ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಗೆ ಔಷಧ ಸುಲಭ ಸಿಂಪಡಣೆಗೆ

ಹೊಸ ಹೆಜ್ಜೆ-10
Last Updated 27 ಜೂನ್ 2016, 19:30 IST
ಅಕ್ಷರ ಗಾತ್ರ

ಅನುಭವವೇ ಆವಿಷ್ಕಾರದ ತಾಯಿ. ಕೃಷಿಕ ಸುಬ್ರಹ್ಮಣ್ಯ ಹೆಗಡೆ ಅವರ ವಿಷಯದಲ್ಲಿ ಇದು ಸುಳ್ಳಾಗಿಲ್ಲ. ಆಗಿನ್ನೂ ಮುಂಗಾರು ಶುರುವಷ್ಟೆ.

ಬಿಸಿಲು ಮಳೆ ಆಟದಲ್ಲಿ ಅಡಿಕೆ ಗೊನೆಗಳಿಗೆ ಕೊಳೆರೋಗ ಆವರಿಸುವ ಆತಂಕ. ಮದ್ದು ಹೊಡೆಯುವ ಕೊನೆಗೌಡರಿಗೆ ಕರೆ ಮಾಡಿದರೆ ನಿತ್ಯವೂ ‘ನಾಳೆ ಮುದ್ದಾಂ ಬರುವೆ’ ಎಂಬ ಭರವಸೆ. ಕೊನೆಗೌಡರಿಗೆ ಕಾದು ಸುಸ್ತಾದ ಹೆಗಡೆಯವರಿಗೆ ಹೊಳೆದ ಉಪಾಯ ಒಂದು ವರ್ಷದಲ್ಲಿ ‘ಅರೇಕಾ ಪುಲ್ಲಿ ಕ್ಲೈಂಬರ್’ ಸಾಧನವಾಗಿ ಹೊರಹೊಮ್ಮಿದೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹೆಗಡೆಕಟ್ಟಾದ ಕೃಷಿಕ ಸುಬ್ರಹ್ಮಣ್ಯ ಹೆಗಡೆ ಅವರು ನೆಲದಲ್ಲಿಯೇ ನಿಂತು ಅಡಿಕೆ ಮರದ ತುದಿಯಲ್ಲಿರುವ ಗೊನೆಗಳಿಗೆ ಬೋರ್ಡೊ ದ್ರಾವಣ (ಮೈಲುತುತ್ತ ಮತ್ತು ಸುಣ್ಣದ ಮಿಶ್ರಣ) ಸಿಂಪರಣೆ ಮಾಡುವ ಸರಳ ಸಾಧನ ಅಭಿವೃದ್ಧಿಪಡಿಸಿದ್ದಾರೆ.

20 ಅಡಿ ಉದ್ದದ ಮೂರು ಪ್ರತ್ಯೇಕ ಅಲ್ಯುಮಿನಿಯಂ ಪೈಪ್‌ಗಳು, ಅವನ್ನು ಜೋಡಿಸಿ ಅದರ ತುದಿಯಲ್ಲಿ ಇನ್ನೊಂದು ಚಿಕ್ಕ ಪೈಪ್‌ ಇಟ್ಟು ಅದಕ್ಕೆ ಮದ್ದು ಹೊಡೆಯುವ ಸ್ಪ್ರೇಯರ್‌  ಅಳವಡಿಸಿದ್ದಾರೆ. ನೀರೆತ್ತುವ ಗಡಗಡೆಯ ಮಾದರಿಯಲ್ಲಿ ಪೈಪ್‌ಗಳ ನಡುವೆ ಸಣ್ಣ ಚಕ್ರಗಳನ್ನು ಸೇರಿಸಿದ್ದರಿಂದ ನೈಲಾನ್‌ ಹಗ್ಗ ಜಗ್ಗಿದರೆ ಸುಲಭವಾಗಿ ಪೈಪ್‌ಗಳು ಮೇಲಕ್ಕೇರಿ ಒಂದರ ಮೇಲೊಂದು ಜೋಡಣೆಯಾಗುತ್ತವೆ.

ಸುಮಾರು 75 ಅಡಿ ಎತ್ತರದವರೆಗಿನ ಅಡಿಕೆ ಮರಗಳಿಗೆ ನೆಲದ ಮೇಲೆಯೇ ನಿಂತು ಔಷಧ ಸಿಂಪರಣೆ ಮಾಡುವಂಥ ಸಾಧನ ಸಿದ್ಧಪಡಿಸಲಾಗಿದೆ. ಒಂದೇ ಜಾಗದಲ್ಲಿ ನಿಂತು 360 ಡಿಗ್ರಿ ಸುತ್ತಳತೆಯಲ್ಲಿರುವ 15–16 ಮರಗಳ ಗೊನೆಗಳಿಗೆ ಈ ಸಾಧನದಿಂದ ಮದ್ದು ಹೊಡೆಯಬಹುದು.

‘ಅಡಿಕೆ ಮರವೇರಿ ಗೊನೆಗಳಿಗೆ ಔಷಧ ಹೊಡೆಯಲು ಪರಿಣತಿ ಬೇಕು. ಯುವ ತಲೆಮಾರಿನ ಜನರು ಈ ಕೌಶಲವನ್ನು ಅಷ್ಟಾಗಿ ಕರಗತ ಮಾಡಿಕೊಂಡಿಲ್ಲ. ಹೀಗಾಗಿ ಭವಿಷ್ಯದಲ್ಲಿ ಕೊನೆಗೌಡರ ಅಲಭ್ಯತೆ ಅಡಿಕೆ ಬೆಳೆಗಾರರಿಗೆ ಕಾಡುವುದು ಖಚಿತ. ಈಗಲೇ ಕೊನೆಗೌಡರು ಸರಿಯಾದ ಸಮಯಕ್ಕೆ ಸಿಗದೇ ಮದ್ದು ಹೊಡೆಸಲು ಆಗದ ಅನುಭವಗಳಾಗಿವೆ. ನನಗೂ ಆದ ಈ ಅನುಭವ ಸರಳ ಸಾಧನ ಸಿದ್ಧಪಡಿಸಲು ಪ್ರೇರಣೆ’ ಎನ್ನುತ್ತಾರೆ ಬಿ.ಎಸ್ಸಿ ಪದವೀಧರ ಸುಬ್ರಹ್ಮಣ್ಯ ಹೆಗಡೆ.

‘ಎರಡು ವರ್ಷಗಳ ಹಿಂದೆ ಸಿದ್ಧಪಡಿಸಿದ್ಧ ಸಾಧನದಲ್ಲಿ ಎರಡು ಬಗೆಗಳಿದ್ದವು. ಕಾಳುಮೆಣಸು ಬಳ್ಳಿ ಹಬ್ಬಿರುವ ಮರಗಳು ಹಾಗೂ ಕಾಳುಮೆಣಸು ಬಳ್ಳಿ ರಹಿತ ಮರಗಳಿಗೆ ಪ್ರತ್ಯೇಕ ಯಂತ್ರಗಳನ್ನು ರೂಪಿಸಿದ್ದೆ. ಈಗ ಅದನ್ನು ಇನ್ನಷ್ಟು ಪರಿಷ್ಕರಿಸಿ ಒಂದೇ ಯಂತ್ರವನ್ನು ಎರಡೂ ತರಹದ ಮರಗಳಿಗೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ತಯಾರಿಸಿರುವೆ’ ಎಂದು ಮಾಹಿತಿ ನೀಡುತ್ತಾರೆ.

ಅರೇಕಾ ಪುಲ್ಲಿ ಕ್ಲೈಂಬರ್ ಸಾಧನಕ್ಕೆ ತಗಲುವ ವೆಚ್ಚ ಸುಮಾರು ₹10ಸಾವಿರ. ರೈತರು ಬೇಡಿಕೆಯಿಟ್ಟರೆ ವಿಶೇಷ ಪರಿಶ್ರಮವಹಿಸಿ ಸುಬ್ರಹ್ಮಣ್ಯ ಹೆಗಡೆ ತಾವೇ ಸಿದ್ಧಪಡಿಸಿಕೊಡುತ್ತಾರೆ. ‘ಕೃಷಿ ಕಾರ್ಮಿಕರ ಕೊರತೆ ಕಾಡುವ ಇಂದಿನ ದಿನಗಳಲ್ಲಿ ಯಾಂತ್ರೀಕರಣದ ಅವಲಂಬನೆ ಅನಿವಾರ್ಯ.

ಆದರೆ ಇಂತಹ ಯಂತ್ರಗಳನ್ನು ಬಳಸಲು ಅನುಭವ ಇರಬೇಕು. ಹೀಗಾಗಿ ಈ ಹೊಸ ಸಾಧನ ಬಳಸುವ ತರಬೇತಿಯಲ್ಲಿ ಪಾಸಾದವರಿಗಷ್ಟೇ ಸಿದ್ಧಪಡಿಸಿಕೊಡುವೆ’ ಎನ್ನುತ್ತಾರೆ. ಅವರ ಸಂಪರ್ಕಕ್ಕೆ: 08283–244101 (9449412258).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT