೆನಿಗಳ ಪರವಾನಗಿ ರದ್ದು ಮಾಡಿದರೆ ಸಾಲದು. ಅವುಗಳ ಮೇಲೆ ಕಟ್ಟುನಿಟ್ಟಿನ ಕ್ರಮ­ಗಳನ್ನು ಕೈಗೊಳ್ಳ­ಬೇಕೆಂದು ಸಮಾಜ ಪರಿವರ್ತನಾ ಸಮುದಾಯ ಪ್ರತಿಪಾದಿಸಿತ್ತು. ಇದಕ್ಕೆ ಗಣಿ ಕಂಪೆನಿಗಳ ಮಾಲೀಕರು ವಿರೋಧಿಸಿದ್ದರು.

ಕೇಂದ್ರ ಉನ್ನತಾಧಿಕಾರ ಸಮಿತಿ ಮಾಡಿರುವ ವರ್ಗೀಕರಣದಂತೆ ಎ ಗುಂಪಿನಲ್ಲಿ 28, ಬಿ ಗುಂಪಿನಲ್ಲಿ 66 ಹಾಗೂ ಸಿ ಗುಂಪಿನಲ್ಲಿ 49 ಗಣಿ ಕಂಪೆನಿಗಳಿವೆ. ಗಣಿಗಾರಿಕೆ ಪರವಾನಗಿ ರದ್ದಾದ ಕಂಪೆನಿಗಳಲ್ಲಿ ಕೆಲವು ರಾಜಕಾರಣಿಗಳ ಕಂಪೆನಿಗಳೂ ಇವೆ.

ಕೆಲವು ಗಣಿ ಕಂಪೆನಿಗಳ ಪರವಾಗಿ ವಕೀಲ ಫಣೀಂದ್ರ ಮತ್ತು ರಾಜ್ಯದ ಪರವಾಗಿ ವಕೀಲರಾದ ಅನಿತಾ ಶೆಣೈ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT