ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣದಲ್ಲಿ ರಾಜಿಗೆ ಅವಕಾಶ ಇಲ್ಲ

Last Updated 1 ಜುಲೈ 2015, 19:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಅತ್ಯಾಚಾರ ಅಥವಾ ಅತ್ಯಾಚಾರ ಯತ್ನ ಪ್ರಕರಣಗಳಲ್ಲಿ  ಮೃದು ಧೋರಣೆ ತಾಳುವುದು ಅತಿ ದೊಡ್ಡ ತಪ್ಪಾಗುತ್ತದೆ. ಇಂತಹ ಪ್ರಕರಣಗಳಲ್ಲಿ ರಾಜಿ ಅಥವಾ ಮಧ್ಯಸ್ಥಿಕೆ ಸಾಧ್ಯವಿಲ್ಲ’ ಎಂದು ಸುಪ್ರೀಂಕೋರ್ಟ್‌  ಖಡಾಖಂಡಿತವಾಗಿ ಹೇಳಿದೆ.

‘ಅತ್ಯಾಚಾರ ಎನ್ನುವುದು ಹೆಣ್ಣಿನ ದೇಹದ ಮೇಲೆ ನಡೆಯುವ ದೌರ್ಜನ್ಯ. ಇದು ಆಕೆಯ ಗೌರವಕ್ಕೆ ಧಕ್ಕೆ ತರುತ್ತದೆ ಮತ್ತು ಹೆಸರಿಗೆ ಕಳಂಕ ತರುತ್ತದೆ. ಆದ ಕಾರಣ ಅತ್ಯಾಚಾರ ಪ್ರಕರಣಗಳಲ್ಲಿ ರಾಜಿಗೆ ಅವಕಾಶವಿಲ್ಲ’ ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಹಾಗೂ ಪಿ.ಸಿ.ಪಂತ್‌ ಅವರಿದ್ದ ಪೀಠ ಹೇಳಿದೆ.

ಕೆಲವೊಮ್ಮೆ ಅತ್ಯಾಚಾರ ಆರೋಪಿಗಳು ಸಂತ್ರಸ್ತರನ್ನು ಮದುವೆಯಾಗುವ ಆಮಿಷ ಒಡ್ಡಿ  ಪರಿಹಾರ ಪಡೆಯುತ್ತಾರೆ. ಇದೊಂದು ಜಾಣ ಹೆಜ್ಜೆ. ಕೋರ್ಟ್‌ಗಳು ಇಂತಹ ವ್ಯವಹಾರಗಳಿಂದ ದೂರ ಇರಬೇಕು ಎಂದೂ ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?: ಮಧ್ಯಪ್ರದೇಶದ ಮದನ್‌ಲಾಲ್‌ ಎಂಬಾತ   ಏಳು ವರ್ಷದ  ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಸ್ಥಳೀಯ ಕೋರ್ಟ್ ಆತನಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರದಲ್ಲಿ ಬಾಲಕಿಯ ತಂದೆ–ತಾಯಿ ಹಾಗೂ ಆರೋಪಿಯ ಮಧ್ಯೆ ರಾಜೀಸಂಧಾನ ನಡೆದಿತ್ತು. ಇದೇ ಕಾರಣಕ್ಕೆ ಮಧ್ಯಪ್ರದೇಶ  ಹೈಕೋರ್ಟ್‌ ಮದಲ್‌ಲಾಲ್‌ ಶಿಕ್ಷೆಯನ್ನು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.

ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್‌, ಯಾವುದೇ ಕಾರಣಕ್ಕೂ ಇಂತಹ ಪ್ರಕರಣದಲ್ಲಿ ರಾಜಿ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಹೈಕೋರ್ಟ್‌ ನೀಡಿದ ತೀರ್ಪು ನ್ಯಾಯದ ಪರಿಕಲ್ಪನೆಗೆ ಹಾಗೂ ನ್ಯಾಯದಾನ ವ್ಯವಸ್ಥೆಗೆ ಧಕ್ಕೆ ತರುವಂತಿದೆ ಎಂದ ಸುಪ್ರೀಂಕೋರ್ಟ್‌, ಪ್ರಕರಣವನ್ನು ಮರುಪರಿಶೀಲನೆ ಮಾಡುವಂತೆ ಮಧ್ಯಪ್ರದೇಶ ಹೈಕೋರ್ಟ್‌ಗೆ ಸೂಚಿಸಿತು.

ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌, ಅತ್ಯಾಚಾರ ಸಂತ್ರಸ್ತೆ (15 ವರ್ಷದ ಬಾಲಕಿ) ಹಾಗೂ ಆರೋಪಿ ನಡುವೆ ರಾಜಿ ಮಾಡಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಆರೋಪಿಗೆ ಜಾಮೀನು ನೀಡಿತ್ತು. ಕೋರ್ಟ್‌ನ ಈ ನಿರ್ಧಾರ ವ್ಯಾಪಕ ಟೀಕೆಗೆ ಒಳಗಾಗಿತ್ತು.
*
ಮುಖ್ಯಾಂಶಗಳು
* ಅತ್ಯಾಚಾರ ಎನ್ನುವುದು ಹೆಣ್ಣಿನ ದೇಹದ ಮೇಲೆ ನಡೆಯುವ ದೌರ್ಜನ್ಯ.
* ಅತ್ಯಾಚಾರ ಯತ್ನ ಪ್ರಕರಣಗಳಲ್ಲಿ ಮೃದು ಧೋರಣೆ ತಾಳುವುದು ತಪ್ಪು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT