ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರಕ್ಕೆ ಅಸ್ತ್ರದ ಹೊಳಪು ಕೊಟ್ಟ ಮಾನವತಾವಾದಿ

Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಅವರ ಹೆಸರು ಮಹಾಶ್ವೇತಾದೇವಿ, ಆದರೆ ಅವರು ಬರೆದದ್ದೆಲ್ಲ ಮನುಷ್ಯ ಸಮಾಜದ ಕಪ್ಪುಕಲೆಗಳ ಬಗ್ಗೆ. ಜಗತ್ತಿನ ಶ್ರೇಷ್ಠ ಸಾಹಿತ್ಯಕ್ಕೆ ಸೇರಬಲ್ಲ ಕಥೆಗಳನ್ನು ಬರೆದ ಅವರು, ಅವುಗಳಿಗೆ ವಸ್ತುಗಳನ್ನು ಆರಿಸಿಕೊಂಡದ್ದು ಸಮಾಜದ ತಳಾತಳದಲ್ಲಿರುವ ಬುಡಕಟ್ಟು ಜನರ ಬದುಕಿನಿಂದ.

ಸಾಹಿತ್ಯ ರಚನೆ ಮತ್ತು ಸಾಮಾಜಿಕ ಕ್ರಿಯಾಶೀಲತೆ ಎರಡನ್ನೂ ಸಮಾನ ಬದ್ಧತೆಯಿಂದ ನಿರ್ವಹಿಸಿದ ಅವರು ‘ಹೋರಾಟಕ್ಕೆ ಅಕ್ಷರವೂ ಒಂದು ಪ್ರಮುಖ ಅಸ್ತ್ರ’ ಎಂದು ದೃಢವಾಗಿ ನಂಬಿದ್ದ ಮಹಾಮಾನವತಾವಾದಿ. ತೊಂಬತ್ತರ ಎತ್ತರದಲ್ಲಿ ನಿರ್ಗಮಿಸಿದ ಮಹಾಶ್ವೇತಾದೇವಿ ಅವರ ಜೀವನವೇ ಒಂದು ಸಾಮಾಜಿಕ ಸಂದೇಶ.

ಮಹಾಶ್ವೇತಾದೇವಿ ಹುಟ್ಟಿದ್ದು ಸೃಜನಶೀಲ ಚಿಂತನೆಗಳು ತುಂಬಿದ್ದ ಕುಟುಂಬದಲ್ಲಿ. ದೇಶ ವಿಭಜನೆಯ ನಂತರ ಅವರ ದೊಡ್ಡ ಕುಟುಂಬ ಢಾಕಾದಿಂದ ಭಾರತದ ಪಶ್ಚಿಮ ಬಂಗಾಳಕ್ಕೆ ಬಂದು ನೆಲೆಸಿತು.

ತಂದೆ ಮನೀಷ್ ಘಟಕ್ ಮತ್ತು ತಾಯಿ ಧರಿತ್ರಿ ದೇವಿ ಇಬ್ಬರೂ ಸಾಹಿತಿಗಳಾಗಿದ್ದು, ಅಂದಿನ ಮುಖ್ಯ ಚಳವಳಿಗಳ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಮಗಳ ಶಿಕ್ಷಣಕ್ಕೆ ಅವರು ಹೆಚ್ಚಿನ ಗಮನ ಕೊಟ್ಟರು.

ಸಾಹಿತ್ಯ, ಕಲೆ, ರಂಗಭೂಮಿ ಮತ್ತು ಚಿತ್ರರಂಗದ ಹೊಸ ಜನಪರ ಅನ್ವೇಷಣೆಗಳಲ್ಲಿ ಈ ಕುಟುಂಬದ ಆಸಕ್ತಿ ಅಸಾಧಾರಣವಾಗಿತ್ತು. ಮನೀಷ್ ಘಟಕ್ ಒಳ್ಳೆಯ ಕಾದಂಬರಿಗಳನ್ನು ಬರೆಯುತ್ತಿದ್ದರೆ, ಅವರ ತಮ್ಮ ಋತ್ವಿಕ್ ಘಟಕ್ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳಲ್ಲಿ ಆಸಕ್ತರಾಗಿದ್ದರು.

ಮಹಾಶ್ವೇತಾದೇವಿಯ ಸೋದರಮಾವಂದಿರಲ್ಲಿ ಶಂಖ ಚೌಧುರಿ ಶಿಲ್ಪಕಲೆಯಲ್ಲಿ ಸಾಧನೆ ಮಾಡಿದರೆ, ಸಚಿನ್ ಚೌಧುರಿ ಒಳ್ಳೆಯ ಪತ್ರಕರ್ತರಾಗಿ ಹೆಸರು ಪಡೆದರು.

ಇಂಥ ಪ್ರತಿಭಾವಂತರ ಪೋಷಣೆಯಲ್ಲಿ ಬೆಳೆದ ಮಹಾಶ್ವೇತಾದೇವಿಯಲ್ಲಿ ಸೂಕ್ಷ್ಮ ಸಂವೇದನೆ, ಕ್ರಿಯಾಶೀಲತೆ, ಪ್ರಶ್ನಿಸುವ ಮನೋಭಾವ ಮತ್ತು ಜನಪರ ಚಿಂತನೆ ಎಲ್ಲವೂ ಮೇಳೈಸಿದ್ದು ಆಶ್ಚರ್ಯವಲ್ಲ. ಹೋರಾಟಗಾರರ ಕುಟುಂಬದಲ್ಲಿ ಹುಟ್ಟಿದ ಅವರು ಹೋರಾಟಗಾರ್ತಿಯಾಗಿ ಬೆಳೆದರು.

ಜಗತ್ತಿನಲ್ಲಿ ಆ ಕಾಲಮಾನದಲ್ಲಿ ನಡೆದ ವಿಶಿಷ್ಟ ಘಟನೆಗಳು, ಬ್ರಿಟಿಷರ ವಿರುದ್ಧ ನಡೆದ ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯದ ಜೊತೆ ದೇಶ ವಿಭಜನೆ ಮುಂತಾದ ಎಲ್ಲದರ ಬಗ್ಗೆ ಮಹಾಶ್ವೇತಾದೇವಿಗೆ ಇದ್ದ ಸ್ಪಂದನೆ, ಅವರ ವ್ಯಕ್ತಿತ್ವಕ್ಕೆ ಸಾಮಾನ್ಯ ನಿರೀಕ್ಷೆಗಳನ್ನು ಮೀರಿದ ಗಟ್ಟಿತನವನ್ನು ಕೊಟ್ಟಿತು.

ಕೋಲ್ಕತ್ತದ ಶಾಂತಿನಿಕೇತನದಲ್ಲಿ ಇಂಗ್ಲಿಷ್ ಸಾಹಿತ್ಯ ಓದುವಾಗಲೇ ಅಲ್ಲಿನ ಏರುಪೇರುಗಳ ಬಗ್ಗೆ ವಿದ್ಯಾರ್ಥಿನಿ ಮಹಾಶ್ವೇತಾದೇವಿಯ ಸಿಡಿಮಿಡಿಗೆ ರವೀಂದ್ರನಾಥ ಟಾಗೋರರೂ ಗುರಿಯಾಗಿದ್ದರಂತೆ.

ಮುಂದೆ ಲೇಖಕ ಮತ್ತು ‘ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್’ (ಇಪ್ಟಾ) ನ ಪ್ರವರ್ತಕರಲ್ಲಿ ಒಬ್ಬರಾಗಿದ್ದ, ಬಿಜೋನ್ ಭಟ್ಟಾಚಾರ್ಯ ಅವರೊಂದಿಗಿನ ವಿವಾಹ ಮತ್ತು ನಂತರ ವಿಚ್ಛೇದನ ತಂದ ಟೀಕೆಗಳಿಗೆ ಮಹಾಶ್ವೇತಾದೇವಿ ಹೆದರಲೇ ಇಲ್ಲ.

ಈ ದಂಪತಿಯ ಮಗ ನವಾರುಣ ಭಟ್ಟಾಚಾರ್ಯ, ಅದ್ಭುತ ಕಾದಂಬರಿಗಳನ್ನು ಬರೆದು ಕುಟುಂಬದ ಮೂರನೇ ತಲೆಮಾರಿನ ಲೇಖಕ ಮತ್ತು ಚಿಂತಕರಾಗಿ ಮುಂದೆ ಹೆಸರು ಪಡೆದರು.


ಮಹಾಶ್ವೇತಾದೇವಿ ಅವರ ಸಾಹಿತ್ಯ ರಚನೆಯಷ್ಟೇ ಅವರ ಸಾಮಾಜಿಕ ಸೇವೆಯೂ ಅಮೂಲ್ಯವಾದದ್ದು. ಅವರು ರಚಿಸಿದ ನಲವತ್ತು ಕೃತಿಗಳು ಇಂಗ್ಲಿಷ್ ಅಲ್ಲದೆ ಹಲವಾರು ಭಾಷೆಗಳಿಗೆ ಅನುವಾದಗೊಂಡು ಅವರ ಹೆಸರನ್ನು ಮನೆಮನೆಗೆ ತಲುಪಿಸಿವೆ.

ಬುಡಕಟ್ಟು ಜನರ ಬದುಕೇ ಅವರ ಸಾಹಿತ್ಯಕ್ಕೆ, ಓದುಗರೆಲ್ಲ ಬೆಚ್ಚಿಬೀಳುವಂಥ ಮೂಲದ್ರವ್ಯವನ್ನು ಒದಗಿಸಿದೆ. ಅವರು ತಮ್ಮ ಕಥೆಗಳ ಪಾತ್ರಗಳಾಗಿ ಚಿತ್ರಿಸಿದ ಅನೇಕ ಹೆಣ್ಣುಮಕ್ಕಳನ್ನು ನಮ್ಮ ಸಾಹಿತ್ಯ ಪರಂಪರೆ ಅದುವರೆಗೆ ಕಂಡಿರಲೇ ಇಲ್ಲ. ಅವರು ಚಿತ್ರಿಸಿದ ಊಳಿಗಮಾನ್ಯ ಮತ್ತು ರೈತರ ನಡುವಿನ ಸಂಘರ್ಷದ ಸ್ವರೂಪ ಅಲ್ಲಿಯವರೆಗೆ ಬೆಳಕು ಕಂಡಿರಲೂ ಇಲ್ಲ.

ಆದಿವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುವುದು ಮಾತ್ರ ಅವರ ಗುರಿಯಾಗಿರಲಿಲ್ಲ. ಆ ಅಜ್ಞಾತ ವಲಯದ, ಮೌಖಿಕ ಚರಿತ್ರೆಯ ಧಾರೆಯನ್ನು ನಮ್ಮ ದೇಶದ ಲಿಖಿತ ಚರಿತ್ರೆಯ ಧಾರೆಯೊಂದಿಗೆ ಸೇರಿಸಲು ಮತ್ತು ದಾಖಲೀಕರಣ ಮಾಡಲು ಮಹಾಶ್ವೇತಾದೇವಿ ಪಟ್ಟ ಅವಿರತ ಶ್ರಮ ನಿಜವಾಗಿ ಮನುಕುಲದ ಪ್ರಶಂಸೆಗೆ ಅರ್ಹವಾದದ್ದು.

‘ಬುಡಕಟ್ಟು ಜನರೂ ನಮ್ಮ ದೇಶದ ಜನ, ಆ ಜನರಿಗೂ ಅವರದೇ ಆದ ಚರಿತ್ರೆ ಮತ್ತು ಪರಂಪರೆ ಇದೆ, ಅದು ದೇಶದ ಚರಿತ್ರೆಯ ಭಾಗ’ ಎಂದು ಅವರು ಗಟ್ಟಿದನಿಯಲ್ಲಿ ಪ್ರತಿಪಾದಿಸಿದರು.

ಬಿಹಾರ, ಪಶ್ವಿಮ ಬಂಗಾಳ, ಛತ್ತೀಸಗಡ, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳ ಅರಣ್ಯಗಳಲ್ಲಿ ಜೀವಿಸುತ್ತಿದ್ದ ಗಿರಿಜನರ ಅಸ್ತಿತ್ವವನ್ನು ನಾಗರಿಕ ಚರಿತ್ರೆ ಮತ್ತು ಆಡಳಿತ ವ್ಯವಸ್ಥೆಗೆ ಸೇರಿಸಲು ಹೋರಾಡಿದ ಮತ್ತು ಅವುಗಳ ಬಗ್ಗೆ ಪುಸ್ತಕಗಳು ಪತ್ರಿಕೆಗಳಲ್ಲಿ ಬರೆದ ಅವರು ಭಾರತದ ‘ಆದಿವಾಸಿಗಳ ಪಾಲಿನ ಅಮ್ಮ’ ಎಂದರೆ ಅತಿಶಯೋಕ್ತಿ ಅಲ್ಲ.


ಆಧುನಿಕೋತ್ತರ ಚಿಂತನೆಯಲ್ಲಿ ಮತ್ತು ಜಾಗತೀಕರಣದ ಇಂದಿನ ಯುಗದಲ್ಲಿ ‘ಸ್ವಂತ ಸುಖಕ್ಕಾಗಿ ಸಾಹಿತ್ಯ ರಚಿಸುತ್ತೇವೆ, ನಮಗೆ ಸಿದ್ಧಾಂತಗಳ ರಾದ್ಧಾಂತವೇ ಬೇಡ’ ಎಂದು ಘೋಷಿಸುವ ಬರಹಗಾರರೇ ಬಹುಪಾಲು ಕಾಣುತ್ತಾರೆ.

ಆದರೆ ತಮ್ಮ ಸಾಮಾಜಿಕ ಹೋರಾಟಕ್ಕೆ ಅಕ್ಷರವನ್ನೇ ಅಸ್ತ್ರವನ್ನಾಗಿ ಬಳಸಿದ ಮಹಾಶ್ವೇತಾದೇವಿ ‘ಆದಿವಾಸಿ ಬುಡಕಟ್ಟು ಜನರಿಗಾಗಿ, ಇತರ ಬಡಜನರಿಗಾಗಿ, ಶೋಷಿತರಿಗಾಗಿ ನಾನು ಮಾಡುತ್ತಿರುವ ಕೆಲಸ ಎಂದೆಂದಿಗೂ ಮುಂದುವರೆಸುತ್ತೇನೆ’ ಎಂದು ತಮ್ಮ ಬದ್ಧತೆಯನ್ನು ಘೋಷಿಸಿದ್ದರು.

ಇತಿಹಾಸವನ್ನು ನಿರ್ಮಿಸಿರುವುದು ಸಾಮಾನ್ಯಜನರೇ ಎಂಬ ಅರಿವಿದ್ದ ಅವರು ‘ನನ್ನ ಸಾಹಿತ್ಯ ಏನಿದ್ದರೂ ನನ್ನ ಮೂಲಕ ಅವರು ಬರೆದ ಸಾಹಿತ್ಯ, ನಾನು ನಿಮಿತ್ತ ಮಾತ್ರ’ ಎಂದು ಹೇಳುತ್ತಿದ್ದರು. ಬರೆಹ ಮತ್ತು ಬದುಕು ಎರಡರಲ್ಲೂ ತಾವು ನಂಬಿದ ತಾತ್ವಿಕತೆಯನ್ನು ಮೆರೆದ ಮಹಾಶ್ವೇತಾದೇವಿ ಅವರ ಮಟ್ಟದ ಹೋರಾಟಗಾರ್ತಿ ಲೇಖಕಿ ಯಾವ ದೇಶಕಾಲದಲ್ಲೂ ವಿರಳ.

ಅವರಿಗೆ ಸಂದ ಮ್ಯಾಗ್ಸೆಸೆ, ಜ್ಞಾನಪೀಠ ಮುಂತಾದ ಅನೇಕಾನೇಕ ಪ್ರಶಸ್ತಿಗಳೆಲ್ಲ, ಆದಿವಾಸಿಗಳ ಏಳಿಗೆಗೆ ಅವರು ಇನ್ನಷ್ಟು ಹಣ ಕೊಡುವಂತೆ ಮತ್ತು ಹಟ ತೊಡುವಂತೆ ಮಾಡಿದವು ಎಂದ ಮೇಲೆ, ಹೆಚ್ಚು ಹೇಳಬೇಕಿಲ್ಲ.

ಪ್ರಮುಖ ಕೃತಿಗಳು
‘ಹಜಾರ್‌ ಚೌರಾಷಿರ್‌ ಮಾ’, ‘ಅರಣ್ಯೇರ್‌ ಅಧಿಕಾರ್‌’, ‘ಝಾನ್ಸಿರ್‌ ರಾಣಿ’, ‘ಅಗ್ನಿ ಗರ್ಭ’, ‘ರುಡಾಲಿ’, ‘ಸಿಧು ಕನ್ಹುರ್‌ ಡಾಕೆ’, ‘ಸುಭಗ ಬಸಂತ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT