ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಯ್ಯನ ವೈದ್ಯಕೀಯಶಾಸ್ತ್ರ

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

‘ನಮ್ಮದು ಬರೀ ಕಾಲ್ಪನಿಕ ಕಥೆ ಅಷ್ಟೇ. ಇದರಿಂದ ಪ್ರೇರಣೆ ಪಡೆದು ಯಾರಾದರೂ ಅಂಥ ಸಂಶೋಧನೆಗೆ ಮುಂದಾದರೆ ನಾವು ಸಿನಿಮಾ ಮಾಡಿದ್ದೂ ಸಾರ್ಥಕ’ ಎಂದರು ನಿರ್ದೇಶಕ ಪಿ. ಅಣ್ಣಯ್ಯ.

ಔಷಧಿ ಲೋಕದ ಮಾಫಿಯಾ ತೆರೆದಿಡುವ ಅವರ ನಿರ್ದೇಶನದ ‘ಆಕ್ಟೋಪಸ್‌’ ಈ ವಾರ ತೆರೆಗೆ ಬಂದಿದೆ. ಜನಪರ ನಿಲುವಿನ ವಿಜ್ಞಾನಿಯನ್ನು ದುಷ್ಟರು ಹೇಗೆ ಮಟ್ಟ ಹಾಕಲು ಯತ್ನಿಸುತ್ತಾರೆ ಎಂಬ ಕಥೆ ಚಿತ್ರದ್ದು. ‘ರೋಗಿಯನ್ನು ಬದುಕಿಸಬೇಕಾದ ವೈದ್ಯಲೋಕ, ಆತನನ್ನು ಸುಲಿಗೆ ಮಾಡಲು ಹೊಂಚು ಹಾಕುತ್ತದೆ. ಜನರಿಗೆ ಒಳ್ಳೆಯದನ್ನು ಮಾಡುವ ಆಸೆ ಇದ್ದರೂ ಅಂಥವರಿಗೆ ಅಡ್ಡಿ–ಆತಂಕ ನೂರಾರು. ವೈದ್ಯಲೋಕದ ಮಾಫಿಯಾ ಒಂದನ್ನು ಕಾಲ್ಪನಿಕ ಕಥೆಯಲ್ಲಿ ಹೇಳುವ ಯತ್ನವಷ್ಟೇ ನಮ್ಮದು’ ಎಂದು ಅಣ್ಣಯ್ಯ ಸ್ಪಷ್ಟಪಡಿಸಿದರು.

ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ಅಳವಡಿಸಬೇಕಾದ ಚಿಕ್ಕ ಉಪಕರಣಕ್ಕೆ ಲಕ್ಷಗಟ್ಟಲೇ ಹಣ ವೆಚ್ಚವಾಗುತ್ತದೆ. ಅದರ ಬದಲಿಗೆ ಯುವ ವಿಜ್ಞಾನಿಯು ಕಡಿಮೆ ವೆಚ್ಚದ ದ್ರವರೂಪಿ ಔಷಧಿಯನ್ನು ಸಂಶೋಧಿಸುತ್ತಾನೆ. ಅದನ್ನು ಸಹಿಸದ ಔಷಧಿ ಮಾಫಿಯಾ ಆತನಿಗೆ ಆತಂಕ ಉಂಟು ಮಾಡುತ್ತದೆ. ಅದನ್ನೆಲ್ಲ ಆ ವಿಜ್ಞಾನಿ ಹೇಗೆ ಎದುರಿಸುತ್ತಾನೆ ಎಂಬ ಕಥೆಯ ತಿರುಳನ್ನು ತೆರೆದಿಟ್ಟರು ಅಣ್ಣಯ್ಯ.

ಕನ್ನಡ ಹಾಗೂ ತಮಿಳಿನಲ್ಲಿ ಸಿದ್ಧವಾಗಿರುವ ‘ಆಕ್ಟೋಪಸ್‌’ಗೆ ಬಂಡವಾಳ ಹಾಕಿರುವ ಡಿ.ಸಿ. ಪ್ರಸನ್ನಕುಮಾರ್‌ಗೆ ಬಣ್ಣದ ಲೋಕ ಹೊಸತು. ‘ಹಣ ಮಾಡಬೇಕು ಅಂತಲ್ಲ; ಸಮಾಜಕ್ಕೆ ಏನಾದರೂ ಸಂದೇಶ ಕೊಡುವ ಉದ್ದೇಶದಿಂದ ನಿರ್ಮಾಣ ಮಾಡಿರುವೆ’ ಎಂದು ಹೇಳಿಕೊಂಡರು.

ಕರಾರುವಾಕ್ಕಾದ ಪ್ಲಾನಿಂಗ್ ಈ ಚಿತ್ರದ್ದು. ಚಿತ್ರೀಕರಣ, ಡಬ್ಬಿಂಗ್, ಇತರ ತಾಂತ್ರಿಕ ಕೆಲಸಗಳೆಲ್ಲ ಅದರ ಪ್ರಕಾರವೇ ನಡೆದವು ಎಂದು ಛಾಯಗ್ರಾಹಕ ಮನೋಹರ್‌ ಜೋಷಿ ಮಾಹಿತಿ ನೀಡಿದರು. ಸೈಕಲಾಜಿಕಲ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿರುವ ಯಜ್ಞಾ ಶೆಟ್ಟಿ ಅವರಿಗೆ, ಅಣ್ಣಯ್ಯ ಅವರ ಚಿತ್ರಕಥೆ ತುಂಬ ಹಿಡಿಸಿದೆ. ಹಿರಿಯ ಕಲಾವಿದರು ತಮಗೆ ನೀಡಿದ ಸಲಹೆಗೆ ಕೃತಜ್ಞತೆ ಸಲ್ಲಿಸಿದರು.

ಕಲಾವಿದರಾದ ತ್ರಿಶೂಲ್, ಬ್ಯಾಂಕ್‌ ಜನಾರ್ದನ್ ಹಾಗೂ ವಿಕ್ರಂ ಸೂರಿ ಮಾತನಾಡಿದರು. ರಾಜ್ಯದ ಕೆಲವು ಕಡೆಗಳಲ್ಲಿ ನಿನ್ನೆ (ನ.19) ಬಿಡುಗಡೆಯಾಗಿರುವ ಚಿತ್ರ, ಇನ್ನೂ ಒಂದಷ್ಟು ಚಿತ್ರಮಂದಿರಗಳಲ್ಲಿ ಇಂದು (ನ. 20) ತೆರೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT