ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ ಭೇಟಿ ಮಾಡಿದ ಜಸ್ವಂತ್ ಸಿಂಗ್

Last Updated 23 ಮೇ 2014, 11:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಿಜೆಪಿಯ ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಅವರು  ಪಕ್ಷದ ಧುರೀಣ ಎಲ್. ಕೆ. ಅಡ್ವಾಣಿ ಅವರನ್ನು ಅವರ ನಿವಾಸದಲ್ಲಿ ಶುಕ್ರವಾರ ಭೇಟಿ ಮಾಡಿದರು. ಅವರ ಈ ಕ್ರಮ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ.

ಬಾರ್ಮೇರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ವಿರುದ್ಧ ಸ್ಪರ್ಧಿಸಿ ಸೋತ ಮಾಜಿ ಕೇಂದ್ರ ಸಚಿವ ಸಿಂಗ್ ಅವರು ಅಡ್ವಾಣಿ ಅವರ ಜೊತೆಗೆ 30 ನಿಮಿಷ ಇದ್ದರು ಎಂದು ಮೂಲಗಳು ತಿಳಿಸಿವೆ.

ಉಭಯ ನಾಯಕರೂ ಹಿಂದೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಹಿನ್ನೆಲೆಯಲ್ಲಿ ನಡೆದ ಕೇವಲ 'ಸೌಹಾರ್ದ' ಭೇಟಿ ಇದು ಎಂದು ಅಡ್ವಾಣಿ ಅವರ ನಿಕಟವರ್ತಿ ಮೂಲಗಳು ತಿಳಿಸಿವೆ.

ಪಕ್ಷದಿಂದ ತಮ್ಮನ್ನು ಉಚ್ಚಾಟಿಸಿದ್ದಕ್ಕಾಗಿ ಬೇಸರ ವ್ಯಕ್ತ ಪಡಿಸಿದ್ದ ಜಸ್ವಂತ್, ತಮ್ಮ ಸ್ವಂತ ಊರು ಬಾರ್ಮೇರ್ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಕರ್ನಲ್ ಸೋನಾರಾಂ ಚೌಧರಿ ಅವರ ವಿರುದ್ಧದ ತಮ್ಮ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ನಿರಾಕರಿಸಿದ್ದರು.

ಚುನಾವಣೆಯಲ್ಲಿ ಸಿಂಗ್ ಅವರು 87,461 ಮತಗಳ ಅಂತರದಿಂದ ಸೋತಿದ್ದರು.

ಜಸ್ವಂತ್ ಸಿಂಗ್ ಅವರನ್ನು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ದಟ್ಟ ಪುಕಾರುಗಳಿದ್ದು, ಮಾಜಿ ಕೇಂದ್ರ ಸಚಿವರು, ರಾಜಸ್ತಾನದಲ್ಲಿ ಹಾಲಿ ಶಾಸಕರಾಗಿರುವ ತಮ್ಮ ಪುತ್ರ ಮನ್ವೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಸಧ್ಯ ಮನ್ವೇಂದ್ರ ಅವರನ್ನೂ ಪಕ್ಷದಿಂದ ಅಮಾನತು ಗೊಳಿಸಲಾಗಿದೆ.

ಮನ್ವೇಂದ್ರ ಅವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವದಿಂದಲೂ ಕಿತ್ತು ಹಾಕಲಾಗಿದೆ. ಬಾರ್ಮೇರ್ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡುತ್ತಿದ್ದರೆಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ಬಾರ್ಮೇರ್ ಲೋಕಸಭಾ ಕ್ಷೇತ್ರದ ಶಿವ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ  ಮನ್ವೇಂದ್ರ ಅವರು ತಮ್ಮ ತಂದೆ ಹಾಗೂ ಮಾಜಿ ಕೇಂದ್ರ ಸಚಿವರಾದ ಜಸ್ವಂತ್ ಸಿಂಗ್ ಪರ ಪ್ರಚಾರ ಮಾಡಿದ್ದರು.

ತಮ್ಮ ಪುತ್ರನ ವಿರುದ್ಧದ ಕ್ರಮವನ್ನು ಜಸ್ವಂತ್ ಸಿಂಗ್ ಅವರು 'ಸೇಡಿನ ಕ್ರಮ' ಎಂದು ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT