ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಕೊಯಿಲು ಈಗ ಬಲು ಸುಲಭ

ಯಂತ್ರಲೋಕ: 4
Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅಡಿಕೆ ಹಾಗೂ ಕೊಳೆರೋಗಕ್ಕೆ ಅವಿನಾಭಾವ ಸಂಬಂಧ. ಮಳೆ ಹೆಚ್ಚಾಯಿತೆಂದರೆ ಕೊಳೆರೋಗದಿಂದ ಟನ್‌ಗಟ್ಟಲೆ ಅಡಿಕೆಗಳು ನೀರುಪಾಲಾಗುತ್ತವೆ. ಸಿಕ್ಕಷ್ಟು ಅಡಿಕೆ ಸಿಗಲೆಂದು ಅದರ ಕೊಯಿಲು ಮಾಡೋಣವೆಂದರೆ ಮಳೆಗಾಲದಲ್ಲಿ ಕಟ್ಟುವ ಪಾಚಿಯಿಂದ ಮರ ಏರುವುದು ಸುಲಭದ ಮಾತಲ್ಲ. ಇದರ ಜೊತೆ ಕೂಲಿಯಾಳುಗಳೂ ಸಿಗುವುದು ಕಷ್ಟ. ಏನಾದರೊಂದು ಔಷಧ ಸಿಂಪಡನೆ ಮಾಡಿ ಅಡಿಕೆ ಗೊನೆಗಳನ್ನು ರಕ್ಷಿಸಿಕೊಳ್ಳಲು ಮುಗಿಲೆತ್ತರ ಇರುವ ಮರ ಏರುವುದು, ಅದೂ ಮಳೆಗಾಲದಲ್ಲಂತೂ ಅಸಂಭವವಾದ ಮಾತು.

ಇವೆಲ್ಲ ಸಂಕಷ್ಟಕ್ಕೆ ಪರಿಹಾರ ಕಂಡುಹಿಡಿದಿದ್ದಾರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೊಣಂದೂರಿನ ಯುವ ಕೃಷಿಕ ಎಂ.ಕೆ.ಕಿರಣ್. ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯೂ, ಅಡಿಕೆ ಮರದ ಕಾಂಡದ ಸುತ್ತಲೂ ಪಾಚಿ ಕಟ್ಟಿದ ಸಂದರ್ಭದಲ್ಲಿಯೂ, ಮಳೆಯ ಅಬ್ಬರದ ನಡುವೆಯೂ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಯಾವುದೇ ಆತಂಕವಿಲ್ಲದೇ ಸರಸರನೆ ಏರಬಹುದಾದ ಉಪಕರಣವಿದು ಎನ್ನುತ್ತಾರೆ ಕಿರಣ್. ಇದಕ್ಕೆ ಸಾಕ್ಷಿಯಾಗಿ ತಮ್ಮ ಪತ್ನಿ ಶರಣ್ಯ ಹಾಗೂ ತಾಯಿ ಜಯಲಕ್ಷ್ಮಿ ಅವರಿಂದಲೇ ಮರವನ್ನು ಹತ್ತಿಸಿ ತೋರಿಸುತ್ತಾರೆ. ಇವರು ಅಭಿವೃದ್ಧಿಪಡಿಸಿರುವ ಈ ಸಾಧನದ ಹೆಸರು ‘ಅರೆಕಾ ಟ್ರೀ ಕ್ಲೈಂಬರ್’. (ಅಡಿಕೆ ಮರ ಏರುವ ಸಾಧನ).

ಅಡಿಕೆ ಮರ ಏರಲು ಈಗಾಗಲೇ ಕೆಲವೊಂದು ಯಂತ್ರಗಳಿವೆ. ಆದರೆ ತಾವು ತಯಾರಿಸಿರುವ ‘ಅರೆಕಾ ಟ್ರೀ ಕ್ಲೈಂಬರ್’ ಇವುಗಳಿಗಿಂತ ಭಿನ್ನ ಎನ್ನುವ ಕಿರಣ್, ಇದರಲ್ಲಿ ಯಾವುದೇ ಅಪಾಯವಿಲ್ಲ ಎನ್ನುತ್ತಾರೆ. ‘ಈಗ ಚಾಲ್ತಿಯಲ್ಲಿ ಇರುವ ಕೆಲವು ಕ್ಲೈಂಬರ್‌ಗಳಿಗೆ ವಿಶೇಷ ಪರಿಣತಿಯ ಅಗತ್ಯವಿದೆ. ಅದರಲ್ಲಿ ಜಾರಿ ಬೀಳುವ ಸಾಧ್ಯತೆಯೂ ಇದೆ, ಇದರಿಂದ ದೇಹಕ್ಕೆ ಭಾರಿ ಹಾನಿಯುಂಟಾಗಬಹುದು. ಆದರೆ ನಾನು ತಯಾರಿಸಿರುವ ಈ ಯಂತ್ರ ಹತ್ತುವಾಗ ಅಕಸ್ಮಾತ್ ಜಾರಿದರೆ, ದೇಹದ ಸಮತೋಲನ ತಪ್ಪಿ ಕೆಳಗೆ ಬೀಳದಂತೆ ಬೆಲ್ಟ್ ರಕ್ಷಣೆ ಒದಗಿಸುತ್ತದೆ’ ಎನ್ನುತ್ತಾರೆ.

ಏರುವುದು ಹೀಗೆ
ಇದರಲ್ಲಿ ಎರಡು ಫ್ರೇಮ್‌ಗಳಿವೆ (ಚೌಕಟ್ಟು). ಸೊಂಟದ ಎತ್ತರಕ್ಕೆ ಒಂದು ಔಕಟ್ಟಿದ್ದರೆ, ಎರಡು ಅಡಿ ಕೆಳಗೆ ಇನ್ನೊಂದು ಇದೆ. ಈ ಎರಡೂ ಚೌಕಟ್ಟುಗಳನ್ನು ಅಡಿಕೆ ಮರಕ್ಕೆ ಹೊಂದಿಸಿಕೊಳ್ಳಬೇಕು. ಮೇಲಿನ ಚೌಕಟ್ಟು ಕುಳಿತುಕೊಳ್ಳಲು ನೆರವಾದರೆ, ಕೆಳಗಿನದ್ದನ್ನು ಮರ ಹತ್ತುವಾಗ ಕಾಲಿನಿಂದ ಮೇಲಕ್ಕೆ ಎಳೆದುಕೊಳ್ಳುತ್ತಿರಬೇಕು. ಕೆಳಗಿನ ಚೌಕಟ್ಟಿನಲ್ಲಿ ನಿಂತು ಮೇಲಿನ ಚೌಕಟ್ಟನ್ನು ಕೈಯಲ್ಲಿ ಮೇಲಕ್ಕೆ ಏರಿಸುತ್ತಿರಬೇಕು. ಪ್ರತಿ ಚೌಕಟ್ಟಿನಲ್ಲಿಯೂ ಮೂರು ರಬ್ಬರ್ ಬುಶ್‌ಗಳಿವೆ. ಮರ ಹತ್ತುವವರು ಕೆಳಕ್ಕೆ ಜಾರದಂತೆ ಈ ಬುಶ್‌ ತಡೆಯುತ್ತದೆ. ಹೀಗೆ ಮರ ಏರುತ್ತಾ ಹೋದರೆ ಒಂದು ಬಾರಿಗೆ ಎರಡು - ಎರಡೂವರೆ ಅಡಿ ಮೇಲಕ್ಕೆ ಹತ್ತಬಹುದು.

ಮರ ಏರುವಾಗ ‘ಸೇಫ್ಟಿ ಬೆಲ್ಟ್’ ಹೆಗಲಿಗೇರಿಸಿಕೊಂಡು ಸೊಂಟದ ಸುತ್ತಲಿನ ಪಟ್ಟಿ ಬಿಗಿದುಕೊಳ್ಳಬೇಕು. ಮರದ ಕಾಂಡದ ಸುತ್ತಳತೆಯಲ್ಲಿ ಹೆಚ್ಚು ವ್ಯತ್ಯಾಸಗಳಿದ್ದಾಗ ಅಡ್ಜಸ್ಟ್ ಮಾಡಿಕೊಳ್ಳುವ ವ್ಯವಸ್ಥೆ ಎರಡೂ ಫ್ರೇಮ್‌ಗಳಲ್ಲಿವೆ. ಸ್ವಲ್ಪ ಅಭ್ಯಾಸವಾದರೆ ಮರ ಏರಿದ ನಂತರವೂ ಈ ಅಡ್ಜಸ್ಟ್‌ ಮಾಡಿಕೊಳ್ಳಬಹುದು.

ತರಬೇತಿ ಅವಶ್ಯಕತೆಯಿಲ್ಲ
ಈ ಯಂತ್ರದ ಮೂಲಕ ಮರವೇರಲು ಹೆಚ್ಚಿನ ತರಬೇತಿಯ ಅವಶ್ಯಕತೆ ಇಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ ಕಿರಣ್. ‘ಸಾಧಾರಣವಾಗಿ ಈಗ ಲಭ್ಯವಿರುವ ಕ್ಲೈಂಬರ್ ನಂತೆ ಇಲ್ಲಿ ದೇಹವನ್ನು ಬ್ಯಾಲೆನ್ಸ್ ಮಾಡಿಕೊಂಡು ಏರುವುದು ಬೇಕಿಲ್ಲ. ಯಂತ್ರದ ಮೇಲೆ ಕುಳಿತುಕೊಂಡೇ ಕೊಯಿಲು ಮಾಡಬಹುದು. ಅಷ್ಟೇ ಅಲ್ಲದೇ, ಮರ ಏರುವವರ ಸುರಕ್ಷತೆ ಮುಖ್ಯವಾಗಿರುವ ಕಾರಣ, ಈ ಯಂತ್ರಕ್ಕೆ ಅತ್ಯಂತ ಗುಣಮಟ್ಟದ ಬಿಡಿಭಾಗಗಳನ್ನು ಜೋಡಿಸಲಾಗಿದೆ. ಸ್ಟೀಲ್ ಪಟ್ಟಿ, ಸ್ಟೀಲ್ ಸ್ಪ್ರಿಂಗ್, ಸೆಲ್ಫ್ ಲಾಕಿಂಗ್ ಫಿನ್, ಸ್ವಯಂ ಬಿಗಿಯಾಗುವ ರಬ್ಬರ್ ಬುಶ್, ನೈಲಾನ್ ಬೆಲ್ಟ್ ಇವುಗಳೆಲ್ಲ ಶ್ರೇಷ್ಠ ಗುಣಮಟ್ಟದ್ದಾಗಿದೆ. ಮಳೆಗಾಲದಲ್ಲಿಯೂ ಇದನ್ನು ಉಪಯೋಗಿಸುವುದರಿಂದ ಕ್ಲೈಂಬರ್‌ ಬೋರ್ಡೋ ದ್ರಾವಣ ಅಂಟಿಕೊಂಡು ತುಕ್ಕು ಹಿಡಿಯುವ ಸಾಧ್ಯತೆ ಇದೆ. ಇವೆಲ್ಲವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಯಂತ್ರ ಸಿದ್ಧಪಡಿಸಲಾಗಿದೆ’ ಎನ್ನುತ್ತಾರೆ ಅವರು.

ಡಿಪ್ಲೊಮಾ ಓದಿರುವ ಕಿರಣ್ ಅವರು, ತಮ್ಮ ಮನೆಯಲ್ಲಿ ಕೊಳೆರೋಗ ಬಂದು ಅಡಿಕೆ ಹಾಳಾಗುವುದನ್ನು ನೋಡಿ ಏನಾದರೊಂದು ಉಪಾಯ ಕಂಡುಹಿಡಿಯಬೇಕೆಂದು ಪಣತೊಟ್ಟರು. ಮೊದಲು ಎರಡು ಟಯರ್‌ಗಳನ್ನು ಗೇರ್ ಮೂಲಕ ಜೋಡಿಸಿ ಯಂತ್ರ ತಯಾರಿಸಿದರು. ಆದರೆ ಅದು ವಿಫಲವಾಯಿತು. ನಂತರ ಟಯರ್ ಬದಲು ಡಿಸ್ಕ್ ಬಳಸಿ, ರಬ್ಬರ್ ಪ್ಯಾಡ್ ಅಳವಡಿಸಿ ಯಂತ್ರ ತಯಾರಿಸಿದರು. ಅದು ಕೂಡ ಯಶಸ್ಸು ಕಾಣಲಿಲ್ಲ. ಎರಡು ವರ್ಷ ಸತತ ಪ್ರಯತ್ನ ಮಾಡಿ ಹೊಸಹೊಸ ಆವಿಷ್ಕಾರ ಮಾಡಿದರೂ ಅದರಿಂದ ಒಂದು ಹಂತದಲ್ಲಿ ಮಾತ್ರ ಮರ ಏರಲು ಸಾಧ್ಯವಾಯಿತೇ ವಿನಾ ಕಿರಣ್ ಅವರು ಕಂಡ ಕನಸು ನನಸಾಗಲಿಲ್ಲ. ನಂತರ ಕೊಯಮತ್ತೂರಿನ ತೆಂಗು ಕೃಷಿಕ ಡಿ.ಎನ್.ವೆಂಕಟ್ ಅವರ ನೆರವು ಪಡೆದು ಇಂಥದ್ದೊಂದು ಹೊಸ ಉಪಕರಣವನ್ನು ಈಗ ಸಿದ್ಧಪಡಿಸಿದ್ದಾರೆ. ಕಿರಣ್ ಅವರ ಸಂಪರ್ಕ ಸಂಖ್ಯೆ: 94487 82188.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT