ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಕ್ರಮ ಆರಂಭ

Last Updated 3 ಮಾರ್ಚ್ 2015, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಿಯಮ ಉಲ್ಲಂಘಿಸಿ ನಗರ ಪ್ರದೇಶಗಳಲ್ಲಿ ನಿರ್ಮಿಸಿದ್ದ ಕಟ್ಟಡಗಳು ಮತ್ತು ಅಕ್ರಮ ನಿವೇಶನಗಳ ಸಕ್ರಮಕ್ಕೆ ಸಂಬಂಧಿಸಿದಂತೆ ನಗರಾ­ಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ‘ಇದೇ 23ರಿಂದ ಮುಂದಿನ ವರ್ಷದ (2016) ಮಾರ್ಚ್‌ 22ರವರೆಗೆ ಅರ್ಜಿ ಸಲ್ಲಿಸುವುದಕ್ಕೆ ಅವ­ಕಾಶ ನೀಡಲಾಗಿದೆ’ ಎಂದು ನಗರಾಭಿವೃದ್ಧಿ ಸಚಿವ ವಿನಯ್‌­ಕುಮಾರ್‌ ಸೊರಕೆ ಮಂಗಳ­ವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಎಷ್ಟೇ ದೊಡ್ಡ ನಿವೇಶನ ಇದ್ದರೂ ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ, ಪ್ರದೇಶ ಮತ್ತು ವಿಸ್ತೀರ್ಣದ ಆಧಾರದ ಮೇಲೆ ದಂಡ ಕಟ್ಟಬೇಕಾ­ಗುತ್ತದೆ’ ಎಂದು ಅವರು ಹೇಳಿದರು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ­ಯಲ್ಲಿನ ಅಕ್ರಮ ಬಡಾವಣೆ­ಗಳಲ್ಲಿನ ನಿವೇಶನ ಮತ್ತು ನಿಯಮ ಉಲ್ಲಂಘಿಸಿ, ನಿರ್ಮಿಸಿದ ಕಟ್ಟಡಗಳ ಸಕ್ರಮಕ್ಕೆ ಇದರಲ್ಲಿ ಅವಕಾಶ ಕಲ್ಪಿಸ­ಲಾಗಿದೆ ಎಂದು ಅವರು ಹೇಳಿದರು.

‘ಒಂದೊಂದು ಉಲ್ಲಂಘನೆಗೂ ಒಂದೊಂದು ರೀತಿಯ ದಂಡ ಹಾಕಲು ನಿಯಮಗಳಲ್ಲಿ ಅವಕಾಶ ಇದೆ’ ಎಂದು ಅವರು ವಿವರಿಸಿದರು.
‘2013ರ ಅಕ್ಟೋಬರ್‌ 19ಕ್ಕೂ ಮೊದಲು ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡ ಮತ್ತು ಅಕ್ರಮ ಬಡಾವಣೆ­ಗಳಲ್ಲಿನ ನಿವೇಶನಗಳ ಸಕ್ರಮಕ್ಕೆ ಯೋಜನೆ ಅನ್ವಯ ಆಗುತ್ತದೆ. 2013ರ ಅಕ್ಟೋಬರ್‌ 19ರಂದು ಇದ್ದ ಮಾರ್ಗ­ಸೂಚಿ ದರದ ಆಧಾರದ ಮೇಲೆಯೇ ದಂಡದ ಲೆಕ್ಕಾಚಾರ ಕೂಡ ನಡೆ­ಯುತ್ತದೆ’ ಎಂದು ಅವರು ಹೇಳಿದರು.

ಅಕ್ರಮ– ಸಕ್ರಮದಿಂದ ಬರುವ ಹಣವನ್ನು ಉದ್ಯಾನವನ ಮತ್ತು ಮೂಲಸೌಲಭ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಅವರು ವಿವರಿಸಿದರು.

ಸ್ವಯಂ ಘೋಷಣೆ: ನಿವೇಶನ ಮತ್ತು ಕಟ್ಟಡ ನಿರ್ಮಾಣ­ದಲ್ಲಿನ ಉಲ್ಲಂಘನೆ ಗಳ ಬಗ್ಗೆ ಮಾಲೀಕರು ಸ್ವಯಂ ಘೋಷಣೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಆ ಪ್ರಕಾರವೇ ನಿಗದಿತ ಶುಲ್ಕ ಕಟ್ಟಬೇಕು. ಬಳಿಕ ಅದನ್ನು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಪರಿಶೀಲಿಸಲಿವೆ ಎಂದು ವಿವರಿಸಿದರು.

ಶೇ 100ರಷ್ಟು ಉಲ್ಲಂಘನೆಗೆ ಏನು ಕ್ರಮ?: ‘ವಸತಿ ಉದ್ದೇಶದ ಆಸ್ತಿಗಳಲ್ಲಿನ ಶೇ 50ರಷ್ಟು ಹಾಗೂ ವಾಣಿಜ್ಯ ಉದ್ದೇಶದ ಆಸ್ತಿಗಳಲ್ಲಿನ ಶೇ 25ರಷ್ಟು ಉಲ್ಲಂಘ­ನೆಗಳನ್ನು ಸಕ್ರಮಗೊಳಿಸು ವುದಕ್ಕೆ ನಿಯ­ಮ­ಗಳಲ್ಲಿ ಅವಕಾಶ ಇದೆ. ಈ ಮಿತಿಗಿಂತ ಹೆಚ್ಚು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳ­ಲಾಗುವುದು.’

‘ಆಂಧ್ರಪ್ರದೇಶ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಶೇ 100ರಷ್ಟು ಉಲ್ಲಂಘನೆ­ಗಳನ್ನು ಸಕ್ರಮ ಮಾಡಲಾಗಿದೆ. ನಮ್ಮಲ್ಲಿ ಅದಕ್ಕೆ ಮಿತಿ ಇರುವ ಕಾರಣ ಹಾಗೆ ಮಾಡುತ್ತಿಲ್ಲ. ಶೇ 50ಕ್ಕಿಂತ ಹೆಚ್ಚು ಉಲ್ಲಂಘನೆ ಇರುವ ಕಟ್ಟಡಗಳನ್ನು ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು. ನ್ಯಾಯಾಲಯದ ಅಭಿಪ್ರಾಯವನ್ನೂ ಪಡೆಯಲಾಗುವುದು’ ಎಂದು ಸಚಿವರು ಹೇಳಿದರು.

ಅಕ್ರಮ– ಸಕ್ರಮಕ್ಕೆ ಎಷ್ಟು ಹಣ ಕಟ್ಟಬೇಕಾಗುತ್ತದೆ ?
‘ಮಾರ್ಗಸೂಚಿ ದರ ಹೆಚ್ಚು ಇರುವ ಬೆಂಗ­ಳೂ­ರಿನ ಪ್ರಮುಖ ಬಡಾವಣೆ­ಯೊಂದರಲ್ಲಿ ಎಲ್ಲ ರೀತಿಯ ನಿಯಮ­ಗಳನ್ನು ಉಲ್ಲಂಘಿಸಿ, 30X40 ಅಡಿ ­ವಿಸ್ತೀರ್ಣದ ನಿವೇಶನದಲ್ಲಿ ಕಟ್ಟಿರುವ ಮನೆಯ ಸಕ್ರಮಕ್ಕೆ ಅಂದಾಜು ₨8ರಿಂದ 10 ಲಕ್ಷ ಶುಲ್ಕ ಕಟ್ಟ­ಬೇಕಾಗುತ್ತದೆ’ ಎಂದು ಸಚಿವ ಸೊರಕೆ ವಿವರಿಸಿದರು.

‘ಇದೇ ಅಳತೆಯ ನಿವೇಶನ ಮೈಸೂರು, ಹುಬ್ಬಳ್ಳಿ– ಧಾರವಾಡ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಇದ್ದರೆ ಅದಕ್ಕೆ ₨3ರಿಂದ 4 ಲಕ್ಷ ಕಟ್ಟಬೇಕಾಗುತ್ತದೆ’ ಎಂದು ಅವರು ಹೇಳಿದರು. ‘ಕೇವಲ ನಿವೇಶನದ ಸಕ್ರಮಕ್ಕಾದರೆ ಇನ್ನೂ ಕಡಿಮೆ ಆಗುತ್ತದೆ. ಬೆಂಗಳೂರಿ­ನಲ್ಲಿ 30X40 ಅಡಿ ವಿಸ್ತೀರ್ಣದ ನಿವೇಶನದ ಸಕ್ರಮಕ್ಕೆ ಅಂದಾಜು ಒಂದು ಲಕ್ಷ ರೂಪಾಯಿ ಶುಲ್ಕ ಕಟ್ಟಬೇಕಾ­ಗುತ್ತದೆ’ ಎಂದು ಅವರು ಹೇಳಿದರು. ‘ಈ ಲೆಕ್ಕಾಚಾರ ವಿವಿಧ ರೀತಿಯ ಉಲ್ಲಂಘನೆ ಮತ್ತು ಸ್ಥಳೀಯ ಮಾರ್ಗಸೂಚಿ ದರವನ್ನು ಅವಲಂಬಿ­ಸಿರುತ್ತದೆ’ ಎಂದು ಅವರು ತಿಳಿಸಿದರು.

ಇವು ಸಕ್ರಮ ಆಗಲ್ಲ


*ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ ಅಕ್ರಮ ಕಟ್ಟಡ
*ಉದ್ಯಾನ, ಕ್ರೀಡಾಂಗಣಕ್ಕೆ ಕಾಯ್ದಿರಿಸಿದ ಜಾಗಗಳಲ್ಲಿನ ಕಟ್ಟಡ
*ನೆಲ ಮಹಡಿಯಲ್ಲಿ ನಿರ್ಮಾಣ ಮಾಡಿದ ಕಟ್ಟಡ

ಇವು ಸಕ್ರಮ ಆಗುತ್ತವೆ
*ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳು
*ಭೂ ಉಪಯೋಗಗಳ ಉಲ್ಲಂಘನೆ
*ಕಟ್ಟಡದ ಸುತ್ತ ನಿಗದಿಯಷ್ಟು ಜಾಗ (ಸೆಟ್‌–ಬ್ಯಾಕ್‌) ಬಿಡದಿರುವುದು
*ನೆಲ ವಿಸ್ತೀರ್ಣ ಪ್ರಮಾಣ (ಎಫ್‌ಎಆರ್‌) ಉಲ್ಲಂಘನೆ

ಅರ್ಜಿಗಳು ಎಲ್ಲೆಲ್ಲಿ ಸಿಗುತ್ತವೆ?
ಅರ್ಜಿ ನಮೂನೆಗಳು ಸಂಬಂಧಪಟ್ಟ ಸ್ಥಳೀಯ ಸಂಸ್ಥೆ­ಗಳ ಕಚೇರಿಗಳಲ್ಲಿ ಸಿಗುತ್ತವೆ. ಆನ್‌ಲೈನ್‌­ನಲ್ಲೂ ಅರ್ಜಿ­ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳ­ಬಹುದು. ಮೊದಲು ಬಂದ ಅರ್ಜಿಯನ್ನು ಮೊದಲು ವಿಲೇವಾರಿ ಮಾಡಲಾ­ಗುತ್ತದೆ. ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಅಂತರ್ಜಾಲ ತಾಣಗಳಲ್ಲಿ ಅಕ್ರಮ–ಸಕ್ರಮ ಕುರಿತ ಪೂರ್ಣ ಮಾಹಿತಿ ಒಂದೆರಡು ದಿನಗಳಲ್ಲಿ ಲಭ್ಯವಾಗಲಿದೆ. ವೆಬ್‌ಸೈಟ್‌ ವಿಳಾಸ: www.uddkar.gov.in; www.dtcp.gov.in

ಇದೂ ಅಕ್ರಮವೇ..
ಐದು ಮಹಡಿಯ ಅಪಾರ್ಟ್‌­ಮೆಂಟ್‌ಗೆ ಅನು­ಮತಿ ಪಡೆದು, ಏಳು ಮಹಡಿಯ ಕಟ್ಟಡ ಕಟ್ಟಿದ್ದರೆ ಅದು ಕೂಡ ಅಕ್ರಮವಾಗುತ್ತದೆ. ಆರು ಮತ್ತು ಏಳನೇ ಮಹಡಿ­ಯ­ಲ್ಲಿನ ಮನೆಗಳ ಮಾಲೀಕರು ಸಕ್ರಮಕ್ಕೆ ಅರ್ಜಿ ಸಲ್ಲಿಸ­ಬೇಕಾ­ಗುತ್ತದೆ. ಅಕ್ರಮ ಬಡಾವಣೆಗಳ ನಿರ್ಮಾಣಕ್ಕೆ ಕಾರಣ­ರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಯಮ­ಗಳಲ್ಲಿ ಅವಕಾಶ ಇಲ್ಲ. ಈ ಸಂಬಂಧ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT