ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾತ ಚಿತ್ರಪಟಗಳ ದೂಳು ಕೊಡವುತ್ತ...

ಪಿಸುಗುಡುವ ಚಿತ್ರಪಟ * ಶ್ರೀಹರ್ಷ ಗಂಜಾಂ
Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ನಾನು ಫೋಟೊಗ್ರಫಿಯನ್ನು ಒಲಿಸಿಕೊಂಡಿದ್ದು ಸ್ವಯಂ ಕಲಿಕೆಯಿಂದಲೇ. ಕ್ಯಾಮೆರಾದ ಕುರಿತು ಪ್ರಾಥಮಿಕ ತಿಳಿವಳಿಕೆ ಗಳಿಸಿಕೊಂಡಿದ್ದೂ ಹಾಗೆಯೇ.
ಅಂತರ್ಜಾಲದಲ್ಲಿನ ಶೋಧ, ಫೋಟೊಗ್ರಫಿ ಪರಿಣತರೊಂದಿಗಿನ ಮಾತುಕತೆ, ಚರ್ಚೆ, ಸಂವಾದಗಳಿಂದ ಸಾಕಷ್ಟು ತಿಳಿದುಕೊಂಡೆ.

ಆರಂಭದಲ್ಲಿ ‘ವೈಡ್‌ಲೈಫ್‌ ಫೋಟೊಗ್ರಫಿ’ ಮಾಡುತ್ತಿದ್ದರೂ ಯಾಕೋ ಆ ಪ್ರಕಾರ ನನಗೆ ಅಷ್ಟೊಂದು ಇಷ್ಟವಾಗಲಿಲ್ಲ. ಅಲ್ಲದೆ ಎಲ್ಲರೂ ವೈಡ್‌ಲೈಫ್‌ ಫೋಟೊಗ್ರಫಿಯನ್ನೇ ಮಾಡುತ್ತಿರುವುದೂ ನಾನು ಅದರಿಂದ ವಿಮುಖನಾಗಿರಲು ಕಾರಣವಾಗಿರಬಹುದು. ನಂತರದಲ್ಲಿ ನನ್ನ ಆಸಕ್ತಿ ‘ಲ್ಯಾಂಡ್‌ಸ್ಕೇಪ್‌ ಫೋಟೊಗ್ರಫಿ’(ಭೂದೃಶ್ಯ ಛಾಯಾಗ್ರಹಣ)ಯತ್ತ ಹೊರಳಿಕೊಂಡಿತು.

‘ಭೂದೃಶ್ಯ ಛಾಯಾಗ್ರಹಣ’ಕ್ಕೆ ಭಾರತದಲ್ಲಿ ಅಷ್ಟೊಂದು ಜನಪ್ರಿಯತೆ ಇಲ್ಲ. ಅಲ್ಲದೆ, ಲ್ಯಾಂಡ್‌ಸ್ಕೇಪ್‌ ಅಂದರೆ ಸೀನರಿಗಳ ಫೋಟೊ ತೆಗೆಯುವುದು ಎಂದು ಸೀಮಿತವಾದ ಅರ್ಥದಲ್ಲಿಯೇ ಗ್ರಹಿಸಿಕೊಂಡಿದ್ದಾರೆ.

ಹೆಚ್ಚೇನೂ ಜನಪ್ರಿಯವಲ್ಲದ, ಆದರೆ ಸವಾಲುಗಳಿಂದ ಕೂಡಿದ ಲ್ಯಾಂಡ್‌ಸ್ಕೇಪ್‌ನಲ್ಲಿಯೇ ವಿಭಿನ್ನವಾದದ್ದು ಏನಾದರೂ ಮಾಡಬೇಕು ಎಂದು ನನಗೆ ತೀವ್ರವಾಗಿ ಅನಿಸುತ್ತಿತ್ತು. ಹೀಗೆ ಯೋಚಿಸುತ್ತಿದ್ದಾಗಲೇ ನನಗೆ ‘ಅನ್‌ಸೀನ್‌ ಲ್ಯಾಂಡ್‌ಸ್ಕೇಪ್‌’ ಪರಿಕಲ್ಪನೆ ಹೊಳೆದಿದ್ದು. ಇದುವರೆಗೆ ಹೊರಜಗತ್ತಿಗೆ ಅಷ್ಟೊಂದು ಪರಿಚಿತ ಅಲ್ಲದಿರುವ ಭೂದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದೇ ಇದರ ಉದ್ದೇಶ.

ಭೂದೃಶ್ಯ ಛಾಯಾಗ್ರಹಣದ ಭಿನ್ನ ಆಯಾಮಗಳನ್ನು ಶೋಧಿಸುವುದು ಮತ್ತು ಅದರ ಕುರಿತು ಜನರಲ್ಲಿ ಇರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಬೇಕು ಎಂಬುದೂ ನನ್ನ ಮನಸ್ಸಿನಲ್ಲಿತ್ತು. ಹಾಗೆ ನೋಡಿದರೆ ವೈಡ್‌ಲೈಫ್‌ ಫೋಟೊಗ್ರಫಿಗಿಂತ ಲ್ಯಾಂಡ್‌ಸ್ಕೇಪ್‌ ಫೋಟೊಗ್ರಫಿಯಲ್ಲಿ ಎದುರಾಗುವ ಸವಾಲುಗಳೇ ಹೆಚ್ಚು ಸಂಕೀರ್ಣವಾದವು.

‘ಅನ್‌ಸೀನ್ ಲ್ಯಾಂಡ್‌ಸ್ಕೇಪ್‌’ ಪರಿಕಲ್ಪನೆಯ ಮೊದಲ ಪ್ರಯತ್ನವನ್ನು ಆರಂಭಿಸಿದ್ದು 2010ರಲ್ಲಿ. ಉಲ್ಕಾಪಾತದ ಫೋಟೊಗ್ರಫಿ ಮಾಡಬೇಕು ಎಂದು ಪ್ರಯತ್ನ ಆರಂಭಿಸಿದೆ. ಆದರೆ ಆಗ ನಾನು ಅದರಲ್ಲಿ ಯಶಸ್ವಿಯಾಗಲಿಲ್ಲ. ನನ್ನ ಬಳಿ ಒಳ್ಳೆಯ ಸಲಕರಣೆಗಳೂ ಇರಲಿಲ್ಲ. ಜೊತೆಗೆ ಅಷ್ಟೊಂದು ಅನುಭವವೂ ಇರಲಿಲ್ಲ.

ಮೊದಲ ಪ್ರಯತ್ನದಲ್ಲಿ ಎದುರಾದ ಸೋಲಿನಿಂದ ನಾನೇನೂ ನಿರಾಸೆ ಹೊಂದಲಿಲ್ಲ. ಮರುವರ್ಷ ಮತ್ತೆ ಪ್ರಯತ್ನಿಸಿದೆ. ಆಗಲೂ ಸಾಧ್ಯವಾಗಲಿಲ್ಲ. ನಾನು ಛಲ ಬಿಡಲಿಲ್ಲ. 2010ರಿಂದ ಆರಂಭವಾದ ನನ್ನ ಪ್ರಯತ್ನ ಫಲ ಕೊಟ್ಟಿದ್ದು 2013 ಡಿಸೆಂಬರ್‌ನಲ್ಲಿ.

ಆಗ ಬಿಳಿಗಿರಿರಂಗನ ಬೆಟ್ಟದ ಮೇಲೆ ಎರಡು ರಾತ್ರಿ ಕಳೆದು ನಾನು ತೆಗೆದ ಉಲ್ಕಾಪಾತದ ಚಿತ್ರ ಸ್‍ಪಷ್ಟವಾಗಿ ಮೂಡಿಬಂದಿತ್ತು. ಮೂರು ವರ್ಷಗಳ ನನ್ನ ಶ್ರಮ ಸಾರ್ಥಕವಾಯಿತು ಎನ್ನಿಸಿತು. ಅದುವರೆಗೆ ಯಾರೂ ಭಾರತದಲ್ಲಿ ಉಲ್ಕಾಪಾತದ ಚಿತ್ರ ತೆಗೆದಿರಲಿಲ್ಲ. ನಂತರವೂ ಯಾರೂ ತೆಗೆದಂತಿಲ್ಲ. 2014ರಲ್ಲಿ ನಾನೇ ಇನ್ನೊಂದು ಚಿತ್ರ ತೆಗೆದೆ.

2014ನಲ್ಲಿಯೇ ನಾನು ಇನ್ನೊಬ್ಬ ‘ಭೂದೃಶ್ಯ ಛಾಯಾಗ್ರಾಹಕ’ ಅಶ್ವಿನಿಕುಮಾರ್‌ ಅವರ ಜೊತೆ ಸೇರಿ ಒಂದು ಫೋಟೊಗ್ರಫಿ ಪ್ರಾಜೆಕ್ಟ್‌ ಮಾಡಿದೆ. ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ, ಮುಂಗಾರಿನ ರಾತ್ರಿಗಳಲ್ಲಿ ಮರಗಳು ರೇಡಿಯಂನಂತೆ ಹೊಳೆಯುತ್ತವೆ. ಅದನ್ನು ಅಷ್ಟಾಗಿ ಯಾರೂ ನೋಡಿಲ್ಲ.

ನೋಡಿದವರೂ ಅದರ ಛಾಯಾಗ್ರಹಣ ಮಾಡಿರಲಿಲ್ಲ. ಈ ವಿಷಯದ ಕುರಿತು ನಾವು ಎರಡು ವರ್ಷ ಅಧ್ಯಯನ ನಡೆಸಿ, ಅಲ್ಲಿಗೆ ಹೋಗಿ ಛಾಯಾಗ್ರಹಣ ಮಾಡಿದೆವು. ಹಾಗೆಯೇ ಅದರ ಕುರಿತಾಗಿ ಐದು ನಿಮಿಷಗಳ ವಿಡಿಯೊ ಸಾಕ್ಷ್ಯಚಿತ್ರವನ್ನೂ ರೂಪಿಸಿದೆವು.

2015ರಲ್ಲಿ ಗೆಳೆಯರಾದ ಶಿವ ಅವರೊಟ್ಟಿಗೆ ಸೇರಿ ಗುಹೆಗಳ ಛಾಯಾಗ್ರಹಣ ಮಾಡಿದೆ. ಭಾರತದಲ್ಲಿ ಪ್ರವಾಸಿ ಕ್ಷೇತ್ರಗಳನ್ನು ಹೊರತುಪಡಿಸಿದರೆ ಗುಹೆಗಳ ಫೋಟೊಗ್ರಫಿ ಮಾಡಿರುವುದು ಕಡಿಮೆಯೇ.

ನಾವು ಮೇಘಾಲಯಕ್ಕೆ ತೆರಳಿ ಇದುವರೆಗೆ ಯಾರೂ ಫೋಟೊಗ್ರಫಿ ಮಾಡದಿರುವ ಬೃಹತ್‌ ಗುಹೆಗಳಿಗೆ ಹೋಗಿ, ಅದರ ಒಳಗಿನ ಬಣ್ಣ–ವಿನ್ಯಾಸಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆವು. ಹಾಗೆಯೇ ಇದರದ್ದೂ ಏಳು ನಿಮಿಷಗಳ ಸಾಕ್ಷ್ಯಚಿತ್ರ ಮಾಡಿದೆವು.  ಇದು ನಮ್ಮ ‘ಅನ್‌ಸೀನ್‌ ಲ್ಯಾಂಡ್‌ಸ್ಕೇಪ್‌’ ಸರಣಿಯ ಮೂರನೇ ಯೋಜನೆ.

ಈ ಮಧ್ಯೆ ನಾವೊಂದಿಷ್ಟು ಜನ ಸಮಾನ ಮನಸ್ಕ ಸ್ನೇಹಿತರು ಸೇರಿಕೊಂಡು ‘ಲ್ಯಾಂಡ್‌ಸ್ಕೇಪ್‌ ವಿಝಾರ್ಡ್ಸ್‌’ ಎಂಬ ಸಂಸ್ಥೆಯನ್ನು ಕಟ್ಟಿಕೊಂಡಿದ್ದೇವೆ. ಪ್ರತಿವರ್ಷವೂ ಒಂದೊಂದು ಅನ್‌ಸೀನ್‌ ಲ್ಯಾಂಡ್‌ಸ್ಕೇಪ್‌ ಫೊಟೊಗ್ರಫಿ ಮಾಡುವುದು ನಮ್ಮ ಉದ್ದೇಶ.

ಕಳೆದ ವರ್ಷ ಫೈರಿ ಲ್ಯಾಂಡ್‌ಸ್ಕೇಪ್‌ ಮಾಡಿದೆವು. ಗುಜರಾತ್‌ನ ಬನ್ನಿ ಹುಲ್ಲುಗಾವಲು ಪ್ರದೇಶದಲ್ಲಿ ರಾತ್ರಿ ಭೂಮಿಯಿಂದ ಬೆಂಕಿಯುಂಡೆಗಳು ಉದ್ಭವಿಸುವಂತೆ ಕಾಣುತ್ತದೆ.

ನಮ್ಮ ಗುಂಪಿನ ಎಲ್ಲ ಭೂದೃಶ್ಯ ಫೋಟೊಗ್ರಾಫರ್‌ಗಳೂ ಅಲ್ಲಿಗೆ ಹೋಗಿ, ರಾತ್ರಿ ಕುಳಿತು, ಆ ಚಿತ್ರಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದೆವು. ಅಂಥ ಬೆಂಕಿಯ ಒಂದು ಅಸ್ಪಷ್ಟ ಚಿತ್ರ ಸಿಕ್ಕಿತು ನಮಗೆ. ಅಂದಹಾಗೆ, ಅದು  ನಿಜವಾಗಲೂ ಬೆಂಕಿಯುಂಡೆಯೇ ಎಂಬ ಬಗ್ಗೆ ನಮಗೆ ಖಚಿತತೆ ಇಲ್ಲ. ಆದರೆ ಅದರ ಕುರಿತು ನಾವು ಮಾಡಿದ ಸಂಶೋಧನೆಗಳು, ನಮ್ಮ ಅನುಭವಗಳನ್ನು ಆಧರಿಸಿಯೇ ಹತ್ತು ನಿಮಿಷದ ಒಂದು ಸಾಕ್ಷ್ಯಚಿತ್ರವನ್ನು ತಯಾರಿಸಿದೆವು.

‘ಅನ್‌ಸೀನ್‌’ ಅನ್ನುವುದರ ಕುರಿತು ನನಗೆ ಯಾವಾಗಲೂ ಆಸಕ್ತಿ. ನನ್ನ ವೃತ್ತಿಯೂ ಡೇಟಾ ವಿಶ್ಲೇಷಣೆಗೆ ಸಂಬಂಧಿಸಿದ್ದು. ಅಲ್ಲಿಯೂ ಹೊಸ ಸಂಗತಿ, ವಿನ್ಯಾಸಗಳನ್ನು ಹುಡುಕುವುದು ನನ್ನ ಕೆಲಸ. ಅದು ನನಗೆ ತುಂಬ ಇಷ್ಟದ ಕೆಲಸವೂ ಹೌದು. ಅದೇ ನನ್ನ ಪ್ರವೃತ್ತಿಯಲ್ಲಿಯೂ ಮುಂದುವರಿದಿದೆ.

ಗೋಚರವಾಗಿಲ್ಲದ್ದನ್ನು ತೋರಿಸಿದಾಗಲೇ ಜನರಿಗೆ ಆಸಕ್ತಿ ಹುಟ್ಟುವುದು. ಈಗಾಗಲೇ ನೋಡಿರುವ ಚಿತ್ರಗಳನ್ನೇ ಮತ್ತೆ ಮತ್ತೆ ತೋರಿಸಿದರೆ ಯಾರಿಗೆ ಕುತೂಹಲ ಹುಟ್ಟುತ್ತದೆ? ‘ಅನ್‌ಸೀನ್‌’ ಕ್ಷೇತ್ರದಲ್ಲಿ ನನ್ನ ಗುರುತು ಗಟ್ಟಿಕೊಳ್ಳುವುದೂ ಇಂಥ ವಿಭಿನ್ನ ಪ್ರಯತ್ನಗಳಿಂದಲೇ. ಛಾಯಾಗ್ರಾಹಕರಾಗಿ ನಮ್ಮ ಸಾಮರ್ಥ್ಯಕ್ಕೂ ಅವು ಸವಾಲೊಡ್ಡುತ್ತವೆ.

ಸಾಮಾನ್ಯವಾಗಿ ಫೋಟೊಗ್ರಫಿ ಎಂದರೆ ಅದೊಂದು ತಾಂತ್ರಿಕ ಸಂಗತಿ ಎಂದೇ ಅನೇಕರು ಅಂದುಕೊಳ್ಳುತ್ತಾರೆ. ಅದನ್ನು ಎರಡು ರೀತಿ
ನೋಡಬಹುದು. ಚಿತ್ರವೇ ಮುಖ್ಯ ಎಂದಾದಲ್ಲಿ ತಾಂತ್ರಿಕತೆ ಹೆಚ್ಚು ಮಹತ್ವ ಗಳಿಸುತ್ತದೆ.

ಅದರಾಚೆಯ ವಿವರಗಳು ಅಷ್ಟೊಂದು ಮಹತ್ವದ್ದು ಎನಿಸುವುದಿಲ್ಲ. ನನ್ನ ವೈಯಕ್ತಿಕ ನಂಬಿಕೆಯೆಂದರೆ, ಆ ಥರದ ಚಿತ್ರಗಳು ಜನರ ಮನಸ್ಸಿನಲ್ಲಿ ಹೆಚ್ಚು ಸಮಯ ಇರುವುದಿಲ್ಲ. ನೋಡಿ ‘ವಾವ್‌! ಚೆನ್ನಾಗಿದೆ’ ಎಂದು ಉದ್ಘರಿಸಿ ಮರೆತುಬಿಡುತ್ತಾರೆ. ಆದರೆ ಜನರ ಮನಸ್ಸಲ್ಲಿ ಉಳಿಯುವುದು ಚಿತ್ರದ ಹಿಂದಿನ ಕಥೆ.

ಚಿತ್ರಕ್ಕೆ ಅನನ್ಯತೆ ಒದಗುವುದು ಅದರ ಹಿಂದಿನ ಕಥೆಯಿಂದ. ಜನರ ಹೃದಯದಲ್ಲಿ ಚಿತ್ರ ಉಳಿದುಕೊಳ್ಳುವುದೂ ಕಥೆಯಿಂದಲೇ. ಒಂದೊಮ್ಮೆ ಕಥನ ಸಶಕ್ತವಾಗಿದ್ದು, ತಾಂತ್ರಿಕವಾಗಿ ಚಿತ್ರ ಕೊಂಚ ದುರ್ಬಲವಾಗಿದ್ದರೂ ಅದು ಮರೆಮಾಚಿಬಿಡುತ್ತದೆ. ನನ್ನ ಪ್ರಕಾರ ಛಾಯಾಗ್ರಹಣದಲ್ಲಿ ಚಿತ್ರದ ತಾಂತ್ರಿಕತೆಗಿಂತ ಕಥೆಯೇ ಮುಖ್ಯ. ಈ ಕಥನ ಮತ್ತು ತಾಂತ್ರಿಕತೆ ಎರಡೂ ಸಮಪ್ರಮಾಣದಲ್ಲಿ ಮೇಳೈಸಿದಾಗ ಅದ್ಭುತ ಛಾಯಾಚಿತ್ರ ಸೃಷ್ಟಿಯಾಗುತ್ತದೆ.

ಶ್ರೀಹರ್ಷ ಗಂಜಾಂ
‘ಛಾಯಾಗ್ರಹಣ ಎನ್ನುವುದು ಕಥನ ಒರೆಯುವ ಮಾಧ್ಯಮ’ ಎಂದು ನಂಬಿರುವ ಶ್ರೀಹರ್ಷ ಗಂಜಾಂ ಅವರಿಗೆ ಯಾರೂ ಕಂಡಿರದ ಭೂದೃಶ್ಯ ಚಿತ್ರಗಳನ್ನು ತೆಗೆಯುವುದರಲ್ಲಿ ವಿಶೇಷ ಆಸಕ್ತಿ.

ಹಲವು ಸಮಾನ ಮನಸ್ಕರೊಟ್ಟಿಗೆ ಸೇರಿ ‘ಲ್ಯಾಂಡ್‌ಸ್ಕೇಪ್‌ ವಿಝಾರ್ಡ್‌’ ಎಂಬ ಸಂಸ್ಥೆಯನ್ನು ರೂಪಿಸಿರುವ ಅವರು, ಅದರ ಮೂಲಕ ಭೂದೃಶ್ಯ ಛಾಯಾಗ್ರಹಣದ ಕುರಿತು ಜನರಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಸದ್ಯಕ್ಕೆ ಬೆಂಗಳೂರಿನಲ್ಲಿ ‘ಅಡೋಬ್‌’ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಂತ್ರಿಕತೆ ಮತ್ತು ಜೀವಂತಿಕೆ ಎರಡೂ ಅಂಶಗಳು ವಿಶಿಷ್ಟ ಹದದಲ್ಲಿ ಸಂಯೋಗಗೊಳ್ಳುವ ಶ್ರೀಹರ್ಷ ಅವರ ಚಿತ್ರಗಳನ್ನು landscape-wizards.comನಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT