ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಾಡಕ್ಕೆ ಅಣಿಯಾಗಿ...

Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಶ್ರೀಕಾಂತ್ ಬೊಲ್ಲಾ
ಆಗ ತಾನೇ ಹುಟ್ಟಿದ ಗಂಡು ಶಿಶು ಅದು! ಆದರೆ ಪೋಷಕರ ಮುಖದಲ್ಲಿ ಮಗು ಜನಿಸಿದ ಸಂಭ್ರಮ ಇರಲಿಲ್ಲ? ಯಾಕೆಂದರೆ ಆ ಮಗುವಿನ ಎರಡು ಕಣ್ಣುಗಳು ಮುಚ್ಚಿದ್ದವು, ವೈದ್ಯರು ಕಣ್ಣು ಮುಚ್ಚಿರುವುದರಿಂದ ಮುಂದೆ ದೃಷ್ಟಿ ಬರುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದ್ದರು.

ಇತ್ತ ಪೋಷಕರು ಜೀವನ ಪೂರ್ತಿ ಅಂಧ ಮಗುವನ್ನು ಸಾಕುವುದು ಹೇಗೆ, ಮುಂದಿನ ಭವಿಷ್ಯ ಏನು ಎಂಬ ಚಿಂತೆಯಲ್ಲಿ ಮುಳುಗಿದ್ದರು! ಈ ನಡುವೆ ಕೆಲವರು ಮಗುವನ್ನು ಬಿಸಾಡಿ ಬಿಡಿ ಅಥವಾ ಯಾವುದಾದರೊಂದು ಅನಾಥಾಶ್ರಮಕ್ಕೆ ಕೊಟ್ಟು ಬಿಡಿ ಎಂಬ ಸಲಹೆಗಳನ್ನು ಕೊಟ್ಟಿದ್ದರು. ನೆರೆಹೊರೆಯವರ ಸಲಹೆಗಳನ್ನು ಕೇಳದ ಆ ತಂದೆತಾಯಿಗಳು, ಪಾಲಿಗೆ ಬಂದದ್ದು ಪಂಚಾಮೃತ ಎಂದುಕೊಂಡು ಮುದ್ದಿನಿಂದ ಸಾಕ ತೊಡಗಿದರು. ಮುಂದೆ ಆ ಮಗು ಯಶಸ್ವಿ ಉದ್ಯಮಿಯಾಗಿ ಬೆಳೆದು, ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟಿದ್ದಾನೆ.

ಇದು ಆಂಧ್ರಪ್ರದೇಶ ಮೂಲದ ಅಂಧ ಯುವಕ ಶ್ರೀಕಾಂತ್ ಬೊಲ್ಲಾ ಅವರ ಸಾಧನೆಯ ಕಥೆ. ಶ್ರೀಕಾಂತ್ ಅತಿ ಕಿರಿಯ ವಯಸ್ಸಿಗೆ ಹಲವಾರು ಸಂಕಷ್ಟಗಳನ್ನು ಮೆಟ್ಟಿನಿಂತು ಸಾಧಕರಾಗಿದ್ದಾರೆ. 50 ಕೋಟಿ ರೂಪಾಯಿ ಬಂಡವಾಳ ಹೊಂದಿರುವ ಬೊಲ್ಲಾಂತ್ ಕಂಪೆನಿಯ ಮಾಲೀಕರಾಗಿದ್ದಾರೆ. ಇದೆಲ್ಲ ಸಾಧ್ಯವಾಗಿದ್ದು ಏನಾದರೂ ಸಾಧಿಸಬೇಕು ಎಂಬ ಛಲದಿಂದಾಗಿ ಎಂದು ಶ್ರೀಕಾಂತ್ ನುಡಿಯುತ್ತಾರೆ.

ನನ್ನ ತಂದೆತಾಯಿಗಳು ಬಡವರು, ಜತೆಗೆ ಅವಿದ್ಯಾವಂತರು. ಹೇಗೋ ಕಷ್ಟಪಟ್ಟು ಹತ್ತನೇ ತರಗತಿವರೆಗೆ ಓದಿಸಿದರು. ವಿಜ್ಞಾನ ವಿಷಯದಲ್ಲಿ ಪಿಯುಸಿ ಪಡೆದ ನಾನು, ನಂತರ ಅಮೆರಿಕದ ಐಐಟಿ ಪ್ರವೇಶ ಪರೀಕ್ಷೆ ಬರೆದು ಆಯ್ಕೆಯಾದೆ. ಅಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಭಾರತಕ್ಕೆ ಮರಳಿದೆ. ಇಲ್ಲಿ ಕ್ಲೌಡ್ ಫಂಡಿಂಗ್‌ನಲ್ಲಿ ಬಂಡವಾಳ ಸಂಗ್ರಹಿಸಿ, ಅಡಿಕೆ ಎಲೆ, ಪೇಪರ್‌ನಲ್ಲಿ ತಟ್ಟೆ, ಲೋಟ ತಯಾರಿಸುವ ಉದ್ಯಮ ಆರಂಭಿಸಿದೆ.

ಇದು ನನ್ನ ಕೈಹಿಡಿಯಿತು, ಇಂದು ನಮ್ಮ ಸಂಸ್ಥೆಯಲ್ಲಿ ಶೇ 70 ರಷ್ಟು ಅಂಗವಿಕಲರು ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದಲ್ಲಿ ಒಟ್ಟು ನಾಲ್ಕು ಉತ್ಪಾದನಾ ಘಟಕಗಳನ್ನು ತೆರೆಯಲಾಗಿದ್ದು ವಾರ್ಷಿಕ ಹತ್ತಾರು ಕೋಟಿ ರೂಪಾಯಿ ಆದಾಯ ಬರುತ್ತಿದೆ ಎಂದು ಶ್ರೀಕಾಂತ್ ಹೇಳುತ್ತಾರೆ. ಇಚ್ಛಾಶಕ್ತಿ, ಕನಸು, ಗುರಿ, ಕಠಿಣ ಪರಿಶ್ರಮದ ಮೂಲಕ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದಕ್ಕೆ ಶ್ರೀಕಾಂತ್ ಮಾದರಿಯಲ್ಲವೇ?
www.bollantindustries.com
*

ಆಯುಶ್ ಮತ್ತು ವಿಶ್ರುತಾ
ದೆಹಲಿ, ಮುಂಬೈ ಮತ್ತು ಬೆಂಗಳೂರು ಮಹಾನಗರಗಳು ಇಂದು ಸ್ಟಾರ್ಟ್‌ಅಪ್ ಹಬ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಯುವಕರು ಒಂದು ಹೊಸ ಉದ್ಯಮ (ಸ್ಟಾರ್ಟ್‌ಅಪ್) ಸ್ಥಾಪಿಸಬೇಕಾದರೆ ಲಾಭದ ಲೆಕ್ಕಾಚಾರ ಹಾಕಿದ ನಂತರವೇ ಮುಂದಿನ ಹೆಜ್ಜೆ ಇಡುತ್ತಾರೆ! ಆದರೂ ಮಾರುಕಟ್ಟೆ ಲೆಕ್ಕಾಚಾರಗಳು ತಲೆಕೆಳಗಾಗಿ ನಷ್ಟ ಅನುಭವಿಸಬೇಕಾಗುತ್ತದೆ! ಹೀಗೆ ನಷ್ಟ ಅನುಭವಿಸಿದ ಯುವಕರ ತಂಡವೊಂದು ತಮ್ಮ ಉದ್ಯಮವನ್ನು ಮತ್ತೆ ಸರಿದಾರಿಗೆ ತಂದ ಯಶಸ್ವಿ ಕಥೆ ಇದು.

ದೆಹಲಿ ಮೂಲದ ಆಯುಶ್, ವಿಶ್ರುತಾ  ಹಾಗೂ ಗೆಳೆಯರು ಈಸಿಖಾನಾ (easykhaana) ಎಂಬ ಉದ್ಯಮ ಆರಂಭಿಸಿದರು. ಮನೆಯಿಂದ ಹೊರ ಗುಳಿದು, ದೆಹಲಿ ಮತ್ತು ಗುರ್‌ಗಾಂವ್‌ನಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ಈ ಉದ್ಯಮವನ್ನು ಆರಂಭಿಸುತ್ತಾರೆ. ಈಸಿಖಾನಾ ವೆಬ್‌ಸೈಟ್‌ನಲ್ಲಿ ಉಪಾಹಾರ ಹಾಗೂ ಊಟವನ್ನು ಬುಕ್ ಮಾಡಿದರೆ ಕೇವಲ ಹತ್ತು ನಿಮಿಷದಲ್ಲೇ ಗ್ರಾಹಕರಿಗೆ ತಲುಪಿಸುವುದು ಕಂಪೆನಿಯ ಪ್ರಮುಖ ಕಾರ್ಯವೈಖರಿ.

ಆದರೆ ಕಂಪೆನಿ ಆರಂಭವಾಗಿ ತಿಂಗಳು ಕಳೆದರೂ ವೆಬ್‌ಸೈಟ್‌ನಲ್ಲಿ ಊಟಕ್ಕಾಗಿ ಬುಕ್ ಮಾಡಿದ ಗ್ರಾಹಕರು ನಾಲ್ಕು ಜನ ಮಾತ್ರ! ಜಾಹೀರಾತುಗಳನ್ನು ನೀಡಿದರೂ, ಪೋಸ್ಟರ್‌ಗಳು, ಕರ ಪತ್ರಗಳನ್ನು ಹಚ್ಚಿದರೂ, ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದರೂ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರಲಿಲ್ಲ. ಈ ಹಂತದಲ್ಲಿ ಉದ್ಯಮ ಹಳಿ ತಪ್ಪುತ್ತಿದೆ ಎಂಬುದನ್ನು ಅರಿತ ಈ ಯುವಕರು, ಕೆಲವೇ ದಿನಗಳಲ್ಲಿ ವಿಭಿನ್ನವಾದ ಪ್ರಚಾರ ಹಾಗು ಕಾರ್ಯತಂತ್ರವನ್ನು ಕೈಗೊಳ್ಳುವ ಮೂಲಕ  ಉದ್ಯಮವನ್ನು ಸರಿ ದಾರಿಗೆ ತಂದರು.

ಮನೆ ರುಚಿ ಅಡುಗೆ ತಯಾರಿಗೆ ಒತ್ತು ನೀಡಿದರು, ಶುಚಿತ್ವ ಮತ್ತು ಆಹಾರದ ಗುಣಮಟ್ಟಕ್ಕೆ ಆದ್ಯತೆ, ಸಮಯ ಪಾಲನೆಗೆ ಮಹತ್ವ ನೀಡಿದ ಪರಿಣಾಮ ಈಸಿಖಾನಾ ಚೇತರಿಕೆ ಹಾದಿ ಹಿಡಿಯಿತು. ‘ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ದೂರದೃಷ್ಟಿ ಮತ್ತು ಭಿನ್ನ ಆಲೋಚನೆ ಫಲದಿಂದ. ನಷ್ಟದಲ್ಲಿದ್ದಾಗ ನಾವು ಕೈಚಲ್ಲಿದ್ದರೆ ಯಶಸ್ವಿ ಉದ್ಯಮಿಗಳಾಗುತ್ತಿರಲಿಲ್ಲ’ ಎಂದು ಆಯುಶ್ ಹೇಳುತ್ತಾರೆ.
www.easykhaana.com
*
ರಾಹುಲ್ ಕುಮಾರ್
ಬಿಹಾರದಲ್ಲಿ ಖಡಕ್ ಜಿಲ್ಲಾಧಿಕಾರಿ ಎಂದೇ ಜನಪ್ರಿಯರಾಗಿರುವ ರಾಹುಲ್ ಕುಮಾರ್ ಸಮಾಜ ಪರಿವರ್ತನೆ ಕಾರ್ಯಗಳಲ್ಲೂ ಸಕ್ರಿಯರಾಗಿದ್ದಾರೆ. ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ವರದಿಯಾಗಿದ್ದ ನೂರಾರು ಸಾಮಾಜಿಕ ಬಹಿಷ್ಕಾರ ಪ್ರಕರಣಗಳನ್ನು ಸುಖಾಂತ್ಯವಾಗಿ ಇತ್ಯರ್ಥ ಪಡಿಸಿದ ಹೆಗ್ಗಳಿಕೆ ಇವರದ್ದು.

ಬಿಹಾರದ ಅತಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಗೋಪಾಲ್‌ಗಂಜ್ ಜಿಲ್ಲೆಯೂ ಒಂದು. ಜಿಲ್ಲೆಯ ಸಾಕ್ಷರತೆ ಪ್ರಮಾಣ ಬಹಳ ಕಡಿಮೆ ಇದ್ದು, ಇಲ್ಲಿನ ಜನರಲ್ಲಿ ಅಂಧಕಾರ ಮನೆ ಮಾಡಿದೆ. ಹಾಗಾಗಿಯೇ, ದಲಿತರನ್ನು ಸಾರ್ವಜನಿಕ ಬಾವಿ, ಕೆರೆಗಳ ಸಮೀಪ ಬಿಟ್ಟುಕೊಳ್ಳದೆ ಇರುವುದು, ದಲಿತ ಮಹಿಳೆಯರಿಗೆ ಶಾಲೆಗಳಲ್ಲಿ ಬಿಸಿಯೂಟ ಮಾಡದಂತೆ ಬಹಿಷ್ಕರಿಸುವುದು, ವಿಧವೆಯರು ಹಾಗೂ ದೇವದಾಸಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡಲು ಅವಕಾಶ ಕೊಡದಿರುವಂತಹ ಘಟನೆಗಳು ಮರುಕಳಿಸುತ್ತಿರುತ್ತವೆ.

ಇಂತಹ ಸಂದರ್ಭಗಳಲ್ಲಿ ರಾಹುಲ್ ಕುಮಾರ್ ಖುದ್ದಾಗಿ ಘಟನಾ ಸ್ಥಳಕ್ಕೆ ತೆರಳಿ ಅಲ್ಲಿನ ಜನರ ಮನವೊಲಿಸುವ ಮೂಲಕ ಪ್ರಕರಣಗಳನ್ನು ಶಾಂತಿಯುತವಾಗಿ ಬಗೆಹರಿಸುತ್ತಾರೆ. ರಾಹುಲ್ ಯಾವುದೇ ರೀತಿಯ ಅಧಿಕಾರ ದರ್ಪ ತೋರದೆ ಅಶಿಕ್ಷಿತ ಜನರ ಮನ ಪರಿವರ್ತನೆ ಮಾಡುವುದು ವಿಶೇಷ. ಇದರ ಪರಿಣಾಮ ಬಹಿಷ್ಕಾರಕ್ಕೆ ಒಳಗಾಗಿದ್ದ ಕಡೆಗಳಲ್ಲಿ ಇಂದು ದಲಿತರು, ವಿಧವೆಯರು ಮತ್ತು ದೇವದಾಸಿಯರು ಮತ್ತೆ ಕೆಲಸ ಮಾಡುತ್ತಿದ್ದಾರೆ.

ರಾಹುಲ್ ಕುಮಾರ್ ಜಿಲ್ಲೆಯಾದ್ಯಂತ ಸಮಾಜ ಪರಿವರ್ತನಾ ಅಭಿಯಾನ ನಡೆಸುತ್ತಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಕುಗ್ರಾಮಗಳಿಗೆ ತೆರಳಿ ವಾಸ್ತವ್ಯ ಹೂಡುತ್ತಾರೆ. ನಂತರ ಗ್ರಾಮಗಳ ಜನರನ್ನು ಒಂದು ಕಡೆ ಸೇರಿಸಿ ಅವರಲ್ಲಿ ಅಸ್ಪೃಶ್ಯತೆ ನಿವಾರಣೆ, ಕಂದಾಚಾರ, ಮೌಢ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ವಾರ್ತಾ ಇಲಾಖೆ ಹಾಗೂ ಕೆಲ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದು ಬೀದಿ ನಾಟಕಗಳು, ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಜನರನ್ನು ಅಂಧಕಾರದಿಂದ ಹೊರತರುವ ಪ್ರಯತ್ನ ಮಾಡುತ್ತಿದ್ದಾರೆ. ಯುವ ಜಿಲ್ಲಾಧಿಕಾರಿ ರಾಹುಲ್ ಕುಮಾರ್ ಅವರು ದೇಶದ ಸಮಸ್ತ ಅಧಿಕಾರಿ ವರ್ಗಕ್ಕೆ ಹಾಗೂ ಯುವಕರಿಗೆ ಪ್ರೇರಣೆ ಮತ್ತು ಮಾದರಿಯಾಗಿದ್ದಾರೆ.
rahulkumar-gopalganj/facebook

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT