ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರದೋಣಿಯ ಮೇಲೆ ಮಾಡೆಲಿಂಗ್‌ ಪಯಣ

Last Updated 26 ಮೇ 2016, 19:41 IST
ಅಕ್ಷರ ಗಾತ್ರ

‘ನಮ್ಮಲ್ಲಿ ಅನೇಕ ಹುಡುಗಿಯರಿಗೆ ಮಾಡೆಲಿಂಗ್‌ ಮಾಡಬೇಕೆಂದರೆ ತುಂಬಾ ಸುಂದರಿಯರಾಗಿರಬೇಕು, ಬೆಳ್ಳಗಿರಬೇಕು, ಝೀರೋ ಸೈಜ್‌ ಇರಬೇಕು ಎಂಬುದೂ ಸೇರಿದಂತೆ ಬಗೆಬಗೆಯ ನಂಬಿಕೆಗಳಿವೆ. ನನ್ನ ಪ್ರಕಾರ ಇದು ಸುಳ್ಳು...’ ಎಂದು ನೇರವಾಗಿ ಹೇಳುತ್ತಾರೆ ಜೇಲ್ ವರ್ಮಾ. ಅವರ ಪ್ರಕಾರ ರೂಪದರ್ಶಿಯಾಗಲು ಅಂಗ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಮುಖ್ಯ.

ಜೇಲ್‌ ವರ್ಮಾ ಅವರು ಮಾಡೆಲಿಂಗ್‌ ಜತೆ ಸಾಹಿತ್ಯದ ನಂಟನ್ನೂ ಬೆಳೆಸಿಕೊಂಡಿದ್ದಾರೆ. ‘ಮಾಡೆಲಿಂಗ್ ನನಗೆ ಇಷ್ಟ. ಅದನ್ನು ಮಾಡ್ತೀನಿ. ಆದ್ರೆ ನಿಜವಾಗಿ ನನ್ನ ಆಸಕ್ತಿ ಓದು ಮತ್ತು ಬರವಣಿಗೆ’ ಎನ್ನುವ ಜೇಲ್‌, ‘ನನಗೆ ಚಿಕ್ಕಂದಿನಿಂದಲೂ ಪುಸ್ತಕ ಓದುವ ಹವ್ಯಾಸವಿದೆ. ಅದು ಈಗ ಗೀಳು ಎಂಬಂತೆ ಆಗಿದೆ’ ಎಂದು ಹೇಳುತ್ತಾರೆ. ಕುಟುಂಬದ ಬೇರುಗಳು ಆಂಧ್ರಪ್ರದೇಶದಲ್ಲಿ ಊರಿಕೊಂಡಿದ್ದರೂ ಜೇಲ್‌ ಹುಟ್ಟಿದ್ದು ಸಕಲೇಶಪುರದಲ್ಲಿ. ಬೆಳೆದಿದ್ದು ಓದಿದ್ದು ಹಾಸನ–ಮೈಸೂರಿನಲ್ಲಿ.

‘ನಾನು ಎರಡನೇ ತರಗತಿಯಲ್ಲಿದ್ದಾಗಲೇ ಪುಸ್ತಕ ಓದಲು ಆರಂಭಿಸಿದೆ. ನಮ್ಮಮ್ಮನೂ ತುಂಬ ಓದುತ್ತಿದ್ದರು. ಆಗ ‘ಚಂದಮಾಮ’ ಹೆಚ್ಚು ಇಷ್ಟವಾಗುತ್ತಿತ್ತು. ಪುಸ್ತಕ ತುಂಬ ಓದುತ್ತಿದ್ದೆ. ನಂತರದ ದಿನಗಳಲ್ಲಿ ಓದು ನನ್ನನ್ನು ಆವರಿಸಿಕೊಂಡಿತು. ಒಮ್ಮೆ ಹಿಡಿದ ಪುಸ್ತಕವನ್ನು ಪೂರ್ತಿ ಓದದೆ ಕೆಳಗಿಡುತ್ತಲೇ ಇರಲಿಲ್ಲ’ ಎಂದು ಹೊತ್ತಿಗೆಗಳ ಲೋಕ ಪ್ರವೇಶಿಸಿದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರ ಬಳಿ ಈಗ ಮೂರುವರೆ ಸಾವಿರ ಪುಸ್ತಕಗಳಿವೆ. 

ಪದವಿಯಲ್ಲಿ ಇಂಗ್ಲಿಷ್‌ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಭ್ಯಸಿಸಿರುವ ಅವರು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. ಬಾಲ್ಯದಿಂದಲೇ ಓದಿನ ಸಹವಾಸವನ್ನು ಬೆಳೆಸಿಕೊಂಡಿದ್ದ ಅವರಿಗೆ ಬರವಣಿಗೆ ಸಖ್ಯ ಬೆಳೆದಿದ್ದು ಹದಿನಾಲ್ಕನೇ ವಯಸ್ಸಿನಲ್ಲಿ. 

‘ಹದಿನಾಲ್ಕು ಹದಿನೈದನೇ ವಯಸ್ಸಿನಲ್ಲಿ ಒಂದು ರೀತಿಯ ದಂಗೆಕೋರ ಮನಸ್ಥಿತಿ ಇರುತ್ತದೆ. ಪ್ರಪಂಚವನ್ನೇ ಬದಲಿಸಿಬಿಡುವ ಹುರುಪು ಇರುತ್ತದೆ. ಆದರೆ ನನ್ನೊಳಗಿನ ಆ ದಂಗೆಯನ್ನು ಅಭಿವ್ಯಕ್ತಿಸಲು ಆಗ ನಾನಿದ್ದ ಹಾಸನದಲ್ಲಿ ಅಷ್ಟೊಂದು ಅವಕಾಶಗಳು ಇರಲಿಲ್ಲ. ನನಗೆ ಅನ್ನಿಸುತ್ತಿರುವುದನ್ನು ಹೇಗಾದರೂ ಅಭಿವ್ಯಕ್ತಿಸಬೇಕು ಎಂಬ ಅಂತರಂಗದ ಒತ್ತಡದಿಂದ ಬರವಣಿಗೆಗೆ ಇಳಿದೆ’ ಎಂದು ಬರವಣಿಗೆಗೆ ಹೊರಳಿಕೊಂಡ ಕಥನ ವಿವರಿಸುತ್ತಾರೆ.

ಆರಂಭದ ದಿನಗಳಲ್ಲಿ ತಾವು ಓದಿ ತುಂಬ ಇಷ್ಟಪಟ್ಟ ಲೇಖಕರು, ಅವರ ಕೃತಿಗಳ ಪಾತ್ರಗಳಿಗೆ ಪ್ರೇಮಪದ್ಯಗಳನ್ನು ಬರೆಯುತ್ತಿದ್ದರಂತೆ! ‘ಶೇಕ್ಸ್‌ಪಿಯರ್‌ ನಾಟಕದ ಹ್ಯಾಮ್ಲೆಟ್‌ ಮೇಲೆ ನನಗೆ ಎಷ್ಟು ಕ್ರಶ್‌ ಆಗಿತ್ತೆಂದರೆ ಅವನು ನಿಜವಾಗಲೂ ಬದುಕಿದ್ದಾನೆ ಎಂತಲೇ ಅಂದುಕೊಂಡಿದ್ದೆ’ ಎನ್ನುವ ಜೇಲ್‌ ‘ಜೀವಂತ ಹುಡುಗರಿಗೆ ಬರೆಯುವುದಕ್ಕಿಂತ ಕಾಲ್ಪನಿಕ ಪಾತ್ರಗಳಿಗೆ ಪತ್ರ ಬರೆಯುವುದು ಎಷ್ಟೋ ಮೇಲು’ ಎಂದು ನಗುತ್ತಾರೆ.

ಇಂದು ಜೇಲ್‌ ಅವರಿಗೆ ಓದು–ಬರವಣಿಗೆ ಎಂಬುದು ಉಸಿರಾಟದಷ್ಟೇ ಸಹಜ ಮತ್ತು ಅನಿವಾರ್ಯ ಅವಶ್ಯಕತೆಗಳಾಗಿವೆ. ಸಭ್ಯತೆಯ ಸೋಗಿನಲ್ಲಿಯೇ ಬರೆಯುವುದು ಜೇಲ್‌ ಅವರಿಗೆ ಒಗ್ಗದ ಸಂಗತಿ. ‘ನನ್ನ ಬರವಣಿಗೆಗೆ ಫಿಲ್ಟರ್‌ ಇಲ್ಲ. ನಾನು ರೇಪ್‌ ಅನ್ನು ರೇಪ್‌ ಅಂತಲೇ ಬರಿಯೋದು’ ಎಂದು ವಿಶ್ವಾಸದಿಂದ ಹೇಳಿಕೊಳ್ಳುವ ಅವರ ಈ ಗುಣವೇ ಎಷ್ಟೊ ಜನಕ್ಕೆ ಇಷ್ಟವಾಗದೇ ‘ನೀನು ಕಮಲಾದಾಸ್‌ ಥರ ಆಗಿಹೋಗ್ತಿಯಾ. ನಿಷೇಧ ಹಾಕಿಬಿಡ್ತಾರೆ ನಿನ್ನ ಮೇಲೆ’ ಎನ್ನುವುದೂ ಇದೆ. ಆದರೆ ಅದಕ್ಕೆಲ್ಲಾ ಜೇಲ್‌ ಅಷ್ಟೊಂದು ಮಹತ್ವ ನೀಡುವುದಿಲ್ಲ.

‘ಸತ್ಯಕ್ಕೆ ಯಾವುದೇ ಮುಖವಾಡ ತೊಡಿಸಿದರೂ ಅದು ಸತ್ಯವೇ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ’ ಎನ್ನುವುದು ಅವರ ಅಚಲ ನಂಬಿಕೆ. ಕೆಲ ಕಾಲ ಕಾರ್ಪೋರೆಟ್‌ ಜಗತ್ತಿನಲ್ಲಿ ಕೆಲಸ ಮಾಡಿದ ಅನುಭವವೂ ಇದೆ.

ಮಾಡೆಲಿಂಗ್‌ ವ್ಯಾಮೋಹ
‘ಐ ಲವ್‌ ಕ್ಯಾಮೆರಾ’ ಎಂದು ಉತ್ಕಟವಾಗಿ ಹೇಳಿಕೊಳ್ಳುವ ಜೇಲ್‌ ಅವರಿಗೆ ಮಾಡೆಲಿಂಗ್‌ ಬಗ್ಗೆಯೂ ಆಸಕ್ತಿ ಇತ್ತು.  ಆದರೆ ತಾನು ಅಷ್ಟೊಂದು ಬೆಳ್ಳಗಿಲ್ಲ ಎಂಬ ಕಾರಣಕ್ಕೆ ಆ ಕ್ಷೇತ್ರದಲ್ಲಿ ಸಲ್ಲುತ್ತೇನೆಯೋ ಇಲ್ಲವೋ ಎಂಬ ಅಳುಕೂ ಜೊತೆಯಾಗಿತ್ತು. ಆದರೆ ಆ ಮಾಡೆಲಿಂಗ್‌ನಲ್ಲಿ ತೊಡಗಿಕೊಂಡಂತೆಲ್ಲ ಹಿಂಜರಿಕೆ ದೂರ ಸರಿದು ಆತ್ಮವಿಶ್ವಾಸ ಮೂಡಿತು.

ಜೇಲ್‌ ಅವರನ್ನು ಮೊದಲು ಮಾಡೆಲಿಂಗ್‌ ಕ್ಷೇತ್ರಕ್ಕೆ ಪರಿಚಯಿಸಿದವರು ಗಣೇಶ್‌ ದೇವರಾಜ್‌. ಅವರು ಮೊದಲು ಭಾಗವಹಿಸಿದ್ದು ಡೊಮೆಸ್ಟಿಕ್‌ ವಯಲೆನ್ಸ್‌ ವಿಷಯಾಧಾರಿತ ಫೋಟೊಶೂಟ್‌ನಲ್ಲಿ.

‘ನೋಡಲು ಸುಂದರವಾಗಿರುವವರೆಲ್ಲ ಫೋಟೊದಲ್ಲಿ ಚೆನ್ನಾಗಿ ಕಾಣಿಸುವುದಿಲ್ಲ. ಎಷ್ಟೇ ಸುಂದರವಾಗಿದ್ದರೂ ಮುಖದಲ್ಲಿ ಯಾವುದೇ ಭಾವನೆ ತೋರದಿದ್ದರೆ ಅದು ಚೆನ್ನಾಗಿ ಕಾಣುವುದಿಲ್ಲ. ನಮ್ಮ ಮುಖ ಸಿಮೆಕ್ಟ್ರಿಕಲ್‌ ಆಗಿದ್ದರೆ ಫೋಟೊ ಚೆನ್ನಾಗಿ ಬರುತ್ತದೆ’ ಎಂದು ತಮ್ಮ ವೃತ್ತಿ ಕೌಶಲಗಳ ಕುರಿತೂ ಹೇಳುತ್ತಾರೆ.

ಹೀಗೆ ಫ್ಯಾಷನ್‌ ಲೋಕದಲ್ಲಿ ಹೆಜ್ಜೆಯೂರಿದ ಅವರು ತಮ್ಮ ತಾಯಿಗೆ ಕ್ಯಾನ್ಸರ್‌ ಬಂದ ಕಾರಣ ಎಲ್ಲವುಗಳಿಂದ ದೂರವಾಗಿದ್ದರು. ಈಗ ಮತ್ತೆ ಮಾಡೆಲಿಂಗ್‌ಗೆ ಮರಳಿದ್ದಾರೆ.ಅವರು ‘ಎಮೋಷನಲ್‌ ಹೀಲಿಂಗ್‌’ ಕುರಿತು ಕೋರ್ಸ್‌ ಮಾಡುತ್ತಿದ್ದಾರೆ.

‘ಒಂದು ವರ್ಷ ಪ್ರತಿನಿತ್ಯ ನನ್ನ ತಾಯಿಯನ್ನು ಕರೆದುಕೊಂಡು ಕ್ಯಾನ್ಸರ್‌ ಆಸ್ಪತ್ರೆಗೆ ಹೋಗುತ್ತಿದ್ದೆ. ಆಗ ನನಗನ್ನಿಸಿತು. ನಾವು ದೇಹದ ಗಾಯಗಳಿಗೆ ವಹಿಸುವಷ್ಟು ಕಾಳಜಿಯನ್ನು ಮನಸಿನ ಗಾಯಗಳಿಗೆ ವಹಿಸುವುದಿಲ್ಲ. ಈ ನಿಟ್ಟಿನಲ್ಲಿ ನಾನೇನಾದರೂ ಮಾಡಬೇಕು ಎಂದುಕೊಂಡೆ’ ಎನ್ನುತ್ತಾರೆ.

ಮನಸ್ಸಿನ ಭಾವನೆಗಳನ್ನು ಅರಿಯುವ ‘ಎಮೋಷನಲ್‌ ಹೀಲಿಂಗ್‌’ ಕೋರ್ಸ್‌ ಮಾಡಲು ಇದು ಮುಖ್ಯ ಕಾರಣ. ಮುಂದಿನ ದಿನಗಳಲ್ಲಿ ನಾನೊಬ್ಬಳು ಎಮೋಷನಲ್‌ ಹೀಲರ್‌ ಆಗಬೇಕು ಎಂಬ ಹಂಬಲ ಅವರಿಗಿದೆ. ಕೆಂಪು ಹಾಸಿನ ಮೇಲಿನ ನಡಿಗೆಗೆ ಅಗತ್ಯವಿರುಷ್ಟು ಎತ್ತರ ಇಲ್ಲದ ಕಾರಣ ಜೇಲ್‌, ಫೋಟೊಗ್ರಫಿ ಮಾಡೆಲಿಂಗ್‌ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ.

‘ಜೀರೋ ಸೈಜ್‌ ಮಾಡಿಕೊಂಡು ರ್‍ಯಾಂಪ್‌ ಮೇಲೆ ಅಡ್ಡಾಡಿದ ತಕ್ಷಣ ಒಳ್ಳೆಯ ಮಾಡೆಲ್‌ ಆಗುವುದಿಲ್ಲ. ಅದಕ್ಕೊಂದು ಆಂತರಿಕ ಸತ್ವ ಬೇಕು. ಆ ಅಂತರಿಕ ಸೌಂದರ್ಯ ನಮ್ಮ ಮುಖದಲ್ಲಿ ಕಾಣಬೇಕು’ ಎಂಬುದು ಜೇಲ್‌ ಅವರ ಖಚಿತ ನಂಬಿಕೆ. ಆದ್ದರಿಂದಲೇ ಅವರು ಮನಸ್ಸು ಸರಿ ಇಲ್ಲದಿದ್ದಾಗ ಫೋಟೊ ಶೂಟ್‌ಗಳಲ್ಲಿ ಭಾಗವಹಿಸುವುದೇ ಇಲ್ಲ.

ಫಿಟ್‌ನೆಸ್‌ ಕಾಪಾಡಿಕೊಳ್ಳಲು ಆಹಾರದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ? ಎಂದು ಪ್ರಶ್ನಿಸಿದರೆ ‘ರಾಗಿ ಮುದ್ದೆ, ಸೊಪ್ಪಿನ ಸಾರು’ ಎಂದು ನಗುತ್ತಾರೆ.
(ಜೇಲ್‌ ಅವರ ಫೇಸ್‌ಬುಕ್‌ ಕೊಂಡಿ: goo.gl/BSe9eo)

ಭಾರತದ ರಸ್ತೆಗಳು ಈಗ ಉತ್ತಮವಾಗಿವೆ. ಹೀಗಾಗಿ ಬೃಹತ್‌ ಟ್ರಕ್‌ಗಳನ್ನು ಖರೀದಿಸಲು ಗ್ರಾಹಕರು ಚಿಂತಿಸುವುದಿಲ್ಲ. ಇದರಿಂದ ನಿರ್ವಹಣೆಯೂ ಹೆಚ್ಚು ಹೊರೆಯಾಗದು.
– ಜೇಲ್ ವರ್ಮಾ ರೂಪದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT