ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಮಾಯಾ ಬಜಾರ್‌!

Last Updated 29 ಜುಲೈ 2014, 19:30 IST
ಅಕ್ಷರ ಗಾತ್ರ

ಅಡಿಕೆ ಧಾರಣೆ ಈ ಪರಿ ಏರಲು ಏನು ಕಾರಣ? ಈ ಬಗ್ಗೆ ಸದ್ಯ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಆದರೆ, ಮಾರುಕಟ್ಟೆಯ ಯಾವ ಪಂಡಿತರ ಬಳಿಯೂ ಇದಕ್ಕೆ ಖಚಿತ ಉತ್ತರವಿಲ್ಲ. ಲಭ್ಯವಿರುವ ಕಾರಣಗಳನ್ನೇ ಪಟ್ಟಿ ಮಾಡಿದರೆ ಕೆಲವೇ ಉತ್ತರಗಳು ಸಿಗುತ್ತವೆ.

ಕ್ವಿಂಟಲ್‌ ಅಡಿಕೆಗೆ ರೂ 20 ಸಾವಿರ. ಅಬ್ಬಾ ಅಷ್ಟು ಹಣ ದೊರೆತರೆ ಇನ್ನು ಮುಂದೆ ನಮ್ಮ ಸಂಕಷ್ಟ ಇರುವುದಿಲ್ಲ. ಸಾಲಸೋಲ ತೀರಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು. –ಕೇವಲ ಐದಾರು ವರ್ಷಗಳ ಹಿಂದೆಯಷ್ಟೇ ಅಡಿಕೆ ಬೆಳೆಗಾರರೊಬ್ಬರ ಇಂತಹ ಮಾತು ಕೇಳಿಬಂದಿತ್ತು. ಈಗಂತೂ ಅಡಿಕೆಗೆ ‘ಬಂಗಾರ’ದ ಬೆಲೆ!

ಅಡಿಕೆ ಧಾರಣೆ 2006ರಿಂದ 2013ರವರೆಗೂ ರೂ20 ಸಾವಿರದ ಆಚೀಚೆ ಸುತ್ತುತ್ತಾ ಸಾಗಿತ್ತು. ಈ ಧಾರಣೆ ರೈತರಿಗೆ ತೀರ ಅನುಕೂಲ ಮಾಡಿಕೊಡದೇ ಇದ್ದರೂ, ನಷ್ಟದ ಮಾತು ಇರಲಿಲ್ಲ. ಒಂದು ರೀತಿ ಏರಿಳಿತವಿಲ್ಲದ ಸಮಚಿತ್ತದ ಬದುಕಿಗೆ ದಾರಿ ಮಾಡಿಕೊಟ್ಟಿತ್ತು.
ಪ್ರಸಕ್ತ ವರ್ಷದ ಆರಂಭದಲ್ಲಿ ಅಡಿಕೆ ಬೆಲೆ ರೂ30 ಸಾವಿರದ ಗಡಿ ತಲುಪಿ ಮಾರುಕಟ್ಟೆ ಪಂಡಿತರು ಹುಬ್ಬೇರಿಸುವಂತೆ ಮಾಡಿತ್ತು. ನಂತರ ಎಲ್ಲ ಲೆಕ್ಕಾಚಾರ ತಲೆಕೆಳಗೆ ಮಾಡಿ ನಾಗಾಲೋಟ ಮುಂದುವರಿಸಿದ ಧಾರಣೆ, ಜುಲೈ ಮೊದಲ ವಾರದಲ್ಲಿ ರೂ90 ಸಾವಿರ ತಲುಪಿ ಚಾರಿತ್ರಿಕ ದಾಖಲೆ ಬರೆದಿತ್ತು!

ಬೇಸಾಯ ಕ್ರಮದ ಅಡಿಕೆಗೆ ಬೇಡಿಕೆ
ವಿದೇಶಗಳೂ ಸೇರಿದಂತೆ, ಗೋವಾ, ಕೇರಳ, ಅಸ್ಸಾಂ ಮತ್ತಿತರ ಭಾಗಗಳಲ್ಲಿ ಬೇಸಾಯ ಮಾಡದೇ ನೈಸರ್ಗಿಕವಾಗಿ ಕಾಡು ಉತ್ಪನ್ನಗಳ ರೀತಿ ಅಡಿಕೆ ಬೆಳೆಯುತ್ತಾರೆ. ಆದರೆ, ಕರ್ನಾಟಕದ ಶೇ 95ರಷ್ಟು ಅಡಿಕೆ ಬೇಸಾಯ ಕ್ರಮದ ಮೂಲಕ ಬೆಳೆಯಲಾಗುತ್ತದೆ. ಈ ಅಡಿಕೆಯನ್ನು ಪಾನ್‌ ಮಸಾಲಕ್ಕೆ ಬಳಸಲಾಗುತ್ತದೆ. ಹಾಗಾಗಿ, ರಾಜ್ಯದ ಅಡಿಕೆಗೆ ಎಲ್ಲೆಡೆ ಬೇಡಿಕೆ ಇದೆ.
‌ –ಶಾಂತರಾಮ ವಿ.ಹೆಗಡೆ
ಅಧ್ಯಕ್ಷರು, ರಾಜ್ಯ ಅಡಿಕೆ ಸಹಕಾರ ಸಂಘ, ಶಿರಸಿ

ಅಲ್ಲಿಂದ ಮತ್ತೆ ಸ್ವಲ್ಪ ಹಿಂಜರಿಕೆ ಪಡೆದು, ಮತ್ತೆ ಏರಿಕೆಯಾಗುತ್ತಾ.. ಇಳಿಕೆಯಾಗುತ್ತಾ ರೂ65 ಸಾವಿರದಿಂದ ರೂ70 ಸಾವಿರದ ಸುತ್ತಾ ಸುತ್ತುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಹೊಸ ಅಡಿಕೆ ಮಾರುಕಟ್ಟೆಗೆ ಬಂದರೂ, ಉತ್ತಮ ಧಾರಣೆ ಸಿಗುತ್ತಿರುವುದು ಅಡಿಕೆ ಬೆಳೆಗಾರರ ಸಂತಸ ಇಮ್ಮಡಿಗೊಳಿಸಿದೆ.

ಅಡಿಕೆಯಲ್ಲಿ ರಾಜ್ಯದ ಆಧಿಪತ್ಯ
ದೇಶದ ವಿವಿಧೆಡೆ ಒಟ್ಟು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 6 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ಇದರಲ್ಲಿ 2 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶ ಕರ್ನಾಟಕದಲ್ಲಿಯೇ ಇದೆ. ಅಂದರೆ, ದೇಶದ ಅಡಿಕೆ ಬೆಳೆಯಲ್ಲಿ ರಾಜ್ಯದ ಪಾಲು ಶೇ 50ಕ್ಕೂ ಹೆಚ್ಚು!

ಕರ್ನಾಟಕದಲ್ಲಿ  ಸುಮಾರು  3 ಲಕ್ಷ ಟನ್‌ ಅಡಿಕೆ ಬೆಳೆದರೆ, ಕೇರಳದಲ್ಲಿ 30 ಸಾವಿರದಿಂದ 50 ಸಾವಿರ ಟನ್‌, ಗೋವಾದಲ್ಲಿ 6 ಸಾವಿರದಿಂದ 8 ಸಾವಿರ  ಟನ್‌, ಅಸ್ಸಾಂನಲ್ಲಿ 20 ಸಾವಿರದಿಂದ 25 ಸಾವಿರ ಟನ್‌ ಹಾಗೂ ಮಹಾರಾಷ್ಟ್ರ ಸೇರಿದಂತೆ ಇತರೆ ಕೆಲ ರಾಜ್ಯಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಡಿಕೆ ಬೆಳೆಯ ಲಾಗುತ್ತದೆ.

ಗೋವಾದಲ್ಲಿ ಬೆಳೆಯುವ ಅಡಿಕೆ ಆ ರಾಜ್ಯದ ಜನರ ಬಳಕೆಗೇ ಸಾಲುವುದಿಲ್ಲ. ಅಸ್ಸಾಂ, ಕೇರಳದಲ್ಲಿ  ಉಳುಮೆ ಮಾಡದೇ ಕಾಡು ಬೆಳೆಯ ರೀತಿ ಅಡಿಕೆ ಉತ್ಪನ್ನ ಪಡೆಯುವ ಕಾರಣ ಅಲ್ಲಿ ರಾಜ್ಯದ ಮಾದರಿ ಅಡಿಕೆ ಸಿಗುವುದಿಲ್ಲ. ಬದಲಿಗೆ ಮರದಲ್ಲೇ ಒಣಗಿದ ಗೋಟು ಮಾದರಿ ದೊರೆಯುತ್ತದೆ.

ನಿಯಂತ್ರಣಕ್ಕೆ ಇ–ಮಾರಾಟ ವ್ಯವಸ್ಥೆ
ಸರ್ಕಾರ ಮೊದಲು ಮಾರುಕಟ್ಟೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬೇಕು. ಅಡಿಕೆ ವಹಿವಾಟಿನಲ್ಲಿ ಶೇ 50ರಷ್ಟು ಆವಕ ಮಾರುಕಟ್ಟೆಗೆ ಬರುವುದೇ ಇಲ್ಲ. ಹೊರಗೆ ಎಷ್ಟು ಅಡಿಕೆ ವಹಿವಾಟು ನಡೆದಿದೆ. ಯಾರ ಬಳಿ ಎಷ್ಟು ಸಂಗ್ರಹವಿದೆ ಎನ್ನುವುದು ಗೊತ್ತಾಗುವುದೇ ಇಲ್ಲ. ಹಾಗಾಗಿ, ಬೇಡಿಕೆ ಪೂರೈಕೆಗೆ ಅನುಗುಣವಾಗಿ ಬೆಲೆ ಏರಿಳಿತ ಗಮನಿಸಲು ಆಗುತ್ತಿಲ್ಲ. ಈಗ ಇರುವ ಬೆಲೆ ಮತ್ತೆ ಸಿಗುತ್ತದೆ ಎನ್ನುವ ನಂಬಿಕೆಯೂ ಇಲ್ಲ.
ತೆರಿಗೆ ಉಳಿಸಲು, ಕಮಿಷನ್‌ ತಪ್ಪಿಸಲು ರೈತರು–ವ್ಯಾಪಾರಿಗಳು ಮಾರುಕಟ್ಟೆಯ ಹೊರಗೆ ವ್ಯವಹಾರ ಮಾಡುತ್ತಾರೆ. ಇದನ್ನು ತಪ್ಪಿಸಲು ಸರ್ಕಾರ ತೆರಿಗೆಯನ್ನು ಶೇ 1ಕ್ಕೆ ನಿಗದಿ ಮಾಡಬೇಕು. ರೈತರಿಗೆ ನೀಡುವ ಸಬ್ಸಿಡಿ, ಸಾಲ ಮತ್ತಿತರ ಸೌಲಭ್ಯ ಪಡೆಯಲು ಮಾರಾಟ ದಾಖಲೆ ಕಡ್ಡಾಯ ಮಾಡಬೇಕು. ಕೊಬ್ಬರಿಯಂತೆ ಅಡಿಕೆಗೂ ಇ–ಮಾರಾಟ ವ್ಯವಸ್ಥೆ ಜಾರಿಗೊಳಿಸಬೇಕು.
–ಡಾ. ಟಿ.ಎನ್.ಪ್ರಕಾಶ್‌ ಕಮ್ಮರಡಿ
ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ಆಯೋಗ

ರಾಜ್ಯದಲ್ಲಿ ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಬೆಳೆಯುವ ಶೇ 60ಕ್ಕೂ ಹೆಚ್ಚು ಅಡಿಕೆಯನ್ನು ದಾವಣಗೆರೆ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದ ಕೆಂಪಡಿಕೆಗೆ ದೇಶ ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಇಲ್ಲಿನ ರಾಶಿ, ಬೆಟ್ಟೆ ಮಾದರಿ ಅಡಿಕೆಯನ್ನು ಪಾನ್‌ ಮಸಾಲಾಕ್ಕೆ ಬಳಕೆ ಮಾಡಲಾಗುತ್ತದೆ. ಸರಕು ಮಾದರಿ ಅಡಿಕೆಯನ್ನು ಹೆಚ್ಚಾಗಿ ದಕ್ಷಿಣ ಭಾರತೀಯರು ವೀಳ್ಯದ ಎಲೆ ಜತೆ ಬಳಸುತ್ತಾರೆ.

ಅಡಿಕೆ ಧಾರಣೆ ನಾಗಲೋಟ?
ಅಡಿಕೆ ಧಾರಣೆ ಈ ಪರಿ ಏರಲು ಏನು ಕಾರಣ? ಎನ್ನುವುದು ಸದ್ಯ ಎಲ್ಲೆಡೆ ನಡೆಯುತ್ತಿರುವ ಚರ್ಚೆ. ಈ ಬಗ್ಗೆ ಮಾರುಕಟ್ಟೆಯ ಯಾವ ಪಂಡಿತರ ಬಳಿಯೂ ಖಚಿತ ಉತ್ತರ ಸಿಗುತ್ತಿಲ್ಲ. ಇರುವ ಕಾರಣಗಳನ್ನೇ ಪಟ್ಟಿ ಮಾಡಿದರೆ ಕೆಲವು ಉತ್ತರಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಭಾರಿ ವ್ಯತ್ಯಾಸ ಈ ಬಾರಿ ಅಡಿಕೆ ಧಾರಣೆ ಗಗನಕ್ಕೇರಲು ಕಾರಣ. ಕಳೆದ ವರ್ಷ ಮಲೆನಾಡಿನ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮಳೆಗೆ ಕೊಳೆರೋಗ ಕಾಣಿಸಿಕೊಂಡು ಶೇ 70–80ರಷ್ಟು ಬೆಳೆ ನಾಶವಾಯಿತು. ಹವಾಮಾನ ವೈಪರೀತ್ಯದಿಂದಾಗಿ ಉತ್ಪಾದನೆ ಗಣನೀಯವಾಗಿ ಕುಂಠಿತಗೊಂಡಿತ್ತು. ಹಾಗಾಗಿ, ಪಾನ್‌ ಸುಪಾರಿ ತಯಾರಿಕೆಗೆ ಅಗತ್ಯ ಇರುವಷ್ಟು ಅಡಿಕೆ ಮಾರುಕಟ್ಟೆಯಲ್ಲಿ ದೊರೆಯದ ಕಾರಣ ಧಾರಣೆ ಒಂದೇ ಸಮನೆ ಏರುತ್ತಾ ಸಾಗಿದೆ ಎನ್ನುತ್ತಾರೆ ತೋಟದ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಗೊಪ್ಪೇನಹಳ್ಳಿ ಶಿವಕುಮಾರ್.

ಮಧ್ಯವರ್ತಿ, ದೊಡ್ಡ ರೈತರ ಹಿಡಿತ
ಪಾನ್‌ ಮಸಾಲ ಕಂಪೆನಿಗಳು 2013ರ ಆರಂಭದಲ್ಲಿ ರೂ15 ಸಾವಿರದಿಂದ ರೂ20 ಸಾವಿರದವರೆಗೂ ಬೆಲೆ ನೀಡಿ ಅಡಿಕೆ ಖರೀದಿಸಿದ್ದವು. ಸಣ್ಣ ರೈತರು ಅಡಿಕೆ ಯನ್ನು ಅದೇ ಬೆಲೆಗೆ ಮಾರಿದ್ದರು. ಆದರೆ, ಮಧ್ಯವರ್ತಿ ವ್ಯಾಪಾರಿಗಳು ಹಾಗೂ ದೊಡ್ಡ ರೈತರು ಅಡಿಕೆ ಮಾರಾಟ ಮಾಡದೇ ಸಂಗ್ರಹಿಸಿ ಇಟ್ಟುಕೊಂಡಿದ್ದರು. 2014ರ ಆರಂಭದ ವೇಳೆಗೆ ಪಾನ್‌ ಮಸಾಲಾ ಕಂಪೆನಿಗಳ ಬಳಿ ದಾಸ್ತಾನು ಖಾಲಿಯಾಗುತ್ತಾ ಬಂದಿತು. ಕಂಪೆನಿಗಳು  ಎಷ್ಟು ದರ ಏರಿಸಿದರೂ ಅಡಿಕೆ ಮಾರಾಟ ಮಾಡಿದ್ದು, ಕೆಲವೇ ಬೆರಳೆಣಿಕೆಯ ಮಂದಿ. ಕಂಪೆನಿಗಳು ತಮಗೆ ಅಗತ್ಯವಾದ ಅಡಿಕೆ ಖರೀದಿಸುವ ಸಲುವಾಗಿ ಒಂದೇ ಸಮನೆ ಧಾರಣೆ ಏರಿಸುತ್ತಾ ಹೋದರು. ಅದಕ್ಕೆ ವ್ಯತಿರಿಕ್ತವಾಗಿ ಮಧ್ಯವರ್ತಿಗಳು ಹಾಗೂ ದೊಡ್ಡ ರೈತರು ಅಡಿಕೆಯನ್ನು ಮನೆಯಿಂದ ಮಾರುಕಟ್ಟೆಗೆ ತರಲೇ ಇಲ್ಲ. ಹಾಗಾಗಿ, ಅಡಿಕೆ ಧಾರಣೆ ಹಿಂದೆಂದೂ ಕಾಣದ ನಾಗಲೋಟಕ್ಕೆ ಸಾಕ್ಷಿಯಾಯಿತು ಎಂದು ವಿಶ್ಲೇಷಿಸುತ್ತಾರೆ ಪಾನ್‌ ಮಸಾಲ ಕಂಪೆನಿಯ ಮಾರಾಟ ಪ್ರತಿನಿಧಿಗಳು.

ಅಡಿಕೆ ಆಮದು ಶೇ 110 ತೆರಿಗೆ ಬೆಲೆ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಕಾರಣ ವಿದೇಶಿ ಅಡಿಕೆಯ ಮೇಲೆ ಕೇಂದ್ರ ಸರ್ಕಾರ ವಿಧಿಸಿದ ಭಾರಿ ತೆರಿಗೆ. ಬೆಲೆ ಕುಸಿತದಿಂದ ಸ್ಥಳೀಯ ರೈತರನ್ನು ಪಾರುಮಾಡಲು ಹಾಗೂ ಅಗ್ಗದ ದರದ ವಿದೇಶಿ ಅಡಿಕೆ ತರಿಸಿ ಸ್ಥಳೀಯ ಅಡಿಕೆ ಜತೆ ಬೆರೆಸಿ ಮಾರಾಟ ಮಾಡುತ್ತಿದ್ದ ಕಲಬೆರಕೆ ದಂಧೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಮದು ಅಡಿಕೆ ಮೇಲೆ ಶೇ 110ರಷ್ಟು ತೆರಿಗೆ ವಿಧಿಸಿದೆ.  ಶ್ರೀಲಂಕಾ, ಇಂಡೊನೇಷ್ಯಾ, ಮ್ಯಾನ್ಮಾರ್‌, ಥಾಯ್ಲೆಂಡ್‌, ಮಲೇಷ್ಯಾ ಮೊದಲಾದ  ದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಕಡಿಮೆ ಗುಣಮಟ್ಟದ ಅಡಿಕೆಗೆ ಬೇಡಿಕೆ ಕಡಿಮೆ. ಹಾಗಾಗಿ, ಅಲ್ಲಿನ ಅಡಿಕೆ ತಂದು ಇಲ್ಲಿನ ಅಡಿಕೆ ಜತೆ ಕಲಬೆರಕೆ ಮಾಡಿ  ಮಾರಾಟ ಮಾಡಲಾಗುತ್ತಿತ್ತು.

ಶ್ರೀಲಂಕಾದ ಅಡಿಕೆ ಧಾರಣೆ ರೂ10,000 ಇದ್ದರೆ, ಅಲ್ಲಿಂದ ಭಾರತಕ್ಕೆ ತರಲು ರೂ21 ಸಾವಿರದಿಂದ ರೂ24 ಸಾವಿರದವರೆಗೂ ವೆಚ್ಚವಾಗುತ್ತದೆ. ಕಳೆದ ವರ್ಷ ಅಲ್ಲೂ ಅಡಿಕೆ ಬೆಲೆ ರೂ20 ಸಾವಿರದಿಂದ ರೂ25 ಸಾವಿರ ಮುಟ್ಟಿದ ಕಾರಣ ಅದರ ಮೇಲೆ ಶೇ 110 ತೆರಿಗೆ ಕೊಟ್ಟು ತರುವುದೂ ಇಲ್ಲಿನ ವ್ಯಾಪಾರಿಗಳಿಗೆ ದುಬಾರಿ ಎನಿಸಿದೆ. ಹಾಗಾಗಿ, ವರ್ತಕರೂ, ಪಾನ್‌ ಮಸಾಲ ಕಂಪೆನಿಗಳ ಮಾಲೀಕರು ಕರ್ನಾಟಕದ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ. ಇದರಿಂದಾಗಿಯೇ ಬೆಲೆ ಗಗನಕ್ಕೇರಿದೆ. ಕೆಲವೊಮ್ಮೆ ಕಳ್ಳ ಮಾರ್ಗದ ಮೂಲಕವೂ ದೇಶಕ್ಕೆ ಬಂದ ಅಡಿಕೆ ತರಲಾಗುತ್ತಿತ್ತು. ಈಗ ಸರ್ಕಾರ ಕಠಿಣ ಕ್ರಮ ಕೈಗೊಂಡಿರುವುದರಿಂದ ಅಂತಹ ಚಟುವಟಿಕೆ ಗಳಿಗೂ ಕಡಿವಾಣ ಬಿದ್ದಿದೆ.

ಮಾರುಕಟ್ಟೆ ಸುತ್ತ
ಭಾರತದಲ್ಲಿ ಅಡಿಕೆ ಮಾರುಕಟ್ಟೆ ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಿರುವುದು ಕರ್ನಾಟಕದಲ್ಲಿ ಮಾತ್ರ. ರಾಜ್ಯ ಹೊರತುಪಡಿಸಿ ಇತರೆಡೆ ಅಷ್ಟಾಗಿ ಮಾರುಕಟ್ಟೆ ಅಭಿವೃದ್ಧಿಯಾಗಿಲ್ಲ. ಕೇರಳ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಕ್ಯಾಮ್ಕೋ ಕೆಲ ಶಾಖೆಗಳನ್ನು ತೆರೆದು ಅಡಿಕೆ ವಹಿವಾಟು ನಡೆಸುತ್ತಿದೆ. ರಾಜ್ಯದಲ್ಲಿ ಮೊದಲು ಮಂಗಳೂರು ಅಡಿಕೆ ಮಾರುಕಟ್ಟೆಗೆ ಪ್ರಸಿದ್ಧಿ ಪಡೆದಿತ್ತು. ಪ್ರಸ್ತುತ ಶಿರಸಿ, ಶಿವಮೊಗ್ಗ, ಸಾಗರ, ಭದ್ರಾವತಿ, ಚನ್ನಗಿರಿ, ಭೀಮಸಮುದ್ರ ಮಾರುಕಟ್ಟೆಗಳು ಅಡಿಕೆ ಮಾರಾಟದಲ್ಲಿ ಪ್ರಭುತ್ವ ಸಾಧಿಸಿವೆ.

ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ (ಮ್ಯಾಮ್‌ಕೋಸ್‌–ಶಿವಮೊಗ್ಗ), ಕೇಂದ್ರೀಯ ಅಡಿಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘ (ಕ್ಯಾಮ್ಕೋ–ಕರ್ನಾಟಕ–ಕೇರಳ), ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ (ಆಸ್ಕೋ–ಸಾಗರ), ಕರ್ನಾಟಕ ರಾಜ್ಯ ಅಡಿಕೆ ಮಾರಾಟ ಮಂಡಳ ಮತ್ತು ಸಹಕಾರ ಸಂಘ (ಕ್ರಾಮ್ಕೋ), ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್‌–ಚನ್ನಗಿರಿ) ಅಡಿಕೆ ಖರೀದಿ, ಮಾರಾಟ ಹಾಗೂ ಅಡಿಕೆ ಬೆಳೆಗಾರರ ಹಿತಾಸಕ್ತಿ ಸಂರಕ್ಷಣೆಯಲ್ಲಿ ಕಾರ್ಯಮಗ್ನವಾಗಿವೆ.

ಶುಭ ಸೂಚಕ; ವ್ಯವಹಾರಿಕ
ಬಹಳ ಹಿಂದಿನಿಂದಲೂ ಅಡಿಕೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ವ್ಯವಹಾರಿಕ ಒಪ್ಪಂದ, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ವೀಳ್ಯದೆಲೆ ಜತೆ ಅಡಿಕೆಗೆ ಎಲ್ಲಿಲ್ಲದ ಮಾನ್ಯತೆ. ಮನೆಯಲ್ಲಿ ಯಾವುದೇ ಶುಭಕಾರ್ಯವಾದರೆ ಎಲೆ–ಅಡಿಕೆ ಇರಲೇಬೇಕು. ಎಲೆ, ಅಡಿಕೆ ಜತೆ ಸೇರಿದರೆ ವೀಳ್ಯ, ಎಲೆ, ಅಡಿಕೆ ಜತೆ ಸುಣ್ಣ ಸೇರಿದರೆ ತಾಂಬೂಲ. ಈ ಸಮ್ಮಿಲನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಅಡಿಕೆಯ ವಿಫಲ ಸಂಶೋಧನೆಗಳು
ಹಿಂದೆ ಹೆಚ್ಚಾಗಿ ಅಡಿಕೆಯನ್ನು ಗುಟ್ಕಾ ತಯಾರಿಕೆಗೆ ಬಳಸ­ಲಾಗುತ್ತಿತ್ತು. ಪ್ರಸ್ತುತ ವೀಳ್ಯದೆಲೆ ಜತೆ ತಿನ್ನಲು, ಪಾನ್‌ ಮಸಾಲ ತಯಾರಿಕೆಗೆ ಬಳಸಲಾಗುತ್ತಿದೆ. ಕೆಲ ಕಂಪೆನಿಗಳು ಚಾಕೊಲೆಟ್‌ ತಯಾರಿಕೆಯಲ್ಲಿ ಅಡಿಕೆ ಬಳಸಿದ್ದವು. ಆದರೆ, ಆ ಪ್ರಯೋಗ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲಿಲ್ಲ.ಅಡಿಕೆ ಬಳಸಿ ವೈನ್‌ ತಯಾರಿಕೆಯ ಪ್ರಯೋಗ ನಡೆದರೂ, ಅದು ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಕೈಬಿಡಲಾಯಿತು. ಇನ್ನು ಬಣ್ಣ ಮತ್ತಿತರ ಉದ್ದೇಶಕ್ಕೆ ಅಡಿಕೆ ಬಳಕೆ ಮಾಡುವ ಕುರಿತು ಸಂಶೋಧನೆಗಳು ನಡೆಯುತ್ತಿವೆ.

ಮಾರಾಟ ತೆರಿಗೆ ಎಪಿಎಂಸಿ ಶುಲ್ಕ
ಅಡಿಕೆ ಮಾರಾಟದ ಮೇಲೆ ಸರ್ಕಾರ ಶೇ 2ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸುತ್ತದೆ. ಅಡಿಕೆ ಖರೀದಿಸಿ­ದವರು ಎಪಿಎಂಸಿ ಶುಲ್ಕ ಶೇ 1.5ರಷ್ಟು ಭರಿಸಬೇಕು. ಸರ್ಕಾರಕ್ಕೆ ರಾಜ್ಯದ ಅಡಿಕೆ ವಹಿವಾಟಿನಿಂದ ವಾರ್ಷಿಕ ₨100 ಕೋಟಿಗೂ ಅಧಿಕ ಆದಾಯ ಬರುತ್ತಿದೆ.

ಕೈವ್ಯಾಪಾರ, ತೆರಿಗೆ ವಂಚನೆ
ಅಡಿಕೆ ವಹಿವಾಟು ಅಧಿಕೃತವಾಗಿ ಸಹಕಾರ ಸಂಘಗಳು ಹಾಗೂ ಎಪಿಎಂಸಿ ಮೂಲಕ ನಡೆದರೆ, ಇದರ ಹೊರತಾಗಿ ಶೇ 20–40ರಷ್ಟು ಅಡಿಕೆ ವಹಿವಾಟು ರೈತರ ಮನೆ ಬಾಗಿಲಲ್ಲೇ ನಡೆಯುತ್ತದೆ. ಹೀಗೆ ಖರೀದಿಸಿದ ಅಡಿಕೆಯನ್ನು ಮಧ್ಯವರ್ತಿಗಳು ನೇರ­ವಾಗಿ ಪಾನ್‌ ಮಸಾಲ ಕಂಪೆನಿ­ಗಳಿಗೆ ಮಾರುತ್ತಾರೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆಯಾಗುತ್ತದೆ.

ವಾರ್ಷಿಕ ವಹಿವಾಟು
ಮ್ಯಾಮ್‌ಕೋಸ್‌:
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿದ್ದು, ವಾರ್ಷಿಕ ರೂ400 ಕೋಟಿ ವಹಿವಾಟು ನಡೆಸುತ್ತಿದೆ. 2013–14ನೇ ಸಾಲಿನಲ್ಲಿ ಈ ಸಂಸ್ಥೆ 19,286 ಟನ್‌ ಅಡಿಕೆ ಮಾರಾಟ ಮಾಡಿದೆ.

ಕ್ಯಾಮ್ಕೊ:
ಕರ್ನಾಟಕ, ಕೇರಳದಲ್ಲಿ ಹೆಚ್ಚು ವಹಿವಾಟು ನಡೆಸುತ್ತಿದೆ. ದೆಹಲಿ, ಪಂಜಾಬ್‌, ಜೈಪುರ, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧೆಡೆ  74 ಶಾಖೆಗಳು ಹಾಗೂ ಮಾರಾಟ ಮಳಿಗೆ ಹೊಂದಿದೆ. ಈ ಸಂಸ್ಥೆಯ ವಾರ್ಷಿಕ ವಹಿವಾಟು ರೂ1,200 ಕೋಟಿ. 

ತುಮ್ಕೋಸ್‌:
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಭಾಗದಲ್ಲಿ ಸಕ್ರಿಯವಾಗಿದ್ದು, ವಾರ್ಷಿಕ ಸರಾಸರಿ ರೂ350 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಕಳೆದ ವರ್ಷ 15 ಸಾವಿರ ಟನ್‌ ಅಡಿಕೆ ಮಾರಾಟ ಮಾಡಿದೆ.

ಶಿರಸಿ:
ಇಲ್ಲಿನ ಮಾರುಕಟ್ಟೆಯ ವಾರ್ಷಿಕ ವಹಿವಾಟು ರೂ400 ಕೋಟಿ ಇದ್ದು, ಕಳೆದ ವರ್ಷ 27 ಸಾವಿರ ಟನ್‌ ಅಡಿಕೆ ಮಾರಾಟ ಮಾಡಿದೆ.

ಭೀಮ ಸಮುದ್ರ:
ಚಿತ್ರದುರ್ಗ ಜಿಲ್ಲೆ ಭೀಮಸಮುದ್ರವೂ ಅಡಿಕೆ ಮಾರುಕಟ್ಟೆಗೆ ಪ್ರಸಿದ್ಧಿ ಪಡೆದಿದೆ. ತುಮಕೂರು ಜಿಲ್ಲೆಯ ಶಿರಾ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ದಾವಣಗೆರೆ ಜಿಲ್ಲೆಯ ಚನ್ನಗಿರಿ ಭಾಗದ ವ್ಯಾಪ್ತಿ ಹೊಂದಿದೆ. ಖಾಸಗಿ ಮಂಡಿಗಳೇ ಹೆಚ್ಚಿರುವ ಈ ಮಾರುಕಟ್ಟೆಯ ವಾರ್ಷಿಕ ವಹಿವಾಟು ಸಹ ರೂ300 ಕೋಟಿಯಿಂದ ರೂ500 ಕೋಟಿಯಷ್ಟಿದೆ.

ಪಾನ್‌ ಮಸಾಲ ಘಟಕ
ದೇಶದ ದಕ್ಷಿಣ ರಾಜ್ಯಗಳಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ. ಬಹುತೇಕ ಪಾನ್‌ ಮಸಾಲ ಮತ್ತು ಸಿಹಿ ಅಡಿಕೆ ಪೊಟ್ಟಣ ತಯಾರಿಕಾ ಕಂಪೆನಿಗಳು ಉತ್ತರ ಭಾರತದಲ್ಲಿ ಕೇಂದ್ರೀಕೃತವಾಗಿವೆ. ದೆಹಲಿ, ಕೋಲ್ಕತ್ತಾ, ಅಲಹಾಬಾದ್‌, ಅಹಮದಾಬಾದ್‌, ಕಾನ್ಪುರದಲ್ಲಿ ಹೆಚ್ಚು ಘಟಕಗಳಿವೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲ ಬ್ರಾಂಡ್‌ನ ಪಾನ್‌ ಮಸಾಲ ಪ್ಯಾಕೆಟ್‌ ತಯಾರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT