ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ ಹಾನಿ: ಸಿ.ಎಂ ಸಿದ್ದರಾಮಯ್ಯ ಸಭೆ

Last Updated 30 ಅಕ್ಟೋಬರ್ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯ ಪ್ರಮಾಣ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ರಾಜ್ಯ ಸರ್ಕಾರ ಸಮರ್ಪಕವಾಗಿ ಮನವರಿಕೆ ಮಾಡಿದೆ. ಈಗಾಗಲೇ ಸಲ್ಲಿಸಿರುವ ಕೋರಿಕೆಯಂತೆ ₨ 362 ಕೋಟಿ ನೆರವು ದೊರೆಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ಕೆ.ಪಾಠಕ್‌ ಮತ್ತು ಕೇಂದ್ರ ಜಲ ಆಯೋಗದ ನಿರ್ದೇಶಕ (ಮೇಲ್ವಿಚಾರಣೆ) ಎನ್‌.ಎಂ.ಕೃಷ್ಣಮುನಿ ನೇತೃತ್ವದ ತಂಡದ ಸದಸ್ಯರು ಗುರು ವಾರ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ಮುಖ್ಯಮಂತ್ರಿ ಯವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

‘ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಬೀದರ್‌, ಗುಲ್ಬರ್ಗ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಎರಡು ತಂಡಗಳು ಅತಿವೃಷ್ಟಿಯಿಂದ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಿವೆ. ಹಾನಿಯ ಪ್ರಮಾಣ ಕುರಿತು ಅಧ್ಯಯನ ತಂಡಕ್ಕೆ ಮನವರಿಕೆ ಆಗಿದೆ’ ಎಂದರು.

ಅತಿವೃಷ್ಟಿಯಿಂದ 24 ಮಂದಿ ಸಾವಿ ಗೀಡಾಗಿದ್ದರು. 88,528 ಹೆಕ್ಟೇರ್‌ ಕೃಷಿ ಮತ್ತು 3,045 ಹೆಕ್ಟೇರ್‌ ತೋಟ ಗಾರಿಕಾ ಬೆಳೆಗಳಿಗೆ ಹಾನಿ ಆಗಿದೆ.  ₨ 593 ಕೋಟಿ ಮೌಲ್ಯದ ಬೆಳೆಹಾನಿ ಸಂಭವಿಸಿದೆ. ಸಾವಿಗೀಡಾ ದವರ ಕುಟುಂಬಕ್ಕೆ ರಾಜ್ಯ ಸರ್ಕಾರ ದಿಂದ ತಲಾ ₨ 1 ಲಕ್ಷ ಪರಿಹಾರ ನೀಡಲಾಗಿದೆ. ಮನೆಗಳನ್ನು ಕಳೆದು ಕೊಂಡಿರುವವರಿಗೆ ₨ 12 ಕೋಟಿ ಮತ್ತು ಇತರೆ ರೂಪದಲ್ಲಿ ₨ 63 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು. ಅತಿವೃಷ್ಟಿ ಮತ್ತು ಪ್ರವಾಹದಿಂದ 18,738 ಮನೆಗಳಿಗೆ ಹಾನಿಯಾಗಿತ್ತು. 864 ಸೇತುವೆಗಳು ಮತ್ತು 3,680 ಕಿ.ಮೀ. ಉದ್ದದ ರಸ್ತೆಗಳಿಗೆ ಹಾನಿಯಾಗಿದೆ. ಈ ಎಲ್ಲ ವಿವರಗಳನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ನೀಡಲಾಗಿದೆ ಎಂದರು.

ಬರ ಪರಿಹಾರಕ್ಕೆ ಮನವಿ: ‘ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಅವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರನ್ನು ಗುರುವಾರ ನವದೆಹಲಿಯಲ್ಲಿ ಭೇಟಿ ಮಾಡಿ, ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ₨ 770 ಕೋಟಿ ನೆರವು ನೀಡುವಂತೆ ಮನವಿ ಸಲ್ಲಿಸಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕ ಬಳ್ಳಾಪುರ, ಕೋಲಾರ, ತುಮಕೂರು, ಗುಲ್ಬರ್ಗ, ಬೀದರ್‌ ಮತ್ತು ಹಾಸನ ಜಿಲ್ಲೆಗಳ 34 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸ ಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಸಂಪೂರ್ಣ ವಿವರ ಒದಗಿಸಲಾಗಿದೆ ಎಂದರು. ಕೇಂದ್ರ ತಂಡದ ಮುಖ್ಯಸ್ಥ ಪಾಠಕ್‌ ಮಾತನಾಡಿ, ‘ರಾಜ್ಯದ 9 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದೆ ಎಂಬುದು ಮನವರಿಕೆ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT