ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಹೊಗೆ: ಸರ್ಕಾರ ಕಣ್ತೆರೆಯಲಿ

ಸೌದೆಯನ್ನು ಆರೋಗ್ಯಕರವಾಗಿ ಬಳಸುವ ವಿಧಾನಗಳನ್ನು ಯೋಜಿಸಬೇಕಿದೆ
Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ದೇಶದ ಉರುವಲು ವ್ಯವಸ್ಥೆ ಕುರಿತು ಭಾರತದ ನೋಂದಣಿ ಮಹಾನಿರ್ದೇಶನಾಲಯದ ಅಧ್ಯಯನ ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. ದೇಶದ ಎಲ್ಲ ಪ್ರದೇಶಗಳು ಮತ್ತು ಸಮುದಾಯಗಳನ್ನು ಒಳಗೊಂಡ ಈ ವ್ಯಾಪಕ ಸಮೀಕ್ಷೆಯ ಅಂಶಗಳು ನಿಜಕ್ಕೂ ನಮ್ಮನ್ನು ಚಿಂತನೆಗೆ ಹಚ್ಚಬೇಕಿದೆ. ಏಕೆಂದರೆ, ದೇಶದಲ್ಲಿ ಅಡುಗೆಗಾಗಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲಗಳ ಬಳಕೆ ಹೆಚ್ಚುತ್ತಿದ್ದರೂ, ಇನ್ನೂ ಸುಮಾರು ಶೇ 42.7ರಷ್ಟು ಕುಟುಂಬಗಳು ಸೌದೆಯನ್ನೇ  ಅವಲಂಬಿಸಿವೆ. ಕರ್ನಾಟಕದಲ್ಲಂತೂ ಸುಮಾರು ಅರ್ಧದಷ್ಟು ಕುಟುಂಬಗಳೇ (49.4%) ಕಟ್ಟಿಗೆ ಬಳಸುತ್ತಿವೆ.

ನಮ್ಮ ರಾಜ್ಯದ ಮಟ್ಟಿಗಂತೂ ಇದೊಂದು ವಿಷಾದದ ಸಂಗತಿಯೆ. ಈ ಅಂಕಿಅಂಶದ ಪ್ರಕಾರ, ನಗರ ಪ್ರದೇಶಗಳ ಸುಮಾರು ಶೇ 21 ಮತ್ತು ಗ್ರಾಮೀಣ ಪ್ರದೇಶದ ಶೇ 82ರಷ್ಟು ಕುಟುಂಬಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಇವರೆಲ್ಲರಿಗೂ ಸೌದೆ ಸಂಗ್ರಹಿಸಲು ಶ್ರಮಿಸುವುದು ಪ್ರತಿದಿನದ ಸಂಗತಿಯಾಗಿದೆ. ಇನ್ನುಳಿದಂತೆ ಕಟ್ಟಿಗೆಪುಡಿ, ಸಗಣಿ ಬೆರಣಿ, ಕೃಷಿ ತ್ಯಾಜ್ಯ, ಕಸಕಡ್ಡಿ, ಸೀಮೆಎಣ್ಣೆ ಇತ್ಯಾದಿ ಮೂಲಗಳನ್ನು ಬಳಸುವವರ ಪ್ರಮಾಣವೂ ಗಣನೀಯವಾಗಿಯೇ ಇದೆ. ಇಂಥ ಕಟ್ಟಿಗೆ ಮೂಲಗಳನ್ನೇ ಉರುವಲಾಗಿ ಬಳಸುವುದರಲ್ಲಿ ಮೂರು ಗಂಭೀರ ಸಮಸ್ಯೆಗಳಿವೆ.

ಒಂದು, ಉರಿಯುವ ಕಟ್ಟಿಗೆಯ ಹೊಗೆಯು ಜನರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ. ಕಟ್ಟಿಗೆ ಸುಟ್ಟಾಗ ಹೊರಡುವ ಹೊಗೆಯ ಮಾಲಿನ್ಯ ಅಂತಿಂಥದ್ದಲ್ಲ. ಈ ಹೊಗೆಯಲ್ಲಿ ಅನೇಕ ಬಗೆಯ ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಈ ಕಪ್ಪು ಹೊಗೆ ಕಣ್ಣು ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ತರುತ್ತದೆ. ಎರಡನೆಯದು, ವಾತಾವರಣ ಬದಲಾವಣೆ ಕುರಿತಾದದ್ದು. ಈ ಪರಿಯಲ್ಲಿ ಹೊಗೆಯು ದಿನಂಪ್ರತಿ ಗಗನ ಸೇರಿ ಹಸಿರುಮನೆ ಪರಿಣಾಮ ಉಂಟಾಗುವ ಮೂಲಕ ವಾತಾವರಣದ ಉಷ್ಣತೆ ಏರುತ್ತಿರುವುದರ ಕುರಿತಂತೂ ಸಾಕಷ್ಟು ಅಧ್ಯಯನಗಳಾಗಿವೆ.

ಇನ್ನು ಮೂರನೆಯದು, ಕಟ್ಟಿಗೆಯ ಮೂಲ ಕುರಿತಾದದ್ದು.  ಈ ಎಲ್ಲ ಉರುವಲು ಅಧಿಕೃತವಾಗಿಯೊ ಅಥವಾ ಅನಧಿಕೃತವಾಗಿಯೊ ಅರಣ್ಯದಿಂದಲೊ ಅಥವಾ ಊರ ಹೊರವಲಯದ ಕುರುಚಲು ಗುಡ್ಡಗಳಂಥ ಪ್ರದೇಶದಿಂದಲೊ ಬರಬೇಕು. ಅಂತೂ ಅರಣ್ಯ ಮೂಲದ್ದೇ. ಆ ಮಟ್ಟಿಗೆ ಅರಣ್ಯ ನಾಶಕ್ಕೆ ಇದೂ ಒಂದು ಪ್ರಮುಖ ಕಾರಣ. ಅರಣ್ಯ ಇಲಾಖೆ ತನ್ನ ಕಟ್ಟಿಗೆ ಡಿಪೊಗಳ ಮೂಲಕ ವಿತರಿಸುವ ಸೌದೆಯು ಬೇಡಿಕೆಯ ಶೇ 50ರಷ್ಟನ್ನೂ ಪೂರೈಸುತ್ತಿಲ್ಲ. ಅವುಗಳ ಬೆಲೆಯೂ ಬಡವರ ಕೈಗೆಟುಕದ್ದು.

ಆದ್ದರಿಂದ, ನಾಡಿನ ಎಲ್ಲರಿಗೆ ಅವಶ್ಯವಾಗಿರುವ ಕನಿಷ್ಠ ಇಂಧನ ಪೂರೈಸಲು ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳು ಗಮನಹರಿಸಬೇಕಿದೆ. ಆರ್ಥಿಕವಾಗಿ ಸಮಾಜದ ಕೆಳಸ್ತರದಲ್ಲಿರುವ ಜನರಿಗೆ ಸುಸ್ಥಿರ ಅಡುಗೆ ಇಂಧನ ಪೂರೈಸುವುದು  ಸರ್ಕಾರದ ಆದ್ಯತೆಯಾಗಬೇಕಿದೆ. ಎಲ್ಲರಿಗೂ ಎಲ್‌ಪಿಜಿ ಸಂಪರ್ಕ ನೀಡುವುದು ಆದರ್ಶದ ಮಾತಾದರೂ ಅದು ಸಂಪೂರ್ಣ ಜಾರಿಗೊಳ್ಳಲು ದಶಕಗಳೇ ಬೇಕಾಗಬಹುದು. ಹಾಗಾಗಿ, ಸೌದೆಯನ್ನಾದರೂ ಆರೋಗ್ಯಕರವಾಗಿ ಮತ್ತು ಸುಸ್ಥಿರವಾಗಿ ಬಳಸುವ ವಿಧಾನಗಳ ಕುರಿತು ನಾವು ಗಂಭೀರವಾಗಿ ಕಾರ್ಯಪ್ರವೃತ್ತರಾಗಬೇಕಿದೆ.

ಇಷ್ಟಕ್ಕೂ ಸೌದೆಯನ್ನು ಸುಸ್ಥಿರ ಇಂಧನವನ್ನಾಗಿ ಬಳಸುವ ಕುರಿತಂತೆ ಈಗಾಗಲೇ ನಡೆಸಿದ ಅನೇಕ ಯಶಸ್ವಿ ವೈಜ್ಞಾನಿಕ ಸಂಶೋಧನೆಗಳ ಮಾದರಿಗಳು ಲಭ್ಯವಿವೆ. ಕಾಡಿನಿಂದ ತಂದ ಅರೆಬರೆ ಹಸಿ ಕಟ್ಟಿಗೆಗಳನ್ನು ಬಳಸುವ ಬದಲು, ಅವುಗಳನ್ನು ಸೂಕ್ತವಾಗಿ ಒಣಗಿಸಿ, ಸಣ್ಣಸಣ್ಣ ತುಂಡುಗಳನ್ನಾಗಿ ಬಳಸಿದರೆ ಅವುಗಳ ಕ್ಷಮತೆ ಇನ್ನೂ  ಶೇ 30ರಷ್ಟು ಹೆಚ್ಚಾಗಬಲ್ಲದೆಂದು ಕಂಡುಬಂದಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು 90ರ ದಶಕದಲ್ಲೇ ಅಭಿವೃದ್ಧಿಪಡಿಸಿದ ಅಸ್ತ್ರ ಒಲೆಗಳು ಶೇ 70ಕ್ಕೂ ಮಿಕ್ಕಿ ಇಂಧನ ಉಳಿತಾಯ ಮಾಡುವುದರ ಜೊತೆಗೆ ಅಡುಗೆ ಮನೆಯನ್ನು ಹೊಗೆ ಮುಕ್ತ ಮಾಡಬಲ್ಲವು.

ಈಗಂತೂ ಕಟ್ಟಿಗೆಯ ಸಣ್ಣ ಚೂರುಗಳನ್ನೇ ಬಳಸುವ ಹಲವು ಬಗೆಯ ಸುಧಾರಿತ ಹೊಗೆರಹಿತ ಒಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಉಳಿದಂತೆ, ಹಲವು ಸಾವಯವ ಇಂಧನ ಮೂಲಗಳ ಲಭ್ಯತೆಯೂ ನಮಗಿದೆ. ಉದಾಹರಣೆಗೆ, ಮಲೆನಾಡು ಮತ್ತು ಕರಾವಳಿಯ ಸಹಸ್ರಾರು ಕುಟುಂಬಗಳು ಸಗಣಿಯಾಧಾರಿತ ಜೈವಿಕ ಅನಿಲವನ್ನು (ಬಯೊ ಗ್ಯಾಸ್‌) ದಶಕಗಳಿಂದ ಯಶಸ್ವಿಯಾಗಿ ಬಳಸುತ್ತಿವೆ. ಗ್ರಾಮೀಣ ಪ್ರದೇಶಕ್ಕೆ ಬಹುಸೂಕ್ತವಾದ ಪರಿಸರ ಸ್ನೇಹಿ ಮತ್ತು ಸುಲಭ ದರದ ಉತ್ತಮ ಅಡುಗೆ ಇಂಧನವಿದು.

ಇತ್ತೀಚೆಗೆ ಅಡುಗೆ ತ್ಯಾಜ್ಯವನ್ನು ಕೊಳೆಸಿ ಜೈವಿಕ ಅನಿಲ ಉತ್ಪಾದಿಸುವ ವಿವಿಧ ಬಗೆಯ ಸಣ್ಣ ಬಯೋಡೈಜೆಸ್ಟರ್‌ಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಇವನ್ನು ಪಟ್ಟಣಗಳ ಮನೆಗಳಲ್ಲೂ ಬಳಸಬಹುದು. ಇವಲ್ಲದೆ, ಸುಲಭವಾಗಿ ಸ್ಥಳೀಯವಾಗಿ ದೊರಕುವ ಒಣಎಲೆ/ ಕೃಷಿ ತ್ಯಾಜ್ಯ ಬಳಸಿ ಉಗಿ ಉತ್ಪಾದಿಸಿ ಅಡುಗೆ ಮಾಡುವ ವಿವಿಧ ಬಗೆಯ ಸ್ಟೀಮರ್ ತಂತ್ರಜ್ಞಾನವೂ  ಇಂದು ಲಭ್ಯವಿದೆ. ಈಗಾಗಲೇ ಇವು ಹೋಟೆಲ್, ಪೂಜಾ ಸ್ಥಳಗಳು, ಶಾಲೆಗಳು, ಹಾಸ್ಟೆಲ್ ಇತ್ಯಾದಿಗಳಲ್ಲಿ ಬಳಕೆಯಾಗುತ್ತಿದ್ದರೂ ಮನೆ ಬಳಕೆ ಇಂಧನವಾಗಿ ರೂಪುಗೊಂಡಿಲ್ಲ.

ಅಂದರೆ, ಈ ಎಲ್ಲ ಬಗೆಯ ಪರಿಸರ ಸ್ನೇಹಿಯಾದ ಮತ್ತು ಕಡಿಮೆ ವೆಚ್ಚದ ಇಂಧನ ಮೂಲದ ತಂತ್ರಜ್ಞಾನ ಲಭ್ಯವಿದ್ದರೂ ಅವುಗಳ ಬಳಕೆ ಇನ್ನೂ ವ್ಯಾಪಕವಾಗಿಲ್ಲ. ಏಕೆಂದರೆ, ಮನೆಮಟ್ಟದಲ್ಲಿ ಇಂಥ ಇಂಧನವನ್ನು ಬಳಸಲು ಪ್ರೋತ್ಸಾಹಿಸುವ ಸೂಕ್ತ ನೀತಿ ಮತ್ತು ಕಾರ್ಯಕ್ರಮಗಳು ಸರ್ಕಾರದಲ್ಲಿಲ್ಲ. ಆದ್ದರಿಂದ, ಕೇಂದ್ರ ಸರ್ಕಾರದ ಅಸಾಂಪ್ರದಾಯಿಕ ಇಂಧನ ಇಲಾಖೆ ಮತ್ತು ರಾಜ್ಯದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ (ಕ್ರೆಡಿಲ್) ಈ ಕುರಿತು ಗಂಭೀರ ಚಿಂತನೆ ನಡೆಸಬೇಕಿದೆ. ಜೊತೆಗೆ, ಅರಣ್ಯ ಇಲಾಖೆಯು ಪರಿಣಾಮಕಾರಿಯಾದ ಇಂಧನ ಅರಣ್ಯ ನೀತಿ ರೂಪಿಸುವ ಅಗತ್ಯವೂ ಇದೆ.

ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸಾಮಾಜಿಕ ಅರಣ್ಯ ವಿಭಾಗವು ಸೂಕ್ತ ಭವಿಷ್ಯದ ಚಿಂತನೆ, ಕಾರ್ಯಕ್ರಮ ಮತ್ತು ಅನುದಾನವಿಲ್ಲದೆ ಬಳಲುತ್ತಿದೆ. ಸಾಮಾಜಿಕ ಅರಣ್ಯಗಳಲ್ಲಿ ಸ್ಥಳೀಯವಾಗಿ ಬಳಸುವ ಉರುವಲು ಇಂಧನ ಸಸ್ಯಪ್ರಭೇದಗಳನ್ನು ಬೆಳೆಸುವ ಕೆಲಸವಾಗಬೇಕಿದೆ. ಹೊಂಗೆ, ಜಂಬೆ, ಹೊನಗಲು, ಶಿವಣೆ, ಗ್ಲಿರಿಸಿಡಿಯಾ, ಅಕೇಶಿಯಾ ಇತ್ಯಾದಿ ಪ್ರಭೇದಗಳ ಮಿಶ್ರ ನೆಡುತೋಪುಗಳು ನಮ್ಮ ಗ್ರಾಮೀಣ ಮಹಿಳೆಯರ ಕಣ್ಣೀರೊರೆಸಬಲ್ಲವು! ಅಂಥ ವನಗಳನ್ನು ಬೆಳೆಸಿ, ಸೂಕ್ತವಾಗಿ ನಿರ್ವಹಣೆ ಮಾಡಿ, ಸುಸ್ಥಿರ ಕೊಯ್ಲು ಮತ್ತು ನ್ಯಾಯಯುತ ಹಂಚಿಕೆ ನೀತಿಯನ್ನು ಪಾಲಿಸಲು ಗ್ರಾಮ ಅರಣ್ಯ ಸಮಿತಿಗಳ ಸಹಯೋಗದಲ್ಲಿ ಸಾಧ್ಯವಿದೆ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ  ಯೋಜನೆಯಲ್ಲಿ ಲಭ್ಯವಿರುವ ಸಾಕಷ್ಟು ಅನುದಾನವನ್ನೂ ಈ ಕುರಿತಂತೆ ಬಳಸಬಹುದಾಗಿದೆ. ಇಂಥ ನೂತನ ಮತ್ತು ಪರಿಣಾಮಕಾರಿಯಾದ ಕಾರ್ಯಕ್ರಮಗಳನ್ನು ರೂಪಿಸುವ ದೃಷ್ಟಿಕೋನ ಮಾತ್ರ ಆಡಳಿತ ಯಂತ್ರಕ್ಕೆ ಬರಬೇಕಿದೆ. ಜಿಲ್ಲಾ ಪಂಚಾಯ್ತಿಗಳ ವಾರ್ಷಿಕ ಯೋಜನೆಗಳಲ್ಲಿ ಈ ಕುರಿತಂತೆಲ್ಲ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಪಂಚಾಯ್ತಿ ಪ್ರತಿನಿಧಿಗಳು ಪ್ರಯತ್ನಿಸಬೇಕಿದೆ. ಬದಲಿ ಇಂಧನ ಬಳಕೆಯ ವಿವಿಧ ಸಾಧ್ಯತೆಗಳನ್ನು ಜನರಿಗೆ ತಲುಪಿಸುವತ್ತ ಸರ್ಕಾರದ ಜೊತೆಗೆ ಸಹಕಾರಿ ಮತ್ತು ನಾಗರಿಕ ಸಂಘಟನೆಗಳೂ ಕೈಜೋಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT