ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಠೇವಣಿ ಇಟ್ಟವರಿಗೆ ಕಠಿಣ ಶಿಕ್ಷೆಯಾಗಬೇಕು

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಒಟ್ಟು ರೂ 525 ಕೋಟಿ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಅಕ್ರಮವಾಗಿ ಠೇವಣಿ ಇಟ್ಟಿರುವುದು  ಪತ್ತೆಯಾಗಿದೆ. ಗ್ರಾಮೀಣ ನೀರು ಸರಬರಾಜು ವಿಭಾಗದ ಉಪ ಕಾರ್ಯದರ್ಶಿ ರಾಮಕೃಷ್ಣ, ಇಲಾಖೆಯ ಅನುಮತಿ ಪಡೆಯದೆ ಆಂಧ್ರ ಬ್ಯಾಂಕ್‌ನಲ್ಲಿ ರೂ 134 ಕೋಟಿ ಹಣವನ್ನು ಇಟ್ಟಿದ್ದರು. ಈಗ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣ  ಪತ್ತೆಯಾದ ನಂತರ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ರೂ 66 ಕೋಟಿ, ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ರೂ 31 ಕೋಟಿ ಇಟ್ಟಿರುವುದೂ ಹೊರಬಿದ್ದಿದೆ. ಇದರಿಂದ ಅನುಮಾನ ಬಲಗೊಂಡು, ಇಲಾಖೆಯ ಸಚಿವ ಎಚ್‌.ಕೆ. ಪಾಟೀಲ್‌ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಪರಿಶೀಲಿಸಿದಾಗ 13ನೇ ಹಣಕಾಸು ಯೋಜನೆಯಲ್ಲಿ ಬಂದಿದ್ದ ರೂ 225 ಕೋಟಿ ಹಣವನ್ನು 12 ವಿವಿಧ ಬ್ಯಾಂಕ್‌ಗಳಲ್ಲಿ ಇಟ್ಟಿದ್ದು ಹಾಗೂ ನೂರು ಕೋಟಿಗೂ ಹೆಚ್ಚು ಹಣವನ್ನು ಜಿಲ್ಲಾ ಪಂಚಾಯ್ತಿಗಳಿಗೆ ಕಳುಹಿಸಿ ಆ ಮೂಲಕ ಅಕ್ರಮವಾಗಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.

ಇದೊಂದು ರೀತಿಯ ಕಳ್ಳ ಜಾಲದಂತೆಯೇ ಇದೆ. ಇಲಾಖೆಯಲ್ಲಿ ಇನ್ನೂ ಇಂತಹ ಹಲವಾರು ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ. ಹೀಗಾಗಿ ಇದರ ಸಮಗ್ರ ಪರಿಶೀಲನೆಗೆ ತನಿಖಾ ಸಮಿತಿ ರಚಿಸಲಾಗಿದೆ. ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಅಕ್ರಮವಾಗಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವುದು ಜನಸಾಮಾನ್ಯರಿಗೆ ಮಾಡಿದ ದ್ರೋಹ. ಉಂಡ ಮನೆಗೆ ಕನ್ನ ಹಾಕುವ ಕ್ರಿಯೆ ಅದು. ಕುಡಿಯುವ ನೀರು ಪೂರೈಸಲು ಹಣ ಇಲ್ಲ ಎಂದು ಹೇಳುವ ಅಧಿಕಾರಿಗಳು ಆಮಿಷಕ್ಕೆ ಬಲಿಯಾಗಿ, ಇಲಾಖೆಯ ಹಣವನ್ನು ಬ್ಯಾಂಕ್‌ಗಳಲ್ಲಿ ಇಟ್ಟಿರುವುದು ದುರದೃಷ್ಟಕರ. ಉನ್ನತ ಅಧಿಕಾರಿಗಳ ಗಮನಕ್ಕೆ ತರದೆ ಹಣವನ್ನು ಬ್ಯಾಂಕ್‌ಗಳಲ್ಲಿ ಇಡುವುದೇ ಅಲ್ಲದೆ ಲೆಕ್ಕಪರಿಶೋಧನೆಯಲ್ಲಿಯೂ ಅದು ಗಮನಕ್ಕೆ ಬಾರದಂತೆ ಮಾಡುವುದು ಘೋರ ಅಪರಾಧ. ಸಾರ್ವಜನಿಕ ಹಣ ಜನರ ಬಳಕೆಗೆ ದಕ್ಕದೆ  ವ್ಯರ್ಥವಾಗಿ ಬಿದ್ದಿರುವುದು ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ. ಸ್ವಾರ್ಥ ಸಾಧನೆಗೆ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇವೆಲ್ಲ ಉದಾಹರಣೆಗಳು. ಇಂತಹ ಹೆಗ್ಗಣಗಳನ್ನು ಬಲಿ ಹಾಕದೇ ಇದ್ದರೆ ಇಡೀ ಆಡಳಿತ ವ್ಯವಸ್ಥೆಗೆ ಗೆದ್ದಲು ಹಿಡಿಯಬಹುದು.

ತಮ್ಮ ಇಲಾಖೆಯಲ್ಲಿ ಆಗಿರುವ ಲೋಪವನ್ನು ಗುರುತಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರು ಉತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ತರಲು 13 ಅಂಶದ ಕಾರ್ಯಕ್ರಮವನ್ನೂ ಜಾರಿಗೊಳಿಸಿದ್ದಾರೆ. ನಿಯಮಬಾಹಿರವಾಗಿ ಇರಿಸಿದ್ದ ಹಣವನ್ನು ಪತ್ತೆ ಮಾಡಿದರೆ ಸಾಲದು. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಹಣವನ್ನು ಮನಸೋ ಇಚ್ಚೆ ಬಳಸಿದರೆ ಉಳಿಗಾಲವಿಲ್ಲ ಎನ್ನುವ ವಾತಾವರಣ ಸೃಷ್ಟಿಸಬೇಕು. ರಾಜ್ಯದ ಜನರು ನೀರಿಲ್ಲದೆ ಬವಣೆಪಡುತ್ತಿರುವಾಗ ನೀರಿಗಾಗಿಯೇ ಇರುವ ಹಣವನ್ನು ಮುಚ್ಚಿಡುವುದು ರಾಕ್ಷಸಿ ಕೃತ್ಯ.  ಇಂತಹ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗದೇ ಇದ್ದರೆ ಈ ರೀತಿಯ ವಂಚನೆ ನಡೆಯುತ್ತಲೇ ಇರುತ್ತದೆ. ಯೋಜನೆಗಳಿಗೆ ಬಿಡುಗಡೆಯಾದ ಹಣ ಸಮರ್ಪಕವಾಗಿ ವೆಚ್ಚವಾಗುತ್ತಿಲ್ಲ ಎಂಬ ದೂರು ಬಹಳ ಕಾಲದಿಂದಲೂ ಇದೆ.

ಈಗ ಹಣ ಬಿಡುಗಡೆ ಮಾಡದೆ ಅದನ್ನು ಬಚ್ಚಿಡುವ ಪ್ರವೃತ್ತಿ ಬೆಳೆಯುತ್ತಿರುವುದು ಇನ್ನೂ ಅಪಾಯಕಾರಿ. ಬೆಂಗಳೂರು ಮೆಟ್ರೊ ರೈಲು ನಿಗಮದ ಹಣವನ್ನು ನಿಯಮಬಾಹಿರವಾಗಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ತನಿಖೆಯೂ ಪ್ರಗತಿಯಲ್ಲಿದೆ. ಇತರ ಇಲಾಖೆಗಳಲ್ಲಿಯೂ ಇಂತಹ ಪ್ರಕರಣಗಳು ನಡೆದಿರಬಹುದು. ಅವುಗಳನ್ನೂ ಪತ್ತೆ ಮಾಡಬೇಕು. ಹಣಕಾಸು ಇಲಾಖೆಯ ಜವಾಬ್ದಾರಿಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಇಲಾಖೆಗಳಲ್ಲಿ ನಡೆದಿರಬಹುದಾದ ‘ಕಳ್ಳಗಂಟಿನ’ ಪ್ರಕರಣಗಳ ಬಗ್ಗೆ ಸೂಕ್ತ  ತನಿಖೆ ನಡೆಸಬೇಕು. ಆರ್ಥಿಕ ಶಿಸ್ತು ಬರುವಂತೆ ನೋಡಿಕೊಳ್ಳಬೇಕು. ತಪ್ಪು ಮಾಡಿದ ಅಧಿಕಾರಿಗಳನ್ನು ಮನೆಗೆ ಕಳುಹಿಸಬೇಕು. ಅಂದಾಗ ಮಾತ್ರ ಸರ್ಕಾರದ ಹಣವನ್ನು ಬೇಕಾಬಿಟ್ಟಿ ಬಳಸಿಕೊಳ್ಳುವ ಅಧಿಕಾರಿಗಳಿಗೆ ಬುದ್ಧಿ ಬಂದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT