ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತರೆ ಅಳಲೆವ್ವ, ಈ ಅವಳಿ ನನಗಿರಲಿ...

ಅಕ್ಷರ ಗಾತ್ರ

ಮನೆಗೊಂದು ಮಗು, ಆರತಿಗೊಂದು ಕೀರ್ತಿಗೊಂದು ಹೀಗೆ ಎಷ್ಟು ಮಕ್ಕಳನ್ನು ಹೆರಬೇಕು ಎಂದು ಕುಟುಂಬ ಯೋಜನೆ ಹಾಕಿಕೊಳ್ಳುವ ಬಹುಮಂದಿ ನಮ್ಮ ಸಮಾಜದಲ್ಲಿದ್ದಾರೆ.

ಒಂದು ಮಗು ಸಾಕು. ಅದನ್ನು  ಚೆನ್ನಾಗಿ ಆರೈಕೆ ಮಾಡಿ,  ಸಮಯ ಮೀಸಲಿಡುವೆವು ಎನ್ನುವ ದಂಪತಿಗಳೊಂದಿಗೆ, ಎರಡು ಮಕ್ಕಳು ಬೇಕು, ಆದರೆ ಈ ಮಕ್ಕಳ ವಯಸ್ಸಿನ ನಡುವೆ ಅಂತರವಿರಲಿ ಎನ್ನುವವರೂ ಇದ್ದಾರೆ. ಇಷ್ಟೆಲ್ಲವನ್ನೂ ಆಲೋಚಿಸುತ್ತಿರುವವರಿಗೆ ‘ಅವಳಿ–ಜವಳಿ’ ಮಗು ಜನಿಸಿದರೆ! ಒಂದು ಕಡೆ ಡಬ್ಬಲ್ ಧಮಾಕ ಎನ್ನುವ ಖುಷಿ. ಮತ್ತೊಂದು ಕಡೆ ಸಮಯ, ಪೋಷಣೆ, ಇಷ್ಟು ಬೇಗ ಎರಡು ಮಕ್ಕಳು ಬೇಕೆ ಎನ್ನುವ ಚಿಂತೆ.

ಹೌದು, ಅವಳಿ ಮಕ್ಕಳು ಹುಟ್ಟುವುದು   ಅಪರೂಪವೇನಲ್ಲ. ಹಾಗೆಂದು ಸಾಮಾನ್ಯ ಎನ್ನುವಂತೆಯೂ ಇಲ್ಲ. ಈ ಅವಳಿ ಮಕ್ಕಳ ಜನನ ಕೆಲವು ಪೋಷಕರಿಗೆ ಮೊಗ ಅರಳಿಸಿದರೆ ಮತ್ತೆ ಕೆಲವರಿಗೆ ಇಷ್ಟು ಬೇಗ ಎರಡು ಮಕ್ಕಳು ಏಕೆ ಎನಿಸುತ್ತದೆ. ಮನೆಯಲ್ಲಿ ಅಜ್ಜ ಅಜ್ಜಿಯರಿದ್ದರಂತೂ ‘ದೇವರು ಕೊಟ್ಟಿದ್ದಾನೆ ಬಿಡು’ ಎನ್ನುವ ದೈವಿಕತೆಯ ಮಾತು. ಎಷ್ಟೇ ಆಗಲಿ ಸಾಲು ಸಾಲಾಗಿ ಮಕ್ಕಳನ್ನು ಹೆತ್ತು ಪೋಷಿಸಿದವರಲ್ಲವೇ.

ನಗರದಲ್ಲಿ ಬದುಕು ಸಾಗಿಸುವ ದಂಪತಿಗಳಿಗೆ, ಅದರಲ್ಲೂ ಕೆಲಸಕ್ಕೆ ಹೋಗುವವರಿಗೆ ಈ ಅವಳಿ ಜವಳಿಯನ್ನು ನಿಭಾಯಿಸುವುದು ಎರಡು ಪಟ್ಟು ಹೆಚ್ಚಿನ ಕಷ್ಟ. ಗರ್ಭಿಣಿಯಾದಾಗಿನಿಂದ, ಮಕ್ಕಳು ಹುಟ್ಟಿ, ಒಂದಷ್ಟು ವರ್ಷಗಳು ಕಳೆಯುವವರೆಗೂ ತಂದೆ ತಾಯಿಗೆ ಪುರುಸೊತ್ತಿಲ್ಲದ ಕೆಲಸ. ಅಳುವುದು, ಜ್ವರ ಬರುವುದು ಎಲ್ಲವೂ ಒಟ್ಟೊಟ್ಟಿಗೇ. ಹೀಗಾಗಿ ಒಂದು ಮಗುವಿಗೆ ನೀಡುವ ಸಮಯವನ್ನು ಇಬ್ಬರಿಗೆ ಒಂದೇ ಅವಧಿಯಲ್ಲಿ ಹಂಚಬೇಕು.

ಒಂದೇ ಮಗುವಿನ ಭವಿಷ್ಯದ ಬಗ್ಗೆ ಯೋಜನೆ ಹಾಕಿಕೊಂಡ ದಂಪತಿಗೆ ಅವಳಿ ಮಕ್ಕಳಾದರೆ ಸಂತಸಕ್ಕಿಂತ ಗಾಬರಿಯೇ ಹೆಚ್ಚು. ಇಬ್ಬರು ಮಕ್ಕಳ ಅಪೇಕ್ಷೆಯಿದ್ದವರಿಗೆ ಅವಳಿ ಎಂದರೆ ಖುಷಿ. ಒಂದು ಮಗುವನ್ನೇ ಪೋಷಿಸುವುದು ಕಷ್ಟವಾಗಿರುವಾಗ ಅವಳಿ ಮಕ್ಕಳನ್ನು ನೋಡಿಕೊಳ್ಳುವುದು ಇನ್ನೂ ತ್ರಾಸು. ಅವಳಿ ಮಕ್ಕಳಾದರೆ ಖುಷಿ ಪಡುವುದಷ್ಟೇ ಅಲ್ಲ, ಅವುಗಳನ್ನು ನೋಡಿಕೊಳ್ಳುವುದೂ ತುಂಬಾ ಮುಖ್ಯ ಎನ್ನುವುದು ಹಲವು ಅವಳಿ ಪೋಷಕರ ಅಭಿಪ್ರಾಯ.

ಅವಳಿ ಮಕ್ಕಳ ಮೊದಲ ಸಮಸ್ಯೆ ಎಂದರೆ ಅವಧಿಗೆ ಮುನ್ನವೇ ಹುಟ್ಟುವುದು. ಒಂಬತ್ತು ತಿಂಗಳು ತುಂಬುವ ಮುನ್ನವೇ ಹುಟ್ಟುವ ಪ್ರಮಾಣ ಹೆಚ್ಚು ಎಂದು ವೈದ್ಯರು ಮಾಹಿತಿ ನೀಡುತ್ತಾರೆ. ಆರೋಗ್ಯದ ಹೊರತಾಗಿ ಅವುಗಳ ಆರೈಕೆಯ ವಿಷಯವೂ ಮುಖ್ಯ. ಒಂದೇ ರೂಪು ಇರುವ ಮಕ್ಕಳನ್ನು ಗುರುತು ಹಿಡಿಯುವುದರಿಂದ ಹಿಡಿದು, ಅವುಗಳ ವರ್ತನೆ ಗಮನಿಸಿ, ಅವನ್ನು ನಿಭಾಯಿಸುವಲ್ಲಿ ಪೋಷಕರ ಜವಾಬ್ದಾರಿ ಹೆಚ್ಚೇ ಇರಬೇಕು.

ಮೈಸೂರಿನ ಪಂಕಜಾ ಎನ್ನುವವರಿಗೆ ಅವಳಿ ಹೆಣ್ಣು ಮಕ್ಕಳು. ತಮ್ಮ ತಾಯಿಯ ತಂಗಿಗೂ ಅವಳಿ ಜವಳಿ ಮಕ್ಕಳಿದ್ದುದರಿಂದ ವಂಶವಾಹಿಯಾಗಿ  ಇವರಿಗೂ ಅವಳಿ ಮಕ್ಕಳಾದವಂತೆ. ಎರಡನೇ ಬಾರಿ ಸ್ಕ್ಯಾನಿಂಗ್‌ಗೆ ಹೋದಾಗ ತಮಗೆ ಅವಳಿ ಮಕ್ಕಳು ಎಂಬ ವಿಷಯ ಕೇಳಿ ಮೊದಲು ಗಾಬರಿ ಆದರು ಇವರು.

‘ಒಂದು ಮಗುವನ್ನು ನಿಭಾಯಿಸೋದು ಕಷ್ಟ, ಅಂಥದ್ದರಲ್ಲಿ ಎರಡೆರಡು ಆದರೆ ಹೇಗಪ್ಪಾ ಅನ್ನಿಸಿತ್ತು.  ಒಬ್ಬಳಿಗೆ ಜ್ವರ ಬಂದರೆ, ಸ್ವಲ್ಪ ಸಮಯಕ್ಕೇ ಇನ್ನೊಬ್ಬಳಿಗೂ ಜ್ವರ ಬಂದುಬಿಡುತ್ತಿತ್ತು. ಇಬ್ಬರೂ ಒಟ್ಟಿಗೆ ಅಳಲು ಶುರು ಮಾಡುತ್ತಿದ್ದರು. ಆಗೆಲ್ಲಾ ಇಬ್ಬರನ್ನೂ ನೋಡಿಕೊಳ್ಳುವುದು ಕಷ್ಟ ಅನ್ನಿಸಿದ್ದಿದೆ. ನನ್ನ ಅಮ್ಮ ಜೊತೆಗಿದ್ದ ಕಾರಣ ಸುಲಭವಾಯಿತು.  ಈಗ ಒಬ್ಬಳಿಗೆ ಜ್ವರ ಬಂದರೆ, ಇನ್ನೊಬ್ಬಳಿಗೆ ಎರಡು ದಿನ ಬಿಟ್ಟು ಬರುತ್ತದೆ. ಹಾಗಾಗಿ ಮುನ್ನೆಚ್ಚರಿಕೆಯೂ ನಮ್ಮಲ್ಲಿ ಇರುತ್ತದೆ ಎನ್ನುತ್ತಾರೆ ಪಂಕಜಾ.

ಬೆಂಗಳೂರಿನ ಶ್ಯಾಮ ದೊಡ್ಡಮನಿ ಅವರಿಗೂ ಅವಳಿ ಮಕ್ಕಳು. ನಿಮಗೆ ಅವಳಿ ಮಕ್ಕಳಾಗುತ್ತವೆ ಎಂದು ವೈದ್ಯರು ಹೇಳಿದಾಗ ತುಂಬಾ ಖುಷಿ ಪಟ್ಟಿದ್ದರಂತೆ. ತಮ್ಮ ತಾಯಿಗೂ ಅವಳಿ ಜವಳಿ ಮಕ್ಕಳಾಗಿದ್ದು, ತಮಗೂ ಅವಳಿ ಮಕ್ಕಳಾಗುವುದು ಅವರ ಸಂತಸವನ್ನು ಹೆಚ್ಚು ಮಾಡಿದ್ದು.

‘ಬೇರೆಯವರಿಗೆ ಅವರನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಆದರೆ ನಮಗೆ ಗೊತ್ತಾಗುತ್ತದೆ. ಒಬ್ಬಳು ತುಂಬಾ ಜೋರಿದ್ದರೆ, ಇನ್ನೊಬ್ಬಳು ಸಾಧು ಸ್ವಭಾವದವಳು. ಮೊದ ಮೊದಲು  ಅವರನ್ನು ನಿಭಾಯಿಸಲು ಸಾಕಷ್ಟು ಕಷ್ಟ ಪಟ್ಟಿದ್ದೇವೆ. ಆರು ತಿಂಗಳಂತೂ ನಮಗೆ ಒಂದಿಷ್ಟು ಬಿಡುವು ಸಿಕ್ಕರೆ ಸಾಕು ಎನ್ನುವಂತಾಗಿತ್ತು. ಈಗ ಎರಡನೇ ತರಗತಿಯಲ್ಲಿದ್ದಾರೆ. ಇಬ್ಬರೂ ಒಟ್ಟೊಟ್ಟಿಗೆ ಆಡುತ್ತಾ, ಓದುತ್ತಾ ಇರುತ್ತಾರೆ. ಅದನ್ನು ನೋಡಿದರೆ ಖುಷಿ ಅನ್ನಿಸುತ್ತೆ’ ಎನ್ನುತ್ತಾರೆ ದೊಡ್ಡ ಮನಿ.

ಇವರ ಸಾಲಿನಲ್ಲಿ ಬೆಂಗಳೂರಿನ ಸುಮಾ ಅವರೂ ಇದ್ದಾರೆ. ‘ನನ್ನ ತಾಯಿಗೂ ಅವಳಿ ಜವಳಿ ಮಕ್ಕಳಿದ್ದವು. ಆದ್ದರಿಂದ ನನಗೂ ಆಗಿರಬಹುದು. ಅವಳಿ ಮಕ್ಕಳು ಹುಟ್ಟುವ ಮುನ್ನ ಒಬ್ಬ ಮಗ ಇದ್ದ. ಮತ್ತೆ ಎರಡು ಮಕ್ಕಳಾದರೆ ತೊಂದರೆಯಾಗಬಹುದು ಎನಿಸಿತ್ತು. ಆದರೆ ಸಂಬಂಧಿಕರ ನೆರವಿನಿಂದ ಅವರನ್ನು ನಿಭಾಯಿಸುವುದು ಅಷ್ಟು ಕಷ್ಟ ಎನ್ನಿಸಲಿಲ್ಲ. ಈಗ ಹತ್ತನೇ ತರಗತಿಯಲ್ಲಿದ್ದಾರೆ. ಎಲ್ಲರೂ ಒಟ್ಟಿಗೆ ಆರಾಮಾಗಿ ಇದ್ದಾರೆ. ನಾವು, ಹತ್ತಿರ ಸಂಬಂಧಿಗಳು ಮಾತ್ರ ಅವರನ್ನು ಪತ್ತೆ ಹಚ್ಚಬಹುದು. ಹೊರಗಿನವರಿಗೆ ಕಷ್ಟ. ಜೊತೆಗೆ ಅವರ ನಡವಳಿಕೆಯಲ್ಲಿನ ಭಿನ್ನತೆಯಿಂದ ಅವರನ್ನು ಸುಲಭವಾಗಿ ಕಂಡುಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

‘ಅವಳಿ ಜವಳಿ ಆದರೆ ಗುರುತು ಹಿಡಿಯುವುದು ಕಷ್ಟ. ಒಬ್ಬರು ಮಾಡಿದ ತಪ್ಪಿಗೆ ಇನ್ನೊಬ್ಬರು ಪೆಟ್ಟು ತಿಂದ ಹಲವು ಸಂದರ್ಭಗಳೂ ಇವೆ. ಆದರೆ ಅವಳಿ ಜವಳಿಗಳಲ್ಲಿ ಬಾಂಧವ್ಯ ಹೆಚ್ಚಿರುತ್ತದೆ. ಅದು ನಮ್ಮದೇ ಅನುಭವ’ ಎನ್ನುತ್ತಾರೆ ರುಕ್ಮಿಣಿ.  ಮಕ್ಕಳು ಒಂದಿರಲಿ, ಎರಡಿರಲಿ, ಅವಳಿ ಜವಳಿಯೇ ಇರಲಿ, ಮಕ್ಕಳು ಮಕ್ಕಳೇ. ಅವರ ನಲಿವು, ಆಟ ಪಾಟ ತಂದೆತಾಯಿಯರ ಮುಖದಲ್ಲಿ ಮಂದಹಾಸ ಮೂಡಿಸದೇ ಇರುವುದೇ?

ವೈದ್ಯರು ಏನು ಹೇಳ್ತಾರೆ?
‘ಗರ್ಭ ಧರಿಸಿದ ಎರಡನೇ ತಿಂಗಳಿಗೇ ತನ್ನೊಡಲಲ್ಲಿ ಎರಡು ಮಕ್ಕಳಿರುವುದು ತಿಳಿದ ತಾಯಂದಿರಲ್ಲಿ ಗಾಬರಿಯಾದವರೇ ಹೆಚ್ಚು’ ಎನ್ನುತ್ತಾರೆ ಮೂಡಬಿದಿರೆಯ ಸ್ತ್ರೀತಜ್ಞೆ ರಶ್ಮಿ. ಅವರ ಪ್ರಕಾರ ಹೆಚ್ಚಿನ ಅವಳಿ ಜನನಗಳಲ್ಲಿ ವಂಶವಾಹಿ ಅಂಶದ್ದೇ ಬಹುಪಾಲು.

ಒಟ್ಟೊಟ್ಟಿಗೆ ಗಂಡು– ಹೆಣ್ಣು
‘ನನಗೆ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳು. ‘ನಿಮಗೆ ಅವಳಿ ಮಕ್ಕಳಾಗುತ್ತವೆ ’ ಎಂದು ವೈದ್ಯರು ಹೇಳಿದಾಗ   ನಮ್ಮಿಬ್ಬರಿಗೂ ತುಂಬಾ

ಖುಷಿ ಆಗಿತ್ತು. ಅವಳಿಗಳಲ್ಲಿ ಸಾಮಾನ್ಯ ಗಂಡು–ಗಂಡು, ಹೆಣ್ಣು– ಹೆಣ್ಣು ಇರುತ್ತವೆ. ನಮಗೂ ಹಾಗೇ ಆಗುತ್ತೆ ಎಂದುಕೊಂಡಿದ್ದೆವು. ಒಂದೇ ಬಾರಿ ಗಂಡು ಹೆಣ್ಣು ಎರಡೂ ಆದಾಗ ಖುಷಿ ಇನ್ನೂ ಹೆಚ್ಚಾಯಿತು. ಈಗ ಇಬ್ಬರನ್ನೂ ಎಲ್‌ಕೆಜಿಗೆ ಸೇರಿಸಿದ್ದೇನೆ. ಇಬ್ಬರೂ ಆಡಿಕೊಂಡಿದ್ದರೆ ನೋಡಲು ಸಂತೋಷ’ ಎನ್ನುತ್ತಾರೆ ನಂಜನಗೂಡಿನ ತಾಲ್ಲೂಕಿನ ಹುಲ್ಲಹಳ್ಳಿಯ ಎಸ್‌.ಎಂ.ಬಸವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT