ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಲ್‌, ಮಾಳವೀಯರಿಗೆ ಭಾರತ ರತ್ನ

Last Updated 24 ಡಿಸೆಂಬರ್ 2014, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಹಿಂದೂ ರಾಷ್ಟ್ರೀ­ಯತೆಯ ಪ್ರತಿಪಾದಕ­ರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ ಮೋಹನ ಮಾಳವೀಯ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಗುರುವಾರ ಈ ಇಬ್ಬರೂ ಮುತ್ಸದ್ದಿ­ಗಳ ಹುಟ್ಟುಹಬ್ಬದ ದಿನವಾಗಿದೆ. ಬಿಜೆಪಿ ಹಿರಿಯ ನಾಯಕ ವಾಜಪೇಯಿ ಅವರ 90ನೇ  ಹಾಗೂ ಮಾಳವೀಯ ಅವರ 153ನೇ ಹುಟ್ಟುಹಬ್ಬ ಇದಾಗಿದೆ.

‘ಪಂಡಿತ ಮದನ ಮೋಹನ ಮಾಳವೀಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂಬು­ದನ್ನು ತಿಳಿಸಲು ಸಂತಸವಾಗುತ್ತಿದೆ’ ಎಂದು ರಾಷ್ಟ್ರಪತಿ ಭವನವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಈ ಹೆಮ್ಮೆಯ ಪ್ರಶಸ್ತಿಗೆ ಇದುವರೆಗೂ ಪಾತ್ರರಾ­ದ­ವರ ಸಂಖ್ಯೆ 45ಕ್ಕೆ ಏರಿದೆ.

ಆಯ್ಕೆ ಹೇಗೆ?
ಪ್ರಧಾನಿಯಾದವರು ಭಾರತ ರತ್ನ ಪ್ರಶಸ್ತಿಗೆ ಹೆಸರನ್ನು ಸೂಚಿಸಿ ರಾಷ್ಟ್ರಪತಿ ಅವರಿಗೆ ಕಳುಹಿಸು­ತ್ತಾರೆ. ರಾಷ್ಟ್ರಪತಿ ಅವರು ಅಂಕಿತ ಹಾಕಿದ ನಂತರ ಪುರಸ್ಕೃತರ ಹೆಸರನ್ನು ಅಧಿ­ಕೃತ­­­ವಾಗಿ ಪ್ರಕಟಿಸಲಾಗುತ್ತದೆ. ಈ ಪ್ರಶಸ್ತಿ ಜತೆ ಯಾವುದೇ ನಗದು ಪುರಸ್ಕಾರ ಇರುವುದಿಲ್ಲ. ಪ್ರಶಸ್ತಿ ಪತ್ರ ಹಾಗೂ ಅರಳಿ ಎಲೆ ಆಕಾರದ ಪದಕವನ್ನು ನೀಡಲಾ­ಗುತ್ತದೆ. ಈ ಪ್ರಶಸ್ತಿ ಸ್ಥಾಪನೆ­ಯಾಗಿದ್ದು 1954ರ ಜನವರಿ 2ರಂದು.
* * *

ದೇಶದ ಇಬ್ಬರು ಹೆಸರಾಂತ ಕಟ್ಟಾಳುಗಳಿಗೆ ಈ ಪ್ರಶಸ್ತಿ ಸಂದಿರುವುದು ಅವರು ಸಲ್ಲಿಸಿದ ಸೇವೆಗೆೆ ಸೂಕ್ತ ಗೌರವವಾಗಿದೆ
– ಪ್ರಧಾನಿ ನರೇಂದ್ರ ಮೋದಿ
 

* ಶಿಕ್ಷಣ ತಜ್ಞ ಮದನ ಮೋಹನ ಮಾಳವೀಯ ಅವರ 153ನೇ ಜನ್ಮ ವರ್ಷ

* ಮುಖ್ಯ ಸಾಧನೆ: ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆ
* 1861ರ ಡಿ.25ರಂದು ಜನನ
* ಕೋಲ್ಕತ್ತದಲ್ಲಿ 1886ರಲ್ಲಿ ನಡೆದ ಎರಡನೇ ಕಾಂಗ್ರೆಸ್‌ ಅಧಿವೇಶನದಲ್ಲಿ ಮಾಡಿದ ಸ್ಫೂರ್ತಿದಾಯಕ ಭಾಷಣದಿಂದ ರಾಜಕೀಯ ಜೀವನಕ್ಕೆ ಹೊಸ ತಿರುವು
ಬಲಪಂಥೀಯ ಹಿಂದೂ ಮಹಾಸಭಾದ ಆರಂಭಿಕ ಮುಖಂಡರಲ್ಲಿ ಒಬ್ಬರು

* ಡಿಸೆಂಬರ್‌ 25 ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ 90ನೇ ಜನ್ಮ ದಿನ
* ಭಾರತವನ್ನು ಪರಮಾಣು ಅಸ್ತ್ರ ಹೊಂದಿ­ರುವ ರಾಷ್ಟ್ರ ಎಂದು ಘೋಷಿಸಿ ಇಡೀ ವಿಶ್ವವನ್ನು ನಿಬ್ಬೆರಗಾಗಿಸಿದ ಹೆಗ್ಗಳಿಕೆ
* ಜವಾಹರಲಾಲ್‌ ನೆಹರೂ ಹಾಗೂ ಇಂದಿರಾ ಗಾಂಧಿ ಅವರ ನಂತರದಲ್ಲಿ ದೇಶದ ಹೆಸರಾಂತ ರಾಜಕೀಯ ನಾಯಕರಾಗಿ ಗುರುತಿಸಿಕೊಂಡವರು
* ದೆಹಲಿ ಹಾಗೂ ಪಾಕಿಸ್ತಾನದ ಲಾಹೋರ್‌ ಮಧ್ಯೆ ಜನಸಂಪರ್ಕ ಹೆಚ್ಚಿಸಲು 1999ರ ಫೆಬ್ರುವರಿಯಲ್ಲಿ ಬಸ್‌ ಸೇವೆಗೆ ಚಾಲನೆ (2001ರಲ್ಲಿ ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿ ಬಳಿಕ ಈ ಸೇವೆ ರದ್ದಾಯಿತು)
* 1998ರಿಂದ 2004: ಪ್ರಧಾನಿಯಾಗಿ ಸೇವೆ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT