ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟ್ಲಾಂಟಾದ ಮುಂಭಾಯ್ ಕನೆಕ್ಷನ್

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಜೋಕ್‌ಫಾಲ್ಸ್’, ‘ರ್‍್ಯಾಂಬೊ’ದಂತಹ ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಅಟ್ಲಾಂಟಾ ನಾಗೇಂದ್ರ ಅವರು ಎರಡು ವರ್ಷಗಳ ಬಿಡುವಿನ ನಂತರ ಮತ್ತೆ ಚಿತ್ರರಂಗದತ್ತ ತಲೆ ಹಾಕಿದ್ದಾರೆ. ಆದರೆ ಈ ಬಾರಿ ಅವರು ನಿರ್ಮಾಪಕರಲ್ಲ. ನಿರ್ದೇಶಕನೆಂಬ ಹಣೆಪಟ್ಟಿಯೊಂದಿಗೆ ಬಂದಿದ್ದಾರೆ.

ಎರಡು ಕನ್ನಡ ಚಿತ್ರಗಳನ್ನು ನಿರ್ಮಿಸಿದ ಅವರು ಈಗ ‘ಮುಂಭಾಯ್ ಕನೆಕ್ಷನ್’ ಎಂಬ ಹಿಂದಿ ಚಿತ್ರದ ನಿರ್ದೇಶಕರು. ಈ ಚಿತ್ರ ಆಗಸ್ಟ್ 22ರಂದು ತೆರೆಕಾಣುತ್ತಿದೆ. ಅರೇ, ‘ಮುಂಬೈ’ ಎಂದು ಬರೆಯಬೇಕಾದ್ದನ್ನು ತಪ್ಪಾಗಿ ‘ಮುಂಭಾಯ್’ ಎಂದು ಬರೆಯಲಾಗಿದೆ ಅಂದುಕೊಳ್ಳಬೇಡಿ. ಚಿತ್ರದ ಹೆಸರು ಇರುವುದೇ ಹಾಗೆ. ಆ ಬಗ್ಗೆ ನಿರ್ದೇಶಕರೇ ವಿವರಣೆ ನೀಡುತ್ತಾರೆ.

*ಚಿತ್ರದ ಹೆಸರು ವಿಭಿನ್ನವಾಗಿದೆಯಲ್ಲ?
ಹೌದು. ಚಿತ್ರದಲ್ಲಿ ಅಂಡರ್‌ವರ್ಲ್ಡ್‌ ಮಾಫಿಯಾ ವಿಚಾರಗಳು ಇರುವುದರಿಂದ ‘ಭಾಯ್’ ಎಂದು ಉಚ್ಚಾರ ಬರುವಂತೆ ಶೀರ್ಷಿಕೆ ನೀಡಿದ್ದೇನೆ. ಮಾಫಿಯಾ ಜಗತ್ತಿನಲ್ಲಿ ‘ಭಾಯ್’ ಎಂಬುದು ತುಂಬಾ ಪ್ರಚಲಿತದಲ್ಲಿದೆ; ಅದಕ್ಕಾಗಿ. ಚಿತ್ರದಲ್ಲಿ ಮಾಫಿಯಾ ಗ್ಯಾಂಗ್‌ ಲೀಡರ್‌ನನ್ನು ಭಾಯ್ ಎಂದು ಸಂಬೋಧಿಸಲಾಗುತ್ತದೆ.

*ಕನ್ನಡದಿಂದ ಹಿಂದಿಗೆ ಹಾರಿದ್ದು ಯಾಕೆ?
ನಾನು ಯಾವತ್ತಿದ್ದರೂ ಕನ್ನಡಿಗ. ಕನ್ನಡ ಚಿತ್ರವನ್ನು ಮಾಡಬೇಕೆಂದು ಮನಸು ಈಗಲೂ ತುಡಿಯುತ್ತದೆ. ಆದರೆ ಈ ಚಿತ್ರದಲ್ಲಿ ಮಾಫಿಯಾ ಮೇಲಾಟವಿರುವುದರಿಂದ ಹಿಂದಿಯಲ್ಲಿ ನಿರ್ದೇಶನ ಮಾಡಲು ತೀರ್ಮಾನಿಸಿದೆ. ಮಾಫಿಯಾ ಜಗತ್ತನ್ನು ಚಿತ್ರಿಸಲು ಮತ್ತು ಆ ಜಗತ್ತಿನ ಭಾಷೆಯನ್ನು ದುಡಿಸಿಕೊಳ್ಳಲು ಕನ್ನಡಕ್ಕಿಂತ ಹಿಂದಿ ಸಮರ್ಥವಾಗಿದೆ ಅನ್ನಿಸಿತು. ಕೆಲವು ಶಬ್ದಗಳನ್ನು ಹಿಂದಿಯಲ್ಲಿ ಕೇಳಿದಾಗ ಮಾತ್ರ ಅದರ ‘ತಾಕತ್’ ಅರಿವಾಗುತ್ತದೆ.

*ಚಿತ್ರದ ಬಗ್ಗೆ ಹೇಳಿ?
ಚಿತ್ರ ಅಟ್ಲಾಂಟಾದಲ್ಲಿ ಆರಂಭವಾಗುತ್ತದೆ. ಒಂದು ಐಟಿ ಕಂಪೆನಿ. ಈ ಕಂಪೆನಿಯನ್ನು ಮಾಫಿಯಾದವರು ನಡೆಸಿದರೆ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಎಳೆಎಳೆಯಾಗಿ ಹೇಳಿದ್ದೇನೆ. ಅಟ್ಲಾಂಟಾದ ಲೋಕಲ್ ಮಾಫಿಯಾ ಹೇಗೆ ಕೆಲಸ ಮಾಡುತ್ತದೆ ಎಂಬುದು ಚಿತ್ರದ ಪ್ರಮುಖ ಅಂಶ. ಅದರಲ್ಲಿ ಇಟಲಿ, ರಷ್ಯಾ, ಸ್ಪ್ಯಾನಿಷ್ ದೇಶಗಳ ಮಾಫಿಯಾ ಕೈವಾಡವಿರುತ್ತದೆ.

ಅದಕ್ಕೆ ಮುಂಬೈನ ಕನೆಕ್ಷನ್ ಕೂಡ ಇದೆ. ಇಲ್ಲಿ ತಿಳಿ ಹಾಸ್ಯ, ಪ್ರೇಮ, ಥ್ರಿಲ್, ಕ್ರೈಂ ಎಲ್ಲ ಇದೆ. ಮುಂದೇನಾಗುತ್ತದೆ ಎಂಬ ಕುತೂಹಲದೊಂದಿಗೆ ಚಿತ್ರ ಸಾಗುತ್ತದೆ. ಮುಕ್ತಾಯ ಕೂಡ ಅಟ್ಲಾಂಟಾದಲ್ಲೇ. ಅರ್ಧಕ್ಕರ್ಧ ಕಲಾವಿದರು ಅಮೆರಿಕನ್ನರೇ. ಶ್ರೀನಿವಾಸ್ ಎಂಬ ಕನ್ನಡಿಗ ಚಿತ್ರದಲ್ಲಿದ್ದಾರೆ.

*ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದೀರಿ?
ಚಿತ್ರದ ನಾಯಕ ಅಮೆರಿಕದ ಸುಶಿಕ್ಷಿತ ಯುವಕ. ಆದರೆ ಸೇಲ್ಸ್‌ಮನ್ ಕೆಲಸಕ್ಕೆ ಸೇರುವ ಆತನಿಗೆ ಸಂಬಳ ಇರುವುದಿಲ್ಲ. ಬರುವ ಕಮಿಷನ್ ಸಾಲುವುದಿಲ್ಲ. ಅವನು ಆ ಕೆಲಸ ಕಳೆದುಕೊಂಡಾಗ ಯಾರೋ ಒಬ್ಬರು ಕಾಸು ಕೊಟ್ಟು ಕೆಲಸವನ್ನೂ ಕೊಡುತ್ತಾರೆ. ಅಲ್ಲಿ ಮಾಫಿಯಾ ಜಗತ್ತಿನ ಪರಿಚಯವಾಗುತ್ತದೆ. ಅಲ್ಲಿಂದ ಅವನ ಇಷ್ಟಕ್ಕೆ ವಿರುದ್ಧವಾಗಿ ಆ ಜಗತ್ತಿನಲ್ಲಿ ತೊಡಗುತ್ತಾನೆ.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಮನುಷ್ಯನಿಗೆ ಒತ್ತಡ ಬಂದಾಗ ಒಂದಲ್ಲ ಒಂದು ರೀತಿಯಲ್ಲಿ ಕ್ರಿಯಾಶೀಲನಾಗೇ ಆಗುತ್ತಾನೆ. ಬದುಕುವುದಕ್ಕಾಗಿ ಏನಾದರೂ ಮಾಡೇ ಮಾಡುತ್ತಾನೆ. ಯಾವುದೇ ವ್ಯಕ್ತಿ ಜೀವನದಲ್ಲಿ ಗೆಲ್ಲುತ್ತಾನೆ ಎಂಬ ಧನಾತ್ಮಕ ಅಂಶದೊಂದಿಗೆ ಚಿತ್ರ ಮುಗಿಯುತ್ತದೆ.

*ಚಿತ್ರೀಕರಣದ ಬಗ್ಗೆ?
‘ಮುಂಭಾಯ್ ಕನೆಕ್ಷನ್’ ಹಿಂದಿ ಚಿತ್ರವೇನೋ ಹೌದು. ಆದರೆ ಚಿತ್ರದ ಒಂದು ತುಣುಕು ಕೂಡ ಭಾರತದ ನೆಲದಲ್ಲಿ ಚಿತ್ರೀಕರಣವಾಗಿಲ್ಲ. ಸಂಪೂರ್ಣವಾಗಿ ಅಮೆರಿಕದಲ್ಲಿಯೇ ನಿರ್ಮಾಣವಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ. ಭಾರತದಲ್ಲಿ ಅಳವಡಿಸಿದ್ದು ಸಂಗೀತ ಮಾತ್ರ. ಕನ್ನಡದ ಸಂಗೀತ ನಿರ್ದೇಶಕ ಸ್ಟೀಫನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಶೇ 80ರಷ್ಟು ಸಂಭಾಷಣೆಗಳು ಹಿಂದಿ. ಉಳಿದದ್ದು ಇಂಗ್ಲಿಷ್‌ನಲ್ಲಿ ಇವೆ. ಶನಿವಾರ, ಭಾನುವಾರಗಳಲ್ಲಿ ಮಾತ್ರ ಚಿತ್ರೀಕರಣಕ್ಕೆ ಸಮಯ ಸಿಗುತ್ತಿತ್ತು. ಹೀಗಾಗಿ ಸುಮಾರು ಎಂಟು ತಿಂಗಳು ಬೇಕಾಯಿತು. ಅಮೆರಿಕದಲ್ಲೂ ಚಿತ್ರ ಬಿಡುಗಡೆ ತಯಾರಿ ನಡೆದಿದೆ.

*ಹಾಸ್ಯದಿಂದ ಥ್ರಿಲ್ಲರ್‌ನತ್ತ ಪಯಣ ಸಾಗಿತಲ್ಲಾ?
ನಾನು ‘ಸತ್ಯ’, ‘ಗಾಡ್ ಫಾದರ್‌’ಗಳಂತಹ ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಅವುಗಳಿಂದ ಪ್ರೇರಿತನಾಗಿದ್ದೇನೆ. ಅದರಲ್ಲಿ ಮಾಫಿಯಾವನ್ನು ಹೇಗೆಲ್ಲ ತೋರಿಸಿದ್ದಾರೆ. ಹಾಗೆಯೇ ಐಟಿ ಉದ್ಯಮದ ಮೇಲೂ ಹಲವು ಚಿತ್ರಗಳು ಬಂದುಹೋಗಿವೆ. ಆದರೆ ಈ ಎರಡೂ ಕ್ಷೇತ್ರಗಳನ್ನು ಬೆಸೆದು ಹೆಣೆದ ಕಥೆಗಳು ಇನ್ನೂ ಬಂದಿಲ್ಲ. ಆ ಪ್ರಯತ್ನವನ್ನು ನಾನು ನನ್ನದೇ ಶೈಲಿಯಲ್ಲಿ ಮಾಡಿದ್ದೇನೆ.

*ಒಂದೇ ಹಾಡು ಇದೆಯಲ್ಲ?
ಅಮೆರಿಕದ ಚಿತ್ರಗಳಲ್ಲಿ ಹಾಡುಗಳಿರುವುದಿಲ್ಲ. ಭಾರತದ ಚಿತ್ರಗಳಲ್ಲಿ ಸರಾಸರಿ 5-6 ಹಾಡುಗಳು ಇದ್ದೇ ಇರುತ್ತವೆ. ಆದರೆ ನನ್ನ ಚಿತ್ರಕ್ಕೆ ಅಗತ್ಯ ಇದ್ದಿದ್ದು ಒಂದೇ ಹಾಡು. ಅದೂ ಕೂಡ ಆ ಹಾಡು ಇಲ್ಲದೇ ಚಿತ್ರದ ಕಥೆಯೇ ಮುಂದುವರಿಯುವುದಿಲ್ಲ. ಚಿತ್ರಕ್ಕೆ ಹಾಡಿನೊಂದಿಗೆ ತೀವ್ರ ‘ಕನೆಕ್ಷನ್’ ಇದೆ. ಅನಾವಶ್ಯಕವಾಗಿ ಹಾಡು ತುರುಕಿಲ್ಲ.

*ಗುಂಡುಗಳ ಸದ್ದು ಜೋರಾಗೇ ಇದೆ?
ಹೌದು. ಮಾಫಿಯಾ ಜಗತ್ತು ಎಂದ ಮೇಲೆ ಅಲ್ಲಿ ಗುಂಡುಗಳೇ ಮಾತಾಡುತ್ತವೆ. ಆದರೆ ಎಲ್ಲಿಯೂ ಕ್ರೌರ್ಯದ ವೈಭವೀಕರಣ ಮಾಡಿಲ್ಲ. ಶೂಟ್ ಮಾಡುವುದನ್ನು ತೋರಿಸಿದ್ದೇನೆ, ಸಾವನ್ನು ತೋರಿಸಿಲ್ಲ. ಅಶ್ಲೀಲತೆಯನ್ನಂತೂ ನನ್ನ ಚಿತ್ರದಿಂದ ನಿರೀಕ್ಷಿಸುವಂತೆಯೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT