ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡೆತಡೆಗಳ ಮೀರಿ ಆಡಿ ಗೆದ್ದ ಮನೋಜ್

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಆಟವೆಂದರೆ ಕೆಲವರಿಗೆ ಸಮಯ ಕಳೆಯುವ ವಿಧಾನ. ಇನ್ನು ಕೆಲವರಿಗೆ ಹವ್ಯಾಸ. ಮತ್ತೂ ಕೆಲವರಿಗೆ ಕೆಲಸ. ಆದರೆ ಮನೋಜ್‌ ಕುಮಾರ್‌ಗೆ ಆಟವೇ ಜೀವನ.

ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಗೆದ್ದು, ಸಾಕಷ್ಟು ಪದಕ, ಪ್ರಮಾಣ ಪತ್ರ, ಫಲಕಗಳನ್ನು ಗೆದ್ದಿರುವ ಮನೋಜ್‌ ಕುಮಾರ್ ಎಲ್ಲರಂತಲ್ಲ. ಎಷ್ಟೋ ವರ್ಷಗಳವರೆಗೂ ಮಾತೇ ಆಡದಿದ್ದ ಮನೋಜ್‌ ಬುದ್ಧಿಮಾಂದ್ಯ ಹುಡುಗ ಎಂಬುದು ಗೊತ್ತಾಗಿದ್ದೇ, ಎಲ್ಲ ಪೋಷಕರಂತೆ ಅವರ ಪೋಷಕರಿಗೂ ಆತಂಕ ಮೂಡಿತ್ತು. ಮುಂದೇನು ಎಂಬ ಪ್ರಶ್ನೆಯೂ ಕಾಡಿತ್ತು. ಆದರೆ ಮಗನನ್ನು ಹೇಗಾದರೂ ಮಾಡಿ ಸಮಾಜ ಗುರುತಿಸುವಂತೆ ಮಾಡಬೇಕು ಎಂಬ ಹಟ ಬೆಳೆದಿದ್ದು ಆ ಕ್ಷಣದಲ್ಲೇ.

ಮನೋಜ್ ಬುದ್ಧಿಮಾಂದ್ಯ ಹುಡುಗ ಎಂದು ತಿಳಿದಾಗ ವಿಶೇಷ ಶಾಲೆಗೆ ಅವರನ್ನು ಸೇರಿಸಿದರು. ಓದಿಗಿಂತ ಮನೋಜ್‌ನನ್ನು ಹೆಚ್ಚು ಸೆಳೆದಿದ್ದು ಆಟಗಳು. ಕ್ರೀಡೆಯಲ್ಲಿ ಮುಂದಿದ್ದ ಅಕ್ಕನ ಆಟದ ಪರಿಯನ್ನೇ ಅನುಸರಿಸಿದ ಮನೋಜ್, ಹಟದಿಂದ ಅಕ್ಕನ ಹಾದಿಯಲ್ಲೇ ನಡೆಯಲು ಆರಂಭಿಸಿದರು. ಆಟದಲ್ಲಿ ತಲ್ಲೀನನಾಗುತ್ತಿದ್ದ ಮಗನನ್ನು ಉತ್ತಮ ಕ್ರೀಡಾಪಟು ಮಾಡಬೇಕೆಂಬ ಕನಸು ಕಂಡರು ಮಮತಾ ಹಾಗೂ ಸೋಮಶೇಖರ್. ಅವರ ಈ ಆಸೆಗೆ ಅಡ್ಡ ಬಂದದ್ದು ಬಡತನ.

ಗುಜರಿ ಅಂಗಡಿ ಇಟ್ಟುಕೊಂಡಿರುವ ಮನೋಜ್ ತಂದೆಗೆ ಕ್ರೀಡೆಗೆ ಉತ್ತಮ ತರಬೇತುದಾರರನ್ನು ಹುಡುಕುವ ಶಕ್ತಿಯಿಲ್ಲದ ಕಾರಣ ಆ ಆಸೆಗಳನ್ನೂ ಕೈಬಿಟ್ಟರು. ಆದರೆ ಮನೋಜ್ ಹುಮ್ಮಸ್ಸು ಕಡಿಮೆಯಾಗಲಿಲ್ಲ. ಯಾವ ತರಬೇತಿಗಳೂ ಇಲ್ಲದೆ ಸ್ವತಃ ಅಭ್ಯಾಸ ಮಾಡುತ್ತಿದ್ದರು. ಈ ಸಮಯದಲ್ಲಿ ಹಲವು ಆಸ್ಪತ್ರೆಗಳಿಗೆ ಅಲೆದಿದ್ದೂ ಆಯಿತು. ಆತ್ಮವಿಶ್ವಾಸದ ಮುಂದೆ ಯಾವುದೂ ದೊಡ್ಡದಲ್ಲ ಎಂದು ಮನದಟ್ಟಾಗಿದ್ದೂ ಆಗಲೇ. ಈ ಹಾದಿಯಲ್ಲಿ ಮನೋಜ್ ಅನುಭವಕ್ಕೆ ಸಿಕ್ಕ ಸಂಗತಿಗಳು ಹಲವು. ಇವೆಲ್ಲದರ ಹೊರತಾಗಿಯೂ ಅವರ ಕ್ರೀಡೆಯ ಆಸೆ ದೂರವಾಗಲಿಲ್ಲ. ದಿನಗಳೆದಂತೆ ಆಸಕ್ತಿ ಹೆಚ್ಚುತ್ತಲೇ ಹೋಯಿತು. ಈ ಬಗ್ಗೆ ಮನೋಜ್ ಹೇಳಿಕೊಳ್ಳುವುದು ಹೀಗೆ...

‘‘ನನಗೆ ಆಟಗಳೆಂದರೆ ತುಂಬಾ ಇಷ್ಟ. ಆದರೆ ಚಿಕ್ಕ ವಯಸ್ಸಿನಲ್ಲೇ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಮಾತೂ ಬರುತ್ತಿರಲಿಲ್ಲ. ಇಷ್ಟಾದರೂ ಆಟದ ಬಗ್ಗೆ ಆಸೆ ತೀರಲಿಲ್ಲ. ಬಾಲ ಮನೋವಿಕಾಸ ಕೇಂದ್ರ ಮುಗಿದ ನಂತರ ‘ಕರ್ನಾಟಕ ಪೇರೆಂಟ್ಸ್‌ ಅಸೋಸಿಯೇಷನ್ ಫಾರ್ ಮೆಂಟಲಿ ರಿಟಾರ್ಡೆಡ್ ಸಿಟಿಝೆನ್ಸ್‌’ ಸಂಸ್ಥೆಯ ಸದಸ್ಯನಾದೆ. ಆಗ ಒಂದಾದ ಮೇಲೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಬೇರೆ ಬೇರೆ ರಾಜ್ಯಗಳಿಗೂ ಹೋಗಿ ಬಂದೆ’’ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಮನೋಜ್.

ಮನೋಜ್‌ಗೆ ಓಟದ ಸ್ಪರ್ಧೆಯೆಂದರೆ ತುಂಬಾ ಇಷ್ಟ. ಮೊದಲು ಐವತ್ತು ಮೀಟರ್ ಓಟದ ಸ್ಪರ್ಧೆಯಿಂದ ಆರಂಭಿಸಿದ ಮನೋಜ್, ಮೊದಲ ಬಾರಿ 1996ರಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ನೂರು ಮೀಟರ್ ಓಟದಲ್ಲಿ ಎರಡನೇ ಬಹುಮಾನ ಪಡೆದುಕೊಂಡರು. ನಂತರ ಇನ್ನೂರು ಮೀಟರ್ ಓಟದ ಸ್ಪರ್ಧೆಗಳಲ್ಲೂ ಭಾಗವಹಿಸಿ ಚಿನ್ನದ ಪದಕಗಳನ್ನು ಗಳಿಸಿಕೊಂಡರು.

ಮನೋಜ್ ಹಲವು ಆಟಗಳಲ್ಲಿ ಭಾಗವಹಿಸಿದ್ದಾರೆ. ಸೈಕ್ಲಿಂಗ್, ಶಾಟ್‌ಪುಟ್‌, ಕ್ರಿಕೆಟ್, ಹೈಜಂಪ್, ಲಾಂಗ್‌ಜಂಪ್, ಫುಟ್‌ಬಾಲ್‌, ವಾಲಿಬಾಲ್ ಆಟಗಳಲ್ಲಿ ನಿಸ್ಸೀಮ. ನೂರಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಸಾಮಾನ್ಯರಿಗಿಂತ ಒಂದು ಕೈ ಮೇಲೆನ್ನುವಂತೆ ಆಡುತ್ತಾರೆ.

ಸಾಮಾನ್ಯರಿಗಿಂತ ಹೆಚ್ಚು ಕಾಳಜಿಯ ಅವಶ್ಯಕತೆ ಇರುವ ಈ ರೀತಿಯ ಮಕ್ಕಳಿಗೆ ಅವಕಾಶಗಳಿಗೂ ಕೊರತೆ, ತರಬೇತಿಯೂ ಸಿಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಇದ್ದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹೊರ ರಾಜ್ಯಗಳ ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ಗೆದ್ದರು ಮನೋಜ್.

ಗುಜರಾತ್, ಚಂಡೀಗಡ, ಭೋಪಾಲ್ ಹೀಗೆ ಹಲವು ರಾಜ್ಯಗಳಿಗೆ ಸ್ಪರ್ಧೆಗೆಂದು ಭೇಟಿ ನೀಡಿ ಒಳ್ಳೆ ಅನುಭವಗಳನ್ನು ಪಡೆದಿದ್ದಲ್ಲದೆ, ಉತ್ತಮ ಕ್ರೀಡಾಪಟುವಾಗಬೇಕೆಂಬ ಕನಸು ಕಟ್ಟಿಕೊಂಡಿದ್ದಾರೆ ಮನೋಜ್. ಕನಸುಗಳ ಬೆನ್ನತ್ತಲು ಬಡತನ ಅಡ್ಡಗಾಲಾಗಿದೆ. ಮನೋಜ್ ಅವರಿಗೆ ಈಗ 27 ವರ್ಷ. ಅಂಗವಿಕಲರ ಖಾತೆಯಲ್ಲಿ ಸರ್ಕಾರಿ ನೌಕರಿಗೆ ಅರ್ಜಿ ಹಾಕಿದ್ದಾರೆ. ಆದರೆ ಬುದ್ಧಿಮಾಂದ್ಯತೆಯೇ ಬೇರೆ ಸಮಸ್ಯೆಯಾದ್ದರಿಂದ ಉದ್ಯೋಗವೂ ಕೈಗೆಟುಕುತ್ತಿಲ್ಲ.
ಮನೋಜ್ ಬಗ್ಗೆ ಪೋಷಕರಿಗೆ ತುಂಬು ಹೆಮ್ಮೆ. ‘ಎಲ್ಲರಂತೆಯೇ ತಮ್ಮ ಮಗನೂ ಇದ್ದಿದ್ದರೆ ಬಹುಶಃ ಹೀಗಾಗುತ್ತಿದ್ದನೋ ಇಲ್ಲವೋ? ಈಗ ನಾವು ಅಂದುಕೊಂಡದ್ದಕ್ಕಿಂತ ಹೆಚ್ಚೇ ಸಂತೋಷವಾಗಿದೆ’ ಎಂದು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT